ಒಂದು ಸುಂದರ ಮುಂಜಾವು
ಮರದ ಮರೆಯಲ್ಲಿ ಕೂಗುತ್ತಿತ್ತು ಹಕ್ಕಿ
ಪುಟ್ಟ ಹುಡುಗಿ ಅಮ್ಮನ ಸೆರಗೆಳೆದು ಕೇಳಿದಳು
‘ಹಕ್ಕಿ ಏನಂತಿದೆ ಅಮ್ಮಾ?’
ಮಗಳ ತಲೆನೇವರಿಸಿ ಅಮ್ಮ ಕಥೆ ಹೇಳಿದಳು
ಆ ಹಕ್ಕಿಯೂ ಒಮ್ಮೆ ನಿನ್ನಂತೆಯೇ ಪುಟ್ಟಮ್ಮ
ಮನೆಗೆ ಬಂದ ಅಕ್ಕ-ಬಾವನೊಂದಿಗೆ
ಜಿಗಿಯುತ್ತಲೇ ನಡೆದಳು ಹೊಲದ ಕಡೆ
ಹಸಿರುಕ್ಕುವ ಭತ್ತದ ಎಲೆಯ ಎಳೆಯೊಂದನ್ನು
ಬೆರಳ ನಡುವಿಟ್ಟು ಎಳೆದಳು, ಪೀಂ……..
ಅಪಾನವಾಯು ಮುಕ್ತವಾದಂತೆ ಶಬ್ದ
ತಿರುಗಿ ನೋಡಿ ನಕ್ಕ ಬಾವನ ನೋಟಕೆ
ನಾಚಿ ಹಕ್ಕಿಯಾಗಿ ಹಾರಿಹೋದಳು
ಈಗಲೂ ನಾಚುತ್ತಾಳೆ ನೋಡು
‘ಬಾವ ಕೇಳ್ದ, ಬಾವ ಕೇಳ್ದ…’
ಅರೆ! ಹಾಗೆಯೇ ಕೂಗುತಿದೆ ಹಕ್ಕಿ!
ನಡುಮಧ್ಯಾಹ್ನದಲಿ ಮತ್ತೆ ಕೂಗಿತು ಹಕ್ಕಿ
ಸುತ್ತಲಿದ್ದರು ಅವಳ ಹಿರಿಯ ಗೆಳತಿಯರು
ಅಮ್ಮ ಹೇಳಿದ ಕತೆಯ ಬಣ್ಣಿಸಿ ಹೇಳಿದರೆ
ಕಣ್ಸನ್ನೆ ಮಾಡಿ ಕಿಲಕಿಲನೆ ನಕ್ಕರು
ಹುಚ್ಚು ಹುಡುಗಿ, ಗಂಡಿನಾಟ ತಿಳಿಯದವಳು
ಅಂದು ಅವರೊಂದಿಗೆ ಅಕ್ಕನೂ ಇರಲಿಲ್ಲ
ಹಸಿರ ಮರೆಯಲ್ಲವಳ ಬಿಗಿದಪ್ಪಿ, ಎದೆಸವರಿ
ಕೇಳಿಯೇಬಿಟ್ಟಿದ್ದ ಬಾವ ಕೇಳಬಾರದ್ದನ್ನು
ಪಾಪದ ಹುಡುಗಿ! ಆಡಲಾರಳು, ಅನುಭವಿಸಲಾರಳು
ಹಕ್ಕಿಯಾಗಿ ಹಾರಿಹೋದಳು
ಸತ್ಯವನ್ನೀಗ ಸಾರಿ ಹೇಳುತ್ತಾಳೆ
ಬಾವ್ ಕೇಳ್ದ, ಬಾವ್ ಕೇಳ್ದ….
ಅಮ್ಮಂದಿರಿಗದು ಅರ್ಥವೇ ಆಗದು ಕಣೇ
ಕಿಶೋರಿಯ ಕಣ್ಣೆದುರು ನಿಗೂಢ ಲೋಕ!
ಮುಸ್ಸಂಜೆಯಲಿ ಹಕ್ಕಿ ಮತ್ತೆ ಕೂಗುತ್ತಿದೆ
ಅಮ್ಮನಾಗಿರುವ ಅದೇ ಹುಡುಗಿ
ಹೊಸಿಲಲ್ಲಿ ನಿಂತು ಕಾಯುತ್ತಾಳೆ ಮಗಳ ದಾರಿ
ನಿನ್ನೆಯಷ್ಟೇ ದೂರದೂರಿನಲ್ಲಿ
ಪುಟ್ಟ ಹುಡುಗಿಯೊಬ್ಬಳು ಛಿದ್ರವಾಗಿದ್ದಾಳೆ
ನಶೆಯೇರಿದ ರಕ್ಕಸರ ಅಟ್ಟಹಾಸಕ್ಕೆ ಸಿಲುಕಿ
ಓ ದೇವರೇ, ಕೇಳಬಾರದ ಜಾಗದಲ್ಲಿ
ಕೇಳಬಾರದವರು, ಕೇಳಬಾರದ್ದನ್ನು ಕೇಳುವಾಗ
ಹಕ್ಕಿಯಾಗಿ ಹಾರುವಂತಾದರೂ ಮಾಡಬಾರದೆ?
ಜಿಗಿಯುತ್ತ ಬಂದ ಮಗಳ ಪ್ರಶ್ನೆ, ‘ಅಮ್ಮಾ, ಹಕ್ಕಿ ಏನೆನ್ನುತಿದೆ?’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.