ADVERTISEMENT

ಎಲ್ಲಿದ್ದೀ ಗುಲಗಂಜಿ

ಕವಿತೆ

ವೀರಣ್ಣ ಮಡಿವಾಳ
Published 20 ಅಕ್ಟೋಬರ್ 2018, 19:30 IST
Last Updated 20 ಅಕ್ಟೋಬರ್ 2018, 19:30 IST
ಚಿತ್ರ: ಮದನ್ ಸಿ.ಪಿ.
ಚಿತ್ರ: ಮದನ್ ಸಿ.ಪಿ.   

ಆ ಪಾಳು ಬಿದ್ದ ಮನೆಯ
ಬೀಳದೆ ಉಳಿದ ನಡುಗಂಬ ನೀನು
ನನ್ನದೇ ಆತ್ಮದ ಬೆನ್ನ ಹುರಿ

ಕತ್ತೆ ಎನ್ನಲಿಲ್ಲ ಕುದುರೆ ಎನ್ನಲಿಲ್ಲ
ಗಂಡ ಮಕ್ಕಳು ಮೊಮ್ಮಕ್ಕಳನ್ನೂ ಸೇರಿಸಿ
ಹೊತ್ತು ತಿರುಗಿದೆ
ಸೆರಗಿನ ಸಿಂಬಿ ಸುತ್ತಿದ ನೆತ್ತಿಯಲಿ ಅದೆಷ್ಟೋ ಗಂಟುಗಳ
ಊರಿನಿಂದ ನೀರಿದ್ದಲ್ಲಿಗೆ
ನೀರಿನಿಂದ ಮತ್ತೆ ಶಾನುಭೋಗರ ಮನೆಗಳಿಗೆ

ಗುಲಗಂಜಿ ಸುಖ ಸಮೃದ್ಧ ದುಃಖ
ಅದಲು ಬದಲು ಮಾಡಿ ಬದುಕಿ ಹೋದ ನಿನ್ನ ಮುಂದೆ
ದೇಶಾನೆಲ್ಲ ಸುತ್ತಾಡಿ
ತಲೆ ಅನ್ನೋ ಹಗೇದಾಗ ಸಿಕಿದ್ದೆಲ್ಲಾ ತುಂಬಿಕೊಂಡು
ಸಿಕ್ಕಾಪಟ್ಟೆ ಒದ್ದಾಡೋ ನಾನು
ಏನೇನೂ ಅಲ್ಲಾ
ನೀ ಮನುಷ್ಯಾಳು ಮಾತ್ರ ಆಗಿರಲಿಲ್ಲ

ADVERTISEMENT

ಒಡಕಿನ ಹಳ್ಳದ ಹನಿಯಲ್ಲಿ
ನೀನು ಸುರಿಸಿದ
ಬೆವರ ರುಚಿ ಇನ್ನೂ ಕಡಿಮೆ ಆಗಿಲ್ಲ
ಮೊನ್ನೆತಾನೆ ಒರೆಸಿದ ನಿನ್ನ ಫೋಟೋದಲ್ಲಿ
ಸದಾ ತೇವವಾಗಿಯೇ ಇರುವ ನಿನ್ನ ಕಣ್ಣು
ಬಿದ್ದಿರುವ ಶಾನುಭೋಗರ
ಮನೆಯ ಕಂಡು ಏನೋ ಹೇಳಿತು

ಇಡೀ ಊರನ್ನೇ ಬಳಸಿದ್ದ
ಎಲೆಬಳ್ಳಿ ತೋಟದ ತೋಳಬಂಧಿ ನೀನು
ಹುಡುಕುತ್ತಿದ್ದೇನೆ
ಎಲೆ ಬಳ್ಳಿ ತೋಟ
ಮೂಗು ಮುಚ್ಚಿಕೊಂಡೇ ಓಡಾಡಬೇಕೀಗ
ಊರು ನೆನಪಾಗಿ ವಿಮಾನ ಇಳಿದು ಬಂದ ಗೆಳೆಯ
ಸ್ವಚ್ಛ ಹಸಿರು ಬೋರ್ಡು ತಂದಿರುವ
ಪ್ರಚಾರಕ್ಕೆ ಬೇಕಾದ್ದೆಲ್ಲಾ ಇದೆ
ಬೇಡಾದ್ದು ಈಗ ಯಾವುದೂ ಉಳಿದಿಲ್ಲ


ಕೌದಿಯಾಗಿರುವ ನೀನುಟ್ಟಿದ್ದ ಸೀರೆಯ ಘಮದಲ್ಲಿ
ಯಾರಿಗೂ ಕಾಣಿಸದಂತೆ ನಾನು ಬಿಕ್ಕಳಿಸುತ್ತಿದ್ದೇನೆ
ಮಾರಣಾಂತಿಕ ಖಾಯಿಲೆಗೆ ಬಿದ್ದಂತೆ

ಅಲೈ ಕುಣಿತಕ್ಕೆ ಹಗಲು ರಾತ್ರಿ ದಣಿದು
ದಣಿದೇ ದಣಿವಾರಿಸಿಕೊಳ್ಳುತ್ತಿದ್ದ ನನ್ನೂರು
ಮೊಹರಂ ಪದಗಳ ಲಾಲಿಯಲಿ ನಿದ್ದೆ ಮರೆಯುತ್ತಿದ್ದ ನನ್ನೂರು
ಈಗ ದೂರ ದರುಶನದ ಅಪರಾಧ ಸರಣಿಗಳಲಿ
ಮಿರ ಮಿರ ಮುಂಚುತ್ತಿದೆ

ಬೆವರು ರಕ್ತ
ಕೈ ಕೈ ಮಿಲಾಯಿಸಿರುವ ಈ ವೇಳೆ
ಜಗದ ಕಣ್ಣೇಕೋ ಮಂಜು ಮಂಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.