ADVERTISEMENT

ಕನ್ನಡ ಸಂಶೋಧನೆಗೆ ಸೂಕ್ತ ಉತ್ತರಾಧಿಕಾರಿಗಳಿಲ್ಲ: ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 19:30 IST
Last Updated 25 ನವೆಂಬರ್ 2017, 19:30 IST
ಕನ್ನಡ ಸಂಶೋಧನೆ ಮತ್ತು ವಿಮರ್ಶೆ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಡಾ.ಕೇಶವ ಶರ್ಮಾ, ಡಾ.ಬಿ.ಎ.ವಿವೇಕ ರೈ, ಡಾ.ಪುರುಷೋತ್ತಮ ಬಿಳಿಮಲೆ, ಡಾ.ಅಮರೇಶ ನುಗಡೋಣಿ
ಕನ್ನಡ ಸಂಶೋಧನೆ ಮತ್ತು ವಿಮರ್ಶೆ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಡಾ.ಕೇಶವ ಶರ್ಮಾ, ಡಾ.ಬಿ.ಎ.ವಿವೇಕ ರೈ, ಡಾ.ಪುರುಷೋತ್ತಮ ಬಿಳಿಮಲೆ, ಡಾ.ಅಮರೇಶ ನುಗಡೋಣಿ   

ಮೈಸೂರು: ‘ಕನ್ನಡ ಸಂಶೋಧನೆಗೆ ಉನ್ನತವಾದ ಪರಂಪರೆ ಇದೆ. ಆದರೆ, ಅದಕ್ಕೆ ಸೂಕ್ತವಾದ ಉತ್ತರಾಧಿಕಾರಿಗಳಿಲ್ಲ’ ಎಂದು ಹಿರಿಯ ಸಂಶೋಧಕ ಡಾ. ಪುರುಷೋತ್ತಮ ಬಿಳಿಮಲೆ ಬೇಸರ ವ್ಯಕ್ತಪಡಿಸಿದರು.

‘ಕನ್ನಡ ಸಂಶೋಧನೆ ಮತ್ತು ವಿಮರ್ಶೆ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಲವು ಅಪವಾದಗಳನ್ನು ಹೊರತುಪಡಿಸಿರೆ ಕನ್ನಡದ ಸಂಶೋಧನೆ ಈಗ ಅಧೋಮುಖಿಯಾಗಿದೆ. ಈಗ ಬರುತ್ತಿರುವ ಬಹುತೇಕ ಪಿಎಚ್.ಡಿ ಪ್ರಬಂಧಗಳು ಕಳಪೆಯಾಗಿವೆ. ಬಹುತೇಕರು ಪಿಎಚ್.ಡಿ ಮುಗಿದ ಮೇಲೆ ಸಂಶೋಧನೆಯನ್ನೇ ಮರೆತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪಿಎಚ್.ಡಿ ಸಂಶೋಧನೆ ಮಾಡುವವರಿಗೆ ಸೂಕ್ತ ಮಾರ್ಗದರ್ಶಕರ ಕೊರತೆ ಇದೆ. ಬಹುತೇಕ ಮಾರ್ಗದರ್ಶಕರು ತಮ್ಮ ಸಂಶೋಧನಾ ವಿದ್ಯಾರ್ಥಿಗಳ ಪ್ರಬಂಧಗಳನ್ನು ಓದುತ್ತಿಲ್ಲ. ಬಹುತೇಕ ಪ್ರಾಧ್ಯಾಪಕರಲ್ಲಿ ಸಂವಾದವೇ ಇಲ್ಲ. ಒಬ್ಬ ಪ್ರಾಧ್ಯಾಪಕರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಈ ಎಲ್ಲ ಕಾರಣಗಳಿಂದ ಸಂಶೋಧನೆ ಕಳಪೆಯಾಗುತ್ತಿದೆ’ ಎಂದರು.

ADVERTISEMENT

‘ಕರ್ನಾಟಕದಲ್ಲಿ 43 ಉನ್ನತ ಶಿಕ್ಷಣ ಸಂಶೋಧನಾ ಕೇಂದ್ರಗಳಿವೆ. ಕನ್ನಡ ನುಡಿಗೆ ಸಂಬಂಧಿಸಿದಂತೆ ಸುಮಾರು ಐದು ಸಾವಿರ ಮಂದಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಸಂಶೋಧನೆಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಡೆಯುತ್ತಿರುವ ಸಂಶೋಧನೆ ಕಡಿಮೆ. ಕನ್ನಡ ಸಂಶೋಧನೆಯ ಗುಣಮಟ್ಟ ಹೆಚ್ಚಿಸಬೇಕು’ ಎಂದು ಹೇಳಿದರು.

‘ಶಿಕ್ಷಣ ಈಗ ಲಾಭ-ನಷ್ಟದ ವ್ಯವಹಾರವಾಗಿದೆ. ಹೀಗಾಗಿ ಮಾನವಿಕ ವಿಷಯಗಳನ್ನು ಕಡೆಗಣಿಸಲಾಗುತ್ತಿದೆ. ಹೊಸ ಶಿಕ್ಷಣ ನೀತಿಯಲ್ಲಿ ಹಿಂದಿ ಭಾಷೆಗೆ ಸಿಗುತ್ತಿರುವ ಉತ್ತೇಜನ ಉಳಿದ ಭಾರತೀಯ ಭಾಷೆಗಳಿಗೆ ಸಿಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಕನ್ನಡ ಸಂಶೋಧನೆ ಗುಣಮಟ್ಟ ಬೆಳೆಸಿಕೊಳ್ಳಬೇಕು’ ಎಂದು ನುಡಿದರು.

ವಿಮರ್ಶಕ ಡಾ. ಕೇಶವ ಶರ್ಮಾ ಮಾತನಾಡಿ, ‘ಕುವೆಂಪು ವಿಮರ್ಶೆ ಬರೆಯುತ್ತಿದ್ದ ಕಾಲಕ್ಕೆ ಬ್ರಿಟಿಷರು ನಮ್ಮನ್ನು ಆಳುತ್ತಿದ್ದರು. ನಾವು ಈಗ ವಿಮರ್ಶೆ ಬರೆಯುತ್ತಿರುವ ಸಂದರ್ಭದಲ್ಲಿ ನಮ್ಮನ್ನು ಆಳುತ್ತಿರುವವರು ಯಾರು ಎಂಬುದೇ ಸ್ಪಷ್ಟವಾಗಿಲ್ಲ. ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವ ಅವಕಾಶ ವಿಮರ್ಶೆಗಿದೆ. ಹೊಸ ಪ್ರಶ್ನೆಗಳನ್ನು ವಿಮರ್ಶೆಯ ಮೂಲಕ ಈಗ ಕೇಳಬೇಕಿದೆ’ ಎಂದರು.

‘ಕನ್ನಡ ವಿಮರ್ಶೆ ವಿಶ್ವಾತ್ಮಕವಾಗಬೇಕಾದ್ದು ಹೇಗೆ ಹಾಗೂ ಪ್ರಾದೇಶಿಕ ಪರಂಪರೆಗಳ ಬಹುತ್ವ ಉಳಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಗಳು ವಿಮರ್ಶೆಯ ದೃಷ್ಟಿಯಿಂದ ಈಗ ಮುಖ್ಯವಾಗಿವೆ. ಮಾಧ್ಯಮಗಳಲ್ಲಿ ವಿಮರ್ಶೆಗೆ ಅವಕಾಶ ಕಡಿಮೆಯಾದ ಇಂದಿನ ಸಂದರ್ಭದಲ್ಲಿ ನಾವು ಸಾಮಾಜಿಕ ಮಾಧ್ಯಮಗಳಲ್ಲಿ ವಿಮರ್ಶೆ ಬರೆಯುತ್ತಿದ್ದೇವೆ. ಇದು ಈ ಕಾಲದ ಒತ್ತಡ’ ಎಂದು ಹೇಳಿದರು.

ಹಿರಿಯ ಸಂಶೋಧಕ ಡಾ. ಬಿ.ಎ. ವಿವೇಕ ರೈ ಮಾತನಾಡಿ, ‘ಮಕ್ಕಳಿಗೆ ಕನ್ನಡ ಪುಸ್ತಕ ಹಾಗೂ ಕನ್ನಡ ಓದಿನ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವಾಗಬೇಕು. ತಂತ್ರಜ್ಞಾನದ ನೆರವಿನಿಂದ ಕನ್ನಡವನ್ನು ಮಕ್ಕಳಿಗೆ ಓದಿಸುವ ಹೊಸ ಪ್ರಯೋಗಗಳು ನಡೆಯಬೇಕು. ಪ್ರತಿವರ್ಷ ಕನ್ನಡದಲ್ಲಿ ಸಾವಿರಾರು ಪುಸ್ತಕಗಳು ಪ್ರಕಟವಾಗುತ್ತವೆ. ಆದರೆ, ಪುಸ್ತಕ ವಿತರಣೆಯ ದೃಷ್ಟಿಯಿಂದ ನೋಡಿದರೆ ಇನ್ನೂ ಕರ್ನಾಟಕದ ಏಕೀಕರಣ ಆಗಿಲ್ಲ. ಪ್ರಕಟವಾಗುವ ಪುಸ್ತಕಗಳ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡುವ ಕೆಲಸವನ್ನು ಪುಸ್ತಕ ಪ್ರಾಧಿಕಾರ ಮಾಡಬೇಕು’ ಎಂದು ಹೇಳಿದರು.

‘ಕನ್ನಡದ ಪ್ರಮುಖ ಕೃತಿಗಳು ಇಂಗ್ಲಿಷ್‍‍ ಭಾಷೆಗೆ ಅನುವಾದವಾಗಬೇಕು. ಪಂಪ, ರಾಘವಾಂಕರ ಕೃತಿಗಳು ಈಗ ಇಂಗ್ಲಿಷ್‍‍ಗೆ ಅನುವಾದಗೊಂಡಿವೆ. ನನ್ನ ಪ್ರಯತ್ನದ ಫಲವಾಗಿ ಪೂರ್ಣಚಂದ್ರ ತೇಜಸ್ವಿ ಅವರ ‘ಕರ್ವಾಲೊ’ ಕೃತಿ ಜರ್ಮನ್ ಭಾಷೆಗೆ ಅನುವಾದಗೊಂಡಿದೆ. ಪುಸ್ತಕದ ಮುದ್ರಣದ ಕೆಲಸವೂ ಮುಗಿದಿದೆ’ ಎಂದರು.

ಸಂಶೋಧಕ, ಕಥೆಗಾರ ಡಾ. ಅಮರೇಶ ನುಗಡೋಣಿ ಮಾತನಾಡಿ, ‘ಪ್ರಸ್ತುತ ವಿಮರ್ಶಾ ಸಂದರ್ಭದಲ್ಲಿ ಬಹುತ್ವದ ಹುಡುಕಾಟದ ಪ್ರಯತ್ನಗಳು ನಡೆಯುತ್ತಿವೆ. ಭೂತಕಾಲದಲ್ಲಿ ನಿಂತುವರ್ತಮಾನವನ್ನು ನೋಡುವ ವಿಮರ್ಶಾದೃಷ್ಟಿ ಬೆಳೆಯುತ್ತಿದೆ. ಭಾಷಾ ಸಂಶೋಧನೆಯೂ ಹೊಸ ನೆಲೆಯ ಹುಡುಕಾಟಗಳನ್ನು ನಡೆಸುತ್ತಿದೆ’ ಎಂದರು.

‘ಪ್ರಜಾವಾಣಿ’ ಮಕ್ಕಳ ಸಂಚಿಕೆಗೆ ಮೆಚ್ಚುಗೆ

ಈ ಬಾರಿಯ ಮಕ್ಕಳ ದಿನಾಚರಣೆಗೆ ‘ಪ್ರಜಾವಾಣಿ’ ರೂಪಿಸಿದ ಮಕ್ಕಳ ವಿಶೇಷ ‘ಮುಕ್ತಛಂದ’ಕ್ಕೆ ವಿವೇಕ ರೈ ಮೆಚ್ಚುಗೆ ವ್ಯಕ್ತಪಡಿಸಿದರು. ‘ಈ ಬಾರಿಯ ಮಕ್ಕಳ ದಿನಾಚರಣೆಗೆ ‘ಪ್ರಜಾವಾಣಿ’ ಉತ್ತಮವಾದ ಮಕ್ಕಳ ಪುರವಣಿ ರೂಪಿಸಿತ್ತು. ಮಕ್ಕಳಿಗೆ ಸಂಬಂಧಿಸಿದ ಬಹಳಷ್ಟು ಒಳ್ಳೆಯ ವಿಷಯಗಳನ್ನು ಈ ವಿಶೇಷ ಪುರವಣಿ ಒಳಗೊಂಡಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.