ADVERTISEMENT

ನಾನೊಂದುದೇಶದ ಎಕ್ಕಡ

ಮೊಗಳ್ಳಿ ಗಣೇಶ್
Published 23 ಫೆಬ್ರುವರಿ 2019, 19:45 IST
Last Updated 23 ಫೆಬ್ರುವರಿ 2019, 19:45 IST
ಚಿತ್ರ: ವೆಂಕಟ್ರಮಣ ಭಟ್‌
ಚಿತ್ರ: ವೆಂಕಟ್ರಮಣ ಭಟ್‌   

ಎಂದು ಬರುವಳೊ ಅಂತರಂಗದ ಗಂಗೆ

ಬಟಾಬಯಲ ಬಡವರ ತುಂಗೆ

ಕಾದಿರುವೆ ಅವಳದೇ ಅನುಗಾಲದ ಪಾದಕ್ಕೆ ನಮಿಸಿ

ADVERTISEMENT

ಒತ್ತು ತಿರುಗುವೆ ದಿಗಂತಗಳ

ಸುತ್ತಿ ಮೆರೆಸಿ ಕುಣಿವೆ ಆಕಾಶದಗಲ

ಅವಳ ಹೆಜ್ಜೆ ಹೆಜ್ಜೆಗೂ ಮಣಿದು ಮುನ್ನಡೆವೆ

ಒಂದೊಂದು ನಕ್ಷತ್ರ ಅವಳ ಒಂದೊಂದು ಹೆಜ್ಜೆ

ಒತ್ತಿದಂತೆಲ್ಲ ಹೊತ್ತು ಮೂಡಿ ಅವಳ ಸೂರ್ಯೋದಯ

ಕಾಲಕಾಲದ ನನ್ನ ತಲೆ ಮೇಲೆ ಅವಳದೇ ಚಂದ್ರೋದಯ

ಕಾದಿರುವೆ, ನಾನೊಂದು ಅನಾದಿ ದೇಶದ ಎಕ್ಕಡ

ತುಳಿಯುತ್ತಿರುವವರ ಮೆಟ್ಟುತ್ತಿರುವವರ

ಎಂದಾದರೂ ದೂರ ತಳ್ಳಿರುವೆನೇ

ದಿಕ್ಕರಿಸಿ ದಂಗೆ ಎದ್ದಿರುವೆನೇ

ಹುಲ್ಲು ಕಡ್ಡಿಗಿಂತಲು ಹಗುರ ನಿಮ್ಮೆಲ್ಲರ ಪಾದ

ಧರೆಗೆ ಗಿರಿಯು ಭಾರವೇ ಅವಳ ಪಾದವಿನ್ನು ಹೊರೆಯೆ

ತುಳಿಯುತ್ತಲೇ ಬರಲಿ ಅವಳು ನನ್ನೆದೆಯ ಮೇಲೆಯೇ

ಆತ್ಮದ ಮೇಲೆಯೇ ಅಂತರಾಳದ ಜೀವದ ಮೇಲೆಯೇ

ಅವಳ ಒಂದೊಂದು ಪಾದವೂ ನನ್ನೆದೆಯ ನಾದದ ನದಿ

ನರ್ತಿಸಲು ಅವಳು ನನ್ನ ನೆತ್ತಿಯ ಮೇಲೆಯೇ

ಅಪಮಾನವಿಲ್ಲ ಬಹುಮಾನವಿಲ್ಲ ಬಹುಜನ್ಮವಿಲ್ಲ

ಸಾಕಾಯ್ತು ಜನ್ಮಾಂತರಗಳ ಎಕ್ಕಡದ ಬಾಳು

ನನ್ನೆದೆಯ ದಮನಿಗಳಲಿ ಬರುತ್ತಿರುವ ಅವಳ

ಹೆಜ್ಜೆಯ ಸಪ್ಪಳ ಆಕಾಶದಿಂದಿಳಿದು ಬಂದ ಗಂಗೆಯಂತೆ

ಭೂಮಿಯಾಳದಿಂದ ಚಿಮ್ಮಿ ಬಂದ ಚಿಲುಮೆಯಂತೆ

ನಾನೊಂದು ಅನಾದಿ ಕಾಲದ ಎಕ್ಕಡ ತಾಯೇ

ನಿನಗೀಗೋ ದೇಶ ಭಕ್ತರ ಸಂಭ್ರಮ

ದೇಶದ್ರೋಹಿಗಳ ಸಂಹಾರದ ಸಡಗರ

ಬಂದೇ ಬರುವಳೊ ಬರದೆ ಮರೆವಳೊ

ದೇಶದ ಎಲ್ಲ ಪಾದಗಳ ಅನಾದಿ ಎಕ್ಕಡ ತಾಯೇ

ಒಂದಿರುಳಿಗಾದರೂ ಬರಲಿ ಅವಳು

ಹೊತ್ತು ಮೆರೆಸುವೆ ಆಕಾಶದ ದಿಗಂತಗಳ

ತಾರಾಮಂಡಲದ ಸೌರವ್ಯೂಹದ

ಖಗೋಳ ಭ್ರಂಹಾಂಡವ

ಹೊತ್ತಾಯಿತು ತಾಯೇ, ನೀನಾದರೂ ಮೆಟ್ಟಿಕೊ, ಹೊತ್ತುಕೊಳ್ಳುವೆ ನಿನ್ನನೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.