ADVERTISEMENT

ಸೋಲಬರಸ್‌ಹುಡುಗರ ಹಾಡು

ಡಾ.ಎಚ್.ಎಲ್.ಪುಷ್ಪ
Published 10 ಆಗಸ್ಟ್ 2019, 19:30 IST
Last Updated 10 ಆಗಸ್ಟ್ 2019, 19:30 IST
ಕಲೆ: ಮದನ್‌ ಸಿ.ಪಿ.
ಕಲೆ: ಮದನ್‌ ಸಿ.ಪಿ.   

ತಣ್ಣಗೆ ತೆಳ್ಳಗೆ ತೆವಳುತಿದೆ ಜೀಲಂ

ನಸುಗೆಂಪಾಗಿ ನಾಚಿ ಸೂರ್ಯನ ಎಳೆಕಿರಣಗಳಿಗೆ

ಕಾಶ್ಮೀರದ ಮಂಜುಹೊದ್ದ ಕಣಿವೆಗಳಲ್ಲಿ

ADVERTISEMENT

ಪೆಂಗ್ವಿನ್‌ಗಳಂತೆ ಹರಿದಾಡುತ್ತಿದ್ದಾರೆ

ಹೊಟ್ಟೆಯ ಮೇಲೆ ಕಾಗಡಾ ಹೊತ್ತು

ಬೇತಾಳದ ನಿಲುವಂಗಿಗಳಲ್ಲಿ ತೋಳು ಬೀಸುತ್ತಾ

ಬಸಿರ ಬೇನೆಯಲಿ ಮುದುಕರೂ, ಮುದುಕಿಯರೂ

ಮುಟ್ಟಿದರೆ ಮಾಸುವ ಸೇಬುಗಲ್ಲದ ಹುಡುಗರು

ಬೆಟ್ಟಗುಡ್ಡಗಳಲ್ಲಿ ದಿನದಿನ ಎದುರಾಗುತ್ತಾರೆ

ಕುಸಿವ ಕಲ್ಲು ಮಣ್ಣುಗಳೊಂದಿಗೆ

ಗಡಿಕಾಯಬೇಕಾದ ಯೋಧರು ಗುಲಾಮರಂತೆ

ಗನ್ನುಗಳನ್ನು ಹೊತ್ತು ಬೀಳುವ ಹೆಣಗಳಿಗಾಗಿ

ಒಳಗು–ಹೊರಗಿನ ಶತ್ರುಗಳ ಜಾಡು ಹಿಡಿಯಲಾಗದೆ

ಈ ಮಧ್ಯೆ ಚೆಂದದ ಸೋಲಬರಸ್‌ ಹುಡುಗರ

ಕೆಂಪು, ಕೆಂ‍ಪು ಸೇಬುಕೆನ್ನೆ ಸೂರ್ಯನ ಬೆಳಕಿಲ್ಲದೆ

ಗಂಧರ್ವ ಕಿಂಪುರಷರನು ನಾಚಿ ನೀರಾಗಿಸುತ್ತದೆ

ನಡುನಡುವೆ ಮಂಕಾದ ಕಾಶ್ಮೀರ ಕನ್ಯೆಯರು

ಕೊಠಡಿಯೊಳಗೆ ಕೊಳೆಯುತ್ತಿದ್ದಾರೆ ನೀಲಿಗಟ್ಟುತ್ತಾ

ನೀಲವರ್ಣದ ಕೇಸರಿ ಪುಷ್ಪಗಳಾಗಿ

ಸೋಲಾಬರಸ್‌ನ ಆ ಹುಡುಗ ಗಂಡಸಾಗಿ

ಗುಡುಗುತ್ತಾನೆ ‘ಧರ್ಮಗಿರ್ಮಕ್ಕೆ ತಲೆಕೆಡಿಸಿಕೊಂಡಿಲ್ಲ ನಾವು,

ನಮ್ಮ ಹೆಂಗಸರನ್ನು ಹೊರಗೇ ಬಿಡುವುದಿಲ್ಲ ನಾವು,

ನಾವೇ ಅವರ ಕಣ್ಣ ನೋಟ, ನಾವೇ ಅವರ ಕಣ್ಣ ಬೆಳಕು’

ಎಲ್ಲೆಲ್ಲೂ ಎದುರಾಗುವ ಚಿನಾಲಿ ಚಿನಾಬ್‌

ಅಕ್ಟೋಬರ್‌ನ ಹಿಮದಲ್ಲಿ ದಿನದಿನ ಬಣ್ಣ ಬದಲಿಸುತ್ತಾ

ಎಲೆ ಉದಿರುಸುತ್ತಾ ಬಂಗಾರವಾಗುತ್ತದೆ

ಅಲ್ಲಲ್ಲಿ ದಾಬಾಗಳಲ್ಲಿ ಕೇವಾ ಕುಡಿಯುತ್ತಾ

ಯೋಧರ ಕಣ್ಗಾವಲಿನಲ್ಲಿ ಕುದುರೆ ಓಡಿಸುತ್ತಾ

ಟ್ಯಾಕ್ಸಿ ಚಾಲೂ ಮಾಡುತ್ತಾ ಚಂದದ ಹುಡುಗರು

ದೇಶಭಕ್ತ, ದೇಶದ್ರೋಹಿ

ಎಂಬ ಗೆರೆಗಳ ಆಚೀಚೆ ಜೀಕುತ್ತಿದ್ದಾರೆ

ಪ್ರಕಾಶಿಸುತ್ತಿರುವ ಭಾರತದಲ್ಲಿ

ಕಾಂತಿಯೇ ಇಲ್ಲದ ಕೊಳೆತ ಸೇಬುಗಳು

ಮುದುಡಿದ ಕೇಸರಿ ಹೂವುಗಳು

ಮದರಸಾಗಳ ಮಬ್ಬುಗತ್ತಲಿನಲ್ಲಿ

ಡಲ್ಲಾಗಿ ದಿಕ್ಕುಗೆಟ್ಟಿದ್ದಾರೆ

ಶಾಲಾ, ಕಾಲೇಜುಗಳಲ್ಲಿರಬೇಕಾದ

ಈ ಭವಿಷ್ಯದ ಕೂಸುಗಳು

ದಿನನಿತ್ಯ ಮುಷ್ಕರ, ಕರ್ಫ್ಯೂ, ಗುಂಡೇಟು,

ಟಿಯರ್‌ ಗ್ಯಾಸ್‌ಗಳ ನಡುವೆ ಹಾದಿ ತಪ್ಪುತ್ತಿವೆ

ಕಾಶ್ಮೀರದ ಕಲಿಗಳು ಕಂಗೆಟ್ಟಿದ್ದಾರೆ ಹೀಗೆ

ಕುಸಿವ ಕಲ್ಲು ಮಣ್ಣುಗಳ ಹಾದಿಯಲ್ಲಿ

ಎಲ್ಲಿಂದಲೋ ತೂರಿ ಬರುವ ಶಬ್ದವೇದಿ ತುಪಾಕಿಗಳಿಂದ

ಹೆಣಗಳಾಗುವ ಭಯದಲ್ಲಿ

ತಾವು ಗಡಿಯಿಂದ ಇತ್ತಿತ್ತ ಅಥವಾ ಅತ್ತತ್ತ

ದೇಶಭಕ್ತರೋ, ದೇಶದ್ರೋಹಿಗಳೋ ಏನೆಂದು ಅರಿಯದೆ

ಎಲ್ಲಿ ಬಿಡುಗಡೆಯ ನಡೆಯಿದೆಯೋ

ಎಲ್ಲಿ ಸ್ವಾತಂತ್ರ್ಯದ ಚೆಂದದ ಗಾಳಿ ಬೀಸುತ್ತದೋ

ಎಲ್ಲಿ ಕೊಳೆಯದ ಸೇಬಿನ ರಾಶಿಗಳಿವೆಯೋ

ಎಲ್ಲಿ ಕುಂಕುಮ ಕೇಸರದ ಪುಟ್ಟ ಹೂಗಳಿವೆಯೋ

ಅಲ್ಲಿ ಭಾರತದ ಮುಕುಟಮಣಿಗಳಿದ್ದಾರೆ

ಅಲ್ಲಿ ಕಾಶ್ಮೀರದ ಕಲಿಗಳೂ, ಕನ್ಯೆಯರೂ ಇದ್ದಾರೆ

ಎಲ್ಲಿ ಜೀಲಂ ಬಳುಕುತ್ತಾ ಹರಿಯುತ್ತದೋ

ಎಲ್ಲಿ ತವಿನದಿಯ ಜಲಕೇಳಿ ಕಣ್ಣು ತುಂಬುತ್ತದೋ

ಅಲ್ಲಿ ಶೇರೋಂಕಿ ಮಾತಾ ವೈಷ್ಣವೋದೇವಿ ನೆಲೆಸುತ್ತಾಳೆ

ಅಲ್ಲಿ ದೇಶಭಕ್ತಿಯ ಪಾಠ, ಪ್ರವಚನಗಳ ನಡುವೆ

ಗಾಂಧಿಯ ಕನಸಿನ ಭಾರತ ಪುಟ ತೆರೆದು ಬಿಚ್ಚಿಕೊಳ್ಳುತ್ತದೆ

ಅಲ್ಲಿ ಕಾಶ್ಮೀರದ ಕಲಿಗಳು ಕವಿಗಳಾಗುತ್ತಾರೆ

ತಮ್ಮ ನೆಲದ ಹಾಡನ್ನು ಕವಿತೆಯಾಗಿಸುತ್ತಾರೆ

ಭಾರತದ ಭಾಗ್ಯವಿಧಾತರಾಗಿ

ತಮ್ಮ ಹಣೆಬರಹ ಬರೆದುಕೊಳ್ಳುತ್ತಾರೆ

ಯಾರ ಅಂಕೆಗೂ ಸಿಗದ ನವಿಲುಗಳಾಗುತ್ತಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.