೧
ಅಲ್ಲಿ ಧೋ…ಧೋ..ಮಳೆ
ದೊಪದೊಪನೆ ಹನಿಗಳುದುರಿದಂತೆ
ಉರುಳುತ್ತಿವೆ ಮನೆ ಮಠ ಮಹಡಿ ಮಹಲು
ಗುಡಿ ಗುಡಿಸಲು ಆಸ್ಪತ್ರೆ ಅಂಗಡಿ ಮುಗ್ಗಟ್ಟು
ಒಂದೇ ತೆರನಾಗಿ
೨
ಈಗ ಹನಿ ಹನಿಕಿ ಹೋದದ್ದು ಸುಳ್ಳೇ
ಎಂಬಂತೆ ಅಂಗಳದಲ್ಲೊಂದು
ಬಂಗಾರದ ಬಿಸಿಲು
ಅವಳಿಗೋ ಛಾವಣಿ ಅಡಿಯ
ಬಟ್ಟೆಗಳಿಗೆ ಬಿಸಿಲು ತೋರಿಸುವ ಸಂಭ್ರಮ.
ಶಿವನೇ.. ಈ ಮಳೆಗಾಲದ ಬಿಸಿಲಿಗೆ
ಎಷ್ಟು ಕಾವು?
ನೆತ್ತಿಯ ಮೇಲೆ ಇಟ್ಟರೂ
ಆರಿಕೊಳ್ಳಬಹುದು..
ಸಣ್ಣಗೆ ಗೊಣಗಿಕೊಳ್ಳುತ್ತಾಳೆ.
೩
ಅಲ್ಲಿಯ ಮಳೆ ಇನ್ನೂ ನಿಂತಿಲ್ಲ
ಸೇತುವೆಗಳೆಲ್ಲಾ ಮುರಿದು
ಹಳ್ಳ ಕೊಳ್ಳ ತೋಡು ನದಿಗಳೆಲ್ಲಾ
ಮನೆಯ ಅಂಗಳಕ್ಕೆ ಬಂದು ನಿಂತು
ಊರೀಗ ಹೆಸರಿಲ್ಲದ ಕಡಲು
ಉಸಿರು ನಿಂತ ಎಳೆ ಮಗುವೊಂದು
ತೇಲುತ್ತಿದೆ
ಅದೋ…ದೊಡ್ಡ ಮರದ ದಿಮ್ಮಿಯೊಂದು
ಅತ್ತಲೇ ಧಾವಿಸುತ್ತಿದೆ
ಮಗು ಅದನ್ನು ಅಪ್ಪಿಕೊಂಡಂತೆ
ಸಾಗುತ್ತಿದೆ.
ದೇವರೇ ನೀರಿನೊಳಗೆ ಮುಳುಗಿ
ಕುಂತಿದ್ದಾನೆ
ಅರ್ಚಕ ನಾಪತ್ತೆಯಾಗಿದ್ದಾನೆ
ಅಹವಾಲು ಯಾರೊಂದಿಗೆ?
ಎಲ್ಲಿಗಿದು ಬಂದು ಮುಟ್ಟುತ್ತದೋ..
ಅಳಿದುಳಿದವರು ಹುಡುಕುತ್ತಲೇ ಇರುವುದು
ಏನನ್ನು..?!
೪
ಬಿತ್ತನೆ ಕೆಲಸ ಇನ್ನೂ ಮುಗಿದಿಲ್ಲ;
ಒಂದು ಹನಿಯೂ ಬಿದ್ದಿಲ್ಲ
ಹೀಗಾದರೆ ಮುಂದೆ ಹೇಗೆ..?
ಅಮ್ಮನ ಪೋನಿನ ದುಗುಡ ಕೇಳುತ್ತಾ
ಸಂಪರ್ಕ ಕಡಿತಗೊಳ್ಳುತ್ತದೆ.
ಹೊಗೆಯ ಕಮಟು
ಒಲೆ ಬುಡದ ಕಾವು
ಕಮ್ಮನೆ ಕಾಫಿಯ ಪರಿಮಳ
ಪಡಸಾಲೆಗೆ ಕೇಳಿಸುವ ಹೊಯ್ಯೋ..ಹೊಯ್..
ಗದ್ದೆಯ ಲಯಬದ್ಧ ರಾಗ ಚಿತ್ತಕ್ಕಿಳಿದು
ಚಿತ್ರಿಸತೊಡಗುತ್ತದೆ.
೫
ಮಳೆ ಬಂದರೆ ಊರಿಗೆ ಊರೇ
ಹೆಸರಿಲ್ಲದೆ ಕಳೆದು ಹೋಗುತ್ತದೆ..
ಇಲ್ಲಿಗೂ ಬರದೇ ಉಳಿದೀತೇ ಅಮ್ಮಾ..?
ಭೂಪಟಗಳೆಲ್ಲಾ ಅಳಿಸಿ ಹೋದ ಮೇಲೂ
ಹೀಗೆಯೇ ಸುರಿಯಬಹುದೇ ಮಳೆ..
ನೋಡಲು ಆಗ ಯಾರಿರುತ್ತಾರೆ?!
ಮಗುವಿನೊಳಗೆ ಇಳಿದ ಮಳೆಗೆ
ಎದೆ ಧಸಕ್ಕೆಂದು
ಆಕೆ ಉತ್ತರಕ್ಕೆ ತಡಕಾಡುತ್ತಾಳೆ.
೬
ಮಗುವಿನ ಕಣ್ಣಲ್ಲಿ ಮೋಡ
ಕಟ್ಟಿಕೊಳ್ಳುತ್ತದೆ.
ಊರಿನಲ್ಲಿ ಅಮ್ಮ ಆಕಾಶ ನೋಡುತ್ತಾಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.