ಮೈಸೂರು: ಒಂದೆಡೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಾಗುತ್ತಿದ್ದರೆ, ಇನ್ನೊಂದೆಡೆ ಕನ್ನಡ ಪ್ರೇಮಿಗಳು ತಮ್ಮದೇ ಧಾಟಿಯಲ್ಲಿ ಜನರ ಗಮನ ಸೆಳೆದರು. ವಿದೇಶಿಗರೂ ಕನ್ನಡಾಭಿಮಾನ ಮೆರೆದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಶಿವಕುಮಾರ್ ಅವರಿಗಿದು 23ನೇ ಸಮ್ಮೇಳನ. 1994ರಿಂದ ಪಾಲ್ಗೊಳ್ಳುತ್ತಿದ್ದಾರೆ. 49 ವರ್ಷ ವಯಸ್ಸಿನ ಅವರು ಪ್ರಾಥಮಿಕ ಶಾಲೆ ಶಿಕ್ಷಕ.
‘ಕನ್ನಡ ಹಾಗೂ ಸೈನಿಕರೆಂದರೆ ನನಗೆ ಪಂಚಪ್ರಾಣ. ಎಲ್ಲಿ ಸಮ್ಮೇಳನ ನಡೆದರೂ ದುಡ್ಡು ಖರ್ಚು ಮಾಡಿಕೊಂಡು ಹೋಗುತ್ತೇನೆ’ ಎಂದು ಪ್ರತಿಕ್ರಿಯಿಸಿದರು.
ಎದೆ ಹಾಗೂ ಬೆನ್ನಿನ ಮೇಲೆ ಕನ್ನಡ ಬರಹ ಇರುವ ಬಿತ್ತಿಚಿತ್ರ ತೂಗಿ ಹಾಕಿಕೊಂಡು ಮೆರವಣಿಗೆಯಲ್ಲಿ ಸಾಗಿದರು. ಸೈನಿಕರ ಪರ ಘೋಷಣೆ ಹಾಗೂ ಕನ್ನಡಪರ ಘೋಷಣೆಗಳು ಅದರಲ್ಲಿವೆ.
ಮಾದರಿಯಾಗಿರಬೇಕು: ಹುಬ್ಬಳ್ಳಿಯ ಶೋಭಾ ಅವರ ಪಾಲಿಗಿದು 15ನೇ ಸಮ್ಮೇಳನ. ಅವರ ಮೈತುಂಬಾ ಕನ್ನಡ ಪ್ರೇಮ ತುಂಬಿಕೊಂಡಿದೆ. ಅವರು ತೊಟ್ಟಿದ್ದ ಸೀರೆಯೂ ಕನ್ನಡ ಧ್ವಜದ ಬಣ್ಣದ್ದು.
‘ಕನ್ನಡ ವಿಷಯದಲ್ಲಿ ಉಳಿದವರಿಗೆ ಮಾದರಿಯಾಗಿರಬೇಕು. ಈ ನಿಟ್ಟಿನಲ್ಲಿ ನಾನು ಪ್ರತಿ ಸಮ್ಮೇಳನಕ್ಕೆ ಹೋಗುತ್ತೇನೆ. ಕನ್ನಡ ನಾಡು ನುಡಿ ಪ್ರಚಾರದಲ್ಲಿ ತೊಡಗುತ್ತೇನೆ’ ಎಂದರು.
ಅಪ್ಪ–ಮಗನ ಕನ್ನಡಾಭಿಮಾನ: ರಾಯಚೂರಿನಿಂದ ಬಂದಿದ್ದ ಅಪ್ಪ ಮಗನ ಕನ್ನಡ ಪ್ರೀತಿ ಉಳಿದವರಿಗೆ ಮಾದರಿ ಆಗುವಂತಿತ್ತು. ವಿಶ್ವನಾಥ್ ತಲಮಾರಿ ಅವರು ಪುತ್ರ ನಿಖಲ್‌ನನ್ನು ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆಯಲ್ಲಿ ಸಾಗಿದರು.
‘ಪುತ್ರನಿಗೆ ಕನ್ನಡ ಭಾಷೆ ಮೇಲೆ ತುಂಬಾ ಆಸಕ್ತಿ. ಸುಮ್ಮನೇ ಪ್ರವಾಸಿ ತಾಣಗಳಿಗೆ ಹೋಗುವುದಕ್ಕಿಂತ ಕನ್ನಡ ಸಮ್ಮೇಳನಕ್ಕೆ ಕರೆದುಕೊಂಡು ಹೋಗು ಎಂದು ಹೇಳುತ್ತಿರುತ್ತಾನೆ. ಮುಂದಿನ ಎಲ್ಲಾ ಸಮ್ಮೇಳನಗಳಲ್ಲಿ ಪಾಲ್ಗೊಳ್ಳಬೇಕು ಎಂಬುದು ಅವನ ಆಸೆ’ ಎಂದು ವಿಶ್ವನಾಥ್ ಹೇಳಿದರು.
ಮೆರವಣಿಗೆಯಲ್ಲಿ ವಿದೇಶಿಗರು: ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ವಿದೇಶಿಗರೂ ಪಾಲ್ಗೊಂಡಿದ್ದರು. ಕೆಲವರು ಕನ್ನಡ ಧ್ವಜ ಹಿಡಿದು, ಇನ್ನು ಕೆಲವರು ಕನ್ನಡ ಧ್ವಜ ಬಣ್ಣದ ಶಾಲು ಹೊದ್ದು ಗಮನ ಸೆಳೆದರು.
‘ಪ್ರವಾಸಕ್ಕೆಂದು ಮೈಸೂರಿಗೆ ಬಂದಿದ್ದೆವು. ಮೆರವಣಿಗೆಯಲ್ಲಿ ಜನಸಾಗರ ಕಂಡು ಕುತೂಹಲ ಮೂಡಿತು. ಹೀಗಾಗಿ, ಜನರ ಜೊತೆ ನಾವೂ ಹೆಜ್ಜೆ ಇಟ್ಟೆವು. ಮೆರವಣಿಗೆ ನಡೆಯುತ್ತಿರುವ ಕಾರಣ ತಿಳಿದುಕೊಂಡೆವು. ಈ ಸಂಸ್ಕೃತಿ ತುಂಬಾ ಇಷ್ಟವಾಯಿತು’ ಎಂದು ಫ್ರಾನ್ಸ್‌ನ ಕರೀಮ್ ಹಾಗೂ ಪಾಲಿನ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.