ADVERTISEMENT

ದೀಪಾವಳಿ ಕವನ ಸ್ಪರ್ಧೆ–2024: ಶಂಕರರಾವ್ ಉಭಾಳೆ ಅವರ ‘ರಂಜಕವಾದ ನಕಾಶೆ‘

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 23:57 IST
Last Updated 23 ನವೆಂಬರ್ 2024, 23:57 IST
<div class="paragraphs"><p> ಕುರಿಯ ರಕ್ತ </p></div>

ಕುರಿಯ ರಕ್ತ

   

ಕತ್ತಿಗೆ ಜಾತಿಯಿಲ್ಲ, ಕತ್ತರಿಸುವುದೇ ಕರ್ಮ
ಸುಳ್ಳು ಮಂತ್ರಗಳ ಧರ್ಮ, ಕಪಟಿ ಶಕುನಿಗಳ ಮರ್ಮ

ಚಾಂದ್ ಕುರಿಯ ಬಾಯಿಗೆ ನೀರು ಹಾಕಿ
ಕುತ್ತಿಗೆ ಕತ್ತರಿಸಿದ ಮೇಲೆ
ಬೊಂಬಿಗೆ ನೇತು ಹಾಕಿದಾಗ
ತಲೆ ಕೆಳಗಾಗಿ ರಕ್ತ ತೊಟ್ಟಿಕುತ್ತಿತ್ತು

ADVERTISEMENT

ಎದೆ ಸೀಳಿದಾಗ ಕರುಳು-ಪಚ್ಚಿ-ಗುಂಡಿಗೆ
ನಡುಗುವ ತೊಡೆಯ ಸೀಳಿ ತೂಕಕ್ಕೆ ಹಾಕುವಾಗ
ಜೀವ ಪ್ರಶ್ನಿಸಿತ್ತು..... ಧರ್ಮಾಂಧರು ಕಟುಕರೇ.....?
ಗೋಧ್ರಾ... ನೆನಪಗಿತ್ತು.

ಚಾಂದ್‌ನ ಹೆಂಡತಿ ನಾಜಮಾ
ಕುರಿಯ ತಲೆಯ ಮೂಗಿನ ಹೊಳ್ಳೆಯೊಳಗೆ ಕಟ್ಟಿಗೆ ಚುಚ್ಚಿ
ಕೆಂಡದ ಸೇಕಡಿ ಮೇಲೆ ಸುಡಲು ಇಟ್ಟಿದ್ದಳು
ನಾಲ್ಕು ಕಾಲುಗಳನ್ನು ಕೆಂಡದಲ್ಲಿ ಸುಡುವಾಗ
ಮೇಲಿರುವ ಕೂದಲು ಕಾವಿಗೆ ಚರಚರನೆ
ಸುಟ್ಟು ಕರಕಲಾಗಿದ್ದವು
ತಲೆ-ಕಾಲಿನ ಸುಟ್ಟ ವಾಸನೆ ಗಾಳಿಯಲಿ ತೇಲಿ
ಮಲ್ಲಗೆ ಮೂಗಿಗೆ ಅಡರತೊಡಗಿತ್ತು

ಆ ಮೇಲೆ ಚಾಂದ್ ಕುರಿಯ ತಲೆ ಸೀಳಿ
ಮೆದಳು ಬೇರ್ಪಡಿಸಿ, ಕಿವಿ ಕತ್ತರಿಸಿ
ನಾಲಿಗೆ ಸೀಳಿ, ದವಡೆಯ ಮೂಳೆ ಬೇರ್ಪಡಿಸಿದಾಗ
ಕಣ್ಣುಗುಡ್ಡೆಯ ಚೂರಿಯ ಏಟಿಗೆ ಹೊರಬಂದಿತ್ತು.
ಕಾಲು ಕಡಿದಾಗ ಮೂಳೆಯಿಂದ ಬಿಳಿದ್ರವ ತೆಳ್ಳಗೆ ಹೊರಬಂದಿತು
ಯಾಕೋ ಏನೋ..... ಬೆಸ್ಟ್ ಬೇಕರಿ ನೆನಪಾಗಿತ್ತು

ಕುರಿಯ ರಕ್ತವನ್ನು ಸಿಲವಾರ ಬೋಗೋಣಿಯಲ್ಲಿ
ಕುದಿಯಲು ಇಟ್ಟು ನಾಜಮಾ
ತಾಸೊಪ್ಪತ್ತಿನಲ್ಲಿ ಕರ‍್ರಗೆ ಉಂಡೆಯಾಗಿ
ಘಾಟು-ಘಾಟಾಗಿ ಮೂಗಿನ ಹೊಳ್ಳೆಯನ್ನು ಹರಡಿಸಿತ್ತು
ಉಂಡೆಗೆ ಮಸಾಲೆ ಬೆರೆಸಿ ಎಣ್ಣೆ ಹಾಕಿ ಕುದಿಯಲು ಬಿಟ್ಟಾಗ
ಅದರ ವಾಸನೆಯ ಘಮಲು
ಸಸ್ಯಹಾರಿಗಳ ಮೂಗು ಕೂಡ ಆಘ್ರಾಣಿಸುವಂತೆ ಮಾಡಿತ್ತು


ಪ್ರಾಣಿಹತ್ಯ ಮಹಾಪಾಪ ......! ಎನ್ನುವ ಸ್ಲೋಗನ್ನಿನ ದನಿಯಲ್ಲೂ
ಬಿರಿಯಾನಿ ನಾತ ಹೊಡೆಯುತ್ತಿತ್ತು
ಜಟ್ಕಾಕಟ್ ಚಳುವಳಿಯೂ ಮುಂದೂಡುವಂತೆ ಮಾಡಿತ್ತು

ನುಣ್ಣನೆಯ ಕೈಮಾವನ್ನ ಕಡ್ಡಿಗೆ ಮೆತ್ತಿ ಸೇಕಡಿಯಲ್ಲಿ ಸುಡುವಾಗ
ಹೆಣ್ಣಿನ ದೇಹ ಮೂವತ್ತೆರಡು ತುಂಡು ಮಾಡಿ
ಫ್ರಿಜ್ನಲ್ಲಿಟ್ಟ ಮನೋವಿಕಾರಿ ನೆನಪಾಗಿದ್ದ

ಬೆಂಕಿಗೂ-ಮಾಂಸಕ್ಕೂ ಅದೆಷ್ಟು ಹತ್ತಿರದ ಸಂಬಂಧವೋ.....!
ಧರ್ಮದಳ್ಳುರಿಯಲ್ಲಿ ಬೆಂದ ದೇಹಗಳ ಗುರುತನ್ನು ಇದ್ದಿಲು ಕೂಡ ಮರೆತಿದೆ
ಗಾಳಿಗೆ ಹಾರಿದ ಬೂದಿಯಲಿ ಧರ್ಮಗೌಣವಾಯಿತು
ನೆಲಕೆ ಬಿದ್ದ ಬೂದಿಯಿಂದ ಹೊಲ ಫಲವತ್ತಾಯಿತು.

ರಾಯಚೂರಿನ ದೇವದುರ್ಗದವರು. ಕವಿ, ಕಥೆಗಾರ ಮತ್ತು ಲೇಖಕ. ಇವರ ‘ಹೂವಿನ ಹಾರ’, ‘ನೀರಿಗೆ ಪಾಚಿ ವೈರಿ’, ‘ಕಳೆ’ ಮೊದಲಾದ ಕೃತಿಗಳು ಪ್ರಕಟಗೊಂಡಿವೆ. ‘ದಾನ ದೈವಜ್ಞಾ’ ಇವರ ಸಂಪಾದಿತ ಕೃತಿ. ‘ಚಂಪಾ ಕಾವ್ಯ ಪ್ರಶಸ್ತಿ‘, ‘ಚಂಪಾ ಕಥಾ ಪ್ರಶಸ್ತಿ’, ‘ಗುಲ್ಬರ್ಗ ವಿಶ್ವವಿದ್ಯಾಲಯದ ಕಥಾ ಪ್ರಶಸ್ತಿ’ ಮೊದಲಾದ ಪ್ರಶಸ್ತಿಗಳು ಇವರ ಸಾಹಿತ್ಯಕ್ಕೆ ಲಭಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.