ಧಾರವಾಡ: ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರ ಉಸ್ತುವಾರಿ ಸಚಿವ ಮತ್ತು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಚಾಲನೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನು ಬಳಿಗಾರ ಪರಿಷತ್ತಿನ ಧ್ವಜಾರೋಹಣ ಮಾಡಿದರು. ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ನಾಡ ಧ್ವಜಾರೋಹಣ ಮಾಡಿದರು.
ಧ್ವಜಾರೋಹಣದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ವಿ. ದೇಶಪಾಂಡೆ, ‘ಸಮ್ಮೇಳನಕ್ಕೆ ಸಕಲ ಸಿದ್ಧತೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಭಿಮಾನಿಗಳು ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಬೇಕೆಂದು’ ಕೋರಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್, ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ್ ಹಾಜರಿದ್ದರು.ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಡಲಾಯಿತು.
ಸಿದ್ಧಗಂಗಾ ಶ್ರೀಗಳ ಆರೋಗ್ಯಕ್ಕೆ ಪ್ರಾರ್ಥನೆ: ‘ಸಿದ್ಧಗಂಗಾ ಶ್ರೀಗಳದ್ದು ಇಡೀ ವಿಶ್ವಕ್ಕೇ ಮಾದರಿಯಾಗುವಂಥ ವ್ಯಕ್ತಿತ್ವ. ಅವರಿಂದಾಗಿ ಇಂದು ಸಾವಿರಾರು ವಿದ್ಯಾರ್ಥಿಗಳು ವಿದ್ಯೆ ಪಡೆಯುವಂತಾಗಿದೆ. ಶ್ರೀಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ’ ಎಂದು ದೇಶಪಾಂಡೆ ಹೇಳಿದರು.
**
ಸ್ವೆಟರ್, ಶಾಲುಗಳ ನಡುವೆ ಕನ್ನಡಾಭಿಮಾನಿಗಳು!
ಬೆಳ್ಳಂಬೆಳಿಗ್ಗೆ ಮೈಕೊರೆಯುವ ಚಳಿಯಲ್ಲಿ ನಾಡಿನ ವಿವಿಧ ಭಾಗಗಳಿಂದ ಬಂದ ಕನ್ನಡಾಭಿಮಾನಿಗಳು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನೆರೆದಿದ್ದರು.
ಧಾರವಾಡದಲ್ಲಿ ಎರಡು ದಿನಗಳಿಂದ ಚಳಿ ಹೆಚ್ಚಾಗಿದ್ದು, ಸಮ್ಮೇಳನಕ್ಕೆ ಬಂದಿದ್ದ ಬಹುತೇಕರು ಸ್ವೆಟರ್, ಶಾಲು, ಜರ್ಕಿನ್, ಮಂಕಿ ಕ್ಯಾಂಪ್ ತೊಟ್ಟಿದ್ದರು.
ಮಂಗಳೂರಿನಿಂದ ಬಂದಿದ್ದ ವೃದ್ಧೆಯೊಬ್ಬರು ಶಾಲು ಹೊದ್ದು, ಹೆಗಲ ಮೇಲೆ ನಾಡಧ್ವಜದ ಕೊರಳಪಟ್ಟಿ ತೊಟ್ಟು, ಧ್ವಜಾರೋಹಣದಲ್ಲಿ ಭಾಗವಹಿಸಿದರು. ವೃದ್ಧರೊಬ್ಬರು ಕನ್ನಡ ಬಾವುಟದ ಟೋಪಿ ತೊಟ್ಟು ಗಮನ ಸೆಳೆದರು. ಕೆಲ ಮಹಿಳೆಯರು ಕನ್ನಡ ಬಾವುಟದ ಬಣ್ಣ ಹಳದಿ–ಕೆಂಪು ಮಿಶ್ರಣದ ಸೀರೆ ಉಟ್ಟು ತಮ್ಮ ಕನ್ನಡಾಭಿಮಾನ ಮೆರೆದರು.
ಪ್ರತಿನಿಧಿಗಳು ರಿಜಿಸ್ಟ್ರೇಷನ್ ಕೌಂಟರ್‌ಗಳತ್ತ ತೆರಳಿ ಸಮ್ಮೇಳನದ ಕಿಟ್ ಬ್ಯಾಗ್‌ಗಳನ್ನು ಪಡೆದುಕೊಂಡರು. ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.