ಆ ಹೂದೋಟಕ್ಕೆ
ಕಾಲಿಟ್ಟಿದ್ದು ಹದಿನೈದು
ವಸಂತ ಕಳೆದ ನಂತರ
ಸಂಪಿಗೆ ಹೂ ಅರಳಿತ್ತು
ಪ್ರತಿ ಟೊಂಗೆಗೂ ತುಂಬಿಕೊಂಡ
ಮಾವು ಇನ್ನೇನು
ಚಣ ದಾಟಿದ್ದೆ ತಡ
ಕಳಚುವುದರಲ್ಲಿತ್ತು ತೊಟ್ಟು
ಹಳದಿ ಹೂವಿನ
ಅದೆ ಮರ
ತೂಗುತ್ತಿದ್ದ ಹಳದಿ ಹಾರ
ಹೋಗಿ ನಿಂತೆ ಅದೇ ಹಳದಿ
ಹೂಮರದ ನೆರಳಲ್ಲಿ
ಬೀಸಿತು ಗಾಳಿ
ಎಲೆ ಉದುರಿ
ನಿನ್ನ ಹೆಸರು ಕೂಗಿ
ಸಿಕ್ಕ ಸವಡಿನಲ್ಲೆ
ಮುಡಿ
ಎಂದಿತು ನನ್ನ ನೋಡಿ
ಮಾತು ನೆನಪಿತ್ತು
ನೆನಪು ನೆನಪಾಗಿತ್ತು
ಹೂ ಕೊಯ್ಯಲು ಹಾರುತ್ತಿದ್ದೆ
ಮರದೆತ್ತರಕ್ಕೆ
ಆಗಿನಿಂದ ಈವರೆಗೂ..
ಹೆಜ್ಜೆ ಸಪ್ಪಳ
ಬಹುಶಃ ಅವನದ್ದೆ
ನನ್ನ ಮೇಲಕ್ಕೆತ್ತಿ
ಹೂ ಕೊಯ್ಯಿಸಿದರೆ
ಎಷ್ಟು ಚಂದ.!?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.