ಹೊಸ ವರುಷ ಹೊಸತೂ ಅಲ್ಲ
ಕಳೆದುಹೋದದ್ದು ಹಳತೂ ಅಲ್ಲ
ಕಾಲ ಕೆಟ್ಟದ್ದೂ ಅಲ್ಲ
ಕಾಲ ಒಳ್ಳೆಯದೂ ಅಲ್ಲ
ಎಲ್ಲಾ ನಾವು ಮಾಡಿಕೊಂಡಿದ್ದೆ
ನಿರ್ಣಯವೊಂದನು ಮಾಡಿ ಆವೇಶದಲಿ,
ದೂಡುವುದು ಮುಂದೆ ಮುಂದೆ ರಾಹುಕಾಲವೆಂದು
ಕತ್ತಲಲಿ ಕುಳಿತು ಬೆಳಕಿಗೆ ಅರಸುವುದು
ಸುತ್ತಲೂ ಗೋಡೆಯನೆಬ್ಬಿಸಿ ದ್ವೀಪವಾಗುವುದು
ಮತ್ತಲೇ ಕೋಟೆ ಕಟ್ಟುಕೊಳ್ಳುವುದು
ಬಿಡುವಾಗುವುದೇ ಇಲ್ಲ
ಹತ್ತಿರದವರ ನಗು ಅರಳಿಸಲು
ಸತ್ತವರ ಚಟ್ಟಕೆ ಹೆಗಲಾಗಲು
ಉಳಿದವರ ಕೈ ಹಿಡಿದು ಧೈರ್ಯ ತುಂಬಲು
ದಾರಿಕಾದು ಕುಳಿತವರ ಬೆಳಕಾಗಲು
ಮೇಲೆ ಕುಳಿತವರು, ಕಾಲರಳಿಸಿ
ಅದುಮಿಡುತ್ತಾರೆ
ತಲೆಯೆತ್ತಿದರೆ ವಾಮನರಾಗುತ್ತಾರೆ
ಬಲಿಯ ಬಲಿಗೆ ಬಣ್ಣ ತುಂಬುತ್ತಾರೆ
ಮುಂದೆ ಸ್ವರ್ಗವಿದೆಯೆಂದು ನಗುತ್ತಾರೆ
ದಿನಗಳುರುಳುತ್ತವೆ
ದೇಹ ಅಸ್ತಿಪಂಜರವಾಗುತ್ತದೆ
ಗಾಳಿಯೇ ಸಾಕಾಗುತ್ತದೆ ಉಳಿದ ದಿನಗಳಿಗೆ
ಹೊಸ ವರುಷಗಳು ಅರಳುತ್ತಲೇ ಇರುತ್ತವೆ
ಕೊರಳೆತ್ತಿ, ಗಂಟಲುಬ್ಬಿ ಕಿರುಚುವುದು ಒಂದು ದಿನ
ವರುಷವಿಡೀ ಮಲಗಿಕೊಳ್ಳಲು
ಪ್ರತಿದಿನವೂ ಹೊಸದಿನವಲ್ಲವೇ
ಸುತ್ತಲೂ ನಗುಪಸರಿರಲು,
ಒಬ್ಬರನೊಬ್ಬರು ಕೈಹಿಡಿದು ನಡೆಸಲು,
ಹೊಸದಾರಿ ತೆರಯಲಾರದೆ
ಎಲ್ಲರ ಗುರಿ ಸೇರಲು ಎಲ್ಲರೂ ದುಡಿಯಲು
ಹೊಸಜಗ, ಸೃಷ್ಟಿಯಾಗದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.