ನದಿಗೂ ಮೈ ತುಂಬ
ಕೆಲಸಗಳಿವೆ
ನಿನ್ನ
ಸೇರುವುದರ ಹೊರತಾಗಿಯೂ
ಸಮುದ್ರ.
ತೆರೆದ ಅಣೆಕಟ್ಟಿನಿಂದ
ಧುಮ್ಮಿಕ್ಕಿ ಓಡುವ ಕಾಳಿಯ
ನಡಿಗೆ ಸುಧಾರಿಸಬೇಕು
ಮಳೆ ಬಂದಾಗ ಉಕ್ಕದೆ
ಮೇರೆ ಮೀರದೆ
ಸಂಭಾಳಿಸಬೇಕು
ಉಡಿ ತುಂಬುವ
ಮಳೆಯ ಒಳಗೊಳ್ಳಬೇಕು
ಅದರಲ್ಲೊಂದಾಗಬೇಕು
ಮಳೆಯ ಹಂಬಲ
ನೆಲಕೆ ಹೆಚ್ಚಾದಾಗಲೆಲ್ಲ
ಬಿಸಿಲಿಗೊಡ್ಡಬೇಕು
ನೆಲ ಕಾಂಬೂಕೆ ಬಂದ
ಮಳೆಗೆ
ಜಲ ಸೆಲೆಯ ಉಕ್ಕಿಸಿ
ಸ್ವಾಗತಿಸುತ್ತಲೇ ಇರಬೇಕು
ತೇಲಿ ಬರುವ
ಕಸ ಕಡ್ಡಿ ತೀರಕ್ಕೆ ಸರಿಸಬೇಕು
ತಾರಿ ದೋಣಿ ಕಾದವರ
ಕನಸು ಕಟ್ಟಬೇಕು
ಮೀನಿನ ಚೌಕಾಸಿಗೆ
ಕಿವಿಯಾಗಿ
ಎಂಡಿ ಬಲೆಗೆ
ಸಾಕ್ಷಿಯಾಗಬೇಕು
ಬೀಸಿದ ಬಲೆಯಲ್ಲಿ
ಸಿಕ್ಕಿ ಮೀನು ಚಡಪಡಿಸಿದಂತೆ
ನೀರೂ..
ದೋಣಿಯ ಹುಟ್ಟು
ತೆರೆ ಗೀರಿ ಹೋದಂತೆಲ್ಲ
ನೋವು...
ಬಂದು ಹೋದ ಹೆಜ್ಜೆ
ಗುರುತು ಅಳೆಸಿ
ಇದ್ದು ಇರದಾಂಗೆ ಇರಬೇಕು
ದೋಣಿಯೊಳಗೆ ಕೂತ
ಹುಡುಗಿ
ಗಾಳಿಗೆ ಮುಂಗುರುಳ ಹಾರಿಸಿ
ನಗೆಬೀರಿ ಕೈ ಹೊರಹಾಕಿ ನೀರ
ಮುಟ್ಟಿದಾಗಲೆಲ್ಲ ಪುಳಕದ ಜೊತೆಗೆ
ತುಂಟ ಕಾಟವೂ..
ನೀರಿನ ಪವಾಡ ಗೊತ್ತು
ನದಿಗೆ
ತಾರೆಗಳನ್ನೆಲ್ಲ
ಬೆಳ್ಳುಳ್ಳಿ ಸುಲಿದಷ್ಟೆ
ಸಲೀಸಾಗಿ
ಆಚೆ ಒತ್ತಿ
ಚಂದ್ರನನ್ನು
ಮಾತ್ರ
ಬಲೆ ಬೀಸಿ ಹಿಡಿವ
ತಾಕತ್ತಿದೆ ಅದಕೆ
**
ಅಡಿಗಡಿಗೆ ಸಿಗುವ ಸಣ್ಣ
ಹಳ್ಳಗಳ ಮಾತೆಲ್ಲ ಕೂಡಿಸಿಕೊಂಡು
ಸಮುದ್ರ ಸೇರದ ನದಿಯೊಂದು
ನನ್ನೊಳಗೂ ಹಾಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.