ಹನ್ನೆರಡನೆಯ ಶತಮಾನದ ಸಾಮಾಜಿಕ ಕ್ರಾಂತಿಯೊಂದಿಗೆ ಒಂದು ಸಾಹಿತ್ಯಕ ಕ್ರಾಂತಿಯೂ ಆಯಿತು - ಅದೆಂದರೆ ಕಂದವೃತ್ತಗಳ ವಜ್ರಬಂಧದಲ್ಲಡಗಿದ್ದ ಪದ್ಯಸಾಹಿತ್ಯ, ಆ ಚೌಕಟ್ಟಿನಿಂದ ಹೊರಬಂದು ಜನಸಾಮಾನ್ಯನೊಡನೆ ಮಾತಾಡತೊಡಗಿದ್ದು. ಶರಣರ ಅನುಭವ-ಅನುಭಾವಗಳ ಅಂತಸ್ಸತ್ತ್ವಕ್ಕೆ ಛಂದಸ್ಸು, ಶಬ್ದಾಲಂಕಾರ ಅರ್ಥಾಲಂಕಾರಗಳ ಕೃತಕ ಆಲಂಬನೆಯ ಅಗತ್ಯ ಕಾಣಲಿಲ್ಲ, ಬದಲಿಗೆ ಅವು ಅನಗತ್ಯ ಶೃಂಖಲೆಯಾಗಿ ಪರಿಣಮಿಸಿರಲಿಕ್ಕೆ ಸಾಕು. ಹೀಗೆ ಕಾವ್ಯಕ್ಕೆ ಅನುಭಾವಕ್ಕೆ ಜನಮಾನಸವನ್ನು ಮುಟ್ಟುವ ಹೊಸದೊಂದು ಬಗೆ ತಿಳಿದಂತಾಯಿತು. ಆನಂತರದಲ್ಲಿ ಶುದ್ಧ ದೇಸೀ ಛಂದಸ್ಸುಗಳಾದ ರಗಳೆ ಷಟ್ಪದಿಗಳ ಕಡೆಗೆ ಹಲವು ಕವಿಗಳ ಗಮನ ಹರಿದರೆ, ಜನಪದ ಲಯಗಳಾದ ಸಾಂಗತ್ಯ ತ್ರಿಪದಿಗಳೆಡೆ ಹಲವು ಕವಿಗಳು ಮನ ಮಾಡಿದರು. ಹೀಗೆ ತ್ರಿಪದಿಗಳನ್ನು ತನ್ನ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಆಯ್ದುಕೊಂಡು ತ್ರಿಪದಿಯೆಂದರೆ ಸರ್ವಜ್ಞನೇ ಎನ್ನಿಸುವ ಛಾಪನ್ನೊತ್ತಿದಾತ ಸರ್ವಜ್ಞ.
ದಿನನಿತ್ಯದ ಕೆಲಸಗಳಾದ ಗುಡಿಸು, ಸಾರಿಸು, ಬೀಸು, ಕುಟ್ಟು, ಉಳುಮೆ ಬಿತ್ತನೆ ಇತ್ಯಾದಿಗಳ ಲಯಕ್ಕೆ ಸೊಗಸಾಗಿ ಒದಗುವ ಜನಪದಲಯವಾದ ತ್ರಿಪದಿಯು, ಸಮಾಜದ ಹತ್ತು ಹಲವು ಜನಗಳೊಡನಾಡಿ 'ಎಲ್ಲರೊಳಗೊಂದೊಂದು ನುಡಿಗಲಿತ' ಸರ್ವಜ್ಞನ ಮನಸೆಳೆದಿದ್ದರೆ ಅಚ್ಚರಿಯಿಲ್ಲ. ಹಾಗೆಯೇ ತ್ರಿಪದಿಗಳಲ್ಲಿ ಸೊಗಸಾಗಿ ಸೊಂಪಾಗಿ ಹಬ್ಬಿ ಹರಡಿರುವ ಜನಪದಸಾಹಿತ್ಯ, ಮೂರು ಸಾಲಿನ ಪುಟ್ಟ ಹೊಟ್ಟೆಯಲ್ಲಿ ಅರ್ಥದ ಪ್ರಪಂಚವನ್ನೇ ಅಡಗಿಸಿಡಬಲ್ಲ ಅದರ ಕಾವ್ಯಗುಣ ಸರ್ವಜ್ಞನಿಗೆ ತನ್ನ ಅಭಿವ್ಯಕ್ತಿಗೆ ತಕ್ಕ ಹೊರಮೈಯೆನಿಸಿರಲು ಸಾಕು.
ಕಾವ್ಯದಲ್ಲಿ ತ್ರಿಪದಿಯ ಬೆಳೆ ಬೆಳೆದವರಲ್ಲಿ ಸರ್ವಜ್ಞನೇ ಮೊದಲಿಗನಲ್ಲ. ರನ್ನನಿಂದ ಹಿಡಿದು ನಿಜಗುಣಶಿವಯೋಗಿಗಳವರೆಗೆ ಹಲವರು ಅಲ್ಲಲ್ಲಿ ತ್ರಿಪದಿಗಳನ್ನು ಬಳಸಿದ್ದಾರೆ. ಆದರೆ ತ್ರಿಪದಿಗಳನ್ನೇ ಪೂರ್ಣಪ್ರಮಾಣದಲ್ಲಿ ಬಳಸಿದಾತ ಸರ್ವಜ್ಞನೊಬ್ಬನೇ - ರಗಳೆಗೆ ಹರಿಹರನೆಂಬಂತೆ, ಷಟ್ಪದಿಗೆ ರಾಘವಾಂಕನೆಂಬಂತೆ, ಉಗಾಭೋಗ-ಸುಳಾದಿಗಳಿಗೆ ದಾಸರೆಂಬಂತೆ, ತ್ರಿಪದಿಗೆ ಸರ್ವಜ್ಞ. ಸರ್ವಜ್ಜನ ತ್ರಿಪದಿಗಳು ಬಹುತೇಕ ಜನಪದ ತ್ರಿಪದಿಗಳನ್ನೇ ಹೋಲುತ್ತವಾದರೂ ಇದು ಶಿಷ್ಟಪ್ರಕಾರಕ್ಕೆ ಸೇರಿದ್ದು. ಎರಡೂ ಪ್ರಕಾರಗಳಲ್ಲಿ ಕೆಲವು ಬಹುಸೂಕ್ಷ್ಮ ವ್ಯತ್ಯಾಸವಿದೆ. ಜನಪದತ್ರಿಪದಿಗಳಲ್ಲಿ ಆದಿಪ್ರಾಸದ ಕಟ್ಟಿಲ್ಲ, ಆದರೆ ಶಿಷ್ಟಪ್ರಕಾರದಲ್ಲಿ ಆದಿಪ್ರಾಸವಿರುತ್ತದೆ; ಹಾಗೆಯೇ ಜನಪದಪ್ರಕಾರದಲ್ಲಿ ಅಂಶಗಣಗಳ ಅಳತೆಯಲ್ಲಿ (ತತ್ಪರಿಣಾಮವಾಗಿ ಸಾಲುಗಳ ಒಟ್ಟಾರೆ ಅಳತೆಯಲ್ಲಿ) ಒಂದಕ್ಷರ ಹೆಚ್ಚುಕಡಿಮೆಯಾದರೂ ಹಾಡಿನ ಲಯಕ್ಕೆ ಎಳೆದು ಹೊಂದಿಸಿಕೊಳ್ಳಬಹುದು, ಆದರೆ ಶಿಷ್ಟತ್ರಿಪದಿಯಲ್ಲಿ ಅಂಶಗಣದಲ್ಲೂ ಇಂತಿಷ್ಟೇ ಮಾತ್ರಾಕಾಲವಿರಬೇಕೆಂಬ ನಿಯಮವಿದೆ (ಅಂಶಗಣವೆಂದರೆ ನಿರ್ದಿಷ್ಟ ಮಾತ್ರಾಕಾಲಗಳ – ಹ್ರಸ್ವ-ದೀರ್ಘಾಕ್ಷರಗಳ – ಒಂದು ಗಣ ಎಂದಿಟ್ಟುಕೊಳ್ಳಬಹುದು, ಕೆಲವು ಹ್ರಸ್ವಾಕ್ಷರಗಳನ್ನು ಹಾಡಿನ ಲಯಕ್ಕೆ ತಕ್ಕಂತೆ ಹಿಗ್ಗಿಸಿ ದೀರ್ಘಾಕ್ಷರವನ್ನಾಗಿ ಮಾಡಿಕೊಳ್ಳುವ ಅವಕಾಶ ಇಲ್ಲಿದೆ.)
ಹೀಗೆ ತಾನಾರಿಸಿಕೊಂಡ ಮೂರು ಹೆಜ್ಜೆಯ ತ್ರಿಪದಿಯಲ್ಲಿ ಸರ್ವಜ್ಜನು ಬಿಚ್ಚಿಟ್ಟದ್ದು ಮಾತ್ರ ವಿಶಾಲವಾದ ಲೋಕಜ್ಞಾನದ ತ್ರಿವಿಕ್ರಮಾವತಾರವನ್ನೇ. ಸರ್ವಜ್ಞನು ದಾರ್ಶನಿಕಕವಿ. ತ್ರಿಪದಿಯ ಎರಡೂವರೆ ಕಾಲುಗಳಲ್ಲಿ ಆತನು ಹುದುಗಿಸಿಡುವ ಅರ್ಥ ಅಪಾರ. ಮಾತಿನ ಹದವನ್ನು, ತಾಖತ್ತನ್ನು ಇನ್ನಿಲ್ಲದಂತೆ ಬಲ್ಲಾತ ಸರ್ವಜ್ಞ. ಈ ಮಾತಿನ ಶಕ್ತಿಯನ್ನಾತ ಎರಡೇ ಸಾಲಿನಲ್ಲಿ ಕಟ್ಟಿಕೊಡುವ ಪರಿ ನೋಡಿ:
ಮಾತು ಬಲ್ಲಾತಂಗೆ ಮಾತೊಂದು ಮಾಣಿಕವು
ಮಾತಾಡಲರಿಯದಧಮಂಗೆ ಮಾಣಿಕವು
ತೂತು ಬಿದ್ದಂತೆ ಸರ್ವಜ್ಞ
ಆಯಿತು, ತೂತು ಬೀಳದ ಮಾಣಿಕ್ಯ ಬೆಲೆಬಾಳುವುದೆನ್ನುವುದೇನೋ ಸರಿ, ಅದರಿಂದ ಹೊಟ್ಟೆಯಂತೂ ತುಂಬುವುದಿಲ್ಲವಲ್ಲ. ಮಾತಿನಿಂದ, ಅದರ ಬಲ್ಲತನದಿಂದ ಪ್ರಯೋಜನವೇನಾದರೂ ಇದೆಯೇ? ಸರ್ವಜ್ಞ ಹೇಳುತ್ತಾನೆ:
ಮಾತು ಬಲ್ಲಾತಂಗೆ ಏತವದು ಸುರಿದಂತೆ
ಮಾತಾಡಲರಿಯದಾತಂಗೆ ಬರಿ ಏತ
ನೇತಾಡಿದಂತೆ ಸರ್ವಜ್ಞ
ಮಾತರಿಯದಾತನ ಬರಿಮಾತು ನಿಷ್ಪ್ರಯೋಜಕವಷ್ಟೇ ಅಲ್ಲ, ಕರ್ಣಕಠೋರ ಕೂಡ:
ರಸಿಕನಾಡಿದ ಮಾತು ಸಸಿಯುದಿಸಿ ಬಂದಂತೆ
ರಸಿಕನಲ್ಲದನ ಬರಿ ಮಾತು, ಕಿವಿಗೆ ಕೂರ್
ದಸಿಯ ಬಡಿದಂತೆ ಸರ್ವಜ್ಞ
ಮಾತಿನ ಬಗೆಗೆ ಇಷ್ಟು ಹೇಳುವ ಸರ್ವಜ್ಞ ತನ್ನ ಖಂಡಿತವಾದ ಮಾತಿನ ಚಾಟಿಯಿಂದಲೇ ಲೋಕವಿರೋಧವನ್ನೂ ಕಟ್ಟಿಕೊಂಡವನು.
ಗಂಡು ತನ್ನದು ಎಂದು ಲೆಂಡೆಸುತನೆಂಬಳು
ಖಂಡಪರಶುವಿನ ವರಪುತ್ರ ಆನು ನೆರೆ
ಕಂಡುದನೆ ನುಡಿವೆ ಸರ್ವಜ್ಞ
ಹೀಗೆ ಬಾಲ್ಯದಲ್ಲೇ ವೀರಪ್ರತಿಜ್ಞೆಮಾಡಿ ಮನೆಯಿಂದ ಹೊರಬೀಳುವ ಸರ್ವಜ್ಞ, ಆಮೇಲೆ ಎಲ್ಲೆಲ್ಲಿ ಸುತ್ತಿದನೋ, ಎಲ್ಲಿ ಮಲಗಿದನೋ, ಎದ್ದನೋ, ಯಾರ ಬಳಿ ಕಲಿತನೋ, ಲೋಕಾನುಭವ ಪಡೆದನೋ ಇದು ಇತಿಹಾಸದ ಗರ್ಭದಲ್ಲಿ ಮರೆಯಾದ ವಿಷಯ. ಆದರೆ ಆತನೇ ತನ್ನ ಬಗೆಗೆ ಹೇಳಿಕೊಳ್ಳುವಂತೆ:
ಸರ್ವಜ್ಞನೆಂಬುವನು ಗರ್ವದಿಂದಾದವನೆ
ಸರ್ವರೊಳಗೊಂದೊಂದು ನುಡಿಗಲಿತು ವಿದ್ಯೆಯಾ
ಪರ್ವತವೆ ಆದ ಸರ್ವಜ್ಞ
ಇದೊಂದು ಈತನ ವಿಷಯದಲ್ಲಿ ಸತ್ಯವೆನಿಸುತ್ತದೆ. ಸರ್ವಜ್ಞನ ವಚನಗಳಲ್ಲಿ ವಿಹರಿಸುವುದೆಂದರೆ ಅದೊಂದು ವಿಶಿಷ್ಟ ಅನುಭವ, ಶ್ರೀಮಂತವಾದ ಲೋಕಸಂಚಾರ ಕಟ್ಟಿಕೊಡುವ ವಿವೇಕಾನುಭಾವಗಳು ಬೆಲೆ ಕಟ್ಟಲಾಗದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.