ADVERTISEMENT

ದಾದಾಪೀರ್ ನವಿಲೇಹಾಳ್ ಅವರ ಕವಿತೆ: ಪ್ರತಿಷ್ಠೆ

ದಾದಾಪೀರ್
Published 4 ಮಾರ್ಚ್ 2023, 19:30 IST
Last Updated 4 ಮಾರ್ಚ್ 2023, 19:30 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

ಇವನೊಬ್ಬನಿದ್ದಾನೆ
ಕತ್ತಲನು ಕತ್ತರಿಸಿ ಕಾಲಕಸ ಮಾಡಿದ
ಕರಿಕಾಲ
ನಂತೆ
ಕೇಕೆ ಹಾಕುತ್ತಾನೆ
ನಿಜದ ಬೆಳ್ಳಿಗೆರೆಗಳೆಲ್ಲ
ಇವನ ಕಾಲದೆಸೆಯಲ್ಲಿ ಹೊರಳಿ
ನುಸುಳುವ ಹೆಂಬೇಡಿ ಹುಳಗಳಂತೆ!
ಇವನು ಹಸಿದಾಗ
ಜನವು ತಿಂದುಂಡು ತೇಗುತ್ತದೆ
ನಕ್ಕರೆ ನಕ್ಕು ಅತ್ತರೆ ಅತ್ತು
ಬೆಂಕಿ ಬಿಸಿಲು ಅನ್ನನಾಳಕ್ಕಿಳಿದು
ಎದೆಕಾವನೆಲ್ಲ
ಎಳನೀರ ತಂಪು ತೊಯ್ಯಿಸುತ್ತದೆ
ಬಾನೆಲ್ಲ ಬಾಗಿ
ಗಿರಿಯು ಬುಗುರಿಯಾಗಿ
ಗಿರಗಿರನೆ ತಿರುಗಿ
ಬಯಲ ಬೆನ್ನು ಬಾರಿಸುತ್ತದೆ.
ಹೆಜ್ಜೆಯಿಟ್ಟರೆ ಹಾದಿ ಹೆಡೆಹೊರಳಿ ಇವನ
ತೋರುಬೆರಳಿಗೆ
ಮುಖಮಾಡಿ
ಹರಿದಾಡಿ
ನೆಲ ಮುಗಿಲು ಕೆಂಪಾಗುತ್ತವೆ.
ಮಾತು ಊರಾಗಿ ಕೊರಳದಾರಿಯಲಿ
ಗುಡುಗು ಸಿಡಿಲಾಗಿ ಮಿಂಚು ಕಪ್ಪಾಗುತ್ತದೆ..

ಹೀಗೇ
ಇವನು ಉಗುಳಿದರೆ ಮಂತ್ರ
ಹಾಡಿದರೆ ರಾಗ
ಬಾಯಿಬಿಟ್ಟರೆ ಪುಣ್ಯಕೋಟಿ
ಗಾಂಧಾರಿ ಹಿರಿಮಗನ ಒಳತೋಟಿ
ಒಮ್ಮೆಯಾದರೂ
ಕಣ್ಣರಿವೆ ತೆರೆದಳೇ ಪುಣ್ಯಾತಗಿತ್ತಿ!
ಇವನಿಲ್ಲದೆ ಮೊಗ್ಗು ಬಿರಿಯುವುದಿಲ್ಲ
ಚಿಗುರು ಹಸಿರಾಗುವುದಿಲ್ಲ
ದಾಳ ಉದುರಿಸಿ ಅಡವಿಗಟ್ಟಿದ ಸೂರ
ನೆರೆಹೊರೆಯೆಲ್ಲ ಇವನದೇ ಭಜನೆ
ಸಾಕು ತೊಲಗೆಲೆ ಹುಳವೇ
ಸದಾ
ಕುಂಡೆಯನೆತ್ತಿ ತೆವಳುವ ಕ್ರಿಮಿಯೇ
ವಿಷದ ಕೊಂಡಿಯ ಬಡಿದು ಬಾರಿಸುವ
ಕೈಗೆ
ನೂಲಿನೆಳೆ ಸಂಕೋಲೆ
ಇಂದಲ್ಲ ನಾಳೆಗೆ ನಿಜಖಚಿತ ಉರುಳುರುಳು!

ಎತ್ತರದ ಪ್ರತಿಮೆಯ ಜೊತೆಗೆ
ಉದ್ದನೆಯ ಬಾವುಟಗಳು ತರಿದು ಬೀಳುವ
ಕಾಲಕ್ಕೆ
ದೊಡ್ಡ ಗಂಟಲೂ ಒಣಗಿ
ನೀಚ ಬಲವೆಲ್ಲ ಉಡುಗಿ
ಊರೂರು ತಿರುಗಿ ಬಿದ್ದವು ನೋಡು
ಹಿತ್ತಲ ಬಾಗಿಲ ತುಂಬ
ಸತ್ತ ಬಾಲಗಳ ನಿಸ್ತೇಜ ಮೆರವಣಿಗೆ
ಕಡುಗಪ್ಪು ಮೀಸೆಯ ಮರೆಯಲ್ಲಿ
ಬೆಳ್ಳಿಬೆರೆತ ನಗೆ
ಮುದಿಯಾಗಿ
ಸಿಂಬಳದ ಹುಳುವಾಗಿ ಕಾಲೆಳೆದು
ಕಣ್ಮರೆಯಾದ ಕಡುಪಾಪಿ ಕೀಟ!

ADVERTISEMENT

ಏನಿದೇನಿದು
ಕತ್ತಲೆಯೆ!
ನಸುಬೆಳಕ ತಾರೆಗೂ ತಿಳಿಯದ
ಬಿರುಕು ಬಿಟ್ಟಲ್ಲೆಲ್ಲ ಬೇರಿಳಿದ
ಬೆಂಗಾಡು ಹೊಲ
ಎಲ್ಲ ಬಗೆಯ ನೆತ್ತರು ನದಿಗಳ ತೂಬು ತೆರೆದಿರುವೆ ಬೇಕಾದ್ದು ಬೆಳೆದುಕೊ ಬಂಧು
ನಾಲಗೆಬಾಚಿಯಲಿ ಕೆತ್ತಿ ಬಣ್ಣಬಣ್ಣದ ಮಣ್ಣ ಹದಗೊಳಿಸಿರುವೆ
ಬಿತ್ತು ಮುಳ್ಳುಗಳ, ಕೋರೆ ಹಲ್ಲುಗಳ
ತತ್ತರಗೊಳ್ಳಲಿ ಸಾವು!
ಬಿಚ್ಚಿದಂಗಿ ಬನಿಯನ್ನು ಮೂಗಿಗಿಡಿದು
ಮಲಗುವ ಮೊದಲು ಹಾಸಿಗೆ ಮೂಸುವ
ಮೌನವೇ
ಇದು ಸಮಾಧಿಗಳು ಮುಲುಗುಡುವ ಹೊತ್ತು
ಹಿಡಿಮಣ್ಣು ತೂರಿ ಪದರ
ಪರದೆಗಳ ಹೊದಿಸಿ
ಕೆನ್ನೆ ತೊಯ್ಯಿಸಿದ ಗಳಿಗೆ
ಹೆಸರ ಹಿಡಿದು ಹೀಗಳೆದವರ ಬೆನ್ನು ಬಾಗಿ
ನಾಲಗೆ ಬಿದ್ದ ಸಮಯ
ಮೇಲುಗಣ್ಣು ಹಾಲಾಹಲದ ಗಲ್ಲ
ತೂಗದ ಕೈಗಳ
ಬಲವೆಲ್ಲ
ಮೃದು ಮಧುರ ಸಮತೆ ಸಲುಗೆಗೆ
ಹಾ
ತೊರೆದು
ಮಂಡಿಯೂರುವ ಗಳಿಗೆ
ನೆಲಕೆ ಹಾಲು ಸುರಿಯುತ್ತದೆ
ಮೊಲವು ಚಂಗನೆ ನೆಗೆದು
ಸೆಲ್ಫಿಗೆ
ಫೋಜು ಕೊಡುತ್ತದೆ.
ಎಂದಿನಂತೆಯೆ ಬೆಳಕು
ಬೆಳದಿಂಗಳು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.