ADVERTISEMENT

ಆರಂಭ

ಎಚ್.ಎಸ್.ವೆಂಕಟೇಶ ಮೂರ್ತಿ
Published 22 ಜೂನ್ 2019, 19:30 IST
Last Updated 22 ಜೂನ್ 2019, 19:30 IST
ಕಲೆ: ಸಂಜೀವ್‌ ಕಾಳೆ
ಕಲೆ: ಸಂಜೀವ್‌ ಕಾಳೆ   

ಬೆರೆತು ಬದುಕಿಸಿದ ನನ್ನೊಲವಿನ ಸಖಿ

ತೊರೆದು ಹೋದಳು

ದೂರಾತಿದೂರದ ಕಾಣದೂರಿಗೆ, ದುಃಖ ಸಾ

ADVERTISEMENT

ಗರಕ್ಕೆನ್ನನ್ನು ದೂಡಿ.

ಸಾಕಿ ಸಲಹಿದಜ್ಜಿಯರೊಬ್ಬೊಬ್ಬರಾಗಿ

ಏಕೀ ಬದುಕ ದಂದುಗ

ಸಾಕಪ್ಪಾಸಾಕೆಂದು ಮುಪ್ಪಡಿಸಿ ಅಲ

ಸಿಕೆ ವ್ಯಾಧಿಯಿಂದಳಿದರು.

ಹತ್ತು ಮಂದಿಯಿದ್ದೂ ಇರುವುದೊಬ್ಬನೇ.

ಸತ್ತವರು ಸತ್ತು, ಇದ್ದೂ

ಹತ್ತಿರ, ಇರುವುದು ದೂರವೇ ಎನ್ನಿಸಿ ಸುತ್ತ

ಮುತ್ತವರು, ನೊಂದೆ.

ದೂರವಾಯಿತು ಹುಟ್ಟಿದೂರು. ನೆಲೆಸಿ

ದೂರಾಗಲಿಲ್ಲ ಯಾವತ್ತೂ

ಪರಮಾಪ್ತ ಸ್ವಂತ. ಹಳೆಯ ಮನೆ

ಯುರಳಿ ಬಿದ್ದಿತು ಮಳೆಗೆ.

ನಿತ್ಯ ಬದಲಾವಣೆಯ ಬಾಳಲ್ಲುಳಿವ

ಸತ್ಯ ಯಾವುದು ಮತ್ತೆ?

ಹೊತ್ತಿ ಉರಿವ ದೀಪ ಉರಿದಾರುವುದು

ಗೊತ್ತು. ಕೊನೆಯೇ ಹಾಗೆ.

ಪ್ರತಿಯೊಂದು ಹಣತೆಗೂ ಇರುಳ ಒಡಲನು ಹೊಕ್ಕು

ಕತ್ತಲ ಗರ್ಭ ಸೇರುವಾಸೆ.

ಬಿತ್ತಕ್ಕೆ ಮಣ್ಣ ಹೊಕ್ಕು ಮತ್ತೆ ತಲೆಯನ್ನೆತ್ತಿ ಮೇಲಕ್ಕೆ

ಹೊತ್ತು ಬರಲದೇ ಮೃತ್ತು.

ಭರಪೂರ ಘೋರ ಮಳೆ ಸುರಿದು ಗಿಡಮರ ನ

ಗರ ಪ್ರವಾಹದಲ್ಲದ್ದಿ

ಬರೀ ತರಂಗ ಮದ್ದಲೆಯಬ್ಬರ. ನೀರೇ ನೀರು.

ಇರುವುದೇನು ಕೊನೆಗೆ?

ಅಳುವಿನ ಕಡಲ ನೊರೆತೆರೆ ನಡುವೆ ಕೊನೆಗೊಂ

ದಾಲದೆಲೆ ತೇಲುವುದೆ?

ಗುರುವಿನ ಕರುಣಾಪೂರ್ಣ ನಗೆಯೇ ನಮ್ಮ

ಪೊರೆವ ತಿಂಗಳ ತೆಪ್ಪ?

ಅವನೇನು ಮಹಾ? ಎಲ್ಲ ಹೇಳಿದ್ದಾರೆ ಹಿಂದಿ

ನವರೆಂದು ವಕ್ರನಗೆ ನ

ಕ್ಕವರ ನಗುವುದು ನಿತ್ಯ ಅರಳುವ ಹೂವು.

ಆರುವ ತನಕುರಿವ ಕುಡಿ.

ಕಣ್ಣ ಹನಿಗಳೆ ನನಗೆ ಜಪಸರವಾಗಿ

ನಿನ್ನನ್ನೆ ಬಿಡದರೆಗಣ್ಣಲ್ಲಿ

ಧ್ಯಾನಿಸುವೆ ನಿನ್ನ ಬದುಕೇ ಕಲಿಸ

ಲೆನಗೆ ದಾಟುವ ಪಾಠ.

ಮುಳುಗುವನು ಸೂರ್ಯ ಮಬ್ಬಿನಿರುಳಲ್ಲಿ

ಬೆಳಗುವನು ಮುಂಜಾನೆ.

ಹೊಳೆ ಮುಳುಗುವುದು ಹೆಗ್ಗಡಲಲ್ಲಿ.ತಿರುಗ

ಮಳೆಯಾಗಿ ಚಕ್ರಸುತ್ತು.

ಬರುವುದೆಲ್ಲಾ ಬರಲಿ, ಹೋಗಲಿ ಹರಿದು.

ಇರುವೆ ನಾನಿರುವಂತೆ.

ಇರಲಿ ಸಮಶ್ರುತಿ, ಸ್ವಸ್ಥ ಚಿತ್ತ. ನೆಲೆ

ಸಿರಲೆದೆಯಲ್ಲಿ ಸ್ವಸ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.