ADVERTISEMENT

ಸುಬ್ಬು ಹೊಲೆಯಾರ್‌ ಬರೆದ ಕವಿತೆ: ಸಾವಿರಾರು ಸಲಾಂ ಸಾವಿಲ್ಲದ ಕವಿಗೆ

ಸುಬ್ಬು ಹೊಲೆಯಾರ್
Published 12 ಜುಲೈ 2021, 9:19 IST
Last Updated 12 ಜುಲೈ 2021, 9:19 IST
ಸಿದ್ದಲಿಂಗಯ್ಯ
ಸಿದ್ದಲಿಂಗಯ್ಯ   

ದಿಟ್ಟಿಸಿ ನೋಡಿದರೆ ಆಕಾಶವನ್ನು

ಮುಗಿಲು ಮುರಿದು ಬೀಳುವಂತೆ

ಸುರಿಯುತ್ತಿರುವ ಮಳೆ

ADVERTISEMENT


ಲೋಕದ ಸದ್ದನ್ನಡಗಿಸಿ ಹರಿಯುತ್ತಿರುವಾಗ

ಕೇರಿಯ ಸೂರಿನ ಒಡಲ ಮಡಿಲಲ್ಲಿ

ಮುರಿದು ಕಟ್ಟುವೆನೆಂದು ಮಗುವೊಂದು ಅಳದೆ ನಗುತ್ತಿತ್ತು...


ಬರೆದೆ ನೀನು ಕಬ್ಬಿಗನಾಗಿ

ಇಕ್ಕಿರಿ, ಒದೆಯಿರೆಂದು

ದಾಟಿ ನಡೆದೆ ಹರಿಯುವ ಇರುವೆಯ ನೋಡಿ

ಕ್ರಾಂತಿಕಾರನಾಗಿ ಹೋರಾಡಿದೆ

ಕುಣಿದೆ ಹುಲಿ ವೇಷದಲ್ಲಿ

ಹೆದರಿಸಿ, ಬೆದರಿಸಿದೆ ಶಬ್ದ ಗಾರುಡಿಗನಾಗಿ


ಕಾಲ ಕಸವಾದವರಿಗೆ

ನೀಲಿ ಕಣ್ಣಿನ ಚೇ ಗವರನಾದರೆ

ಭೀಮ ಸಾಹೇಬರ ಹೊತ್ತು ತಲೆಯ ಮೇಲೆ

ಹೆಗಲ ಮೇಲೆ ಗಾಂಧಿ, ಮಾರ್ಕ್ಸ್‌, ಪೆರಿಯಾರ್‌

ಕನಸ ಕಂಡೆ ಸಮಾನತೆಗಾಗಿ

ಕಾವ್ಯದ ಶಿಶುವಾದೆ


ಕೈಕುಲುಕಿದರೆ

ಮೊಲದ ಮೃದುಪಾದ ಹಿಡಿದಂತೆ

ಉಸಿರೆ ಕೈಗೆ ಸಿಕ್ಕು

ತಾಯಿ ಒಡಲಲ್ಲಿ ಅವಿತ ಹಾಗೆ

ಎಂಥ ಕವಿಯೋ ನೀನು


ಬರಿಗಣ್ಣಿನಲ್ಲಿ ಉರಿದೆ

ಮಲೆ ಮಹಾದೇಶ್ವರನ ಕುಲುಮೆಯಲಿ

ಉರಿ ಉರಿದು ಊರು ಕೇರಿಗಳಲ್ಲಿ

ಕುದಿವ ಕಬ್ಬಿಗನಾದೆ

ಬೆಳೆದೆ ಬೆಳೆದೆ ಮತ್ತೂ ಬೆಳೆದೆ

ಜನರ ಪದವಾದೆ ಎದೆಯ ಹಾಡಾದೆ


ಹೊಟ್ಟೆ ಹುಣ್ಣಾಗಿಸುವಂತೆ

ನಕ್ಕು ನಗಿಸಿದೆ, ನಗೆಮಾರಿತಂದೆಯಂತೆ

ವಚನಕಾರನಾದೆ

ಬೆಚ್ಚಿ ಬೀಳಿಸಿದೆ ಜಡೆಮೆದುಳ ಲೋಕವನ್ನ

ದೇವರ ದಾಸೀಮಯ್ಯನಂತೆ

ನೊಂದು ಬೆಂದು ಬೇಂದ್ರೆಯ ಲಯವನ್ನು

ಸಿಡಿದೆ ಸಿಟ್ಟಾಗಿ ಪುಟ್ಟಪ್ಪನವರ ಮುಷ್ಟಿಗೆ ಬಲವಾದೆ

ಸಂಘರ್ಷದ ಕಿಡಿಗೆ ಕಾಮನಬಿಲ್ಲಾದೆ


ಶಬ್ದಗಳ ಸೂರೆ ಮಾಡಿದೆ

ಸಿದ್ಧ ಮಾದರಿಗಳ ಸೊಲ್ಲಡಗಿಸಿದೆ

ನದಿ ಸಾಗರ ಕಡಲಲೆಗಳನ್ನ

ಬಲೆ ಬೀಸಿ ಹಿಡಿದೆ, ಕಡಿದೆ

ಹಾಲಾಹಲ ಲೋಕದಲ್ಲಿ

ಹಾಡಿನಾಮೃತ ಉಣಿಸಿ

ಮಿಂಚಾಗಿಸಿದೆ ನಮ್ಮ ಎದೆಗಳಲ್ಲಿ


ಕಟ್ಟಿದೆ ಜಲಧಾರೆಯನ್ನೆ ನೆಲ ಮುಗಿಲಿಗೆ

ಅಂಕೆ ಮೀರಿದ ಕವಿ ನೀನೆಂದರೂ

ಅಂಕುಶ ಹಿಡಿದವರೂ ಕುಳಿತಿದ್ದಾರೆ

ತಲೆಯ ಮೇಲೆ ಎಂದು ನಸು ನಕ್ಕಿರಿ


ತಾವು ನಂಜ ಕುಡಿದು

ನಾವು ಸಾಯಲೆಂದು ಕಾದು ಕುಳಿತಿದ್ದಾರೆ ಹಲವರು

ನಾವು ಜಲಗಾರರೂ, ಜಂಗಮ ನೀಲುಗಾರರೂ

ಪ್ರೀತಿಗೆ ಪಾಲುದಾರರೂ, ನಾವು ಪಂಚಮರು

ಕಾರುಣ್ಯದ ಕಂಕಣ ತೊಟ್ಟವರಿಗೆ ಸಾವಿಲ್ಲವೆಂದಿರಿ


ರೂಪ ಆರೋಪಗಳುಂಟು

ಹೊಗಳದೀರಿ ಕೆಲವರನ್ನ

ರಾಜಿಯಾದರಿ, ಮಾಜಿಯಾದಿರಿ

ಲೋಪ ಇಲ್ಲದವರುಂಟೆ ಲೋಕದಲಿ

ಕಾಲದ ಕೂಸಾದಿರಿ....ತಣ್ಣಗೆ

ಕಾವ್ಯದ ಹೂವಾದಿರಿ ಊರು ಕೇರಿಗೆ


ಸಂಕೋಲೆಗಳು ಎಷ್ಟೊಂದು ಹಿಂಸೆಗಳು ಇನ್ನೆಷ್ಟು

ದುಃಖ ಆರದ ಈ ನೆಲದಲ್ಲಿ

ನೆಲಕ್ಕೆ ಕೈಹಿಡಿದು ಕೂತಿರಿ...

ಪ್ರಾರ್ಥಿಸಿದ್ದೀರಿ ನೋವಿಲ್ಲದ ಲೋಕಕ್ಕಾಗಿ


ನೀರುಕ್ಕಿಸಿದ್ದೀರಿ ನೆಲದ ನುಡಿಯಲ್ಲಿ

ಬೀಳಿಸಿದ್ದೀರಿನಂಜಾಗದೇ ಬಯಲು ಬಯಲಲ್ಲಿ

ಸಹಿಸಿದಿರಿ ಸಹನೆಯ ಗುಲಗಂಜಿಯನ್ನೇ ಕುಡಿದು

ಬಂಧು ತಥಾಗತರೇ ಮೈದಡಿದಂತೆ

ಮಾನಸಳ ಮಗುವಾದಂತೆ ಮತ್ತೆ ಮತ್ತೆ


ಈಗಲೂ ಸುಮ್ಮನಿಲ್ಲ ಹಾಗೇ ಇದ್ದೇನೆ

ಹೊಲೆ ಮಾದಿಗರ ಹಾಡಿನ ಹುಡುಗನಾಗಿ

ಹಿಡಿದ ಮುಷ್ಟಿ ಸಡಿಲವಾಗಿಲ್ಲ

ಆಡಿಕೊಳ್ಳುವವರನ್ನು ಬಿಡುವುದಿಲ್ಲ

ಇರುವೆಯ ಗೂಡ ಕಟ್ಟುತ್ತೇನೆ

ಕಚ್ಚಿ ಕಚ್ಚಿ ಆಡಿಸುತೇವ ಆಟ

ಇರುವೆ ಇರುವೆ ಇರುವವರೆಗೂ ನೀನು

ನಾನು ಕೈಹಿಡಿದು ಬರುವೆ ಕೂಡ


ಮುಗಿಲಿಗೆ ನೆಲ ಒರಗಿಕೊಂಡ ಹಾಗೇ

ನೀ ನಡೆದೆ ಲೋಕ ಸಂಚಾರ ಮುಗಿಸಿ

ಮರಳಿ ಬಾ ಜಂಗಮನಾಗಿ

ನಾನಿರುವೆ ಜೋಳಿಗೆಯಾಗಿ

ಪ್ರೀತಿಯನ್ನಲ್ಲದೆ ಬೇರೇನನ್ನೂ ಬೇಡಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.