ಅವಳಂಗೈಯ ಸೋಕನ್ನು ಬಯಸಿ ಕೊಡದಲಡಗಿದ ನೇಸರ,
ಹಾಗೇ ಕುಣಿಕುಣಿದು ತುಳುಕಿಸದೆ ಹನಿ ನೀರನ್ನೂ
ಕುಲುಕೋ ಅವಳ ಆ ಸೊಂಟದ ಮೇಲೆ ನಡೆದಿದ್ದ ಅವನು ಕಲ್ಪಕಲ್ಪಾಂತರ.
ಹೇಳದೆ ಕೇಳದೆ ಎಲ್ಲವನೂ ತೋರಿಬಿಡುವ
ಕಣ್ಣೊಳಗೆ ಕೂಡಿಡಬಾರದು ಕನಸುಗಳ ಎಂದು ನಂಬಿದ್ದಳವಳು,
ಮಡಿಕೆ ಕಾಗದದ ಚೂರೊಳಗೆ ಮಡಿಕೂತ ಕುಂಕುಮದ ಹಾಗೆ
ನೀರ ತುಳುಕಿಸದೇ ಕುಲುಕೋ ಅವಳ ಸೊಂಟದೊಳಗೆ ಇತ್ತು
ಕಾಣದ ನೂರೆಂಟು ಮಡಿಕೆಗಳ ಹದದ ಮಂತ್ರ.
ನಡೆದಳವಳು ವಾಲಾಡೋ ಕೊಡಕಂಠದ ನೀರ ನೋಡುತ್ತ
ಆಗೊಮ್ಮೆ ಈಗೊಮ್ಮೆ ಚೂರುಚೂರೇ ಮಿರುಗುತ್ತಿದ್ದ
ನೇಸರನ ಬೆಡಂಗು ಹುರಿಗೊಂಡು ಆಗ
ನೋಡಬೇಕು ಆ ಚೆಲುವು!
ಕೊಡದ ಇನ್ನಿಷ್ಟು ಆಳಕ್ಕಿಳಿಯಿತು ಅವಳ ಬೆರಳು,
ಅವಳ ಒಂದೇ ಒಂದು ತಿಳಿಸ್ಪರ್ಶದಿಂದ
ಕೊಡದ ನೀರೊಳಗಿನ ನೇಸರ ತಿಳಿವುಗೊಂಡು
ಅದೇ ಆಗ ಅವಳ ಹಣೆಗೊತ್ತಿದ್ದ ಹುಡಿಕುಂಕುಮವು
ತಿಳಿಪು ನೀರಿನೊಡನಾಡಿ ಓಕುಳಿಯಾಗಿ
ಲೋಕಕ್ಕೆ ಅಂದು ಬೆಟ್ಟನೆ ಬೆಳಗಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.