ಹೆಬ್ಬಾವಿನಂತೆ ಸುತ್ತಿಕೊಂಡಿದೆ ಭಷ್ಟಾಚಾರದ ಲಂಚದ ಉರಗ;
ಸಾಯುವುದಿಲ್ಲ...ಎಂದಿಗೂ...ಸಾಯುವುದಿಲ್ಲ!
ಪಾಪಸುಕಳ್ಳಿಯಂತೆ ಸಮೃದ್ಧ ಬೆಳೆದ
ಜಾತೀಯತೆ ಕ್ಯಾಕ್ಟಸ್ ಅಳಿಯುವುದಿಲ್ಲ
ಮಲ್ಲಿಗೆಯಂತೆ ಕಂಪನು ಕೊಡುವ
ಪ್ರಾಮಾಣಿಕತೆಯ ಮಲ್ಲಿಗೆ ಹೂವು
ಅರಳುವುದಿಲ್ಲ ಎಂದೆಂದಿಗೂ ಅರಳುವುದಿಲ್ಲ
ಸ್ವಾರ್ಥದ ಲಾಲಸೆ ಕಬಂದ ರಾಕ್ಷಸನಂತೆ
ಬೆಳೆವುದೇ ಸೋಜಿಗ! ಏನಾಯ್ತು ಈ ಜಗ!
ಅನ್ಯಾಯವೆಂಬುದೇ ಬಾಯ್ತೆರೆದಘಾಸುರ
ಅಸತ್ಯವೆಂಬುದೇ ಬೆಳೆವ ಬಕಾಸುರ
ಧರ್ಮವೆಂಬುದೇ ಗ್ರಾಂಡ್ ಕ್ಯಾನ್ಯನ್ ಕಂದರ!
ಅಕ್ರಮವೆಂಬುದೇ ಚಿರಂತನ ನಯಾಗರ
ಆ ಕಡೆ ಈ ಕಡೆ ಯಾಕಡೆ ನೋಡಲಿ ನಿತ್ಯನಿತ್ಯವೂ ಅತ್ಯಾಚಾರ;
ಗದ್ದುಗೆಗಾಗಿ ಕುರುಕ್ಷೇತ್ರದ ಕದನ
ಹಣಗಳಿಕೆಗಾಗಿ ಅಗಣಿತ ಯಜ್ಞ
ಸುತ್ತಮುತ್ತಲೂ ದುಶ್ಯಾಸನರ ಸಂತೆ
ದೇವರು ದಿಂಡರು ಅಗಣಿತದ ಒರತೆ,
ಕಾವಿ ಕಾಕಿ ಖಾದಿ ಊರೊಳಗಿನ ಚಿರತೆ...
ಉಳಿದೀತೆ ಮಾನವತೆ ಹಿಮಗಿರಿಯಂತೆ ಅಚಲ?
ಝಣ ಝಣ ಉಕ್ಕುವ ನೈಲ್ ಉದ್ದ ನೈಲ್ ಅಗಲ,
ಎಲ್ಲೆಲ್ಲೂ ಆಷಾಢಭೂತಿಗಳ ಅಮೆಜಾನ್ ಕಾಡು
ಸ್ನೇಹ ಪ್ರೀತಿ ವಿಶ್ವಾಸ ಮರುಭೂಮಿ ಸಹರಾ
ಈ ವಿಕೃತಿ ಮಧ್ಯದಲಿ ಖಂಡೀತೆ ಪ್ರಕೃತಿ?
ಸುಗತಿಗಳ ಹನನದಲಿ ವಿಗತಿಗಳ ಸಂಗತಿ
ಎತ್ತತಿರುಗಲಿ ಕಣ್ಣು ಅತ್ತತ್ತ ಪಾಷಂಡಿ ಸಂತತಿ
ಸಿಕ್ಕೀತೆ ಸತ್ಸಂಗ? ಕಂಡೀತೆ ಸನ್ಮಾರ್ಗ?
ಹಗಲಲ್ಲೂ ಆವರಿಸಿದೆ ಭ್ರಮೆಯ ಕುರುಡು ಸ್ವರ್ಗ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.