ಕಂಡವರ ಮನೆಯ ಮುಸುರೆ ಮೆತ್ತಿದ ಅಮ್ಮನ ಕೈ
ಒಲೆಯೊಳಗೆ ಕಟ್ಟಿಗೆ ನೂಕಿ
ಹಿಟ್ಟಿನೆಸರು ಬೇಯಿಸುವಾಗ
ಕೊತ ಕೊತನೇ ಸದ್ದು
ನಾನದರಲ್ಲಿ ಕುದ್ದು
ದಿನಬೆಳಗೆಲ್ಲ ಕಣ್ಬಿಟ್ಟು ಓದಿದ್ದೆ
ಮುಂಗಾರು ಮಳೆ ಕೈ ಕೊಟ್ಟು
ಕಾಫಿ ಸೀಮೆಯ ಕದ ಬಡಿದ ಅಪ್ಪ
ತೊಡೆ ಕಚ್ಚಿದ ಜಿಗಣೆ ಬಿಡಿಸಿ
ಉಜ್ಜಿಕೊಳ್ಳುವುದ ಹೇಳುವಾಗ
ಕೇಳುತ್ತಲೇ ಕೆಂಡವಾಗಿ
ರಾತ್ರಿಯಿಡಿ ದೀಪ ಉರಿಸಿದ್ದೆ
ಗೌಡನಿಗೆ ಶಾಪ ಹಾಕುತ್ತಾ ತಾತ
ಮುಂಜಾವಿನಲ್ಲಿ ಹಿಡಿದ ಒಳಶುಂಠಿ
ಕೋಪ ತರಿಸಲಿಲ್ಲ
ಆಗಾಗ ಹೋಗುತ್ತಿದ್ದ ಕರೆಂಟು
ಕತ್ತಲೆಯಾಗಿಸಿದರೂ
ಬುಡ್ಡಿ ದೀಪ ಕೈ ಬಿಡಲಿಲ್ಲ
ಗುರುಗಳ ಕೈಯಲ್ಲಿದ್ದ ಕೋಲು
ಸಿಟ್ಟು ಬರಿಸಿದ್ದಿಲ್ಲ
ಎದೆ ಮೇಲೆ ಸೈಜುಗಲ್ಲಿಟ್ಟ ಹಾಗೆ
ನಿದ್ದೆ ಬಾರದ ನಡುರಾತ್ರಿ
ಪರೀಕ್ಷೆಯ ಕಂಡರೆ
ಹಾಳಾದ್ದು ಹಸಿವಿಗೂ ಭಯ
ಕಷ್ಟಪಟ್ಟು ಕಟ್ಟಿಕೊಂಡ ರೆಕ್ಕೆಗಳು
ಹಾರಾಡುವುದೊಂದೇ ಬಾಕಿ
ಓದು ಮುಗಿದು ಬೀದಿಗೆ ಬಿದ್ದೆ
ಹಾದಿಯಲ್ಲೆಲ್ಲ ರೆಕ್ಕೆಯ ಗರಿಗಳು
ಬೆಂದ ಬದುಕುಗಳ ಬಂಡೆಕಲ್ಲು
ಕಂಡ ಕನಸುಗಳ ಬೂದಿ ರಾಶಿ
ಯಾರಿಗಾಗಿ ಈ ಓದು?
ಯಾತಕ್ಕಾಗಿ ಈ ಓದು?
ಬುಡ್ಡಿದೀಪಕ್ಕೆ ಜ್ಞಾನೋದಯದ ಸಮಯ
ನನ್ನ ಮುಂದೆಯೇ
ಟ್ಯೂಷನ್ ಗೆಲ್ಲುತ್ತದೆ
ಆನ್ಲೈನ್ ಗೆಲ್ಲುತ್ತದೆ
ನೇಷನ್ ಗೆಲ್ಲುತ್ತದೆ
ನಾನು ಸೋತಿರುತ್ತೇನೆ
ನಾ-ನಿಲ್ಲದ ‘ನೇಷನ್’
ಯಾರು ಕೊಡುತ್ತಾರೆ
ಕೆಲಸ
ಮತ್ತೆಲ್ಲಿ ಸಿಗುತ್ತದೆ ಪೌರತ್ವ ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.