ದೂರದೂರಲ್ಲೊಂದು
ಕವಿತೆ ಓದುವುದಿತ್ತು
ನಸುಕಿನಲ್ಲೇ ಎದ್ದು
ಗಾಡಿ ಹತ್ತಿದರೆ, ರಸ್ತೆಗಿನ್ನೂ
ನಿದ್ದೆಗಣ್ಣು
ಗಾಡಿಗಳು ದಡಬಡಿಸುತ್ತಾ ಮುಂದೋಡುತ್ತಿದ್ದರೆ,
ಅಂಗಳದ ಬದಿಯಲ್ಲಿ ಬಿದ್ದಿರುವ
ಹಾದಿಗಳಿಗೆ ಶಪಿಸುತ್ತಾ
ಎಡಬಲಗಳ ಕವಿತೆಯಂತಹ ಊರು
ಈಗಷ್ಟೇ ಮುಸುಕೆಳೆದುಕೊಂಡಿತ್ತು
ಸದಾ ನಡುರಾತ್ರಿಯ ತೂಕಡಿಕೆಯಲ್ಲೂ ಜಾಗೃತವಾಗಿರುವ ಈ ಹಾದಿಯೋ,
ರಾತ್ರಿ ಮೂರರವರೆಗೂ ಎಚ್ಚರವಿದ್ದು
ಇದೀಗ ಮಂಜಿನ ಹೊದಿಕೆ ಹೊದೆದು
ತುಸು ಎವೆ ಮುಚ್ಚಿದೆ
ಆ ಬೆಚ್ಚನೆ ಹೊದಿಕೆಯ, ನಿರ್ದಾಕ್ಷಿಣ್ಯ ಸರಿಸುತ್ತ
ಹಾರ್ನ್ ಗುದ್ದಿ ಅಬ್ಬರಿಸುತ್ತ
ಗಾಡಿ ಅವಸರಕ್ಕೆ ಬಿದ್ದಂತೆ ನುಗ್ಗುತಿತ್ತು.
ಕಾರ್ಯಕ್ರಮಕ್ಕೆ ತಡವಾಗಬಾರದು.
ಕವಿತೆ ಓದುವುದಿತ್ತಲ್ಲ?
ಯಾವ ಕವಿತೆ ಓದಲಿ?
ಮೊನ್ನೆಯ ಭೂಕಂಪದ್ದಾ?
ಭೀಕರ ಅಪಘಾತದ್ದ? ಎರಡು ಬಣಗಳ
ನಡುವಿನ ಕಿತ್ತಾಟದ್ದಾ? ಚಿರ ವಿರಹದ್ದಾ?
ಹಾದಿಯುದ್ದಕ್ಕೂ ಇದುವೇ ಗುಂಗು
ಯಾವುದೂ ಬೇಡವೆನಿಸಿ,
ಆಗಷ್ಟೇ ಗೀಚಿದ ನಡುಹಾದಿಯ
ಅಪೂರ್ಣ ಪ್ರೇಮಕವಿತೆಯನ್ನು ಓದಿ
ಮಾರ್ಮಿಕ ಕವಿತೆ ಎಂಬ ಅಭಿನಂದನೆಗಳ
ಮಳೆಯೊಳಗೆ ತೋಯುತ್ತಾ
ಮತ್ತದೇ ಹಾದಿಯಲ್ಲಿ ವಾಪಾಸು ಹೊರಟೆ
ಜನಜಂಗುಳಿ, ಓವರ್‌ಟೇಕ್
ಕಿವಿಗಡಚಿಕ್ಕುವ ಸದ್ದು, ಧೂಳು ಹೊಗೆ
ಹೊಡೆದಾಟ, ರಕ್ತ
ನಾನೇ ಹಾದಿ ತಪ್ಪಿದೆನಾ?
ಬಂದ ಹಾದಿಯ ಗುರುತೇ
ಸಿಗುತ್ತಿಲ್ಲ!
ಛೆ!
ಆ ನಸುಕಿನಲ್ಲಿ ನಾನು
ಹಾದಿಯ ಸಣ್ಣ ನಿದ್ದೆಗೂ ಭಂಗ ತರಬಾರದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.