ADVERTISEMENT

ಕವಿತೆ | ಅಪ್ಪ ಮತ್ತು ತೆಂಗಿನಕಾಯಿ

ಸಂತೆಬೆನ್ನೂರು ಫೈಜ್ನಟ್ರಾಜ್
Published 27 ಜೂನ್ 2020, 19:30 IST
Last Updated 27 ಜೂನ್ 2020, 19:30 IST
ಕಲೆ: ಬಸವರಾಜಾಚಾರ್‌ ಕೆ.ಆರ್‌.
ಕಲೆ: ಬಸವರಾಜಾಚಾರ್‌ ಕೆ.ಆರ್‌.   

ಅಪ್ಪ ತೆಂಗಿನಕಾಯಿ ಸುಲಿಯುವಾಗ ಮೈಯೆಲ್ಲಾ ಕಣ್ಣು
ಸಿಪ್ಪೆಗಾಯಿ ತಂದು ಮಚ್ಚ ಬೆನ್ನಿಂದ ನಾಲ್ಕು ಏಟು ಕೊಟ್ಟು ಸುಮ್ಮನಾಗಬೇಕು; ಮುದ್ದೆಗೆ ಕೊಟ್ರೆಕುದಿ ಬರುವ ತನಕ ಕಾಯುತ್ತಾಳಲ್ಲ ಹಾಗೆ!

ಮತ್ತೆ ಮಚ್ಚಿನ ಎದೆಯಿಂದ
ತಲೆಗೆ ಒಂದೊಂದೇ ಏಟು, ಒಂದೊಂದೇ ಸಿಪ್ಪೆ ಅನಾವರಣ;
ಕುದ್ದ ನೀರಿಗೆ ಹಿಟ್ಟು ಹಾಕ್ತಾ ಗೂರಾಡ್ತಾ
ಗಂಟಾಗದ ಮುದ್ದೆಯ ಧ್ಯಾನ ಅಮ್ಮನಿಗೆ!

ಅಪ್ಪನ ಮಚ್ಚ ಚಮತ್ಕಾರಕ್ಕೆ ಬೆರಗಿನ ಕಣ್ಣು ಆಚೀಚೆ ಚಲಿಸದು
ತಲೆಯ ಜುಟ್ಟು ಹೆಬ್ಬೆರಳ ಸಲಕೆಯಿಂದ ಕಿತ್ತು
ಬೋಳು ಮಂಡೆ ಮಾಡಿದಾಗ ತ್ರಿನೇತ್ರ ದರ್ಶನ;
ರಭಸದಿ ಕೂಡಿಸೋ ಮುದ್ದೆ ಈಗ
ಅಮ್ಮನ ಅಡಿಯಾಳು,ಹೇಳಿದಂತೆ ಕೇಳೋ ಕೈಗೂಸು!

ADVERTISEMENT

ಕಾಯಿ ಅಂಗೈಲಿ ಹಿಡಿದು ಮತ್ತೆ ಎರಡೇಟು, ಹೊಸ ಸಿಮೆಂಟು ರಸ್ತೆ ಆರೇ ತಿಂಗಳಿಗೆ ಬಾಯಿ ಬಿಟ್ಟಂತೆ ಕಾಯ ಒಡಲಿಂದ ದಾರಿ
ನೀರು ಧಾರಾಕಾರ ನಾ ಹಿಡಿದ ಹಿತ್ತಾಳೆ ಚೆಂಬಲ್ಲಿ ಅಮೃತ;
ಅತ್ತ ಅಮ್ಮನ ಮುದ್ದೆ ಭೂಗೋಳ ಚಕ್ರವಾಗಿ
ತಪ್ಪಲೆಯಲ್ಲಿ ರಾಶಿ ರಾಶಿ!

ಒಂದು ಕಾಯಿ ಎರಡು ಹೋಳಾಗಿ
ಅಪ್ಪನ ಕೈ ನನ್ನ ಕಣ್ಣಿಗೆ ಮಾಯಾಹಸ್ತ!

ಹಿಟ್ಟನ್ನು ಕೂಡಿಸಿದ ಅಮ್ಮ
ಕಾಯನ್ನು ಎರಡಾಗಿಸಿದ ಅಪ್ಪ
ಇಬ್ಬರೂ ಈಗ ಅನಂತದಲ್ಲಿ ಲೀನ!

ಈಗ
ಮಗಳು ತೆಂಗಿನಕಾಯಿ ಸುಲಿಯಲು ತಂದರೆ
ಕೈಯ ಮಚ್ಚು ಅದರುತ್ತದೆ;
ನನ್ನವಳು ಮಗಳಿಗಾಗಿ ಮ್ಯಾಗಿಗಿಟ್ಟ ನೀರು
ಕುದ್ದು
ಇತಿಹಾಸದ ಸದ್ದು ಮಾಡುತ್ತದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.