ADVERTISEMENT

ನಂದಿನಿ ಹೆದ್ದುರ್ಗ ಕವಿತೆಗಳು: ಬಿಡಿ ಹೂ

ನಂದಿನಿ ವಿಶ್ವನಾಥ ಹೆದ್ದುರ್ಗ
Published 23 ಅಕ್ಟೋಬರ್ 2021, 21:09 IST
Last Updated 23 ಅಕ್ಟೋಬರ್ 2021, 21:09 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

ದೊರಕಿದ ಒಂದು ಮುತ್ತನ್ನೇ ತೇದು ತೇದು

ಲೇಪಿಸುತ್ತಿರುವ ಕುರಿತು

ಲೋಕಕ್ಕೆ ಹೇಳಬೇಕೆನಿಸುತ್ತದೆ

ADVERTISEMENT

ಹೋಗಲಿ,

ಗರಿಹಗುರದಂತ

ಕಡು ನೋವೊಂದನಾದರೂ

ನನ್ನ ಪಾಲಿಗೆ ಕಾದಿರಿಸಿ ನೋಡು


ನಿನ್ನ ಸಲುವಾಗಿ ಮೀರುವುದು

ಸೊಗಸೇ!!

***

ಒಂದು ಪ್ರತಿಧ್ವನಿಯಷ್ಟೇ ಕೇಳುತ್ತದೆ

ಉಳಿದಂತೆ ನನ್ನ ‌ಲೋಕದಲ್ಲಿ ಮೌನ.

ನನ್ನದೆನ್ನುವ ನನ್ನ ಎಲ್ಲ ಕಾಲದಲ್ಲೂ

ಆ ಸ್ವರವೊಂದೇ ನನ್ನ ಧ್ಯಾನ...

***

ವಿಧಿ‌ ಕರುಣಿಸಿದ

ಬೆಳ್ದಿಂಗಳಿಗೆ

ಬಾಯಿ ತೆರೆದು

ಕೂತವಳು

ನಾನು


ಕಾಲದ ಕಾವಿಗೆ

ಇರಿದ ಕಲೆಗಳೆಲ್ಲ

ಮಾಗಿ

ಚಿತ್ತಾರವಾಗಿವೆ

ಕಟ್ಟು ಹಾಕಿಸಿ

ನಡುಹಜಾರದಲ್ಲಿ

ಇಳಿಬಿಡಲೇನೇ

ಗೆಳತಿ

***

ನೆನಪುಗಳು

ಕೆನ್ನೆ

ಮೇಲಿಳಿಯುತ್ತಲೂ

ಚಿಟ್ಟೆಯೊಂದು

ಪರಿಮಳದ ಪರಾಗ

ಚೆಲ್ಲುತ್ತ

ನನ್ನ

ಕುಡಿಬೆರಳಿಗೇರುತ್ತದೆ


ಅವನ ಮಾಯಾವಿ

ತುಟಿಯೊಳಗೆ

ಕಳೆದುಕೊಂಡಿದ್ದ

ಮುತ್ತುಗಳು

ಈಗಲೂ

ಬೆಚ್ಚಗಿರುವ ಕನಸು

ನನ್ನ

ನಿತ್ಯವೂ

ಬದುಕಿಸಿಕೊಳ್ಳುತ್ತಿದೆ

***

ಪ್ರೀತಿ ತಂದಿಡುವ

ಅಗಾಧ ಗೊಂದಲಗಳಲ್ಲಿ

ಬಂಧಿ‌ ನಾನು

ಮಂಜುನೋಟದ ತುಂಬಾ

ಬರೀ ಸಂಜೆ ಚಿತ್ರಗಳು

ಗುಂಭದಲಿ ಒಲವ ಓಂಕಾರ

ಬಿಗುಮಾನ ಮೌನ ಪ್ರಣವ


ಹೊಂದಾಣಿಕೆಯೆಂಬುದು

ಖಾಲಿ ನಂಬಿಕೆಯೇನೇ ಗೆಳತಿ?


***

ಕೆತ್ತಿದಷ್ಟೂ

ನವಿರು ಕಂಪನಗಳು

ಮರೆಯಾಗುತ್ತವೆ

ಗಟ್ಟಿಯಾಗುವುದೆಂದರೆ

ಇಷ್ಟೆ.

.......

ಇಷ್ಟು ಗಾಢ ಪ್ರೇಮದ

ನಂತರವೂ

ಹಮ್ಮು

ಇಳಿಯಲಿಲ್ಲ ಅಲ್ಲಿ


ವಿಲೇವಾರಿಯಾಗದ

ಅರ್ಜಿಗಳ ಕಡೆಗೂ

ಕಣ್ಣಾಡಿಸಬೇಕೆಂಬ

ನಿಶ್ಚಯವಾಯಿತು

ಈ ಸಂಜೆ ಇಲ್ಲಿ

***


ಹೀಗೇ ಹೋದರೆ

ಸೇರಬಹುದೇ ಅಲ್ಲಿ

ನಾನು


ತನ್ನ ನಿಷ್ಠೆಯ ಕುರಿತು

ಸಣ್ಣ ಅಹಮ್ಮಿನ

ಆ ನದಿ

ಗಿರಿಯ ಕೇಳಿತು.


‘ಸುನೀಲ

ವಿಸ್ತರವೆನಿಸಿಕೊಳ್ಳುವ

ಆ ಕಡಲು ಶುದ್ಧ

ಸಂಕರ ತಳಿ

ಇಲ್ಲೇ ಉಳಿಯಬಾರದೇ

ನೀ..’

ಸ್ವರ ಹೊರಬಾರದೆ

ತಡವರಿಸಿತು ಗಿರಿ

***


ಕರಿ ಉದುರಿಸಲು

ಹೋಗಿ

ಕುಡಿ ಆರಿದೆ ನೋಡು

ಕತ್ತಲು ಕವಿಯುವ

ಮುನ್ನ

ಕಣ್ಣಬೆಳಕೊಂದು

ನನ್ನ ಎದೆದೀಪ

ಹಚ್ಚಬಹುದೇ

ಗೆಳತಿ

***


‘ಇಲ್ಲಿ ಎಲ್ಲವೂ

ಇನ್ನೂ

ನಿನ್ನದೇ

ಸುಪರ್ದಿ

ನೀನು ಬಿಟ್ಟು

ಹೋದಂದಿನಿಂದ

ಕುರುಡ

ನಾನು

ನಿಂತಿದ್ದೇನೆ ಅಲ್ಲೇ

ತಿರುಗಿ ಬರಬೇಡ

ದಯಮಾಡಿ

ನೆನಪು ಹಿತವಾಗಿದೆ’

ಮೆಲ್ಲನುಸುರಿದ.


ಮಲ್ಲಿಗೆಯ ಹಂಬು

ಇನ್ನಷ್ಟು ಬಿಗಿಯಿತು ನನ್ನ!

***


ಕದ ತಟ್ಟಿದ ನೋವನ್ನು

ಕರೆದು ಕಾಲುನೀರು

ಕೊಟ್ಟು

ಘಳಿಗೆ ಕೂರೆಂದು

ಉಂಡು ಹೋಗೆಂದು

ಸತ್ಕಾರ

ಮಾಡುತ್ತೇನೆ

ಇದು ಕಾರಣ

ನನ್ನ ಕಣ್ಣ ತಡಿಯಲ್ಲಿ

ಕಡಲೊಂದು

ನಿತ್ಯ

ಮೊರೆಯುತ್ತದೆ

***

ಎಲ್ಲವನ್ನೂ ಸೆರೆ

ಹಿಡಿಯ

ಬಯಸುತ್ತೇನೆ

ಎಲ್ಲದರಲ್ಲೂ

ಇಷ್ಟಿಷ್ಟೇ ಕೊರತೆ

ಕೊರಗು


ಹೀಗೇ

ನೆತ್ತಿಗೆ ತುಟಿ

ಸೋಕಿದ

ಘಳಿಗೆ ನೆನಪಾಗುತ್ತದೆ


ಪೂರ್ಣಮದಃ

ಪೂರ್ಣಮಿದಂ

ಪೂರ್ಣಾತ್

ಪೂರ್ಣಮುದಚ್ಯತೇ


ಮುಚ್ಚಿದ

ಎವೆಗಳ

ನಡುವೆ

ಚಿತ್ರವೊಂದು

ಬೆಚ್ಚಗಡಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.