ಹುಬ್ಬಳ್ಳಿ:ಸಾಹಿತಿ ಚಂದ್ರಶೇಖರ ಪಾಟೀಲ ಅವರ ‘ಕುಠಾರಸ್ವಾಮಿ’ (ಕೊಡಲಿ) ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
‘ಚಂಪಾ ಅವರು ತಮ್ಮ ಮಿತಿ ದಾಟಬಾರದು. ನಾನೂ ಅವರಿಗಿಂತ ಜೋರಾಗಿ ಮಾತನಾಡಬಲ್ಲೆ. ಕನ್ನಡ ಸಮ್ಮೇಳನದಲ್ಲಿ ಗಲಾಟೆ ಬೇಡ ಎಂದು ಸುಮ್ಮನಾದೆ. ಅವರ ಮಟ್ಟಕ್ಕೆ ನಾನು ಇಳಿಯುವುದಿಲ್ಲ’ ಎಂದು ಶನಿವಾರ ಇಲ್ಲಿ ತಿರುಗೇಟು ನೀಡಿದರು.
‘ಮೈತ್ರಿ ಧರ್ಮ ಪಾಲಿಸುತ್ತಿಲ್ಲ ಎಂದಿದ್ದಾರೆ. ಅವರನ್ನು ಕೂರಿಸಿಕೊಂಡು ಮೈತ್ರಿ ಮಾಡಿಕೊಂಡಿದ್ದೇನೆಯೇ? ಅವರು ಎಷ್ಟು ಬೇಕೋ, ಅಷ್ಟು ಮಾತನಾಡಲಿ’ ಎಂದು ವಾಗ್ದಾಳಿ ನಡೆಸಿದರು.
‘ಕನ್ನಡ ಮಾಧ್ಯಮ ಶಿಕ್ಷಣ ಸುಧಾರಣೆಗೆ ತಜ್ಞರ ಸಮಿತಿ ನೀಡಿದ ವರದಿಯನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಮಾನ್ಯ ಮಾಡಿತ್ತು ಎಂದು ಹೇಳಿದ್ದಾರೆ. ಆದರೆ, ಚಂದ್ರಶೇಖರ ಕಂಬಾರ ಅವರೇ ಹೇಳಿರುವ ಪ್ರಕಾರ ನಾಲ್ಕು ವರ್ಷಗಳಲ್ಲಿ ಕನ್ನಡ ಶಾಲೆಗಳಲ್ಲಿ 13 ಲಕ್ಷ ಮಕ್ಕಳ ಸಂಖ್ಯೆ ಕಡಿಮೆ ಆಗಿದೆ. ಅದಕ್ಕೆ ಕಾರಣ ನಾನೇ? ಈ ಬಗ್ಗೆ ಯಾಕೆ ಚಂಪಾ ಚರ್ಚೆ ಮಾಡುವುದಿಲ್ಲ' ಎಂದು ಪ್ರಶ್ನಿಸಿದರು.
‘ಮೊಮ್ಮಕ್ಕಳು ಯಾವ ಮಾಧ್ಯಮದಲ್ಲಿ ಓದುತ್ತಿದ್ದಾರೆ ಎಂಬುದನ್ನು ಚಂಪಾ ಜನರಿಗೆತಿಳಿಸಲಿ. ನನಗೆ ಅವರಿಂದಪ್ರಮಾಣಪತ್ರ ಬೇಕಾಗಿಲ್ಲ. ಕನ್ನಡ ಭಾಷೆ ಉಳಿಸಿ, ಬೆಳೆಸಬೇಕು ಎಂಬುದೇ ಎಲ್ಲರ ಆಶಯ. ಸಮಸ್ಯೆಗೆಸರಿಯಾದ ಪರಿಹಾರ ಸೂಚಿಸಲಿ’ ಎಂದರು.
ಈ ಕುರಿತು ಪ್ರತಿಕ್ರಿಯಿಸಿರುವ ಚಂದ್ರಶೇಖರ ಪಾಟೀಲ, ‘ನನ್ನ ಮೊಮ್ಮಗನ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಆಗಿದೆ. ಬೇಕಾದರೆ ಮುಖ್ಯಮಂತ್ರಿ ಗುಪ್ತಚರ ಇಲಾಖೆ ಮೂಲಕ ಮಾಹಿತಿ ಪಡೆಯಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.