ADVERTISEMENT

ಯಾವ ಕೈ ದೀಪ ಹಚ್ಚುತ್ತದೋ ಆ ಕೈ ಹಿಡಿಯಬೇಕು, ಬೆಂಕಿ ಹಚ್ಚುವ ಕೈಗಳಿಗೆ ಕೈ ಜೋಡಿಸಬಾರದು: ಚಂಪಾ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 13:14 IST
Last Updated 24 ನವೆಂಬರ್ 2017, 13:14 IST
ಯಾವ ಕೈ ದೀಪ ಹಚ್ಚುತ್ತದೋ ಆ ಕೈ ಹಿಡಿಯಬೇಕು, ಬೆಂಕಿ ಹಚ್ಚುವ ಕೈಗಳಿಗೆ ಕೈ ಜೋಡಿಸಬಾರದು: ಚಂಪಾ
ಯಾವ ಕೈ ದೀಪ ಹಚ್ಚುತ್ತದೋ ಆ ಕೈ ಹಿಡಿಯಬೇಕು, ಬೆಂಕಿ ಹಚ್ಚುವ ಕೈಗಳಿಗೆ ಕೈ ಜೋಡಿಸಬಾರದು: ಚಂಪಾ   

ಮೈಸೂರು: ಸಂತೆ, ಜಾತ್ರೆ ಅಂತ ಮೂದಲಿಸುವವರೆಲ್ಲ ಸಂತೆಯನ್ನೇ ಸವಿಯದ, ಜಾತ್ರೆಯ ಸಂಭ್ರಮವನ್ನೇ ಅರಿಯದ ನಗರ ಪ್ರಜ್ಞೆಯ ಕೂಪ ಮಂಡೂಕಗಳು. ಹಳ್ಳಿಗಾಡಿನಿಂದ ಬಂದ ನನ್ನಂಥವರಿಗೆ ಸಾಹಿತ್ಯ ಎಂಬುದು ಕೇವಲ ಕೆಲವು ಶಿಷ್ಟ ಪ್ರಜ್ಞೆಗಳ, ಪಾಂಡಿತ್ಯ ಪೂರ್ಣ ಒಣ ಅಭಿಪ್ರಾಯಗಳ ಪಿಸುಮಾತಿನ ಪಕ್ಷಪಾತದ ವಿಮರ್ಶೆಗಳ ಪರಸ್ಪರ ಬೆನ್ನು ಕೆರೆಯುವ ಕ್ಲಬ್ ಸದಸ್ಯರ ಬೌದ್ಧಿಕ ವ್ಯಾಯಾಮ ಎಂಬುದರಲ್ಲಿ ನಂಬಿಕೆ ಇಲ್ಲ ಎಂದು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಹೇಳಿದ್ದಾರೆ.

ಸಮ್ಮೇಳನಾಧ್ಯಕ್ಷರ ಭಾಷಣದ ಪೂರ್ಣಪಠ್ಯ ಇಲ್ಲಿದೆ.

ಭಾಷಣದ ಮುಖ್ಯಾಂಶಗಳು

ADVERTISEMENT

ನನ್ನ ಹಾಡಿನ ಹಳ್ಳ ಎಲ್ಲಿ ಹೊರಳುವದೇನೊ
ಗಚ್ಚಿನ ಗಟಾರವನು ಕಟ್ಟಬೇಡ...
ಎಂದು 1960ರಲ್ಲಿಯೇ ಬರೆದಿದ್ದೆ. ನಂತರ ಅದೇ ಲಯ, ಅದೇ ಗತಿ. ನನಗೆ ನಾನೇ ಲಕ್ಷಣ ರೇಖೆ  ಹಾಕಿಕೊಳ್ಳುವುದು ಅದನ್ನೇ ಉಲ್ಲಂಘಿಸುವುದು. ಹೀಗಾಗಿ ನನ್ನ ಸಾಹಿತ್ಯದ ಮೇಲೆ ಯಾವ ಪ್ರಭಾವ, ಯಾರ ಪ್ರಭಾವ ಎಷ್ಟಾಗಿದೆ ಅಂತ ನನಗೇ ಗೊತ್ತಿಲ್ಲ, ವಿಮರ್ಶಕರು ಹೇಳಿದರೆ ಗೊತ್ತಾದೀತೇನೋ

* ವ್ಯಕ್ತಿಗಳಿಗೆ ಮಿತಿ ಇರುವಂತೆ ಸಂಸ್ಥೆಗಳಿಗೂ ಮಿತಿ ಇರುತ್ತವೆ. ಏನೂ ಮಾಡಲೂ ಸಾಧ್ಯವಿಲ್ಲ ಮಾಡಲಾರೆ ಎಂಬ ಮನೋಭಾವ ಉಳ್ಳವರಿಗೆ ಈ ಮಿತಿಗಳು ಆಸರೆಯಾಗುತ್ತವೆ. ಆದರೆ ಏನಾದರೂ ಮಾಡಬೇಕು,ಮಾಡುವೆ ಎಂಬ ಛಲವಿದ್ದವರಿಗೆ ಮಿತಿಗಳು ಸವಾಲಾಗುತ್ತದೆ.

*ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುವ  ಸಾಹಿತ್ಯ ಸಮ್ಮೇಳನಗಳನ್ನು ಕೆಲವರು ಜಾತ್ರೆ ಎಂದೋ, ಸಂತೆ ಎಂದೋ ಕರೆದು ಮೂಗು ಮುರಿಯುವುದು ಕೂಡ ಒಂದು ಮಾಮೂಲಿ ವಿದ್ಯಮಾನ. ವಿಚಿತ್ರವೆಂದರೆ, ಇಂಥವರು  ಕೂಡಾ ಸಮ್ಮೇಳನದ ಆಮಂತ್ರಣ ಬಂದರೆ ತೆಪ್ಪಗೆ ಬಂದು, ಪ್ರಬಂಧವನ್ನೋ ಕವನವನ್ನೋ ಓದಿ ನಿಯಮಾನುಸಾರ ಟಿ.ಎ.ಡಿ.ಎ ಪಡೆಯುತ್ತಾರೆ.

* ಸಂತೆ  ಜಾತ್ರೆ ಅಂತ ಮೂದಲಿಸುವವರೆಲ್ಲ ಸಂತೆಯನ್ನೇ ಸವಿಯದ, ಜಾತ್ರೆಯ ಸಂಭ್ರಮವನ್ನೇ ಅರಿಯದ ನಗರ ಪ್ರಜ್ಞೆಯ ಕೂಪಮಂಡೂಕಗಳು, ಹಳ್ಳಿಗಾಡಿನಿಂದ ಬಂದ ನನ್ನಂಥವರಿಗೆ ಸಾಹಿತ್ಯ ಎಂಬುದು ಕೇವಲ ಕೆಲವು ಶಿಷ್ಟ ಪ್ರಜ್ಞೆ ಗಳ, ಪಾಂಡಿತ್ಯ ಪೂರ್ಣ ಒಣ ಅಭಿಪ್ರಾಯಗಳ ಪಿಸುಮಾತಿನ ಪಕ್ಷಪಾತದ ವಿಮರ್ಶೆಗಳ ಪರಸ್ಪರ ಬೆನ್ನು ಕೆರೆಯುವ ಕ್ಲಬ್ ಸದಸ್ಯರ ಬೌದ್ಧಿಕ  ವ್ಯಾಯಾಮ ಎಂಬುದರಲ್ಲಿ ನಂಬಿಕೆ ಇಲ್ಲ. ಬದಲಾಗಿ ಅದು ನಮ್ಮ ಸಮುದಾಯದ ಅಭಿವ್ಯಕ್ತಿ ಯಾಗಿ ಒಳ್ಳೆಯದರ ಕುರಿತು ಸಂಭ್ರಮಪಡುವ ಹಾಗೂ ಕೆಟ್ಟದರ ಬಗ್ಗೆ ಆರೋಗ್ಯಪೂರ್ಣ ಆತ್ಮ ವಿಮರ್ಶೆಗೆ ಅನುವು ಮಾಡಿಕೊಡುವ ಸಾಂಸ್ಕೃತಿಕ ವಿದ್ಯಮಾನ.


* ಸಮ್ಮೇಳನಾಧ್ಯಕ್ಷರ ಭಾಷಣಗಳ ಸಮುಚ್ಛಯವೆಂದರೆ  ಮೆಗಾ- ಧಾರಾವಾಹಿಯ ಎಪಿಸೋಡುಗಳಂತೆ ಅಂತ ಹೇಳಿದೆ, ಇಲ್ಲೂ ಒಂದು ವಿನ್ಯಾಸವಿದೆ.ಲಯವಿದೆ, ಏಕೀಕರಣ ಪೂರ್ವದ ಭಾಷಣಗಳಲ್ಲ ಈ ಕಾಲಮಾನದ ಕಾಳಜಿಗಳು  ; ಸ್ವಾತಂತ್ರ್ಯ ಚಳವಳಿ; ನಾಡು ಒಂದಾಗಬೇಕೆಂಬ ಹಂಬಲ; ಕನ್ನಡಕ್ಕೊಂದು 'ಅಸ್ಮಿತೆ' ಕಟ್ಟಿಕೊಡುವ ಪ್ರಯತ್ನ.

* ನಮಗೆ ಇಂದು ಬಹುದೊಡ್ಡ ಆತಂಕ ಎದುರಾಗಿರುವುದು ಭಾಷೆಗಳ ವಲಯದಲ್ಲಿ. ಮತ್ತೆ ಮತ್ತೆ ನಮ್ಮ ಚರ್ಚೆ ಗಿರಕಿ ಹೊಡೆಯುವುದು ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳ ಸುತ್ತ. ಭಾಷೆ ಜೀವಂತಾಗಿ ಉಳಿಯುವುದು  ಸಮಕಾಲೀನ  ಬದುಕಿನ ಸ್ಥಿತ್ಯಂತರಗಳೊಂದಿದೆ ನಿರಂತರವಾಗಿ ಸಂಬಂಧ ಇಟ್ಟುಕೊಳ್ಳುವುದರಿಂದ ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.