ಕಲಬುರ್ಗಿ: ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಆಹ್ವಾನಿತರು ಹಾಗೂ ಪ್ರತಿನಿಧಿಗಳ ಅನುಕೂಲಕ್ಕಾಗಿ ವಸತಿ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಖಾಸಗಿ ಹೋಟೆಲ್ ಮಾಲೀಕರೊಂದಿಗೆ ಚರ್ಚಿಸಿ ಅಗತ್ಯ ಕೈಗೊಳ್ಳುವಂತೆ ವಸತಿ ಹಾಗೂ ಸಾರಿಗೆ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದಲ್ಲಿ ಬುಧವಾರ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ‘ವಸತಿ ಹಾಗೂ ಸಾರಿಗೆಯು ಸಮ್ಮೇಳನದ ಎರಡು ಪ್ರಮುಖ ಅಂಶಗಳಾಗಿದ್ದು ಅಧಿಕಾರಿಗಳು ಸಮ್ಮೇಳನಕ್ಕೆ ಬರುವ ಅಹ್ವಾನಿತರು ಹಾಗೂ ಪ್ರತಿನಿಧಿಗಳಿಗೆ ಅಗತ್ಯ ಸೌಲಭ್ಯ ಒದಗಿಸಬೇಕು ಎಂದರು.
ನಗರದ ಖಾಸಗಿ ಹೋಟೆಲ್‌ಗಳ ಸಹಭಾಗಿತ್ವದ ಕುರಿತು ಅಧಿಕಾರಿಗಳು ಹೊಟೇಲ್ ಮಾಲೀಕರೊಂದಿಗೆ ಮಾತನಾಡಿ ಅಗತ್ಯ ಕೊಠಡಿಗಳ ವ್ಯವಸ್ಥೆ ಮಾಡಬೇಕು. ಸಮ್ಮೇಳನಕ್ಕೆ ಭಾಗಿಯಾಗಲು ಹೆಸರು ನೋಂದಾಯಿಸಿದವರಿಗೆ ವಸತಿ ಸೌಲಭ್ಯ ಕಲ್ಪಿಸಿರುವುದರ ಸಮರ್ಪಕ ಮಾಹಿತಿಯನ್ನು ಅವರ ಮೊಬೈಲ್‌ನಲ್ಲಿ ವಿವರಗಳನ್ನು ಕಳಿಸುವ ವ್ಯವಸ್ಥೆ ಮಾಡುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಜಾ ಪಿ. ಅವರಿಗೆ ಸೂಚಿಸಿದರು.
ಸಮ್ಮೇಳನದಲ್ಲಿ 19 ಸಾವಿರ ನೋಂದಾಯಿತ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಕನ್ನಡ ಸಾಹಿತ್ಯ ಪರಿಷತ್‌ನವರು ಅಹ್ವಾನಿತರ ವಿವರ ಒದಗಿಸಿದರೆ ಅವರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಲಾಗುವುದು ಎಂದು ಡಾ ರಾಜಾ ತಿಳಿಸಿದರು.
ಆದರೆ, ಕೇಂದ್ರ ಸಮಿತಿ ಪ್ರಕಾರ ಒಟ್ಟು ಲಭ್ಯವಿರುವ ಕೊಠಡಿಗಳ ಮಾಹಿತಿ ಒದಗಿಸಿದರೆ ಎ, ಬಿ ಹಾಗೂ ಸಿ ಕೆಟಗರಿ ಅಹ್ವಾನಿತರಿಗೆ ಕೊಠಡಿಗಳನ್ನು ಹಂಚಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ಸ್ಪಷ್ಟಪಡಿಸಿದರು.
ಈಗಾಗಲೇ 18 ಕಲ್ಯಾಣ ಮಂಟಪಗಳನ್ನು ಗುರುತಿಸಿದ್ದು ಅಲ್ಲಿ ಒಟ್ಟು 4820 ಆಹ್ವಾನಿತರಿಗೆ ಸೌಲಭ್ಯ ಕಲ್ಪಿಸಲಾಗುವುದು ಹಾಗೂ ಇನ್ನುಳಿದವರಿಗೆ ಹೊಟೇಲ್, ಹಾಸ್ಟೇಲ್ ಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ರಾಜಾ ವಿವರಿಸಿದರು.
ಅಗತ್ಯ ಬೆಡಶಿಟ್ ಗಳ ಖರೀದಿ ಮಾಡಲು ಮಾದರಿ ಬಡ್ ಶೀಟ್ ಒಂದನ್ನು ಸಭೆಯಲ್ಲಿ ತೋರಿಸಲಾಯಿತು. ಹಾಗೆ ಖರೀದಿಸಿದ ಬೆಟ್ ಶೀಟ್ ಗಳನ್ನು ಸಮ್ಮೇಳನದ ನಂತರ ಸರಕಾರಿ ಹಾಸ್ಟೆಲ್ ಗಳಿಗೆ ಬಳಕೆ ಮಾಡಬೇಕು. ಯಾವ ಹಾಸ್ಟೇಲ್ ಗಳಲ್ಲಿ ಶೌಚಾಲಯ ಕೊರತೆ ಇದ್ದರೆ ಅಲ್ಲಿ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಬೇಕು.ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು.ಈ ಕುರಿತು ನಗರಸಭೆ ಅಧಿಕಾರಿಗಳೊಂದಿಗೆ ಮಾತನಾಡಲು ಶಾಸಕರು ಸಿಇಒಗೆ ಸೂಚಿಸಿದರು.
ಸಭೆಯಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ನಸೀಂ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರವೀಣಪ್ರಿಯಾ ಡೇವಿಡ್, ಜಿ.ಪಂ. ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.