ADVERTISEMENT

ನಿನ್ನ ಕನ್ನೆತನದ ಕೇಡಿಗರು ನಾವೇ

ರಘುನಂದನ
Published 19 ಏಪ್ರಿಲ್ 2020, 6:09 IST
Last Updated 19 ಏಪ್ರಿಲ್ 2020, 6:09 IST
ಕಲೆ: ಸೃಜನ್‌
ಕಲೆ: ಸೃಜನ್‌   

ಕಾಣಿಕೆ

‘ವಸಂತ ಮೈವೆತ್ತ ಮರಕ್ಕೆ ಕೊರೊನಾ ಬಾಧೆಯಿಲ್ಲ ಭೀತಿಯಿಲ್ಲ’

ಚಂದದ ಸಾಲು ಹೋs ಎಂದುಬ್ಬಿದೆ. ನೀಲಿ ಬಾನತ್ತ
ನೇರಳೆ-ಕೆಂಪು ರಂಗಿನ ಕರಗ ಹೊತ್ತಾರೆ ಹತ್ತಾರು ಅಡಿ
ಚೆಲ್ಚೆಲ್ಲು ಅರಳಿ ಡಾಂಬರು ರಸ್ತೆಯಗಲಕ್ಕು ಚೆಲ್ಲಿದ್ದ
ತಬೆಬೂಯಿಯಾ ಫೋಟೋ ತೆಗೆದೆ; ಚಿಗಿತ ಒಳದನಿ
ಯದುಮಿ, ಹಂಚಿಕೊಂಡೆ. ತಲಬು ತಣಿಸಿದೆ, ದಣಿದೆ.

ADVERTISEMENT

ಅದುಮಿದ್ದ ದನಿಯಬಿಟ್ಟೆ: ಬೈಚಿಟ್ಟ ಶಿವಸತುವು ಸೊಕ್ಕಿ
ಸುಗ್ಗಿ ಸಿಡಿದಾಡಿ ಕುಣಿದರೂ, ದಿಟವಲ್ಲ ಸಾಮತಿ:
ಮನುಸಂಗಲ್ದೆ ರೋಗ ಮರುಕ್ ಬತ್ತದಾ? ಇಲಿ ಹುಲಿ
ಮುಸುವ ಬಾವಲಿ ಹಂದಿ ಹೇಂಟೆ ಹುಂಜ ಜಂತುಜಡ್ಡು -
ನಮಗೆ. ಕಾಂಡಕಾಯಿಬೇರು ಕೊರಕ, ಎಲೆರಸಬಾಕ ಹುಳ
ಒರಲೆ, ಬುಗುಟು - ಮರಗಿಡಕ್ಕೆ. ಭವಾನಂದರೋಗ-ರೋ
ಗಾನಂದ ನಾಶ ಶಿವಯೋಗಭೋಗ. ಜಡ್ಡು ಭವದ ಬಳುವಳಿ;
ಸಾವು, ಗುರಿ. ಅರಗಲೆಂದೆ ಕುಣಿವುದು ನೀಲಾಂಜನದ ಕುಡಿ.

ಎಳಬೆಳಗು

ಮೂಡಣದ ಬಾನತುಣುಕಲ್ಲಿ ನೇಸರು. ಬಿಸಿಲ ಬಂಗಾರರೇಕು.

ಹಿಗ್ಗಲಾಗದು ಈಗ. ಕಾಣಿ, ಮೇಲೆ, ಗಿರಕಿಡುತಿರುವ ಹದ್ದು.
ಬಸವಳಿದ ಅದರ ತೆಳ್ಳನೆ ಸಿಳ್ಳು. ಕೆಳಗೆ, ಗರಬಡಿದು ನಾಲಿಗೆ,
ಕೊರಡಾದ ಬೀದಿ. ಕಾಣಿ, ಮಟಾಮಾಯ ಬೀಡಾಡಿ ನಾಯಿ.
ಕೇಳದು ಒಂದೂ ಬೊಗಳು. ದೆಯ್ಯನಂಥ ಊರಲ್ಲಿ ಎಂಜಲು
ಮುಸುರೆ ಮಾಂಸದೂಟವಿಲ್ಲ ಪೇಟೆಬಡುಕ ಹದ್ದಿಗೆ, ನಾಯಿಗೆ.
ನಮ್ಮನ್ನು ನೆಚ್ಚಿ ಬಡವಾದಿರಲ್ಲ ಹದ್ದುಗಳೆ, ನಾಯಿಗಳೇ.


ದಿಕ್ಕುದಿಕ್ಕು, ಇಂಗಾಲ ಇಂಗುತ್ತ ಇಂಗುತ್ತ ತಿಳಿಯಾದ ಗಾಳಿಗೆ
ಬಿಡುಬೀಸು ಮನುಷ್ಯರುಸಿರಾಗಲಾಗದ ಪಾಡು. ಮೋರೆಗವಸು,
ಮಾರಿತಡೆ. ಚಿಂತೆ ಬೇಡವೆ, ಆಮ್ಲಜನನೀ, ಇಂಗಾಲರಕ್ಕಸರು,
ನಿನ್ನ ಕನ್ನೆತನದ ಕೇಡಿಗರು, ನಾವೆ ಕೆಟ್ಟೆವೀಗ. ಅಗೊ, ಅಲ್ಲಿ
ಅತ್ತಿಯ ಹರೆಮರೆ: ಕುಟ್ರಶೆಟ್ಟಿಯ ಕುಟುರು. ತಂತಿಮೇಲೆ,
ಕಳ್ಳಿಪೀರನ ಪಿಳಿರು. ಅಲ್ಲಿ ನಮ್ಮ ಹಂಗಿಲ್ಲ. ಹೊಗು ಅಲ್ಲಿ,
ಹೊಗಿಸಿಕೊ. ಆ ಹಾಡ ಹಾಡು. ಬಿಸಿಲಲ್ಲಿ ಆಡು. ತಂಪಾಗು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.