ತಾನು ಮಾಡಿದ ತಪ್ಪು ತನಗೇ ಅರಿವಾಗುವ ಹೊತ್ತಿಗೆ ತುಂಬಾ ತಡವಾಗಿ ಹೋಗಿತ್ತು. ಈಗ ತಾನು ಹೀಗೆ ತೋರಿಸಿಕೊಳ್ಳುವುದೇ ಸರಿಯೇನೋ ಎಂದು ಅನಿಸುತಿತ್ತು ಬ್ರಹಾನಂದ ಸ್ವಾಮಿಗಳಿಗೆ. ಇಲ್ಲ, ಇದು ನನ್ನ ತಪ್ಪಲ್ಲ ಎಂದು ಕಿರುಚಬೇಕು ಎನಿಸುತಿತ್ತು. ಇದು ನೀವು ಮಾಡಿದ್ದು, ಸಮಾಜವೇ ನೀನು ಮಾಡಿದ್ದು. ನನ್ನ ಕೋಮಲ ಮನಸ್ಸನ್ನು ಇದ್ದಕಿದ್ದಂತೆ ಗಂಭೀರ ಮಾಡಿದ್ದು ಎಂದು ಸಾರಿ ಹೇಳಬೇಕು ಎನಿಸುತಿತ್ತು.
ಇಲ್ಲ,ಈ ಬದುಕು ತನಗೆ ಬೇಡ ಎಂದು ಎಷ್ಟೋ ಸಾರಿ ಅವರಿಗೆ ಅನಿಸಿದ್ದುಂಟು. ಇದು ಬೇಡದ ಬದುಕು, ಸತ್ತ ಬದುಕು, ತಾನು ಬಯಸಿದ ಬದುಕಲ್ಲ ಅನಿಸುತಿತ್ತು. ಬೇಡದ ಬದುಕನ್ನು ಬದುಕುವುದೆಂದರೆ ಸತ್ತಂತೆಯೇ ಸರಿ ಎಂದು ವಿಲಿ ವಿಲಿಗುಡುತಿದ್ದರು. ಸುಂದರ ಸಂಸಾರಗಳನ್ನು, ಮುದ್ದಾದ ಮಕ್ಕಳನ್ನು ಕಂಡಾಗ ಅವರ ಹೃದಯ ಹಿಂಡಿದಂತಾಗುತಿತ್ತು. ತನಗೂ ಇಂಥದೊಂದು ಬೇಕು, ಇದೇ ಜೀವನ ಎಂದು ಅವರ ಮನ, ಹೃದಯ ಚೀರಿಡುತ್ತಿದ್ದವು.
ಬ್ರಹ್ಮಾನಂದ ಎರಡನೇ ಪಿಯುಸಿ ಓದುತ್ತಿದ್ದಾಗಲೇ ಅವನಿಗೆ ಕವನ, ಗೀತೆ ಬರೆಯುವುದು ಕರಗತವಾಗಿತ್ತು. ಆಗಲೇ ಅವನ ಹೃದಯ ಭಾವನೆಗಳ ಆಗರವಾಗಿತ್ತು. ಬೆಳದಿಂಗಳನ್ನೂ, ಕಾಡನ್ನೂ, ನದಿಯನ್ನೂ, ಕಂಡು ಅಳುತಿದ್ದ. ನೋಡುತ್ತಾ ಭಾವ ಸಮಾಧಿ ತಲಪುತ್ತಿದ್ದ. ಯಾರಾದರೂ ಆ ಸ್ಥಿತಿಯಲ್ಲಿ ಅವನನ್ನು ನೋಡಿದಾಗ ಧ್ಯಾನ ಮಾಡುತ್ತಿದ್ದಾನೆ ಅನಿಸುತಿತ್ತು. ಒಂದೊಂದು ಸಲ ಎಲ್ಲೆಂದರಲ್ಲಿ ತನ್ನ ಕಲ್ಪನೆ ಗರಿಗೆದರಿ ಹಾಯಾಗಿ ಹಾಗೇ ಧ್ಯಾನ ಸ್ಥಿತಿಯಲ್ಲಿ ನಿಂತು ಬಿಡುತಿದ್ದ, ಕುಳಿತು ಬಿಡುತಿದ್ದ. ಹಕ್ಕಿ ಹಾರಾಟವಾಗಲಿ, ಮಳೆಯಾಗಲಿ ಅವನಿಗೆ ಯಾವುದೋ ಆವೇಶ ಕೊಡುತಿದ್ದವು. ತಾನೇ ಹಕ್ಕಿಯಾದಂತೆ, ಮಳೆಯಾದಂತೆ ಮೈಮರೆಯುತ್ತಿದ್ದ. ಈ ಸ್ಥಿತಿಯಲ್ಲಿಯೇ ಅವನು ಪದವಿ ತಲುಪಿದಾಗ ಅವನ ಯೌವನ ಅವನಿಗೆ ಬೇರೆ ತೆರೆನಾದ ಕಲ್ಪನೆ ಕಟ್ಟಲು ಕಲಿಸಿಕೊಡಲಾರಂಭಿಸಿತು. ಪ್ರಕೃತಿ ಸೌಂದರ್ಯದಲ್ಲಿ, ಹೆಣ್ಣಿನ ಸೌಂದರ್ಯ ಒಂದು ಅದ್ಭುತವಾದದ್ದು ಎಂದು ಅದು ಹೇಳತೊಡಗಿತು. ಹೆಣ್ಣಿನ ಬಗ್ಗೆ ಕುತೂಹಲ ತಳೆದು ಮನಸ್ಸು ಅದರ ರುಚಿ ಕಾಣಲಾರಂಬಿಸಿತು.
ಸುಂದರ ಹುಡುಗಿಯರ ಕಂಡಾಗ ತನ್ನ ಕಲ್ಪನೆಯನ್ನು ಹರಿತಗೊಳಿಸುತಿದ್ದ. ಅವರಲೊಬ್ಬರನ್ನು ಮದುವೆಯಾಗಿ, ಮಕ್ಕಳಾಗಿ ತಾನು ಸಾಯುವವರೆಗೂ ನಿಂತೂ, ಕುಳಿತೂ ಕಲ್ಪಿಸಿಕೊಳ್ಳುತಿದ್ದ. ಅದು ಅವನಿಗೆ ಅತೀ ಸುಖ ಕೊಡುತಿತ್ತು. ಅವರ ನಗು, ಅವರ ನಡೆ, ಮಾತು ಅವನಿಗೆ ಬೇರೆಯದೇ ದೃಷ್ಟಿ ಕೊಡುತಿದ್ದವು. ಈ ಸ್ಥಿತಿಯಲ್ಲಿ ಅವನ ಕಲ್ಪನಾ ಲಹರಿ ಹರಿದು ಅನೇಕ ಪ್ರೇಮಗೀತೆಗಳ ಕಟ್ಟಲು ಕಾರಣವಾಗುತ್ತಿದ್ದವು.
ಅನೇಕ ಪ್ರಕೃತಿ ಸೌಂದರ್ಯಗಳ ಜೊತೆಗೆ ಹೆಣ್ಣಿನ ಸೌಂದರ್ಯವೂ ಸೇರಿ ಅವನು ಧ್ಯಾನಿಸುತ್ತಾ ನಿಂತುಕೊಳ್ಳುವುದು ಮತ್ತೂ ಹೆಚ್ಚಾಯಿತು. ಇದರಿಂದ ಅವನ ತಂದೆ ರಾಮಜೋಯಿಸರಿಗೂ, ತಾಯಿ ಸೀತಮ್ಮನವರಿಗೂ ಗಾಬರಿಯಾಗತೊಡಗಿತು. ಮಗನಿಗೆ ಮೂರ್ಛೆರೋಗವಿರಬಹುದೇ ಎಂದು ಅನಿಸುತಿದ್ದರೂ ಅವನ ಮುಖದ ಕಳೆ, ಇದ್ದಕಿದ್ದಂತೆಯೇ ಸಂತೋಷದಿಂದ ನಡೆದಾಡುವುದನ್ನು ನೋಡಿ ಇಲ್ಲಾ, ಇರಲಾರದು ಅನಿಸುತಿತ್ತು. ಇದು ದಿನೇ ದಿನೇ ಹೆಚ್ಚಾದಂತೆ ಮತ್ತೂ ಗಾಬರಿಯಾಗಿ ಊರಿನ ಹಳೇಮಠದ ಸದಾನಂದ ಸ್ವಾಮೀಜಿಗಳಿಗೆ ತೋರಿಸುವುದೇ ಸರಿ ಎನಿಸಿತು. ಸದಾನಂದ ಸ್ವಾಮೀಜಿ ಊರಿನ ಧನ್ವಂತ್ರಿಗಳೂ ಆಗಿದ್ದರು. ಜನರಿಗೆ ಬಂದ ಕಾಯಿಲೆ ಕಸಾಲೆ//ಗಳಿಗೆ ಆಯುರ್ವೇದ ಔಷಧಿ ನೀಡಿ ಗುಣಪಡಿಸುತಿದ್ದರು. ಇದೆಲ್ಲದ ಜನರ ಕಷ್ಟಗಳು, ಸಮಸ್ಯೆಗಳಿಗೆ ಉದಾರ ಸಲಹೆಗಳನ್ನು ನೀಡಿ ಉಪಯೋಗವಾಗಿದ್ದರು.
ಬ್ರಹ್ಮಾನಂದನನ್ನು ಸ್ವಾಮೀಜಿ ಹತ್ತಿರ ಕರೆದೊಯ್ದಾಗ ಸ್ವಾಮೀಜಿ ಅವನನ್ನೇ ನೋಡಿದರು. ಆಗ ತಾನೇ ಯೌವನಕ್ಕೆ ಕಾಲಿಟ್ಟು ಅರಳುತ್ತಿರುವ ದೇಹ, ಚಿಗುರುಮೀಸೆ ಮುಖಕ್ಕೆ ಕಳೆಕೊಟ್ಟಿತ್ತು. ಅವನ ಮುಖದಲ್ಲಿದ್ದ ತೇಜಸ್ಸನ್ನು ನೋಡಿ ಅವರ ಕಣ್ಣುಗಳು ಮಿನುಗಿದವು. ತಾನು ಹುಡುಕುತಿದ್ದ ರತ್ನ ಸಿಕ್ಕಿತು ಎನಿಸಿತು. ಬ್ರಹ್ಮಾನಂದನನ್ನು ಹತ್ತಿರ ಕರೆದು ಮೈದಡವಿ ಅವನನ್ನು ಮೆದುವಾಗಿ ಮಾತನಾಡಸಿದರು. ರಾಮಾಜೋಯಿಸರನ್ನು ಮರುದಿನ ಬರುವಂತೆ ತಿಳಿಸಿದರು.
ಸದಾನಂದ ಸ್ವಾಮೀಜಿಗೆ ಆಗಲೇ ವಯಸ್ಸಾಗಿದ್ದು ತನ್ನ ನಂತರ ಮಠವನ್ನು ಸುಸೂತ್ರವಾಗಿ ನಡೆಸುವುದಕ್ಕೆ ಉತ್ತರಾಧಿಕಾರಿಯನ್ನು ಹುಡುಕುತಿದ್ದರು. ಸ್ವಾಮೀಜಿಗೆ ಬರೀ ಸಂಸ್ಕೃತ ತಿಳಿದಿದ್ದರೆ ಸಾಲದು, ಅವನು ಸುಂದರನೂ, ತೇಜಸ್ವಿಯೂ ಆಗಿರಬೇಕೆಂದು ತಿಳಿದಿದ್ದರು. ಏನಿಲ್ಲದಿದ್ದರೂ ‘ಗ್ಲಾಮರ್’ ಇರಬೇಕೆಂಬುದು ಅವರ ಅಭಿಮತ. ಮನುಷ್ಯರು ಮೊದಲು ಸೋಲುವುದು ಬಾಹ್ಯ ಸೌಂದರ್ಯಕ್ಕೆ ಎಂದು ಅವರಿಗೆ ತಿಳಿದಿದ್ದೇ ಆಗಿತ್ತು. ಇವೆಲ್ಲವೂ ಇರುವ ವ್ಯಕ್ತಿ ಅವರಿಗೆ ದೊರೆತಾಗಿತ್ತು, ಅವನ ತಂದೆ, ತಾಯಿಯನ್ನು ಒಪ್ಪಿಸುವುದೇ ಈಗಿರುವ ದೊಡ್ಡ ಸಮಸ್ಯೆ ಎಂದುಕೊಂಡರೂ, ಮಹಾ ದೈವಭಕ್ತರಾದ ಅವರಿಗೆ ತಮ್ಮ ಮಗ ಸ್ವಾಮೀಜಿಯಾಗುವುದು ಸಂತೋಷವೇ ತರುತ್ತದೆ ಎಂದುಕೊಂಡರು.
ರಾಮಾಜೋಯಿಸರಿಗೆ ಮತ್ತು ಸೀತಮ್ಮನವರಿಗೆ ಸ್ವಾಮೀಜಿ ಮಾತನ್ನು ಕೇಳಿ ಬಹಳ ಸಂತೋಷವಾಯಿತು. ತಮ್ಮ ಮಗ ಈ ಸುತ್ತಮುತ್ತಲ ಪ್ರದೇಶಕ್ಕೆಲ್ಲಾ ಕೀರ್ತಿ ವಂತನಾಗುತ್ತಾನೆಂದು ಸಂತೋಷಪಟ್ಟರು.
ತನ್ನನ್ನು ಸ್ವಾಮೀಜಿ ಮಾಡ ಹೊರಟ ಸಂಗತಿ ಕೇಳಿ ಬ್ರಹ್ಮಾನಂದನಿಗೆ ದಿಗ್ಭ್ರಮೆಯಾಯಿತು. ಸ್ವಾಮೀಜಿಯಾದರೆ ಬ್ರಹ್ಮಚಾರಿಯಾಗಿರಬೇಕೆಂದೂ, ಹಲವು, ಹಲವಾರು ಕಟ್ಟಳೆಗಳನ್ನು ಪಾಲಿಸಬೇಕೆಂದೂ ಅವನಿಗೆ ತಿಳಿದಿತ್ತು. ಇದು ತನ್ನ ಮನಸೊಪ್ಪದ, ದೇಹವೊಪ್ಪದ ಕೆಲಸ, ತನಗೆ ಇದು ಬೇಡ ಎಂದು ನಿರ್ಧರಿಸಿಕೊಳ್ಳುವಷ್ಟರಲ್ಲಿ ತಡವಾಗಿಹೋಗಿತ್ತು. ಆಗಲೇ ಸ್ವಾಮೀಜಿ ತನ್ನ ಉತ್ತರಾಧಿಕಾರಿಯನ್ನು ತನ್ನ ಭಕ್ತರಲ್ಲಿ ಪ್ರಚುರಪಡಿಸಿದ್ದರು. ಜನರೆಲ್ಲಾ ಆಗಲೇ ಅವನನ್ನು ಗುರುತಿಸಲು ತೊಡಗಿದ್ದರು. ಅವನು ದಾರಿಯಲ್ಲಿ ಸಿಗುತಿದ್ದಾಗ ನಮಸ್ಕಾರ ಮಾಡುತಿದ್ದರು. ಎಲ್ಲಾದರೂ ಓಡಿಹೋಗೋಣ ಅನಿಸುತಿತ್ತು. ಅದು ಅನಿಸಿಕೆ ಅಷ್ಟೆ. ತಂದೆ–ತಾಯಿಯಿಂದ ದೂರವಾಗಿ ಬಾಳುವ ರೀತಿ ಅವನಿಗೆ ತಿಳಿದಿರಲಿಲ್ಲ.
ಒಂದು ದಿನ ಅವನಿಗೆ ಬ್ರಹ್ಮೋಪದೇಶವಾಗಿ ಹೋಯಿತು. ಮಠಕ್ಕೆ ಅಧಿಕೃತವಾಗಿ ಸೇರಿಹೋದ. ಅಂದಿನಿಂದ ಅವನಿಗೆ ಪಾಲಿಸಬೇಕಾದ ನಿಯಮಗಳ ಉಪದೇಶವಾಗ ತೊಡಗಿತು, ಸ್ವತಃ ಸ್ವಾಮೀಜಿಯೇ ಎಲ್ಲಾ ನಿಯಮಗಳನ್ನು ಹೇಳತೊಡಗಿದರು. ಮೊದಲೇ ಸಂಸ್ಕೃತ ತಿಳಿದಿದ್ದರಿಂದ, ಅನೇಕ ಸಂಸ್ಕೃತ ಗ್ರಂಥಗಳನ್ನು ಓದಲು ಕೊಟ್ಟರು. ಅನೇಕ ಶೃಂಗಾರ ಕಾವ್ಯಗಳನ್ನು ಓದಿದ ಅವನಿಗೆ ವೈರಾಗ್ಯ ಶತಕವನ್ನು ಓದಬೇಕಾಯಿತು. ಮುದುಕರು ಓದಬೇಕಾದ ಪುಸ್ತಕಗಳನ್ನು ಓದಿಸಿದರು. ಇಂತಹ ಸಾವಿರ ಪುಸ್ತಕಗಳನ್ನು ಓದಿದರೂ ತಾನು ಬದಲಾಗಲಾರೆ ಅನಿಸುತು. ಇವೆಲ್ಲಾ ಪಲಾಯನವಾದಿಗಳ ಆಲಾಪ ಅನಿಸಿತು. ಆದರೆ ಸ್ವಾಮೀಜಿಯಾಗಿ ಅವನು ಬದಲಾಗಲೇಬೇಕಿತ್ತು. ಮಠಕ್ಕೆ ಬರುತಿದ್ದ ಸುಂದರ ಹೆಣ್ಣುಗಳನ್ನು ಕಂಡಾಗ ಅವನಿಗೆ ನೋವಾಗುತ್ತಿತ್ತು. ಹಾರುತ್ತಿರುವ ಹಕ್ಕಿಯ ರೆಕ್ಕೆ ಕತ್ತರಿಸಿದ ಹಾಗಾಯಿತು ಅವನ ಪರಿಸ್ಥಿತಿ.
ಈ ನಡುವೆ ಸದಾನಂದ ಸ್ವಾಮೀಜಿ ದೈವಾಧೀನರಾದರು. ಬ್ರಹ್ಮಾನಂದ ಪೂರ್ಣಪ್ರಮಾಣದ ಸ್ವಾಮೀಜಿಯಾಗಿಬಿಟ್ಟ. ತನ್ನೆಲ್ಲಾ ಅಸಾಹಕತೆಗಳನ್ನು ಅದುಮಿರಿಸಿಕೊಂಡು ಅಭಿನಯಿಸತೊಡಗದ. ಅಭಿನಯಿಸುತ್ತಲ್ಲೇ ಹದಿನೈದು ವರ್ಷ ಕಳೆದುಬಿಟ್ಟ. ಕಾಮಕ್ಕೆ ಒಂದು ಹೆಣ್ಣನ್ನು ಇರಿಸಿಕೊಳ್ಳುವುದು ಅವನಿಗೆ ದೊಡ್ಡ ಕೆಲಸ ಆಗಿರಲಿಲ್ಲ. ಆದರೆ ಅದು ಅವನ ಮನಸ್ಸಿಗೆ ಒಪ್ಪದ ಕೆಲಸವಾಗಿರಲಿಲ್ಲ. ಅವನಲ್ಲಿ ಇದ್ದದು ಕಾಮವಾಗಿರದೆ ಅದು ಪ್ರೇಮವಾಗಿತ್ತು. ಅವನಿಗೆ ಅವನದೇ ಆದ ಸಂಸಾರಬೇಕಿತ್ತು. ಅವನದೇ ಸ್ವಂತ ಎನಿಸುವ ಹೆಂಡತಿ, ಮಕ್ಕಳು, ಮನೆ ಬೇಕಾಗಿತ್ತು. ಎಲ್ಲಾ ಮುಖವಾಡಗಳನ್ನು ಕಿತ್ತೊಗೆದು ಜೀವಿಸಬೇಕಾಗಿತ್ತು. ಸರಳವಾಗಿ ಜೀವಸುವುದರಲ್ಲಿ ಸುಖವಿದೆ ಎಂದು ಅವನಿಗೆ ತಿಳಿದಿತ್ತು. ಎಲ್ಲಕ್ಕೂ ಒಪ್ಪಿತವಾಗಿ ಸ್ವಾಮೀಜಿ ಆಗ ಬಯಸುವವರ ಬಗ್ಗೆ ಅವನಿಗೆ ಗೌರವವಿತ್ತು. ಕೆಲವು ಸ್ವಾಮೀಜಿಗಳ ಸಮಾಜ ಸೇವೆ, ಅವರ ನಿಗ್ರಹಶಕ್ತಿ, ಅವರ ಒಳ್ಳೆಯ ಆಲೋಚನೆ ಕಂಡು ಇಂತಹವರೂ ಇರಬಹುದೇ ಎಂದು ಆಶ್ಚರ್ಯಗೊಂಡಿದ್ದ.
ಬ್ರಹ್ಮಾನಂದ ಸ್ವಾಮೀಜಿಗೆ ತಮ್ಮ ಮನಸಿನ ಭಾವನೆ ಬಲವಾಗತೊಡಗಿತು. ಸಾಕು ಇನ್ನು ಈ ನಾಟಕ ಎನಿಸಿತು. ಇದಕ್ಕೊಂದು ತೆರೆ ಹಾಕಲೇ ಬೇಕೆನಿಸಿತು. ತಾನು ಈ ಜೀವನ ಜೀವಿಸಲಾರೆ, ಹೀಗೆ ಹೊರಗೊಂದು, ಒಳಗೊಂದು, ಮುಖವಿರಿಸಿಕೊಂಡು ಬಾಳುವುದು ಅಸಾಧ್ಯ ಕೆಲಸ ಎನಿಸಿತು. ಈ ಮುಖವಾಡ ಅಭಿನಯ ಸಾಕೆನಿಸಿತು. ತಾನು ತನ್ನ ಬಣ್ಣ ತೊಳೆದುಕೊಳ್ಳಲೇ ಬೇಕೆನಿಸಿತು. ಯಾವ ಮನುಷ್ಯನಿಗೂ ಸಾಧ್ಯವಾಗದ ಕೆಲಸವಿದು ಎಂದು ಅವರಿಗೆ ತಿಳಿದುಹೋಗಿತ್ತು. ಅದಕ್ಕೆ ಈ ಮಠಕ್ಕೆ ಮತೊಬ್ಬರನ್ನು ಎಳೆದು ತರುವುದು ಬೇಡ ಎನಿಸಿತು.
ತನ್ನ ನಿರ್ಧಾರದಿಂದ ಸಮಾಜ ಬೊಬ್ಬಿಡಬಹುದು ಎನಿಸಿತು. ಬೊಬ್ಬಿಡಲಿ, ಮಲಗಿ ನಿದ್ರಿಸುವದಕ್ಕಿಂತ ಅದೇ ಮೇಲು ಎಂದು ಮುಗುಳ್ನಕ್ಕರು. ತನ್ನ ಮನಸ್ಸಿಗೆ ಒಪ್ಪುವ, ತನ್ನನು ಒಪ್ಪುವ ಹೆಣ್ಣು ಎಲ್ಲೂ ಸಿಗಬಹುದು, ಸಿಗದಿದ್ದರೆ ಈ ಊರು, ರಾಜ್ಯ, ದೇಶಬಿಟ್ಟಾದರೂ ಸರಿ ನಾನು ನಾನಾಗಬೇಕು ಅನಿಸಿತು. ನಾನು ಎಲ್ಲಾದರೂ ತೆರೆದುಕೊಳ್ಳಬೇಕು, ಎಲ್ಲಕ್ಕೂ ಮೈಯೊಡ್ಡಬೇಕು, ಎಲ್ಲ ತಲೆಗಳ ಜೊತೆ ಕಲೆತು ಹೋಗಬೇಕು. ತನ್ನ ತಲೆ ತನಗೇ ಕಾಣಿಸಬಾರದು, ತನ್ನ ತಲೆ ತಾನೇ ಹುಡುಕುವಂತಾಗಬೇಕು ಎಂದು ಕೊಂಡರು.
ಬ್ರಹ್ಮಾನಂದ ಸ್ವಾಮೀಜಿ ತಮ್ಮ ನಿರ್ಧಾರ ಪ್ರಕಟಿಸಿದಾಗ ಎಲ್ಲರೂ ಕಿಡಿಕಿಡಿಯಾದರು. ಈ ಸ್ವಾಮೀಜಿಗೆ ತಡೆದುಕೊಳ್ಳಲಾಗಲಿಲ್ಲ ಎಂದು ಕಿಡಿಗೇಡಿಗಳು ಕುಹಕವಾಡಿದರು. ಈ ಸ್ವಾಮೀಜಿ ಕಾಮುಕನಾಗಿದ್ದಾನೆ ಎಂದು ಅನೇಕ ಮಠದ ಸ್ವಾಮೀಜಿಗಳು ಬೊಬ್ಬಿಟ್ಟರು. ಇವರೆಲ್ಲರ ಮಾತು ಕೇಳಿ ಬ್ರಹ್ಮಾನಂದ ಸ್ವಾಮೀಜಿ ನಕ್ಕರು, ಅಯ್ಯೋ ನಿಮ್ಮ ಮನಸೇ ಎಂದುಕೊಂಡರು. ನಿಮಗೆಲ್ಲರಿಗೂ ಕಾಮವಿಲ್ಲವೇ, ಅದನ್ನು ಅದುಮಿರಿಸಿಕೊಲ್ಲಲಾರದೆ ಒದ್ದಾಡುತ್ತಿಲ್ಲವೇ? ಅಥವಾ ಬೇರೆ ಮಾರ್ಗಗಳ ಮಾಡಿಕೊಂಡಿಲ್ಲವೇ ಎಂದುಕೊಂಡರು ನಕ್ಕರು. ಅನೇಕ ಸ್ವಾಮೀಜಿಗಳು ಹಳೇಮಠದ ದಾರಿ ತುಳಿದು ಬ್ರಹ್ಮಾನಂದರಿಗೆ ಸಲಹೆ ಕೊಡಲಾರಂಭಿಸಿದರು. ಹೆಣ್ಣನ್ನು ಕೆಟ್ಟದಾಗಿ ಚಿತ್ರಿಸಿದರು, ಅವರ ಮುಖಕ್ಕೆ ಹೇಳೋಣ "ಸುಂದರ ಹೆಣ್ಣನ್ನು ಕಂಡಾಗ ನೀವೇಕೆ ತುಟಿ ಸವರಿ ಕೊಳ್ಳುತ್ತೀರೆಂದು ಅಥವಾ ಕಣ್ಣುಮುಚ್ಚಿಕೊಳ್ಳುತೀರೆಂದು, ನಿಮಗೆ ನಿಗ್ರಹಿಸಿಕೊಳ್ಳಲು ಸಾಧ್ಯವಿಲ್ಲದೆ ಮುಖ ಪಕ್ಕಕೆ ತಿರುಗಿಸಿ ಮನಸ್ಸನ್ನು ಕಟ್ಟಿಹಾಕೊಳ್ಳಿತೀರಿ ಎಂದು", ಆದರೆ ಏನೂ ಮಾತನಾಡದೆ ಸುಮ್ಮನೆ ನಕ್ಕರು. ಹೆಚ್ಚಾದರೆ ಮೌನವಾಗಿಬಿಟ್ಟರು.
ತಾನು ಸ್ವಾಮೀಜಿಯನ್ನು ಮದುವೆಯಾಗಲಿಚ್ಚುಸುತ್ತೇನೆ ಎಂದು ರಾಧ ಎಂಬ ಹೆಣ್ಣುಮಗಳು ಪ್ರಕಟಣೆ ಕೊಟ್ಟಾಗ ಸ್ವಾಮೀಜಿ ಆಸೆಗೆ ಪುಷ್ಟಿ ಕೊಟ್ಟಂತಾಯಿತು. ಕೂಡಲೇ ಅವಳನ್ನು ಭೇಟಿಯಾದರು. ಲಕ್ಷಣವಾಗಿದ್ದ ರಾಧ ಓದಿಕೊಂಡವಳಂತೆ ಕಂಡಳು. ಅವಳನ್ನು ಮಾತನಾಡಿಸಿ ಹೊರಟ ಸ್ವಾಮೀಜಿ ತಮ್ಮ ಖಾವಿಯನ್ನು ಕಳಚಿ ಬಿಳಿಅಂಗಿ ಮತ್ತು ಬಿಳಿಪಂಚೆ ಉಟ್ಟು ತನ್ನ ತಂದೆ ತಾಯಿ ಬಾಳಿ ಹೋಗಿದ್ದ ಮನೆಗೆ ಬಂದು ವಾಸವಾಗತೊಡಗಿದರು.
ಈ ಮಧ್ಯೆ ಅವರ ಮನೆಯ ಮಾಡಿನ ಮೇಲೆ ಕಲ್ಲು ಬೀಳಲಾರಂಭಿಸಿದವು, ಅವರು ನಗುತ್ತಾ ಮಲಗಿದರು. ಈ ಜನ ಹೀಗೇಕೆ ಬೇರೆಯವರ ಜೀವನದಲ್ಲಿ ತಮ್ಮ ಮೂಗು ತೋರಿಸುತ್ತಾರೆ ಎಂದುಕೊಂಡರು. ಏನಾದರೂ ತಮ್ಮ ನಿರ್ಧಾರ ಬದಲಿಸಿಕೊಳ್ಳದ ಬ್ರಹ್ಮಾನಂದರನ್ನು ಕಂಡು ಬೇರೆಮಠದ ಸ್ವಾಮೀಜಿ, ಅವರಿಗೆ ಊರಿಂದ ಬಹಿಷ್ಕಾರ ಹಾಕಬೇಕೆಂದುಕೊಂಡರು.
ಇನ್ನು ಸುಮ್ಮನಿರುವುದು ಸಾಕು ಎಂದುಕೊಂಡ ರಾಧ ಬ್ರಹ್ಮಾನಂದರನ್ನು ಭೇಟಿ ಮಾಡಿ ತಾವೆಲ್ಲಾದರೂ ದೂರಹೋಗಿ ಮದುವೆಮಾಡಿಕೊಂಡು ಸುಖವಾಗಿರೋಣ ಎಂದಳು. ಈ ರಾತ್ರಿ ಇಬ್ಬರೂ ಇಂತಹಕಡೆ ಭೇಟೆಯಾಗಿ ಅಲ್ಲಿಂದ ಎಲ್ಲಾರದೂ ಹೊರಡೋಣ ಎಂದುಕೊಂಡರು.
ಅಂದು ರಾತ್ರಿ ಬ್ರಹ್ಮಾನಂದರು ತನ್ನ ಕೆಲವೇ ಕೆಲವು ವಸ್ತುಗಳೊಂದಿಗೆ ಮೊದಲೇ ನಿರ್ಧರಿ ಸಿಕೊಂಡಿದ್ದ ಸ್ಥಳಕ್ಕೆ ಬಂದರು. ರಾಧ ಇನ್ನೂ ಬಂದಿರಲಿಲ್ಲ. ಕಾದು ಕುಳಿತರು. ತುಂಬಾ ಹೊತ್ತಾದರೂ ಅವಳ ಸುಳಿವೇ ಇರಲಿಲ್ಲ. ಏನಾಯಿತು ಎಂದು ತಿಳಿಯಲಿಲ್ಲ, ಅವಳ ಮನೆಗೆ ಹೋಗಿ ನೋಡುವುದೇ ಎಂದುಕೊಡರು, ಇನ್ನೂ ಸ್ವಲ್ಪ ಹೊತ್ತು ನೋಡೋಣ ಎಂದು ಕಾದುಕುಳಿತ ಅವರಿಗೆ ಹಾಗೆ ಮಂಪರು ಹತ್ತಿ ನಿದ್ರಿಸಿಬಿಟ್ಟರು. ಬೆಳಗಾದಾಗ ಅವರಿಗೆ ತಿಳಿದಿದು ಯಾವುದೂ ಹೆಣ್ಣಿನ ದೇಹ ದಾರಿಯಲ್ಲಿ ಬಿದ್ದಿದ್ದು ಈಗ ಅದು ಆಸ್ಪತ್ರೆಯಲ್ಲಿ ಇದೆ ಎಂದು. ಆಸ್ಪತ್ರಗೆ ಓಡಿ ಬಂದಾಗ ಅದು ರಾಧಾಳ ದೇಹವೇ ಎಂದು ತಿಳಿದು ದುಃಖ ಉಕ್ಕಿಬಂತು. ಅಲ್ಲಿಂದ ನಿಧಾನವಾಗಿ ಹೊರಬಂದರು.
ಬದುಕಿನ ಕ್ರೂರತೆ, ನಗ್ನತೆಗಳ ಕಂಡು ಅಸ್ಯಹವಾಯಿತು. ಮನುಷ್ಯ ಇಷ್ಟೊಂದು ಕ್ರೂರಿಯಾಗುತ್ತಾನೆ ಎಂದು ಅವರು ಎಣಿಸಿರಲಿಲ್ಲ. ತನ್ನ ಯಜ್ಞದಲ್ಲಿ ಅವಳು ಸಮಿತ್ತಾದಳಲ್ಲ ಎಂದು ಮಮ್ಮುಲ ಮರುಗಿದರು. ನಿನ್ನ ಸಾವನ್ನು ನೀನೆ ಆಹ್ವಾನ ಮಾಡಿಕೊಂಡೆಯಲ್ಲ ಎಂದು ನೋವುಪಟ್ಟರು.
ಸಾಕು ಈ ಜನರ ಸಹವಾಸ, ಇವರಿಷ್ಟೇ, ಯಾವುದಕ್ಕೂ ವಸ್ತುನಿಷ್ಠವಾಗಿ ಸ್ಪಂದಿಸದವರು. ಬಾಳ ಸರಳತೆ ಅರಿಯದವರು, ಯಾರನ್ನೂ ಬಾಳಗೊಡದವರು, ತಾವೂ ಬಾಳಲಾರದವರು, ಕುರಿಗಳು ಕೇವಲ ತಲೆ ಆಡಿಸುವ ಕುರಿಗಳು. ಪ್ರೇಮ ಪ್ರೀತಿಯ ಅರ್ಥ ತಿಳಿಯದವರು, ಮನಸುಗಳನ್ನು ಕೊಲ್ಲುವವರು, ಕೊಂದುಕೊಳ್ಳುವಂತೆ ಪ್ರೇರೇಪಿಸುವವರು. ಒಂದಡೆ ಕುಳಿತು ಅತ್ತುಬಿಟ್ಟರು. ‘ಹೇ ಮೂರ್ಖ ಜನರೇ ನಾನು ಕಾವಿ ಧರಿಸಿದಾಗ ನನ್ನ ಕಾಲಿಗೆ ಮುತ್ತಿಕ್ಕುತಿದ್ದಿರಿ, ಹಣೆ ಒತ್ತುತ್ತಿದ್ದಿರಿ, ಈಗ ನಾನು ಕಾವಿ ತ್ಯಜಿದೊಡನೆ ಬೇರೆಯದೇ ವ್ಯಕ್ತಿಯಾದೆನೇ’ ಎಂದು ಗಹ ಗಹಿಸಿ ನಕ್ಕುಬಿಟ್ಟರು. ನೀವು ಮೂರ್ಖರು, ನಿಮ್ಮತನವನ್ನು ಕಳೆದುಕೊಂಡವರು ಛೇ ನೀವು ಇರುವುದೇ ಹೀಗೆ, ಇರಬೇಕಾಗಿರುವುದೂ ಹೀಗೆ ಏನೂ ಎಂದುಕೊಂಡರು. ಮುಖವಾಡ ಧರಿಸಿದ ಜನರೇ ಯಾಕೆ ನೀವು ನಟನೆ ಮಾಡುತ್ತೀರಾ, ಯಾಕೆ ಈ ಬಂಧನ ,ಎಲ್ಲ ಕಿತ್ತು ಬನ್ನಿ, ಯಾಕೆ ಅಸಹಾಯಕತೆಯಿಂದ ಮಿಡುಕಾಡುತ್ತೀರಾ, ಎದ್ದುನಿಲ್ಲಿ, ಎಲ್ಲರ ಜೊತೆ ಬೆರೆಯಿರಿ, ಸರಳವಾಗಿರಿ, ಪ್ರಾಮಾಣಿಕ ಜೀವನ ನಡೆಸಿ ಇಲ್ಲವೆಂದರೆ ನೀವು ಪಾಪಿಗಳಾಗಿ ಹೋಗುತ್ತೀರ, ಜೀವನದಿಂದ ಎಲ್ಲಾ ಕಳೆದುಕೊಂಡವರಾಗುತ್ತೀರ, ಜೀವನದ ಅರ್ಥವೇ ಗೊತ್ತಿಲ್ಲದ ಮೂರ್ಖರೇ ಎನ್ನುತ್ತಾ ಹಾಗೆ ಮನೆ ಒಳಗಡೆ ಹೋಗಿ ಬಾಗಿಲು ಹಾಕಿಕೊಂಡರು.
ಮೂರುದಿನದ ನಂತರ, ಮನೆಯಿಂದ ವಾಸನೆ ಬರತೊಡಗಿದ ಮೇಲೆ ಜನ ಬಾಗಿಲು ಒಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.