ತುಂಡು ಬಟ್ಟೆ ,
ಕೈಗೋಲು,ಸವೆದ ಚಪ್ಪಲಿ
ಬಡ ದೇಹ ಬೊಚ್ಚುಬಾಯಿ
ಮುಗ್ಧ ನಗು ಈ ಮಣ್ಣಿನೊಳಗಿವೆ
ಕಣ್ಣಿನೊಳಗಿವೆ ಬೆಳಗಿವೆ
ನೀ ಅಡಗಿಸಲಾರೆ....
ಉಪವಾಸ ಆಗ್ರಹ ಸಂವಾದ
ಧರಣಿ ಮೆರವಣಿಗೆ ಬರವಣಿಗೆ
ಎಲ್ಲಾ ಹೂಬಾಣಗಳೇ....
ಒಲಿಸುವುದು ಸಹಿಸುವುದು
ಭರಿಸುವುದು ರೂಢಿಯಾಗಿದೆ
ಬೇರೆ ರೀತಿಯಲ್ಲಿ ನೀನು ಸೆಣೆಸಲಾರೆ
ಔಷಧೀಯ ಗುಣವಿದೆ ಬೇವು
ಬೆಲ್ಲ, ಹಾಲು, ನೀರು, ನೆಲಗಡಲೆಗೆ
ದುಡಿಯದೆ ಉಣ್ಣಲಾರೆ
ಗುರಿ ಇರದ ದಾರಿ ನಡೆಯಲಾರೆ...
ಸುಳ್ಳಾಡುವ ನಾಲಿಗೆ ಆಗಾಗ್ಗೆ ತಡವರಿಸುವುದು
ಕತ್ತಿ ಬೀಸಲು ರಕ್ತ ಚೆಲ್ಲಲು ಮನ ಹೇಸುವುದು, ತಬ್ಬಿದವನನ್ನು
ದಬ್ಬಲು ಹಿಂಜರಿಯುವುದು ಮಣ್ಣಿನ ಗುಣ ಕದಲಿಸಲಾರೆ
ಒಡೆದರೂ ಸಾವಿರದ ಮೂರುತಿ
ಕೆಡಗಿದರೂ ಚಿಮ್ಮುವ ಜೀವಶಕ್ತಿ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.