ADVERTISEMENT

ದಾದಾಪೀರ್ ನವಿಲೇಹಾಳ್ ಬರೆದ ಕವಿತೆ: ಶಿಖಂಡಿ ಹುಳುವಿನ ಸುತ್ತ

ದಾದಾಪೀರ್
Published 28 ಮೇ 2022, 19:30 IST
Last Updated 28 ಮೇ 2022, 19:30 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

ಇದು
ಅಳಿವಿನಂಚಿನ ತಳಿ
ಎಂದರಿತು ಮರುಗಿದರೆ
ತಿರುಗಿ ಕಚ್ಚುತ್ತದೆ
ಅದು
ತೆವಳುತ್ತ ಬಂದು ನಿಧನಿಧಾನಕ್ಕೆದ್ದು
ಬಾಗಿ ಬಳುಕಿದ್ದು
ಸಾಲದೆ
ಬೆರಳು ಸೀಪುತ್ತ ಬೆನ್ನು ಬೀಳುತ್ತದೆ
ಆಹಹಾ ನಯವೆ ನಾಚುತ್ತದೆ!
ತನ್ನ ಬಡಾಯಿಗೆ ತಾನೆ
ಕಿಸಕ್ಕೆಂದು
ಉಗುಳುನಗೆ ಚೆಲ್ಲಿತೋ
ಅಲ್ಲಿಗೆ ನಾದ
ಲಯವಾಗಿ ಹಿಡಿದ ಕೈ ಕಡಿವ ಕುನ್ನಿಕ್ರೀಡೆಗಳ
ಸೀಟಿ ಹೊಡೆದಂತೆಯೇ ಲೆಕ್ಕ.

ಇದು
ಸಂದಿಗೊಂದಿಯಲಿ
ಬೋಳು ಮುಖಮುಚ್ಚಿ ನುಸುಳಿದ ಕೆಟ್ಟ ಹುಳ
ಕಿರಾತಕ ಕಣ್ಣು ಬಿಟ್ಟಿತು
ಮೀಸೆ ಬಾಲ ಕರಗಿದ ದಾಸೋತ್ತಮ ಭಂಗಿ
ಸಡಿಲಿಸಿ ಕೆಮ್ಮಿತು
ಕಮೋಡು ಕೆಂಪಾಗಿ ಬುರುಬುರು ಉಕ್ಕಿ
ಮೈತುಂಬ ಮೊಳೆತ ಮುಳ್ಳುಗಳ
ಚಾಚಿ
ಮತ್ತೆ ಒಳಗೆಳೆದು
ಮಂದಾರಹಾಸ ಮೊರೆಸಿತು
ಏನದರ ಲೀಲೆ?
ತಲೆಯೊಂದು
ನಖಶಿಖಾಂತ ಎಳೆತಂದ ಕೂದಲು
ಕಳೆದ ವಿಷಪಾತಕ ಚಹರೆ!
ಸಾವಿರ
ದನಿಷ್ಟ ಬಾಹುಗಳು
ಒಂದು ಕತ್ತರಿಸಿದರಿನ್ನೊಂದು ತಬ್ಬುವುದು
ತಡಿಗೆ ಬಡಿದಲೆಗಳ ಲೆಕ್ಕವಿಟ್ಟಷ್ಟೂ
ಕಡಲ ತಳಕ್ಕೆ ಕಡೆಗೋಲು ಮುಟ್ಟದೆ
ಬರಿದೆ ನೀರ ಮೇಲ್ಪದರ ಗುಡುಗುಡಿಸಿ ಗೂರಾಡಿ
ತೆಗೆದ ಒಣಮಜ್ಜಿಗೆ
ಕಮಟು ಬೆಣ್ಣೆಯ ಘಮಲು
ಹಿಡಿತಂದ ಕೊಳ್ಳಿಗೆ ಕರಗಿ
ನೆಲವೆಲ್ಲ ಕರ್ರಗೆ ಕೊಳೆತಬ್ಬಿ ಹಲ್ಲುಬಿಟ್ಟಿತೋ
ಶಿಖಂಡಿ ಮುಖತುಂಬ ಹುಳಿನಗೆಯ ಮುಳ್ಳು ಮಳೆ!

ಇದು
ಹೆಜ್ಜೆಯಿಟ್ಟಲ್ಲಿ ಹೆರವರ ಹಗೆ ಹುಟ್ಟಿಸಿ
ಕುಣಿಕೆ ಹೆಣೆಹೆಣೆದು
ಗುಳಿತೋಡಿ ತುಳಿದು ಕಾಲಗುರುತನು ಬಿಟ್ಟಿತು
ಹಿಡಿಹಿಡಿ ಮುಕ್ಕಿದವರ ನಗೆಜಾಲದಲಿ
ನುಣ್ಣಗೆ ಹೊಸೆದ ಕಸದ ಹೊತ್ತಿಗೆ ಹಿಡಿಯಿತೋ
ಕಾಲು ಬಿದ್ದವರ ಬಡಿವಾರದಲಿ
ಒದ್ದಾಡಿ ಬುಡಕೆ ಬಿಸಿ ತಗುಲಿಸಿಕೊಂಡ ಬೆಕ್ಕಾಯಿತು!
ಬಣ್ಣಬಣ್ಣದ ಕೊಡೆ ಹಿಡಿದು
ಮೈಯೆಲ್ಲ ಹಿಡಿಯಾಗಿ ಬಾಗಿ
ಕಾಲಿನಳತೆಯ ತಿಳಿದೆಳೆವ ತುಕಾಲಿತನದಲಿ ಕಕ್ಕಿತು
ಹಾದರದ ಹೊಲಸಲ್ಲಿ ತಲೆತಿಕ್ಕಿಸಿಕೊಂಡು
ಹಿತ್ತಲ ಹಸುರಲ್ಲಿ ಬಸುರಾಗಿ ಸೆಲ್ಫಿ ತೆಗೆಯಿತು!

ADVERTISEMENT

ಇದು
ಅಕರಾಳ ವಿಕರಾಳ ಸೋಗಿನ ಹುಳ
ತನಗೆ ತಾನೆ ಗಂಟೆ ಬಾರಿಸಿ
ಚಪ್ಪಾಳೆ ಹೊಡೆದು ಸ್ವಿಚ್ಚೊತ್ತಿ ದೀಪವಾರಿಸುತ್ತದೆ
ಮೂರು ಪೀಸಿನ ಕೋಟು
ಎಂಟು ಮೀಟರಿನ ಪೇಟ ಮಗದೊಮ್ಮೆ
ಹುಲಿತಲೆಯ ಸವರುವ ಭಂಗಿಯ
ಒಡನೆ
ಹೆಣ ಬಿದ್ದಷ್ಟು ಬೆಳೆ ಸೊಂಪು
ಯಾರಿಗುಂಟು ಯಾರಿಗಿಲ್ಲ?
ರಕ್ತಮಾಂಸದ ಬಿಸಿದು ಸೋಂಕಿನ ಭೋಜನ!
ಹುಚ್ಚೆದ್ದ ಹಸಿರು ಹೂಬಳ್ಳಿ ಸೊಕ್ಕಿದವು
ಬಣ್ಣದಂಗಡಿಯಲ್ಲಿ ಭರಪೂರ ನಗೆ ಚಿಲುಮೆ!
ಸುಮ್ಮನೆ ಸುರಿವುದಕೆ ದರ ನಿಗದಿ
ಇದರ ಪುರಾತನ ಬುದ್ಧಿ!

ಇದು
ಕೆತ್ತಿದ ಸಪಾಟು ಕೆನ್ನೆ ತಡಕಿ ಕೊರೆದು
ಶುಚಿ ಸ್ಥಾನ ಶುದ್ಧಿ ನೆಪದಲ್ಲಿ ಕೈಯಲ್ಲೆ
ಮಡಗಿಟ್ಟುಕೊಂಡ ಕೊಳಕು ಹುಳ!
ಹಿಡಿದ ಕೈ ಕಡಿದು
ಒಳಗೊಳಗೆ ಲಡ್ಡಾಗಿ
ಮುಷ್ಟಿ ಬಿಗಿ ಹಿಡಿದರೂ ಸಿಗದ ನರನಾಡಿ ಬತ್ತಿದ
ಆಬಾಲವೃದ್ಧ ಕೀಟ!
ಚಿಗುರೆಲೆ ಹಸಿರಿಗೆ ಆತು
ಆತ್ಮದ ಹಾಡನೊರೆಯುತಿದೆ
ಅದು
ಅದರದ್ದೇ ಚರಮಗೀತೆ ಎನುತಿದೆ ಬೇರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.