ADVERTISEMENT

ಸತ್ಯಾನಂದ ಪಾತ್ರೋಟ ಅವರ ಕವನ: ಕುರ್ಚಿ ಖಾಲಿ ಇಲ್ಲ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 0:05 IST
Last Updated 22 ಸೆಪ್ಟೆಂಬರ್ 2024, 0:05 IST
   

‘ಕುರ್ಚಿ ಖಾಲಿ ಇಲ್ಲ
ಕುರ್ಚಿ ಖಾಲಿ ಇಲ್ಲ’
ಎಂದು
ಅತಳ, ವಿತಳ, ಪಾತಾಳ
ಏಕು ಮಾಡಿ
ಕಿಬ್ಬೊಟ್ಟೆ ಹರಿಯುವ ಹಾಗೆ
ಬೊಬ್ಬಿರಿದು
ಟಾಮ್, ಟಾಮ್ ಹೊಡೆಯುತ್ತಾರೆ
ಒಳಗೊಳಗೆ ಟಾವೆಲ್ ಹಾಸಿ
ನಾ ಮುಂದೆ, ತಾ ಮುಂದೆ
ಎಂದು
ರೇಷನ್ ಅಂಗಡಿ ಮುಂದೆ ನಿಂತಂತೆ
ನಿಂತಿದ್ದಾರೆ

ಇರುವುದು ಒಂದೇ ಒಂದು ಕುರ್ಚಿ
ಸತ್ತರೂ ಸಾಯಬೇಕು
ಇದರ ಮೇಲೇಯೇ
ಮುಂದೆ ಕೂಡ್ರಬೇಕು
ನನ್ನ ವಾರಸುದಾರನೇ
ಇದರ ಮೇಲೆಯೇ
ನಮ್ಮ ಹಣೆಬರಹದಲಿ
ಬ್ರಹ್ಮ ಬರೆದಿದ್ದಾನೆ ಹೀಗೆ
ಆಹಾ! ಎಂಥ ಹುಚ್ಚು
ಖಯಾಲಿ ನೋಡಿ ಇವರಿಗೆ

ಹೇಗ್ಹೇಗೋ
ಕುರ್ಚಿ ಹಿಡಿದವನು
ಸುತಾರಾಂ ನಾ ಬಿಟ್ಟು ಕೊಡೆ ಎಂಬ ಹಟ
ನಿಂತವನಂತೂ
ನಾ ಬಿಡೆ ಎಂಬ ಹಗ್ಗ ಜಗ್ಗಾಟ

ADVERTISEMENT

ಕಣ್ಬಿಟ್ಟತ್ತ ಕೊಲೆ ಸುಲಿಗೆ
ಅಬಲಾದಿ ವೃದ್ದರ ಮೇಲೆ ಅತ್ಯಾಚಾರ
ಅನಾಚಾರಗಳ ರಗಳಿ ರಾಮಾಯಣ
ನಾಡೆಂಬ ನಾಡೇ ಬೆಚ್ಚಿ ಬಿದ್ದರೂ
ಇವರಿಗೆ ಮಾತ್ರ
ಕುರ್ಚಿಗಳದ್ದೇ ಚಿಂತೆ
ಹೇಗಾದರೂ ಮಾಡಿ
ಎಣಿಸಬೇಕು ನೋಟಿನ ಕಂತೆ


ತೋಳ ಬಂತು ತೋಳ
ಎನ್ನುವಂತಿದೆ ಇವರ ಕಥೆ, ವ್ಯಥೆ
ಮಂಗನಿಗೆ ಶರೆ ಕುಡಿಸಿದಂತೆ
ಇವರ ಹಾರಾಟ, ಗೋಳಾಟ
ಹಗಲು ರಾತ್ರಿ
ಅದೇ ಬಡ ಬಡಿಕೆ, ಕನವರಿಕೆ

ಇದ್ದವರಿಗೊಂದು ಕುರ್ಚಿ
ಇರದವರಿಗೊಂದು ಕುರ್ಚಿ
ಸತ್ತವರಿಗೊಂದು ಕುರ್ಚಿ
ಸಾಯದವರಿಗೊಂದು ಕುರ್ಚಿ
ಕುರ್ಚಿಗಳಿಗೂ ಇದೆಯಲ್ಲವೇ
ಒಂದು ಇತಿಹಾಸ
ಕಣ್ಮುಂದೆ ಕುಣಿಯುತ್ತಾರೆ
ಔರಂಗಜೇಬ, ಹಿಟ್ಲರ್
ಖೋಮಿನಿ, ಸದ್ದಾಮ, ಮುದ್ದಾಮ
ಎಲ್ಲೂ ಕಾಣುವುದಿಲ್ಲ
ಬುದ್ದ, ಬಸವ, ಗಾಂಧಿ, ಅಂಬೆಡ್ಕರ
ಇವರನ್ನೀಗ ವೇದಿಕೆಗಷ್ಟೇ ಮಾಡಿದ್ದಾರೆ ಸೀಮಿತ

ಇದನ್ನೆಲ್ಲ ಕಂಡು
ಕನಲಿ ಕಂಗಾಲಾಗಿದ್ದಾರೆ
ಕನ್ನಡಾಂಬೆ, ಭಾರತಾಂಬೆ
ಮೂಗಿನ ಮೇಲೆ ಬೆರಳಿಟ್ಟು
ಕುಳಿತಂತೆ ಆಯೋಮಯ
ಇವರ ಸ್ಥಿತಿ, ಗತಿ

ಹುಚ್ಚರ ಸಂತೆಯಲ್ಲಿ
ಬಾಚಿಕೊಂಡವನೇ ಜಾಣ
ಎಂಬಂತಾಗಿದೆ ಪರಿಸ್ಥಿತಿ
ಪ್ರಜಾ-ಪ್ರಭುಗಳೇ
ಏನು ಮಾಡುವುದೀಗ
ನೀವೇ ಹೇಳಿ! ನೀವೇ ಕಂಡುಕೊಳ್ಳಿ
ಉತ್ತರ
ಹೊಟ್ಟೆ ಕಡಿದವನೇ ತಿನ್ನಬೇಕು ಅಜಿವಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.