ADVERTISEMENT

ನುಡಿ ಜಾತ್ರೆ: ಅರಮನೆ ಮುಂದೆ ಅಕ್ಷರ ಸರಪಳಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 11:32 IST
Last Updated 21 ನವೆಂಬರ್ 2017, 11:32 IST
ಮೈಸೂರು ಅರಮನೆ ಮುಂಭಾಗ ಕನ್ನಡ ಧ್ವಜದ ಬಣ್ಣದಲ್ಲಿ ಮೂಡಿರುವ ಅಕ್ಷರಗಳು
ಮೈಸೂರು ಅರಮನೆ ಮುಂಭಾಗ ಕನ್ನಡ ಧ್ವಜದ ಬಣ್ಣದಲ್ಲಿ ಮೂಡಿರುವ ಅಕ್ಷರಗಳು   

ಮೈಸೂರು: 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೆಲವೇ ದಿನ ಬಾಕಿ ಇದ್ದು, ನುಡಿ ಜಾತ್ರೆ ಪ್ರಚಾರಕ್ಕೆ ಕಸರತ್ತು ನಡೆಯುತ್ತಿದೆ.

ನಗರದಲ್ಲಿ ನ. 24ರಿಂದ 26ರವರೆಗೆ ನಡೆಯಲಿರುವ ಸಮ್ಮೇಳನ ಪ್ರಚುರಪಡಿಸುವ ಉದ್ದೇಶದಿಂದ ವಿಶ್ವಪ್ರಸಿದ್ಧ ಅಂಬಾವಿಲಾಸ ಅರಮನೆ ಮುಂಭಾಗ ಸೋಮವಾರ ಬೆಳಿಗ್ಗೆ ಪ್ರೊಮೊ ಚಿತ್ರೀಕರಣ ನಡೆಯಿತು.

ಕನ್ನಡ ಧ್ವಜದ ಬಣ್ಣದಲ್ಲಿ ರಟ್ಟಿನ ಮೇಲೆ ‘83ನೇ ಕನ್ನಡ ಸಾಹಿತ್ಯ ಸಮ್ಮೇಳನ’ ಹಾಗೂ ‘ಶ್ರೀ ರಾಮಾಯಣ ದರ್ಶನಂ‌–50’ ಎಂಬ ವಾಕ್ಯ ರಚಿಸಲಾಗಿದೆ. ನೆಲದ ಮೇಲೂ ಬರೆಯಲಾಗಿದೆ. ಮಕ್ಕಳು ಸರಪಳಿ ರಚಿಸಿ ಈ ಅಕ್ಷರಗಳನ್ನು ಮೇಲೆತ್ತಿ ಹಿಡಿಯಲಿದ್ದಾರೆ. ಡ್ರೋನ್‌ ಮೂಲಕ ಈ ದೃಶ್ಯ ಸೆರೆಹಿಡಿಯಲಾಯಿತು.

ADVERTISEMENT

ಸಮ್ಮೇಳನಕ್ಕೆ ಸ್ವಾಗತ ಕೋರುವ ಪ್ರೊಮೊ ಚಿತ್ರೀಕರಣದಲ್ಲಿ ವಿವಿಧ ಶಾಲೆಗಳ ಸುಮಾರು 2,000 ಮಕ್ಕಳು ಪಾಲ್ಗೊಂಡಿದ್ದರು.

ರಾಷ್ಟ್ರಕವಿ ಕುವೆಂಪು ರಚಿಸಿರುವ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ ಜ್ಞಾನಪೀಠ ಪುರಸ್ಕಾರ ಒಲಿದು 50 ವರ್ಷಗಳಾಗಿದೆ. ಸುವರ್ಣ ಮಹೋತ್ಸವದ ಈ ಹೊತ್ತಿನಲ್ಲಿ ಈ ಮಹಾಕಾವ್ಯಕ್ಕೆ ಸಂಬಂಧಿಸಿದಂತೆ ಪ್ರೊಮೊ ರಚಿಸಲಾಗುವುದು. 4 ನಿಮಿಷಗಳ ಈ ಪ್ರೊಮೊವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್‌ ಮಾಡಿ ಕನ್ನಡ ಪ್ರೇಮಿಗಳನ್ನು ಸ್ವಾಗತಿಸಲಾಗುವುದು ಎಂದು ಪ್ರಚಾರ ಸಮಿತಿ ಕಾರ್ಯಾಧ್ಯಕ್ಷ ಜನಾರ್ದನ್‌ ತಿಳಿಸಿದರು.

ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ
ಹೆಸರಾಂತ ಕಲಾವಿದರು ಸಮ್ಮೇಳನದಲ್ಲಿ ನಿತ್ಯ ಏಳು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಲಿದ್ದಾರೆ. ಮಹಾರಾಜ ಕಾಲೇಜಿನ ಮೈದಾನದ ಪ್ರಧಾನ ವೇದಿಕೆ, ಶತಮಾನೋತ್ಸವ ಭವನ, ಕಲಾಮಂದಿರ, ಅರಮನೆ ಮುಂಭಾಗದ ಕೋಟೆ ಆಂಜನೇಯ ದೇಗುಲ, ಚಿಕ್ಕಗಡಿಯಾರ, ಕಿರು ರಂಗಮಂದಿರ ಹಾಗೂ ಪುರಭವನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ಸುಗಮ ಸಂಗೀತ, ಪಿಟೀಲು ವಾದನ, ವಚನ ಗಾಯನ, ಚೌಡಿಕೆ ಪದ, ಮಾದೇಶ್ವರ ಕಾವ್ಯ, ಕಥಕ್‌ ನೃತ್ಯ, ಶಾಸ್ತ್ರೀಯ ಸಂಗೀತ, ಕೊಡವ ನೃತ್ಯ, ತೊಗಲು ಗೊಂಬೆಯಾಟ, ಕನ್ನಡ ಗೀತೆ, ಕೂಚುಪುಡಿ ನೃತ್ಯ, ಹರಿಕಥೆ, ಯಕ್ಷಗಾನ, ಜಾದು ಪ್ರದರ್ಶನ, ನಾಟಕಗಳ ಪ್ರದರ್ಶನ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.