ಪೂರ್ವದಿಂದ ಕಪ್ಪು ಕಾಗೆಯೊಂದು ಹಾರಿ ಬಂದು
ಗೇಟಿನ ಮೇಲೆ ಕೂತು ಕರೆಯುತ್ತದೆ
ಕಾವ್ ಕಾವ್ ಕಾವ್ ಕಾವ್.
ಎಚ್ಚರಿಸುತ್ತಿದೆಯೇ
ಸುತ್ತಮುತ್ತಲಿನವರ ಬಗ್ಗೆ?
ಭಯಬೇಡಾ
ಕಪ್ಪು ಕೊಕ್ಕಿನ ಹಕ್ಕಿ
ಕುಪ್ಪಳಿಸಿ ಬಾಲ ಅಲ್ಲಾಡಿಸಿ
ಗುಟುರುತ್ತಿದೆ ವಾಕ್ ವಾಕ್
ಬೇಡಿಕೊಳ್ಳುತ್ತೀಯಾ
ವಿವಾದಗಳಿಂದ ದೂರವಿರಿಸು ಎಂದು
ಭಯಬೇಡಾ
ಚಿಂತೆಯೇ ನಿನಗೆ,
ನಿನ್ನ ಮಗುವಿನ ಬಗ್ಗೆ?
ಹೊತ್ತಾರೆ ಹಾಲು ಕೊಟ್ಟೆಯಾ?
ಚಡಪಡಿಸುತ್ತಿದೆಯೇ ನಿನ್ನ ಆತ್ಮ?
ತೂರಿಬಿಟ್ಟೆಯಾ ಮಾತುಗಳನ್ನು
ಹಿಂಜರಿಯದೇ?
ಹುಲ್ಲಿನ ಕಣಿವೆಯಲ್ಲಿ ರಾಜ ಕೊಕ್ಕರೆ
ಯೊಂದು ಹಾರುತ್ತದೆ. ಅದರ ಕರೆ ಪ್ರತಿಧ್ವನಿಸುತ್ತದೆ
ಸ್ವರ್ಗದ ಮಳೆ ಇನ್ನೇನು ಬರುತ್ತಿದೆ
ಎಂದು ನಿನ್ನ ಮಗುವಿಗೆ ಸಂತೈಸುತ್ತದೆ.
ನಿನ್ನ ಮಗು ಕ್ಷೇಮ.
ಕಪ್ಪು ಮೋಡಗಳು ಮುತ್ತಿ ಗುಡುಗುತ್ತಿದೆ
ಸುರಿಮಳೆ ಮತ್ತು ಜಡಿಮಳೆ
ನೀರು ಸೃಷ್ಟಿಗೆ ಸೋಪಾನ
ಇದೊಂದು ಸಾಮಾನ್ಯ ವಿಜ್ಞಾನ
ಅಮ್ಮಾ, ನಿನ್ನ ಮಗುವಿನ ಚಿಂತೆ ನಿಂಗೆ
ಹೊತ್ತಾರೆ ಹಾಲು ಕೊಟ್ಟೆಯಾ?
ಅಮ್ಮಾ, ನಿಮ್ಮ ಆತ್ಮ ಚಡಪಡಿಸುತ್ತಿದೆ
ಹಿಂಜರಿಯದೇ ತೂರಿಬಿಟ್ಟೆಯಾ ಪದಗಳನ್ನು?
ಸೌಮ್ಯ ತಂಗಾಳಿಯು ಶಿಳ್ಳೆ ಹೊಡೆಯುತ್ತದೆ,
ನಂಬಿಕೆಯನ್ನು ಬೆಳಗಿಸುತ್ತದೆ
ಅಮ್ಮ ಪಿಸುಗುಟ್ಟಿದಳೇ ಮನಸಿನಲ್ಲಿ
ವಿಶ್ವಾಸವಿರಲಿ ಎಂದು?
ನಿನ್ನ ಮಗು ಚೆನ್ನಾಗಿದೆ.
ಬಿಳಿಯ ಹದ್ದು ಮೇಲೆ ಸುತ್ತುತ್ತಿದೆ
ಸಮಯವನ್ನು ಮಡಚುತ್ತಿದೆ
ಪೂರ್ವಜರ ಆತ್ಮಗಳು ತಲೆದೂಗುತ್ತಿವೆ
ಘನವಿಧಿಯ ವಿಲಾಸ
ತಾಯಿ, ನಮ್ಮ ರಾಜ ಬುದ್ಧಿವಂತ
ಅಮೂಲ್ಯ ನಿಧಿಯವನು
ಕಾಗೆಬಂಗಾರ.
ಇದು ವಿಧಿಯ ವಿಪರ್ಯಾಸ.
ತಾಯಿ, ನಮ್ಮ ರಾಜ ಧೈರ್ಯವಂತ
ಅವನ ಸರ್ವೋಚ್ಚ ಶಕ್ತಿ ವ್ಯಯವಾಗುತ್ತಿದೆ
ಮಾತೃ ಭೂಮಿಯ ಹೊಗಳುತ್ತ
ಮತ್ತೆ ಹೆಣ್ಣುಮಕ್ಕಳ ತುಳಿಯುತ್ತ
ತಿಳಿದಿಲ್ಲ ಅವನು ತಾಯ ಶಾಪದ ಶಕ್ತಿ
ಕಪ್ಪು ಕಾಗೆಯ ಕಾವ್ ಕಾವ್
ಕಾವ್ ಕಾವ್ ಕಾವ್ ಕಾವ್
(ಕವನದ ಪ್ರಾರಂಭದ ಸಾಲು ಸ್ಫೂರ್ತಿ ಮೊಂಗೋಲಿಯನ್ ಜಾನಪದ ಹಾಡು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.