ADVERTISEMENT

ನಂದಿನಿ ಹೆದ್ದುರ್ಗ ಅವರ ಕವಿತೆ: ನಮ್ಮವರು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 23:50 IST
Last Updated 26 ಅಕ್ಟೋಬರ್ 2024, 23:50 IST
<div class="paragraphs"><p>ಕವಿತೆ</p></div>

ಕವಿತೆ

   

ಮಣ್ಣ ಬಣ್ಣದವರೇ
ಎಣ್ಣೆ ತೊಗಲಿನವರೇ
ಹಣ್ಣುಗಳ ಬರಿ ಕಣ್ಣಲ್ಲೇ
ಕಂಡವರೆ
ನಮ್ಮವರು ನಿಮ್ಮವರು
ಎಂಬರ್ಥದ ಸಾಲು
ಬರೆದು
ರಾಗ ಬೆರೆಸಿದವರೆ

ನಿಮ್ಮ ಅಂಗಳದ ಕಳ್ಳಿ ಜಾಲಿಗಳನ್ನು
ನೀವೇ ಕತ್ತರಿಸಿಕೊಳ್ಳಿ
ತಗ್ಗಿದ ತಪ್ಪಲೆ ಮುಸುರೆ‌ ಬಟ್ಟೆ
ಹರಿದ ಅರಿವೆಯ ಚೂರು
ಕ್ಯಾಕರಿಸಿದ ತೊಂಟೆ
ನೀವೇ ಗುಡಿಸಿಕೊಳ್ಳಿ
ನಿಮ್ಮ ಕೆಂಪನೆ ನಾಲಿಗೆ
ಇಳಿವ ಕರಸೋಟೆ
ಕೊರಳ ದನಿಪೆಟ್ಟಿಗೆಗಳ
ನೀವೇ ಮೀಯಿಸಿ ಹಸನಾಗಿಸಿಕೊಳ್ಳಿ
ಹತಾಸೆ ನಿರಾಸೆ ಸುಟ್ಟದ್ದು
ಕೆಟ್ಟದ್ದುಗಳ ಇತಿಹಾಸ
ಪುರಾಣ ಚರಿತ್ರೆಗಳ
ನೀವೇ ತಿದ್ದಿಕೊಳ್ಳಿ

ADVERTISEMENT

ನಿಮ್ಮ ಎದೆ ಬಗೆದರಷ್ಟೇ ಕೆಂಪು
ಹರಿಯುವುದಿಲ್ಲ
ಬೆಳ್ಳಗಿರುವವರೆಲ್ಲ
ನೆರಳಲ್ಲಿ ಬೆಳೆದ ಜೀವಗಳಲ್ಲ

ನೋಡಿ ಒಮ್ಮೆ

ಹಾದಿಬೀದಿಯಲಿ
ತುಳಸಿ ಬೆಳೆದಿರುತ್ತಾಳೆ
ಬನ್ನಿ ಬಿಲ್ವ ಅತ್ತಿ ಆಲ
ಹಲಸು ನಂದಿ….ಯಾವುದಾದರೂ
ಸೈಯೆ , ಬಿತ್ತಿಕೊಳ್ಳಿ
ಬೆಳೆಸಿಕೊಳ್ಳಿ ನೀರುನಿಡಿ ನೀಡಿ
ನೆರಳಡಿಗೆ ಒಂದು ಹೊಸ
ಬೆಂಚನಿರಿಸಿಕೊಳ್ಳಿ
ನಿಮ್ಮದೇ ಕಾಲು ನಿಮ್ಮದೇ ಹಿತ್ತಿಲು
ಫರ್ಮಾನು ಬೇಕಿಲ್ಲ
ಕಾಲು ಬೆಳೆಯುವಷ್ಟು ನೀಳಕ್ಕೆ
ನೀಡಿಕೊಳ್ಳಿ, ಕೇಳುವವರಿಲ್ಲ

ಕಿಚ್ಚು ಹಾದು ಬಂದು
ಎಚ್ಚರಗಳ ಅಡ ಇಟ್ಟು
ಪೆಚ್ಚಾದಿರಾ
ಹುಚ್ಚರ ಸಂತೆಯಲ್ಲಿ
ಹರಿವ ಬೆವರೊರೆಸಿಕೊಂಡು
ಬೆಚ್ಚಿದ್ದೀರಾ
ಯಾರೋ ಬಿತ್ತುವರೆಂದು
ಇನ್ನೂ ಎಷ್ಟು ಕಾಲ ನಚ್ಚುಗೆ ನಿಮ್ಮದು

ನಿಮ್ಮ ಜನಿವಾರವನ್ನು ನೀವೇ ಸುತ್ತಿಕೊಳ್ಳಿ
ಕಲ್ಲುಂಡೆಯಾದರೂ ಸೈಯೆ
ನಿಮ್ಮ ಅಂಗದ ಮೇಲೆ ಲಿಂಗವೊಂದ
ನೀವೇ ಕಟ್ಟಿಕೊಳ್ಳಿ
ಸತ್ಯನಾರಾಯಣದ ಸಜ್ಜಿಗೆ
ಶಿವರಾತ್ರಿಯ ತಂಬಿಟ್ಟು
ಯುಗಾದಿಗೆ ಒಬ್ಬಟ್ಟು
ನಗುವ ಬುದ್ದ ಅರೆ ಬೆತ್ತಲ ಗಾಂಧಿ
ಏನಾದರೂ ಸರಿಯೇ.. ನೀವೇ ಅರಸಿಕೊಳ್ಳಿ

ಖುಷಿಯಾಯಿತೇ
ನಿಮ್ಮ ಶಿಲುಬೆಯನ್ನೂ ನೀವೇ ಹೊತ್ತುಕೊಳ್ಳಿ

ಆಟ ಬೇಸರ ಬಂದರೆ
ಮಾರೆಮ್ಮಬೇಸ್ತಮ್ಮ ಪುರದಮ್ಮ ಸೋಂಕಮ್ಮ
ಅಜ್ಜೋರು ಅಯ್ಯೋರ
ಕಲಶಗಳಿಗೆ ಜಲಭಾಗ್ಯ ಯೋಜನೆಯಲಿ
ಗಂಗೆಯನು ತುಂಬಿಕೊಳ್ಳಿ
ಗಂಗೇಚ ಯಮುನೇಚಾ…
ಹೊಸದಾಗಿ ಹಾಡಿಕೊಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.