ಹೊಸಬೆಟ್ಟ ಅದರ ನೆತ್ತಿ
ಬೋಳು ಮೈ ಕಾದ ಕರಿಕಲ್ಲ ಬಂಡೆ
ಹತ್ತುವ ಕೊರಕಲು ಹಾದಿ
ಆಸೆ ಹುಟ್ಟಿಸುತ್ತಿವೆ ನಿನಗೆ
ತುತ್ತತುದಿಯಲ್ಲಿ ಬೆಳೆದ
ಒಂದೇ ಒಂದು ಮುಳ್ಳುಕಂಟಿ
ಅಲ್ಲಿ ಅರಳಿರುವ
ಎರಡು ದಳದ ಹೂವು
ಅದರ ಪೇಲವ ಬಣ್ಣ
ಹೊಸ ವಾಸನೆ
ಆಸೆ ಹುಟ್ಟಿಸುತ್ತಿವೆ ನಿನಗೆ
ಎಂದೋ ಓದಿದ ಸಂಗಮೂಲದ ಕಥೆ
ತಿಂದರೆ ಸೊಕ್ಕುವ ಒಗರು ಹಣ್ಣು
ಸುಟ್ಟರೆ ಮೊಳೆಯುವ ಬೀಜ
ತಿಂದೆ ಎಂಬೋ ಹಮ್ಮು
ಆಸೆ ಹುಟ್ಟಿಸುತ್ತಿವೆ ನಿನಗೆ
ಹಳೆಯ ಬೆಟ್ಟದ ತಪ್ಪಲಲ್ಲೆ
ಮತ್ತೆಮತ್ತೆ ಸುತ್ತುವ
ಹುಚ್ಚು ಹೆಣ್ಣು ನಾನು.
ಚಿತ್ರದ ರಾಜಹಂಸೆಗೆ
ಚಿತ್ತಾರದ ನೀಲಿಕೊಳ
ಮುತ್ತು ನುಂಗಿದ್ದು ಚಿತ್ತಲಿಖಿತ
ಆಸೆ ಕಳೆಯಲು ಹತ್ತಿದ ಮೇಲೆ
ಸುತ್ತೂ ನೋಡಿ
ತತ್ತರಿಸಬೇಡ ಗೆಳೆಯ
ಕಳೆದಿರುಳು ಇಲ್ಲಿ ಮಳೆ ಬರಲಿಲ್ಲ
ಮತ್ತು ಹೊತ್ತು ಬಲು ದೀರ್ಘವಿತ್ತು
ಎಂದರೆ
ಹಮ್ಮಿನಲಿ ಮತ್ತೇನೊ ಊಹಿಸಬೇಡ
ಕಳೆಯಿತೆಂಬ ಆಲಸಿಸುಖ
ನರಳಲೊಂದು ಖಾಸಗಿ ನೋವು
ಮೈಯ ವ್ಯಾಪಿಸಿದೆ
ಬೀದಿಯೇ ಬೆಳಕು ಚೆಲ್ಲುತ್ತದೆ
ನನ್ನ ಹಾದಿಗೆ ನಾಳೆ
ಮೊಳೆಯಲು ಅಷ್ಟು ಸಾಕು ನನಗೆ
ಕೇಳಿಲ್ಲಿ ಒಮ್ಮೆ...
ಈ ಬೆಟ್ಟದ ತಪ್ಪಲಲ್ಲೂ
ಹುತ್ತವಿದೆ,
ಜೊತೆಗೆ ಬೆತ್ತವೂ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.