ಅವಳು ಗೊಂದಲಕ್ಕೆ ಬಿದ್ದಿದ್ದಾಳೆ
ಆರಿಸಲಿ ಯಾವುದು? ಇದ್ದ ಬಣ್ಣ, ರೂಪ ತೆಗೆದಿರಿಸಿ
ಇಲ್ಲದ್ದಕ್ಕೆ ಕಣ್ಣು ಚೂಪಾಗಿಸಿಕೊಂಡಿದ್ದಾಳೆ
ಅಂಗಡಿ ಹುಡುಗ ಇವಳೆದುರು ಮೂಕ
ತೆಗೆದಷ್ಟೂ ಸಾಲದು, ರಾಶಿ ಪೇರಿಸಿದಷ್ಟು ಊಹ್ಞುಂ.... ಸಮಾಧಾನವಿಲ್ಲ
ಆಕಾಶವಾಣಿಯಲ್ಲಿ ಎಂದೋ ಕೇಳಿದ ಹಾಡಲ್ಲ;
ಥಟ್ಟಂತ ನಾಲಗೆಗೆ ಸಖನಾಗಲು!
ಬಟ್ಟೆ ಆಯುವುದೆಂದರೆ
ಹೊಸ ಮಳೆಗೆ ರೈತ ನೇಗಿಲು ಹೂಡಿದಂತೆ;
ಒಳ ಸಡಗರ ಮತ್ತು ಬಿತ್ತಿ ಬೆಳೆವ ಧ್ಯಾನಸ್ಥ
ಮನ ಬಟ್ಟೆ ಅಂಗಡಿ ಹೊಲದಲ್ಲಿ!
ಬಚ್ಚಿಟ್ಟ ಮನದ ಮಾತುಗಳಂತೆ ಮಡಚಿಟ್ಟಿದ್ದ
ಸೀರೆಗಳನ್ನು ಎಳೆದೆಳೆದು ಹಾಕುವಾಗ
ದುಶ್ಯಾಸನ ಅಂಗಡಿ ಹುಡುಗ; ಕಪ್ಪು ಅಪಶಕುನ ಬೇಡ
ಬಿಳಿ ಗಲೀಜು ಬೇಗ, ಹಳದಿ ಗೋಧಿ ಚರ್ಮಕ್ಕೆ ಒಗ್ಗದು
ಗುಲಾಬಿ ಕಳೆದ ದೀಪಾವಳಿಯಲ್ಲಿ ಕೊಂಡದ್ದು ಹ್ಯಾಂಗರಲ್ಲಿ ನೇತಾಡುತ್ತಿದೆ
ಇದಕ್ಕೆ ಬಾರ್ಡರು ಜರಿ ಕಮ್ಮಿ, ಅದಕ್ಕೆ ಹೂ ಕುಚ್ಚ ಬೇಕಿತ್ತು
ಇನ್ನು ಇದು ಸೆರಗು ಇಷ್ಟೇ..... ಸಾಲದು, ಕುಸರಿ ಕೆಲಸ ಅದಕ್ಕೆ ಹೆಚ್ಚಾಯಿತು
ಬರಿ ಗೊಣಗಾಟ ಆಯ್ಕೆ ಅಷ್ಟು ಸಲೀಸಾ?
ಡಾಕ್ಟರ್ ಕೊಟ್ಟ ಕಂಬಳಿಹುಳದಕ್ಷರ ಮೆಡಿಕಲ್ ಶಾಪಿನವ ಓದಿ
ಕೊಟ್ಟ ಯಾವುದೋ ಔಷಧ ತಂದಂತೆ
ಸೀರೆತರಲಾದೀತೇ?
ನಂಬಿಕೆ ಜೀವದ್ದು, ಹುಡುಕಾಟ ಜೀವನದ್ದು ಅಷ್ಟೇ!
ಬಂದ ಗಂಡು ಜೀವಗಳು ಯುಟ್ಯೂಬ್ ಬಿಚ್ಚಿ
ಕೂತಿದ್ದಾರೆ ಯಾವುದೋ ಮೂಲೆಯಲ್ಲಿ,
ಕೆಲವರು ಕೂಸು ಕಂಕುಳಲೆತ್ತಿ ತಳ್ಳುಗಾಡಿಯೆದುರು
ಐಸಿಗೆ ನಾಲಗೆ ಹಚ್ಚಿದ್ದಾರೆ!
ಎಂದೋ ಮುಟ್ಟಿ ಬಿಟ್ಟ ನೂರಾರು ಸೀರೆ, ನೈಟಿ,
ಚೂಡಿ ಬೀರು ಸಾಮ್ರಾಜ್ಯಗಳಲ್ಲಿ
ಆಳ್ವಿಕೆ ಮಾಡುತ್ತಿದ್ದರೂ ಹಬ್ಬಕ್ಕೆ ಹೊಸ ಸೀರೆಯ
ಅರ್ಜಿಯ ಮೇಲೆ ರಾಯರ ಮರ್ಜಿ ಮುದ್ರೆಯೊತ್ತಿದೆ
ಹುಡುಕಾಟ ಜಾರಿಯಿದೆ
ಇಡೀ ಅಂಗಡಿ ಕಣ್ಣಳತೆಗೆ ಬಂದರೂ ಇಷ್ಟದ ಬಟ್ಟೆ ಎಟಕುತ್ತಿಲ್ಲ
ಆಯ್ಕೆ ಮನಸಿನದ, ಬಟ್ಟೆಯದಾ ರಂಗೋಲಿಯಾಗದ ಚುಕ್ಕಿ
ಮನಸ್ಸು!
ಆರಿಸುವುದೆಂದರೆ ಅವ್ವ, ಬಿದಿರ ಮೊರದಿ ಅಕ್ಕಿ
ಸುರಿದು ಕಲ್ಲು ಭತ್ತ ತೆಗೆದೆಸೆದಂತಲ್ಲ
ಸ್ವಾಮಿ, ಸೀರೆಯಿದು ಕಣ್ ಕುಕ್ಕುವ ಭರದಿ ಮನಪಟವಾಗುವ
ದಿಲ್ ದಾರ್ ಆಯ್ಕೆಯಿದು, ಇದು ಇಂದಿನ ಕಥೆಯಲ್ಲ
ನೂರು ಜಿಂಕೆಯಿದ್ದರೂ ಸೀತೆ ಕನಸಿದ್ದು ಚಿನ್ನದ್ದನ್ನೆ;
ಅಹಲ್ಯೆಯ ಮನ ಮಥನಗೈದದ್ದು, ಇದ್ದುದ ಬಿಟ್ಟು
ಕಲ್ಲಾಗಿದ್ದು!
ಬಟ್ಟೆ ಅಂಗಡಿ ನೆಪ, ನಮ್ಮ ನಡುವಿನ ನೂರು ಆಯ್ಕೆಗೆ
ಸಾವಿರ ಕಣ್ಣು;
ಅವಳ ಗೊಂದಲ ನಮ್ಮ ಗೊಂದಲ ನಡೆದಿದೆ ದಿನಾ ಹುಡುಕಾಟ
ಬೇಕಾದ್ದು ಸಿಕ್ಕ ಕ್ಷಣ ಅಂಗಡಿ ಬಂದ್!!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.