ADVERTISEMENT

ಶಿಕ್ಷಣ ಮಾಧ್ಯಮ: ಕುವೆಂಪು ಮಾತು ಇಂದಿಗೂ ಪ್ರಸ್ತುತ

1957ರಲ್ಲಿ ಧಾರವಾಡದಲ್ಲಿ ನಡೆದಿದ್ದ 39ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮಾತಿನ ಮೆಲುಕು

ಚೆನ್ನವೀರ ಕಣವಿ
Published 3 ಜನವರಿ 2019, 9:49 IST
Last Updated 3 ಜನವರಿ 2019, 9:49 IST
   

ಧಾರವಾಡ: ಕನ್ನಡ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎಂಬ ನೆಪವೊಡ್ಡಿ ಪ್ರಾಥಮಿಕ ಹಂತದಿಂದಲೇ ಒಂದು ಸಾವಿರ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಇದು ಮುಂದುವರಿದದ್ದೇ ಆದಲ್ಲಿ, ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಮಾತ್ರ ಉಳಿದು, ಕನ್ನಡ ಮಾಧ್ಯಮ ಶಾಲೆಗಳು ಅಳಿಯುವ ಅಪಾಯವಿದೆ.

ಇಂಥ ಸಂದರ್ಭದಲ್ಲಿ, 1957ರಲ್ಲಿ ಧಾರವಾಡದಲ್ಲಿ ನಡೆದ 39ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಷ್ಟ್ರಕವಿ ಕುವೆಂಪು ಅವರು ಮಾಡಿದ 44 ಪುಟಗಳ ಭಾಷಣದ ಪ್ರತಿಯೊಂದು ಅಂಶ ಇಂದಿಗೂ ಪ್ರಸ್ತುತವಾಗಿದೆ.

‘ಶಿಕ್ಷಣ ಅನ್ನುವುದು ಅನ್ನದ ಭಾಷೆಯಾಗಬೇಕು ಎಂಬುದು ಇಂದಿನ ಪರಿಸ್ಥಿತಿಯಾಗಿದೆ. ಆದರೆ ಜ್ಞಾನದ ದೀಕ್ಷೆಯಾಗಬೇಕು ಎಂಬುದನ್ನು ಮರೆತಿದ್ದೇವೆ’ ಎಂದು ಕುವೆಂಪು ಅಂದು ಹೇಳಿದ್ದರು.

ADVERTISEMENT

‘ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸಿದರೆ ವಿರೋಧವಿಲ್ಲ. ಆದರೆ ಇಂಗ್ಲಿಷ್ ಮಾಧ್ಯಮ ಅಗತ್ಯವಿಲ್ಲ’ ಎಂದು ಪ್ರತಿಪಾದಿಸಿದ್ದ ಕುವೆಂಪು ಅವರ ಮಾತು ಅಕ್ಷರಶಃ ಸತ್ಯ. ನಮ್ಮ ಎಲ್ಲಾ ಮಕ್ಕಳಿಗೂ ತಾರತಮ್ಯವಿಲ್ಲದ ಸಮಾನ ಶಿಕ್ಷಣ ಸಿಗುವಂತಾಗಬೇಕು. ಅದು ಇಂದಿನ ಅಗತ್ಯ. ಆದರೆ, ನಮ್ಮ ಕಾಲದ ದುರಂತವೆಂದರೆ ಗರಿಷ್ಠ ಮಟ್ಟದ ಸ್ವಹಿತಾಸಕ್ತಿ ಸಾಮಾಜಿಕ ಸಮಾನತೆಗೆ ತೀವ್ರ ನಿರಾಸಕ್ತಿಯಂತಿದೆ.

ಶಿಕ್ಷಣದಲ್ಲೂ ಇಂದು ಜ್ಞಾನ ಪರೀಕ್ಷೆ ನಡೆಯುತ್ತಿಲ್ಲ. ಬದಲಿಗೆ ಜ್ಞಾಪಕ ಶಕ್ತಿ ಮತ್ತು ಅದೃಷ್ಟದ ಪರೀಕ್ಷೆ ನಡೆಯುತ್ತಿದೆ ಎಂದು ಕುವೆಂಪು ಹೇಳಿದ್ದರು. ಆ ಪರಿಸ್ಥಿತಿ ಇಂದಿಗೂ ಬದಲಾಗಿಲ್ಲ. ಇದನ್ನು ಹೋಗಲಾಡಿಸಲು ಹೊಸ ಪ್ರಯತ್ನಗಳು ನಡೆಯುತ್ತಿವೆಯಾದರೂ ಅದು ಸಾಧ್ಯವಾಗದಿರುವುದು ದುರಂತ.

ಅಂದು ತಮ್ಮ ಭಾಷಣದಲ್ಲಿ ಮಹಾತ್ಮ ಗಾಂಧೀಜಿ ಅವರ ಮಾತನ್ನು ಉಲ್ಲೇಖಿಸಿದ್ದ ಕುವೆಂಪು, ‘ರಾಷ್ಟ್ರೀಯ ವ್ಯವಹಾರಗಳಿಗೆ ಹಿಂದಿಯನ್ನೂ, ಪ್ರಾದೇಶಿಕ ವ್ಯಾವಹಾರಿಕ, ವೈಜ್ಞಾನಿಕ, ಶೈಕ್ಷಣಿಕ, ಅಧ್ಯಾತ್ಮಿಕಾದಿ ಸಕಲಕ್ಕೂ ಪ್ರಾದೇಶಿಕ ಭಾಷೆಯನ್ನು ಅವಶ್ಯಕವಾಗಿ ಬಳಸಬಹುದು. ಕೆಲವೇ ವ್ಯಾವಹಾರಿಕ, ವೈಜ್ಞಾನಿಕ ವಿಷಯಗಳಿಗೆ ಇಂಗ್ಲಿಷ್ ಬಳಸಬಹುದು. ಇದು ಸರ್ವಸಮರ್ಪಕ ಕಾರಣ. ಇದನ್ನು ಮುಂದುವರಿಸಬೇಕು’ ಎಂದಿದ್ದರು.

‘ಹೆಚ್ಚು ಭಾಷೆಗಳನ್ನು ಕಲಿಯುವ ಸಾಮರ್ಥ್ಯ ಮತ್ತು ಅವಕಾಶ ಇರುವವರು ಅದನ್ನು ಕಲಿತು, ಅದರ ಸಾರ– ಸರ್ವಸ್ವವನ್ನೂ ದೇಶೀಯ ಭಾಷೆಗೆ ಇಳಿಸಲಿ’ ಎಂಬ ಗಾಂಧೀಜಿ ಮಾತನ್ನು ಕುವೆಂಪು ಬೆಂಬಲಿಸಿದ್ದರು.ಈ ದೇಶ ಸ್ವತಂತ್ರವಾದ ಕೂಡಲೇ ಶಿಕ್ಷಣ ಮಾಧ್ಯಮದ ಪ್ರಶ್ನೆ ಪ್ರಶ್ನೆಯಾಗಿ ಉಳಿಯುವುದಿಲ್ಲ ಎಂದು ಗಾಂಧೀಜಿ ಭಾವಿಸಿದ್ದರು. ಆದರೆ ಇಂದಿಗೂ ಅದು ಎಲ್ಲಾ ರಾಜ್ಯಗಳಿಗೆ ಸವಾಲಾಗಿದೆ.

ರಾಷ್ಟ್ರದ ಕುರಿತು ಮಾತನಾಡಿದ್ದ ಕುವೆಂಪು, ‘ಭಾರತವನ್ನು ಸೆಕ್ಯೂಲರ್ ಸ್ಟೇಟ್‌ ಎಂದು ಸಾರಿದ್ದೇವೆ. ಅದರ ಅರ್ಥ ಧರ್ಮ ಬಾಹಿರ, ಮತ ವಿಶ್ಲೇಷಕ, ನಾಸ್ತಿಕ ಅಥವಾ ಚಾರ್ವಾಕ ಎಂದಲ್ಲ; ಸಮನ್ವಯ ರಾಷ್ಟ್ರ ಎಂಬುದು. ಎಲ್ಲಾ ಮತಗಳು ಕರ್ತವ್ಯದೆಡೆ ಕರೆದೊಯ್ಯುತ್ತವೆಯೇ ಹೊರತು ಒಂದು ಮತವನ್ನು ಮತ್ತೊಂದು ನಿಗ್ರಹಿಸುವ ಕಾರಣವೇ ಇಲ್ಲ’ ಎಂದಿದ್ದರು.

ರಿಪಬ್ಲಿಕ್ ಎಂದು ರಾಷ್ಟ್ರವನ್ನು ಘೋಷಿಸಿದ್ದೇವೆ. ಸರ್ವಪ್ರಜಾಧಿಪತ್ಯ ಎಂದಿದ್ದೇವೆ. ಅದರ ಗುರಿ ಸರ್ವೋದಯ. ಅಂದರೆ ಎಲ್ಲರ ಏಳಿಗೆ. ಎಲ್ಲರೂ ಸಮ, ಎಲ್ಲರೂ ಸಮಾನ. ಸಮತೆ ಮತ್ತು ಸಮದರ್ಶನ ಭಾರತೀಯ ಧರ್ಮ ಜೀವನದ ಅಡಿಗಲ್ಲು ಎಂದು ಒತ್ತಿ ಹೇಳಿದ್ದರು.ಇದನ್ನು ಇಂದು ಪುನರ್‌ಮನನ ಮಾಡಿಕೊಳ್ಳಬೇಕಿದೆ. ಅವರ ದೂರದೃಷ್ಟಿಯ ಮಾತುಗಳು ಇಂದು ಓದಿದರೂ ಅವು ಎಷ್ಟು ಮಹತ್ವದ್ದು ಎಂದೆನಿಸದಿರದು.

ಲೇಖಕರಿಗೆ ಉದಾಹರಣೆ ಮೂಲಕ ಕಿವಿಮಾತು ಹೇಳಿದ್ದ ಅವರು, ‘ಹಾಲು ಕೊಡುವ ಹಸು ಹೊಲಗದ್ದೆಗಳಲ್ಲಿ, ಕಾಡು ಮೇಡುಗಳಲ್ಲಿ, ಹಸಿರು– ಚಿಗುರು, ಸೊಪ್ಪು, ಹಣ್ಣು ತಿಂದು ಕೊಟ್ಟಿಗೆಯಲ್ಲಿ ಬಂದು ಮಲಗಿ, ಮೆಲುಕು ಹಾಕಿ ತಮ್ಮ ಕರುವಿಗೆ ಕೆಚ್ಚಲು ಸೊರಸುವಂತೆ, ಸಾಹಿತಿಯಾದವನು ತನ್ನ ಬುದ್ಧಿಭಾವಮಯವಾದ ಚಿತ್ಕೋಶವನ್ನು ಅಧ್ಯಯನದಿಂದ, ವಿದ್ವಜನ್ನರ ಸಂಪರ್ಕದಿಂದ, ಲೋಕಾನುಭವದಿಂದ ಶ್ರೀಮಂತವಾಗಿಸಿಕೊಳ್ಳಬೇಕು. ಪುಸ್ತಕ ಓದಿನಿಂದ ಚಿತ್ ತಪಸ್‌ ಶಕ್ತಿ ವಶವಾಗುತ್ತದೆ. ಅದರಿಂದ ಉತ್ತಮ ಸಾಹಿತ್ಯ, ಉತ್ಕೃಷ್ಟವಾದ ರಸಕೃಷಿ ಹೊರಹೊಮ್ಮಲಿದೆ’ ಎಂದಿದ್ದರು.

ಶ್ರೀರಾಮಕೃಷ್ಣ ಪರಮಹಂಸರು, ಮಹಾತ್ಮ ಗಾಂಧಿ, ಅರವಿಂದರೇ ಸಮನ್ವಯ ದೃಷ್ಟಿ ಜನರ ನಿತ್ಯ ಜೀವನದ ಭಾಗವಾಗುವಂತೆ ಲೇಖಕರು ಶ್ರಮಿಸಬೇಕು ಎಂದು ಕರೆ ನೀಡಿದ್ದರು.

ವಾಗ್ದೇವಿಯ ಮಕ್ಕಳಾದ ಸಹೋದರ, ಸಹೋದರಿಯರೇ ಎಂದು ಭಾಷಣದ ಆರಂಭಿಸಿದ್ದ ಕುವೆಂಪು ಅವರ ಭಾಷಣಕ್ಕೆ ಕಾವ್ಯ ಸ್ಪರ್ಶವಿತ್ತು. ‘ಅನಿಕೇತನ’ ಕವಿತೆಯನ್ನು ಭಾವಪೂರ್ಣವಾಗಿ ಓದಿ ಭಾಷಣ ಮುಗಿಸಿದ್ದರು.

ಸಿಹಿಮೊಗ್ಗೆ ಅರಳಲಿ...

1943ರಲ್ಲಿ ಶಿವಮೊಗ್ಗದಲ್ಲಿ ನಡೆದಿದ್ದ 27ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಡಾ. ದ.ರಾ.ಬೇಂದ್ರೆ, ತಮ್ಮ ಭಾಷಣದಲ್ಲಿ ‘ಸಿಹಿಮೊಗ್ಗೆ ಅರಳಲಿ, ಎಲ್ಲೆಡೆ ಸುಗಂಧ ಪಸರಿಸಲಿ’ ಎಂದಿದ್ದರು. ತಮ್ಮ ಭಾಷಣವನ್ನು ಗಂಗಾವತರಣದ ‘ಇಳಿದು ಬಾ ತಾಯಿ ಇಳಿದು ಬಾ’ ಎಂಬ ಕವಿತೆ ಮೂಲಕ ಕೊನೆಗೊಳಿಸಿದ್ದರು.

ಬೇಂದ್ರೆ ಅವರ ಧಾರವಾಡದಲ್ಲಿ ನಡೆದ 39ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕುವೆಂಪು, ‘ಸಾಂಸ್ಕೃತಿಕ ಕೇಂದ್ರಗಳಲ್ಲೇ ಪ್ರಧಾನವಾದದ್ದು ಧಾರವಾಡ’ ಎಂದಿದ್ದರು. ತಮ್ಮ ಅನಿಕೇತನ ಕವಿತೆ ಓದುವ ಮೂಲಕ ತಮ್ಮ ಭಾಷಣ ಕೊನೆಗೊಳಿಸಿದ್ದರು. ಸಾಹಿತ್ಯಾಸಕ್ತರಿಗೆ ಈ ಎರಡೂ ಘಟನೆಗಳು ಇಂದಿಗೂ ಸಂತಸ ಮೂಡಿಸುವಂತಹವು.

ಅಂದಿನ ಸಮ್ಮೇಳನದಲ್ಲಿ ಪೂರ್ಣಕುಂಭ ಸ್ವಾಗತವನ್ನು ಕುವೆಂಪು ಅವರು ಅತ್ಯಂತ ನಿಷ್ಠುರವಾಗಿ ನಿರಾಕರಿಸಿದ್ದರು. ಇದನ್ನು ತಮ್ಮ ಪತ್ರದಲ್ಲಿಯೂ ಸ್ಪಷ್ಟವಾಗಿ ಉಲ್ಲೇಖಿಸಿದ್ದರು.

(ಡಾ. ಚೆನ್ನವೀರ ಕಣವಿ-ಹಿರಿಯ ಕವಿ ಮತ್ತು 39ನೇ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿಯಾಗಿದ್ದರು)

ನಿರೂಪಣೆ: ಇ.ಎಸ್.ಸುಧೀಂದ್ರ ಪ್ರಸಾದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.