ADVERTISEMENT

ಸ್ಮಿತಾ ಅಮೃತರಾಜ್ ಅವರ ಕವನ: ಅರಿಕೆ

ಸ್ಮಿತಾ ಅಮೃತರಾಜ್
Published 29 ಸೆಪ್ಟೆಂಬರ್ 2024, 0:30 IST
Last Updated 29 ಸೆಪ್ಟೆಂಬರ್ 2024, 0:30 IST
   

ನೀನು ನನ್ನ ಒಳದನಿಯೇ ಅಂತ

ಗೊತ್ತಾದ ದಿನದಿಂದ ನಿನಗಾಗಿ

ಹಲುಬುವುದ ಬಿಟ್ಟಿರುವೆ ನೋಡು.

ADVERTISEMENT

**  **  **

ನಿನ್ನ ದನಿ ಕೇಳದೆ ಇರಬಲ್ಲೆನಾ ನಾನೂ..?

ಯಾವ ಕ್ಷಣದಲ್ಲಿ ನೆನೆದೆನೋ ನಾನು?

ಅಶ್ವಿನಿ ದೇವತೆಗಳು ಅಸ್ತು ಎಂದಿರಬಹುದೇ?

ಅಡ್ಡಾಡುವ ಖಾಲಿತನದೊಳಗೀಗ ಏದುಸಿರಿನದಷ್ಟೇ

ಸದ್ದು


**  ** **

ಆಡಿದ ಮಾತುಗಳು , ಕೊಟ್ಟ ಆಣೆಗಳು

ಕಡಲ ದಂಡೆಯ ಮರಳಿನ ಮೇಲೆ ಉದುರಿ 

ಹೋಗಿರಬಹುದಾ? ದುಶ್ಯಂತನಿಗೆ ತಟ್ಟಿದ ಶಾಪವೀಗ

ಮತ್ತಿಲ್ಲಿ ಮರುಕಳಿಸಿರಬಹುದಾ?

 ****  *****

ಲೇಖನಿಗೀಗ ಹೆಚ್ಚಿನ ಉಮೇದಿಲ್ಲ

ಸುಳ್ಳು ಸುಳ್ಳೇ ಒಲವಿಗೆ ಸಾಕ್ಷಿಯಾಗುವುದಕ್ಕೆ

ಹಾಳೆಗೂ ಆಸಕ್ತಿಯಿಲ್ಲ.

ಹಾಳೆ ಲೇಖನಿಗಳ ಲಯ ತಪ್ಪಿದರೆ

ಸೂಕ್ಷ್ಮ ಎಳೆ ದಕ್ಕುವುದಿಲ್ಲ.

****    ****

ಆತ್ಮಸಂಗಾತನೆಂದು ನೀನೇ ಇಟ್ಟ ಹೆಸರಿಗೆ

 ಬದ್ಧಳಾಗಿಯೇ ಎದೆ ಹರವಿ  ನಿರಾಳವಾಗಿದ್ದೆ.. 

ಅದೃಶ್ಯವಾಗಿಯೇ ಇರುವ ನಿನ್ನ ನಿಷ್ಟೆಯ ಪ್ರಶ್ನೆ ನಾನಿಲ್ಲಿ ಎತ್ತಲಾರೆ


**  ****


ನೀನು  ನಿರಾಕಾರ ಅನಾಮಧೇಯ ಅಂತ 

ಹೃದಯವನ್ನು ಒಗ್ಗಿಸಿದ್ದಷ್ಟೂ

ಅದು ಹೆಚ್ಚೇ ಬಡಿದುಕೊಳ್ಳುವುದ್ದನ್ನ

ನನಗೆ ತಡೆಯಲು ಸಾಧ್ಯವಾಗಲಿಲ್ಲ

ಆ ಕಾರಣದಿಂದಲೇ ಕವಿತೆ ಬರೆಯುವುದನ್ನು  ಈವರೆಗೂ ನಿಲ್ಲಿಸಲಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.