ADVERTISEMENT

ವಸುಂಧರಾ ಕದಲೂರು ಅವರ ಕವಿತೆ: ಪ್ರಾ-ಯೋಜಿತ ನಗರಗಳು

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 23:30 IST
Last Updated 6 ಜನವರಿ 2024, 23:30 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ನಗರಗಳನ್ನು ಯೋಜಿಸಿ 
ಕಟ್ಟುತ್ತಾರಂತೆ! ಭೇಷಾಯ್ತು

ಐವತ್ತು ಎಂಬತ್ತು ನೂರಡಿ 
ಅಗಲ ರಸ್ತೆಗಳೂ ಆಟದ 
ಮೈದಾನ ಗ್ರಂಥಾಲಯಗಳೂ 
ಬಸ್ಸು ಆಟೋ ನಿಲ್ದಾಣಗಳು 
ಉಪಾಹಾರ ಮಂದಿರ, ಸಿನೆಮಾ 
ಥಿಯೇಟರು, ಈಟಿಂಗ್ ಜ಼ೋನು 
ಹೊಂದಿದ ಮಾಲುಗಳು ನಗರದ 
ಅಂದಕೆ ಒಪ್ಪುತ್ತವಲ್ಲವೇ

ADVERTISEMENT

ಬೃಹತ್‌ ಕಟ್ಟಡಗಳು ಉದ್ಯಾನವನ
ಕಾರ್ಖಾನೆ ಬಸ್ಸು ವಿಮಾನ ರೈಲು
ನಿಲ್ದಾಣಗಳು; ನಗರದ ಚೆಂದಕೆ 
ಒಂದಷ್ಟಾದರೂ ಬೇಕಲ್ಲವ

ವಾಹನ ನಿಲುಗಡೆಗೆ ಬಸವಳಿಯ

ಬೇಕಿಲ್ಲ ಪಾತಾಳ ಗರಡಿ ಹಾಕಿ
ಭೂಗರ್ಭ ಜಾಲಾಡಿ ಕಟ್ಟಿದ 
ಹತ್ತಾರು ಬೇಸ್ಮೆಂಟಿನ ಪಾರ್ಕಿಂಗು 
ಲಾಟುಗಳಿರುತ್ತವೆ: ಜನರ 
ಅನಾರೋಗ್ಯವೇ ‘ಆಸ್ಪತ್ರೆಗಳ 
ಸೌಭಾಗ್ಯ’ವಾಗುವ ಸೂಪರ್ 
ಸ್ಟ್ಯಾಂಡರ್ಡ್ ಮಲ್ಟಿಸ್ಪೆಶಾಲಿಟಿ 
ಆಸ್ಪತ್ರೆಗಳು ಯೋಜಿತ ನಗರದಲಿ 
ಖಂಡಿತ ಇರಬೇಕಲ್ಲವೇ!

ಕೂಡುರಸ್ತೆಗಳಲೆಲ್ಲಾ ಪೊಲೀಸು 
ಚೌಕಿಗಳು, ಆಗಸದುದ್ದಗಲ 
ಜಾಲ ಹೆಣೆದ ಆಧುನಿಕ ಕ್ಯಾಮೆರಾ 
ಕಣ್ಗಾವಲುಗಳು ನಗರದ ಭದ್ರತೆಗೆ 
ಬೇಕಲ್ಲವೇ?

ಹಗಲಿಡೀ ದುಡಿದು ದಣಿದ 
ಕಣ್ಣುಗಳಿಗೆ ರಾತ್ರಿ ಕೊಂಚವೂ
ವಿಶ್ರಾಂತಿ ಕೊಡದೆ ಝಗ್
ಎಂದು ಬೆಳಗಿ ಕತ್ತಲ ಬೆದರಿಸಿ
ಓಡಿಸುವ ನಿಯಾನ್ ದೀಪಗಳು 
ಸಿನೆಮಾಹಬ್ಬುಗಳು ಬಾರುಪಬ್ಬುಗಳು
ನಗರವ ಉರಿಸಬೇಕಲ್ಲವೇ!

ನಗರವಾಸಿಗಳು ಹೇಗಿದ್ದರೂ
ನಡೆದೀತು, ನಗರಗಳು 
ಮಾತ್ರ ಪಕ್ಕಾ ವ್ಯವಸ್ಥಿತವಾಗಿ
ಪ್ರಾ-ಯೋಜಿತವಿರಬೇಕಲ್ಲವೇ
ಕಡತಗಳಲಿ…

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.