ADVERTISEMENT

ತೇಜಾವತಿ ಎಚ್. ಡಿ. ಅವರ ಕವಿತೆ: ಮಾಯಾ ಜೋಳಿಗೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 23:46 IST
Last Updated 12 ಅಕ್ಟೋಬರ್ 2024, 23:46 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ದಿನವೂ ಅವಳು ಹೆಗಲಿಗೇರಿಸಿ ನೆರಿಗೆ ಹಿಡಿದು ಹೆಜ್ಜೆ ಹಾಕುವಾಗ ದೂರದಲ್ಲೆರಡು ಕಣ್ಣುಗಳ ಎಲ್ಲಿಲ್ಲದ ಕುತೂಹಲ

ಏನಿರಬಹುದು ಎಂದೆಂದೂ ಹೊಟ್ಟೆ ಉಬ್ಬಿಕೊಂಡ ಅವಳ ಆ ಮಾಯಾ ಜೋಳಿಗೆಯಲ್ಲಿ
ಸ್ನೋ ಪೌಡರ್ ಲಿಪ್‌ಸ್ಟಿಕ್‌ ತಿಂಡಿ ಮತ್ತೇ..
ಮತ್ತೂ ಅದೇ ಕುತೂಹಲ

ADVERTISEMENT

ತೆರೆದು ನೋಡುವ ತವಕ ಎದೆಯೊಳಗೆ 
ನೂರಾರು ಗರಿಗೆದರಿದ ನವಿಲುಗರಿ 

ಜೋಳಿಗೆಯೊಳಗೆ ಕೈ ಇಳಿ ಬಿಡುತ್ತಲೇ ಸ್ವಾಗತಿಸುವ ಚಾಕೊಲೇಟ್ ತುದಿ ಸವೆದು ಅರೆಮುರಿದು 
ಮೂಲೆಯಲ್ಲಿ ಅವಿತು ಕುಳಿತು ಮೊಂಡಾಗಿದ್ದ ಪೆನ್ಸಿಲ್‌ಗೆ ಶಾರ್ಪ್ ಮಾಡುವ ಬಣ್ಣಬಣ್ಣದ ಮೆಂಡರ್‌ಗಳು
ಒಂದಕ್ಷರವು ತಪ್ಪಾಗದಂತೆ ಎಚ್ಚರ ವಹಿಸುವ ತರಹೇವಾರಿ ರಬ್ಬರ್

ಮತ್ತಿನ್ನೇನು..
ತರಗತಿಯ ನಡು ನಡುವೆ ಆಡುತ್ತಿದ್ದ ಗಿರಗಿಟ್ಟಲೆ, ಯಾವುದೋ ಕಾರು ಲಾರಿಯ ಮುರಿದ ಲೈಟು
ಇಬ್ಬರ ಜಗಳಕ್ಕೆ ಕಾರಣವಾಗಿದ್ದ ಚೆಂಡು,
ಮಾತು ಬಿಟ್ಟು ಒಂದಾಗಿದ್ದ ಹಕ್ಕಿಗಳು ಬರೆದ ಕ್ಷಮೆ ಪತ್ರ ಇನ್ನೇನೇನೋ..
ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಳ್ಳುವಳು 
ಸಂತನೊಬ್ಬ ದುಶ್ಚಟಗಳ ಭಿಕ್ಷೆ ಬೇಡಿದಂತೆ 

ಬೆರಳ ಹಿಡಿದು ಸ್ಪರ್ಶ ಕಲಿಸಿ 
ಅಮ್ಮನಾಗಿ ಅಪ್ಪುವಾಕೆ 
ಬತ್ತದ ಬಟ್ಟಲ ಕಂಗಳಲ್ಲಿ ಕನಸು ಕಾಣುವಳು 
ದೇಶ ಕಾಯುವ ಅನ್ನ ಹಾಕುವ ಪ್ರೀತಿ ಹಂಚುವ ಎಳೆ ಹಕ್ಕಿಗಳಿಗೆ 
ಅಕ್ಷರದ ಕಾಳನ್ನಿಟ್ಟು ಗುಟುಕು ನೀಡುವಳು 
ಆರಕ್ಕೇರದ ಮೂರಕ್ಕಿಳಿಯದ 
ಅವಳ ಬದುಕ ಜೋಳಿಗೆಯ ಅಕ್ಷಯ... 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.