ADVERTISEMENT

‘ಕನ್ನಡೀಕರಣ ಆಗದಿದ್ದರೆ ಕರ್ನಾಟಕ ಛಿದ್ರ’

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 5:47 IST
Last Updated 25 ನವೆಂಬರ್ 2017, 5:47 IST
83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಕರ್ನಾಟಕ ಏಕೀಕರಣ ಕುರಿತ ಗೋಷ್ಠಿಯಲ್ಲಿ ಅಪ್ಪಾರಾವ್ ಅಕ್ಕೋಣಿ ಅವರ ಹಾಸ್ಯಚಟಾಕಿಗೆ ಮಲೆಯೂರು ಗುರುಸ್ವಾಮಿ ಮುಗುಳ್ನಕ್ಕರು. ನಾ.ನಾಗಚಂದ್ರ, ಸ.ರಾ. ಸುಳಕೂಡೆ, ಜಗನ್ನಾಥ ಹೆಬ್ಬಾಳೆ, ಕೆ.ಎನ್.ಇಂಗಳಗಿ, ಬಾಳಾಸಾಹೇಬ ಲೋಕಾಪುರ ಇದ್ದಾರೆ
83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಕರ್ನಾಟಕ ಏಕೀಕರಣ ಕುರಿತ ಗೋಷ್ಠಿಯಲ್ಲಿ ಅಪ್ಪಾರಾವ್ ಅಕ್ಕೋಣಿ ಅವರ ಹಾಸ್ಯಚಟಾಕಿಗೆ ಮಲೆಯೂರು ಗುರುಸ್ವಾಮಿ ಮುಗುಳ್ನಕ್ಕರು. ನಾ.ನಾಗಚಂದ್ರ, ಸ.ರಾ. ಸುಳಕೂಡೆ, ಜಗನ್ನಾಥ ಹೆಬ್ಬಾಳೆ, ಕೆ.ಎನ್.ಇಂಗಳಗಿ, ಬಾಳಾಸಾಹೇಬ ಲೋಕಾಪುರ ಇದ್ದಾರೆ   

ಮೈಸೂರು: ಕರ್ನಾಟಕ ಏಕೀಕರಣದ ಚರ್ಚೆಯ ಬದಲು ಕನ್ನಡೀಕರಣದ ಚರ್ಚೆ ನಡೆಸದೇ ಹೋದರೆ ಕನ್ನಡ ನಾಡು ಛಿದ್ರ ಛಿದ್ರಗೊಳ್ಳುವುದರಲ್ಲಿ ಅನುಮಾನ ಇಲ್ಲ ಎಂದು ಸಾಹಿತಿ ಮಲೆಯೂರು ಗುರುಸ್ವಾಮಿ ಎಚ್ಚರಿಸಿದರು.

83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆಯಾದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಶುಕ್ರವಾರ ನಡೆದ ‘ಕರ್ನಾಟಕ ಏಕೀಕರಣ’
ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕರ್ನಾಟಕದ ಏಕೀಕರಣಕ್ಕೆ ದುಡಿದ ಪಾಟೀಲ ಪುಟ್ಟಪ್ಪ ಅವರಂತಹ ಮಹಾನ್ ವ್ಯಕ್ತಿಗಳು ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಡುತ್ತಾರೆ ಎಂದರೆ ನಾವು ಅವರ ನೋವನ್ನು ಅರ್ಥ ಮಾಡಿಕೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಭೌಗೋಳಿಕ ಏಕೀಕರಣಕ್ಕಿಂತ ಕನ್ನಡದ ಏಕೀಕರಣವಾಗಬೇಕು. ಆದರೆ, ಇಂದು ಭೌಗೋಳಿಕ ಏಕೀಕರಣ ಕುರಿತೇ ಹೆಚ್ಚು ಚರ್ಚೆಯಾಗುತ್ತಿದೆ. ಕನ್ನಡೀಕರಣ ಕುರಿತು ಯಾರೊಬ್ಬರೂ ಚಿಂತಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾವೇರಿ ವಿಚಾರ ಬಂದಾಗ ಉತ್ತರ ಕರ್ನಾಟಕದವರು ಸುಮ್ಮನಿರುತ್ತಾರೆ. ಮಹಾದಾಯಿ ವಿಚಾರಕ್ಕೆ ಕಾವೇರಿ ಭಾಗದ ಜನ ಪ್ರತಿಕ್ರಿಯಿಸುವುದಿಲ್ಲ. ಕಂಬಳದ ವಿಚಾರಕ್ಕೆ ಈ ಇಬ್ಬರೂ ಮೌನಿಯಾಗಿರುತ್ತಾರೆ. ಕರ್ನಾಟಕ ಈಗ ಪ್ರಾದೇಶಿಕ ದ್ವೀಪಗಳಾಗುವತ್ತ ಹೊರಟಿದೆ ಆಂಧ್ರಪ್ರದೇಶ ಭಾಷೆಯ ಭಾವಾನಾತ್ಮಕ ನೆಲೆಯಲ್ಲಿ ರಾಷ್ಟ್ರದಲ್ಲೇ ಮೊದಲ ಬಾರಿಗೆ ಏಕೀಕರಣ ಸಾಧಿಸಿತು. ಅದೇ ರಾಜ್ಯ ಅಭಿವೃದ್ಧಿಯ ಕಾರಣಕ್ಕೆ ಒಡೆದು ಹೋಯಿತು. ಬೆಂಗಳೂರಿನ ಸೌಲಭ್ಯಗಳು ದೂರದ ಕಲಬುರ್ಗಿ ಹಾಗೂ ಬೀದರ್‌ಗೂ ದೊರೆತಾಗ ಮಾತ್ರ ಕರ್ನಾಟಕ ಉಳಿಯುತ್ತದೆ ಎಂದು ವಿಶ್ಲೇಷಿಸಿದರು.

‘ಕಾವೇರಿಯಿಂದ ಮಾ ಗೋದಾವರಿ: ಒಂದು ಅವಲೋಕನ’ ಕುರಿತು ಮಾತನಾಡಿದ, ‘ಜಗನ್ನಾಥ ಹೆಬ್ಬಾಳೆ 1,500ಕ್ಕೂ ಹೆಚ್ಚು ಕನ್ನಡ ಶಾಸನಗಳು ಮಹಾರಾಷ್ಟ್ರದಲ್ಲಿ ದೊರಕಿವೆ. ಗೋದಾವರಿವರೆಗಿನ ಪ್ರದೇಶದಲ್ಲಿನ ಗುಡಿ, ಮಠಗಳಿಗೆ ಕನ್ನಡದ ಹೆಸರುಗಳು ಇವೆ. ಪಂಡರಾಪುರದ ವಿಠಲದೇವ ಕನ್ನಡ ನಾಡಿನ ದೇವರು ಎಂದು ಸ್ವತಃ ಮಹಾರಾಷ್ಟ್ರದವರೇ ಹೇಳುತ್ತಾರೆ’ ಎಂದು ವಿವರಿಸಿದರು.

ಗೋಷ್ಠಿಗೆ ಪ್ರತಿಕ್ರಿಯೆ ನೀಡಿದ ಸ.ರಾ. ಸುಳಕೂಡೆ, ‘ದಕ್ಷಿಣ ಕರ್ನಾಟಕದ 13 ತಾಲ್ಲೂಕುಗಳು ಹಿಂದುಳಿದಿದ್ದರೆ, ಉತ್ತರ ಕರ್ನಾಟಕದ 26 ತಾಲ್ಲೂಕುಗಳು ಹಿಂದುಳಿದಿವೆ. ಇಂದಿಗೂ ಕಲಬುರ್ಗಿಗೆ ವರ್ಗಾವಣೆ ಮಾಡುವುದು ಶಿಕ್ಷೆಯನ್ನಾಗಿ ಪರಿಗಣಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕನ್ನಡ ಶಾಲೆಗಳು ಮುಚ್ಚುವುದು ಕನ್ನಡಿಗರ ಅವಿವೇಕತನದಿಂದ’ ಎಂದು ನಾ.ನಾಗಚಂದ್ರ ಪ್ರತಿಕ್ರಿಯಿಸಿದರು. ‘ಗಡಿನಾಡು ಪ್ರದೇಶಗಳು: ಬಿಕ್ಕಟ್ಟುಗಳು’ ಕುರಿತು ಮಾತನಾಡಿದ ಬಾಳಾಸಾಹೇಬ ಲೋಕಾಪುರ ‘ರಾಜ್ಯ ರಾಜಧಾನಿ ಮಧ್ಯಭಾಗದಲ್ಲಿರಬೇಕು. ಇದರಿಂದ ಉತ್ತರ ಕರ್ನಾಟಕದ ಭಾಗದವರಿಗೆ ಸಮಸ್ಯೆ ಹೆಚ್ಚಾಗುತ್ತಿದೆ’ ಎಂದು ಹೇಳಿದರು. ಪ್ರಾದೇಶಿಕ ಅಸಮಾನತೆ ಸವಾಲು ಮತ್ತು ಪರಿಹಾರ ಕುರಿತು ಕೆ.ಎನ್.ಇಂಗಳಗಿ ಉಪನ್ಯಾಸ ನೀಡಿದರು.

ಬಣ್ಣಹಚ್ಚಿ ಕಾದು ಕೂತ ಚಿಣ್ಣರು
ಸಮಾನಾಂತರ ವೇದಿಕೆಯಾದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ನಡೆದ ಎಲ್ಲ ಗೋಷ್ಠಿಗಳು ತಡವಾಗಿ ಆರಂಭವಾದವು. ಇದರಿಂದ ಸಮಯದ ಕೊರತೆ ಉಪನ್ಯಾಸಕರನ್ನು ಕಾಡಿತು. ಒಬ್ಬರಿಗೆ 10 ನಿಮಿಷ ಅವಕಾಶ ನೀಡಲಾಗಿತ್ತು. ಅಧ್ಯಕ್ಷೀಯ ಭಾಷಣದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಸಾಹಿತಿ ಮಲೆಯೂರು ಗುರುಸ್ವಾಮಿ, ‘ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಬಣ್ಣ ಹಚ್ಚಿ ಕೂತಿರುವ ಮಕ್ಕಳು ಚರ್ಮ ಬಿಗಿಯುತ್ತಿದೆ. ಹೊಟ್ಟೆ ಹಸಿಯುತ್ತಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿ, 5 ನಿಮಿಷದಲ್ಲಿ ಭಾಷಣ ಮುಗಿಸುವೆ’ ಎಂದರು. ಉಳಿದೆಲ್ಲರ ಭಾಷಣವನ್ನು ಸಂಘಟಕರು ಚೀಟಿ ಕೊಡುವ ಮೂಲಕ ಮೊಟಕುಗೊಳಿಸಿದರು.

ಸುಳ್ಳನ್ನು ಸತ್ಯದ ಕ್ಯಾಪ್ಸೂಲ್‌ಗೆ ಹಾಕಿದ ಸಿದ್ದರಾಮಯ್ಯ
ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರ ಹೇಳಿಕೆ ಸುಳ್ಳನ್ನು ಸತ್ಯದ ಕ್ಯಾಪ್ಸೂಲ್‌ಗೆ ಹಾಕಿದಂತೆ ಆಗಿದೆ ಎಂದು ಅಪ್ಪಾರಾವ್ ಅಕ್ಕೋಣಿ ಹೇಳಿದರು. ಉತ್ತರ ಕರ್ನಾಟಕ ಆಗಬೇಕು ಎಂಬ ಕೂಗಿಗೆ ಅಭಿವೃದ್ಧಿ ವಿಚಾರ ಕಾರಣವೇ ಹೊರತು ಕರ್ನಾಟಕದಿಂದ, ಕನ್ನಡದಿಂದ ಬೇರೆಯಾಗಬೇಕು ಎಂಬುದಲ್ಲ ಎಂದು ತಿಳಿಸಿದರು.

* * 

ಪ್ರಾದೇಶಿಕ ಅಸಮಾನತೆ ಉತ್ತರ ಕರ್ನಾಟಕದಲ್ಲಿ ಮಾತ್ರ ಇಲ್ಲ. ಚಾಮರಾಜನಗರ ನೋಡಿದರೆ ಇದು ಅರ್ಥವಾಗುತ್ತದೆ.
 ಕೆ.ಎನ್.ಇಂಗಳಗಿ
ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.