ಹಿಟ್ಲರ್ ಮೊದಲು ತುಂಬು ಮೀಸೆ ಬಿಟ್ಟಿರುತ್ತಿದ್ದ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇಂದು ತುಂಬು ಮೀಸೆ ಇರುವ ಆತನ ಒಂದೇ ಒಂದು ಪಟ ಈವರೆಗೂ ಯಾರಿಗೂ ಸಿಕ್ಕಿಲ್ಲ. ಅವನು ಹಿಂದೊಮ್ಮೆ ತುಂಬು ಮೀಸೆ ಬಿಟ್ಟಿದ್ದ ಎನ್ನುವುದನ್ನು ನಂಬಿರಿ. ತನ್ನ ಹರೆಯದ ದಿನಗಳಲ್ಲಿ ಹಿಟ್ಲರನು ಪ್ಯಾರಿಸ್ಸಿಗೆ ಹೋಗಿದ್ದ. ಅಲ್ಲಿ ಅವನು ನಿದ್ರಿಸುತ್ತಿದ್ದಾಗ ಅದ್ಯಾರೋ ಅವನ ಮೀಸೆ ತುಂಡರಿಸಿಬಿಟ್ಟರು. ಹಿಟ್ಲರನಿಗೆ ಅದು ಗೊತ್ತೇ ಆಗಿರಲಿಲ್ಲ. ಅವನನ್ನು ನೋಡಿದವರು ಮುಗುಳ್ನಗುತ್ತಿದ್ದರು. ಅದು ಹಿಟ್ಲರನಿಗೆ ಹಿಡಿಸುತ್ತಿತ್ತು. ಅವನು ಆ ಕಾಲದಲ್ಲಿ ಹಾಸ್ಯಗಾರನಾಗಲು ಪ್ರಯತ್ನಿಸಿದ್ದೂ ನಿಜ. ಆದರೆ ಅವನು ತನ್ನ ಪ್ರಯತ್ನದಲ್ಲಿ ಯಶ ಕಾಣಲಿಲ್ಲ.
ಜರ್ಮನಿಗೆ ಮರಳಿದ ನಂತರ ತನ್ನ ಮೀಸೆ ತುಣುಕಾಗಿ ಉಳಿದದ್ದು ಗೊತ್ತಾಯಿತು. ನಾನು ಇಡೀ ಜಗತ್ತನ್ನು ಗೆಲ್ಲದವರೆಗೆ ಎಂದೂ ತುಂಬು ಮೀಸೆ ಬೆಳೆಸುವುದಿಲ್ಲವೆಂದು ಅವನು ಪ್ರತಿಜ್ಞೆ ಮಾಡಿದ.
ಜರ್ಮನಿಯ ಮಹಾನ್ ನಾಯಕನಾದ ಮೇಲೆ ಅವನ ತುಂಡುಮೀಸೆ ರಾಷ್ಟ್ರೀಯ ಸ್ಮಾರಕವೇನೋ ಎನ್ನುವಂತೆ ಆ ಕುರಿತು ಗಮನ ಹರಿಸಲಾಯಿತು. ಪ್ರತಿ ದಿನವೂ ಮೀಸೆಯ ರೋಮಗಳನ್ನು ಎಣಿಸಲಾಗುತ್ತಿತ್ತು. ಅದರ ಬಣ್ಣವನ್ನು ಪರೀಕ್ಷಿಸಲಾಗುತ್ತಿತ್ತು. ಅದರ ಉದ್ದ ಹಾಗೂ ದಪ್ಪವನ್ನು ಅಳೆಯಲಾಗುತ್ತಿತ್ತು. ರಾಷ್ಟ್ರದ ಗ್ಯಾಜೆಟ್ಟಿನಲ್ಲಿ ಅದನ್ನು ಪ್ರಕಟಿಸಲಾಗುತ್ತಿತ್ತು.
ಒಂದು ದಿನ ಹಿಟ್ಲರನ ಮೀಸೆಯ ಒಂದು ರೋಮ ಕಡಿಮೆ ಇದೆಯೆಂದು ತಿಳಿದುಬಂದಿತು. ಆಗ ಏನಾಯಿತು? ಅಲ್ಲೋಲಕಲ್ಲೋಲವಾಗಿಬಿಟ್ಟಿತು. ಅದೊಂದು ಮಿತ್ರ ರಾಷ್ಟ್ರಗಳ ಸಂಚೆಂದು ಪ್ರಕಟಿಸಲಾಯಿತು. ಇದರಿಂದಾಗಿ ಜರ್ಮನಿಯ ಅಪಮಾನವಾಯಿತೆಂದು ಭಾವಿಸಲಾಯಿತು. ದೇಶದ ಸ್ವಾತಂತ್ರ‍್ಯ ಹಾಗೂ ಏಕತೆಗೆ ಆ ಘಟನೆಯೇ ಭಾರಿ ಅಪಾಯದ ಸಂಕೇತವೆಂದು ಪರಿಗಣಿಸಲಾಯಿತು. ವೈರಿಗಳು ಹಿಟ್ಲರನ ಮೀಸೆವರೆಗೂ ನುಗ್ಗಬಲ್ಲರೆಂದರೆ ಅವನ ಕುತ್ತಿಗೆಗೆ ಕೈಹಾಕಲು ಅವರಿಗೆ ಅದೆಷ್ಟು ಸಮಯ ಬೇಕು ಎಂದು ಹೇಳಲಾಯಿತು.
ಹಿಟ್ಲರ್ ಎಂದರೆ ಜರ್ಮನಿ ಹಾಗೂ ಜರ್ಮನಿ ಎಂದರೆ ಹಿಟ್ಲರ್ ಎನ್ನುವಂತಾಗಿಬಿಟ್ಟಿತು. ಅವನಂತಹ ನಾಯಕ ಹಿಂದೆಂದೂ ಆಗಿ ಹೋಗಿರಲಿಲ್ಲ, ಮುಂದೆಯೂ ಬರಲಾರ.
ಹಿಟ್ಲರನಂತೂ ಜರ್ಮನಿಯ ಹೆಸರನ್ನು ಬದಲಾಯಿಸಿ ಹಿಟ್ಲರಿಸ್ತಾನ್ ಮಾಡಬಯಸಿದ.
ಬರ್ಲಿನ್ನಿನಲ್ಲಿ ಮಿತ್ರ ರಾಷ್ಟ್ರಗಳ ರಾಯಭಾರಿಗಳನ್ನು ಕರೆಯಿಸಿ ಅವರಿಗೆ ಖಡಕ್ ಎಚ್ಚರಿಕೆ ನೀಡಲಾಯಿತು. ಆ ರಾತ್ರಿ ದೇಶವನ್ನು ಉದ್ದೇಶಿಸಿ ಅವನು ಮಾಡಿದ ಭಾಷಣ ಇತಿಹಾಸದಲ್ಲಿ ದಾಖಲಾಯಿತು.
ಭಾವುಕತೆ, ಆಕ್ರೋಶ, ದೇಶದ ಗೌರವಶಾಲಿ ಇತಿಹಾಸ ಮತ್ತು ಪ್ರತಿಕಾರಭರಿತ ಹಿಟ್ಲರನ ಭಾಷಣವು ದೇಶವನ್ನು ತತ್ತರಿಸುವಂತೆ ಮಾಡಿತು.
ಜರ್ಮನಿಯ ಒಂದೊಂದು ಮಗುವೂ ಅರಚತೊಡಗಿತು – ಸೇಡು ತೀರಿಸಿಕೊಂಡೇ ತೀರುತ್ತೇವೆ. ನಮ್ಮ ಗೌರವವನ್ನು ಮರಳಿ ಪಡೆಯುತ್ತೇವೆ. ನಾವು ಮಹಾನ್ ಆಗಿದ್ದೇವೆ, ಶ್ರೇಷ್ಠರಾಗಿದ್ದೇವೆ, ಸರ್ವೋತ್ತಮರಾಗಿದ್ದೇವೆ... ಜಗತ್ತಿನಲ್ಲಿ ನಮಗೆ ಯಾರೂ ಸಮ ಇಲ್ಲ. ಯುದ್ಧ...ಯುದ್ಧ... ಯುದ್ಧ...
ಮೀಸೆಯ ರೋಮ ಕಳುವಾದದ್ದರ ವಿರುದ್ಧ ಆರಂಭಿಸಲಾದ ಅಭಿಯಾನಕ್ಕೆ ‘ಆಪರೇಶನ್ ಗೌರವ’ ಎಂದು ಹೆಸರಿಸಲಾಯಿತು.
ಆಪರೇಶನ್ ಗೌರವದ ಅಂಗವಾಗಿ ಎರಡನೆಯ ವಿಶ್ವಯುದ್ಧ ಆರಂಭವಾಯಿತು. ಇಪ್ಪತ್ತು ಲಕ್ಷ ಯಹೂದಿಯರ ಕಗ್ಗೊಲೆ ಮಾಡಲಾಯಿತು. ಲಕ್ಷಾಂತರ ನಾಗರಿಕರ ಕೊಲೆಯಾಯಿತು. ಎರಡು ಕೋಟಿ ಸೈನಿಕರ ಹತ್ಯೆಯಾಯಿತು. ಕೋಟ್ಯಾಂತರ ಮೌಲ್ಯದ ಆಸ್ತಿ ನಷ್ಟವಾಯಿತು. ಜಗತ್ತಿನಾದ್ಯಂತ ಹಾಹಾಕಾರ ಉಂಟಾಯಿತು.
ಕೊನೆಗೆ ಜರ್ಮನಿ ಯುದ್ಧದಲ್ಲಿ ಸೋತುಬಿಟ್ಟಿತು. ದೇಶವೇ ಯುದ್ಧದ ಭಗ್ನಾವಶೇಷಗಳ ರಾಶಿಯಾಗಿ ಮಾರ್ಪಟ್ಟಿತು.
ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡ.
ಅನಂತರ ಮತ್ತೆ ಹಿಟ್ಲರನ ಮೀಸೆಯ ರೋಮಗಳ ಎಣಿಕೆ ಮಾಡಿದಾಗ ಮೀಸೆಯ ರೋಮಗಳ ಎಣಿಕೆ ಸರಿ ಇದೆಯೆಂದು ತನಿಖೆಯಿಂದ ತಿಳಿದು ಬಂದಿತು. ಒಂದೇ ಒಂದು ರೋಮ ಕಡಿಮೆ ಇದ್ದಿರಲಿಲ್ಲ.
ಆದರೆ ಎರಡನೆಯ ವಿಶ್ವಯುದ್ಧ ಮುಗಿದುಬಿಟ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.