ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1902ರಲ್ಲಿ ಮೈಸೂರು ರಾಜಮನೆತನದ 24ನೇ ಮಹಾರಾಜರಾದರು. ಆಗ ಅವರ ವಯಸ್ಸು 18 ವರ್ಷ. ಶಿಕ್ಷಣ ಮತ್ತು ಆಡಳಿತಾಂಗದ ಬಗ್ಗೆ ನುರಿತವರಿಂದ ಪರಿಜ್ಞಾನ ಪಡೆದು ರಾಜ್ಯದ ಆಡಳಿತ ನಡೆಸಲು ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡರು. ಮಹಾರಾಣಿ-ರೀಜೆಂಟ್ ಅವರು ಬಾಂಬೆ ಸಿವಿಲ್ ಸರ್ವೀಸ್‌ನಲ್ಲಿದ್ದ ಸರ್.ಎಸ್.ಎಂ. ಫ್ರೇಸರ್ ಅವರನ್ನು ತರುಣ ಮಹಾರಾಜರಿಗೆ ಟ್ಯೂಟರ್ ಮತ್ತು ಗಾರ್ಡಿಯನ್ ಆಗಿ ನೇಮಕ ಮಾಡಿದರು. ಮೈಸೂರಿಗೆ ಫ್ರೇಸರ್ ಬರುವ ಮುಂಚೆ ಗಾರ್ಡಿಯನ್ ಹುದ್ದೆಯನ್ನು ಕೊಲ್ಲಾಪುರದಲ್ಲಿಯೂ ನಿರ್ವಹಿಸಿದ್ದರು. ಅಲ್ಲಿ ಯಶಸ್ವಿ ತರಬೇತಿ ನೀಡುವ ವ್ಯಕ್ತಿ ಎಂದು ಪ್ರಸಿದ್ಧರಾಗಿದ್ದರು. ಮಹಾರಾಣಿಯವರು ಇಂಥ ವಿವೇಕದ ಸಂಸ್ಕಾರವನ್ನು ಮಗನಿಗೆ ಕೊಡಬೇಕೆಂದು ಬಯಸಿ ಕಾಯಕಪ್ರಜ್ಞೆಯನ್ನು ಮೈಗೂಡಿಸಬೇಕೆಂದೇ ಫ್ರೇಸರ್ ಅವರನ್ನು ಬರಮಾಡಿಕೊಂಡರು. ಅದೃಷ್ಟವಶಾತ್ ಫ್ರೇಸರ್ ಬಂದು ಯುಕ್ತ-ಸೂಕ್ತ-ಶಿಕ್ಷಣವನ್ನೇ ನೀಡಿದರು.
ಫ್ರೇಸರ್ ಅವರ ಮಾರ್ಗದರ್ಶನದಲ್ಲಿ ವ್ಯವಸ್ಥಿತ ಸುಸ್ಥಿರ ಪ್ರಯತ್ನದಿಂದ ಆಡಳಿತ ದಕ್ಷತೆ ನಾಲ್ವಡಿಯವರಿಗೆ ಮೈಗೂಡಿತು. ಓದುವ ಪಠ್ಯ, ಆಡುವ ಆಟ, ತಿಳಿಯುವ ಮಾಹಿತಿ ಪಾಠ-ಪ್ರಯೋಗ ಶೀಲತೆಯನ್ನು ಸರ್ಕಾರ ಚಾಲನೆಗೆ ಆದ್ಯತೆಯಾಗಿ, ಆಧಾರವಾಗಿ ಕಲಿಸಿಕೊಟ್ಟರು. ಆಧುನಿಕ ಇತಿಹಾಸ ಮತ್ತು ವಿಜ್ಞಾನವನ್ನು ಸೂತ್ರಬದ್ಧವಾಗಿ, ಗಾತ್ರಬದ್ಧವಾಗಿಯೆ ತಿಳಿಸಿ ಕಂದಾಯ ಆಡಳಿತಕ್ಕೆ ಇವೆಲ್ಲವನ್ನೂ ಅನ್ವಯಿಸಿಕೊಟ್ಟರು. ರಾಜ್ಯದ ಎಲ್ಲ ಭಾಗಗಳಲ್ಲೂ ಸುತ್ತಾಡಿಸಿ ಪ್ರತ್ಯಕ್ಷ ಅನುಭವಾಧಾರಿತ ಜ್ಞಾನ ತೋರಿಸಿದರು. ಇದರಿಂದಾಗಿ ತರುಣ ಮಹಾರಾಜರಿಗೆ ಜನ, ಅಧಿಕಾರಿ, ಸೇವಕರಾದಿಯಾಗಿ ಸಂಪರ್ಕಕ್ಕೆ ಬಂದರು. ಇದರಿಂದ ಪ್ರಕೃತಿ ಮತ್ತು ರಾಜ್ಯದ ಸಂಪನ್ಮೂಲವನ್ನು ರೂಢಿಸಿಕೊಳ್ಳುವ ಶಿಕ್ಷಣವೂ ದಕ್ಕಿತು. ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯುವ ಮುನ್ನ ಇಷ್ಟೆಲ್ಲ ಮಾಹಿತಿ ಎಂಬ ತಿಳಿವಳಿಕೆ ಮತ್ತು ಅನುಭವವೆಂಬ ಜ್ಞಾನವೂ ಅಂತರ್ಗತವಾಗಿದ್ದು ವಿಶೇಷ. ಅನೇಕ ಸ್ಥಳ, ತಾಲ್ಲೂಕು ಕಚೇರಿ, ಲೆಕ್ಕಪತ್ರ, ಗ್ರಾಮಾಧಿಕಾರಿಗಳ ಕಾರ್ಯವಿಧಾನ, ಅವರ ಮಾತುಕತೆಯೊಂದಿಗೆ ಆಚಾರ-ವಿಚಾರ, ವ್ಯವಹಾರವನ್ನೆಲ್ಲ ಅಕ್ಷರಶಃ ಕಲಿಸಿ, ಸ್ವಂತ ಅನುಭವಕ್ಕೆ ಬರುವಂತೆ ಪ್ರಾಮಾಣಿಕವಾಗಿ ನೋಡಿಕೊಳ್ಳಲಾಯಿತು. ಕಾನೂನಿನ ಕ್ರಮಗಳು ಹೇಗಿರುತ್ತವೆ ಎಂಬುದನ್ನು ನಾಲ್ವಡಿಗೆ ತಿಳಿಸಿಕೊಟ್ಟದ್ದು ಉದಾತ್ತ ಕೆಲಸವಾಯಿತು.
ಮಹಾರಾಜರು ಅನೇಕ ಕೋರ್ಟುಗಳಿಗೆ ಭೇಟಿ ಕೊಟ್ಟು, ನ್ಯಾಯಾಧೀಶರು, ವಕೀಲರು, ಕಕ್ಷಿದಾರರ ಕಲಾಪಗಳನ್ನು ಅಲ್ಲಿನ ಬೆಂಚುಗಳಲ್ಲಿ ಕುಳಿತು ಅನುಭವವನ್ನು ಗಳಿಸಿಕೊಂಡರು. ರಾಜ್ಯ ಕೌನ್ಸಿಲ್ ಸಭೆಗಳಲ್ಲಿ ಭಾಗವಹಿಸಿ ಚರ್ಚೆ, ವಾದ-ಪ್ರತಿವಾದಗಳನ್ನು ಆಲಿಸಿ ಒಳ್ಳೆಯ ಕೇಳುಗರೂ ಆದರು. ಈ ಸಮಯದಲ್ಲಿ ಅವರ ಆರೋಗ್ಯವನ್ನು ಸಮಸ್ಥಿತಿಯಲ್ಲಿರುವಂತೆ ನೋಡಿಕೊಂಡು, ಹೊರಾಂಗಣ ಕ್ರೀಡೆಗಳಲ್ಲಿ ಭಾಗವಹಿಸಿ ದೇಹದಾರ್ಢ್ಯ ರೂಢಿಸಿಕೊಳ್ಳಲು ಸಹಕರಿಸಲಾಯಿತು. ವ್ಯಕ್ತಿತ್ವ ವಿಕಾಸವನ್ನು ಹರ್ಷದಿಂದಲೇ ನಿರ್ಮಿಸಿಕೊಳ್ಳುವುದರ ಜೊತೆಗೆ ಟೆನಿಸ್ ಆಟದಲ್ಲಿ ಸಾಮರ್ಥ್ಯವನ್ನು ಮೈದುಂಬಿಕೊಂಡರು. ರಾಜ್ಯಾಧಿಕಾರ ಸ್ವೀಕಾರ ಸಮಾರಂಭವನ್ನು ವೈಸರಾಯ್ ಲಾರ್ಡ್ ಕರ್ಜನ್ ನಡೆಸಿಕೊಟ್ಟರು. ಬ್ರಿಟಿಷ್ ರೆಸಿಡೆಂಟರು ಒಂದನೇ ಸಹಾಯಕ ಸಿಎಲ್‌ಎಸ್ ರಸೆಲ್, ರಾಜಮನೆತನದ ಸಂಬಂಧಿಕ ಗಣ್ಯ ಬಕ್ಷಿ ಬಸಪ್ಪಾಜಿ ಅರಸ್, ರಾಜ್ಯಕೌನ್ಸಿಲ್ ಸದಸ್ಯ ವಿ.ಪಿ.ಮಾಧವರಾವ್ ಅವರೆಲ್ಲ ಖುದ್ದಾಗಿ ಇದ್ದು, ಅಧಿಕಾರ ಸ್ವೀಕಾರದ ಸಂದರ್ಭವನ್ನು ಸುಸೂತ್ರವಾಗಿ ನಡೆಸಿಕೊಟ್ಟರು. ವೈಸರಾಯ್‌ಗಳ ತಂಡವನ್ನು ಹಿಂದೂಪುರದಿಂದ ಬರಮಾಡಿಕೊಳ್ಳಲಾಯಿತು.
ಆ ದಿನ ಇಂಪೀರಿಯಲ್ ಸರ್ವಿಸ್ ಕ್ಯಾವಲ್ರಿ, ಟ್ರಾನ್ಸ್‌ಪೋರ್ಟ್ ಲೈನ್ಸ್, 200 ಮಂದಿ ಇಂಪೀರಿಯಲ್ ಸರ್ವಿಸ್ ಲ್ಯಾನ್ಸರುಗಳು ಕ್ಯಾಪ್ಟನ್ ಮಾಕೆಡ್, ಕರ್ನಲ್ ದೇಶರಾಜ್ ಅರಸ್ ಆದೇಶದಂತೆ ಪಾಲ್ಗೊಂಡಿದ್ದರು. ಇವರ ಪಡೆಯನ್ನು ದಿವಾನ್ ಕೃಷ್ಣಮೂರ್ತಿ ಧ್ವಜ ವಂದನೆ ಮಾಡಿ ಗೌರವ ರಕ್ಷೆ ನೀಡಿದರು. ಎಲ್ಲ ತರಹದ ಕುದುರೆಗಳು ಆದೇಶದಂತೆ ಮುನ್ನಡೆದವು. ಲ್ಯಾನ್ಸರ್‌ಗಳು ಹರ್ಷಿತರಾದರು. ವೈಸರಾಯ್ ಈ ಪಡೆಗಳ, ರೆಜಿಮೆಂಟುಗಳ ತರಬೇತಿಯನ್ನು ಸೂಕ್ಷ್ಮವಾಗಿ ಪರಿವೀಕ್ಷಿಸಿದರು. ಈ ಪ್ರಕ್ರಿಯೆಗಳೆಲ್ಲ ಬೆಂಗಳೂರಿನಲ್ಲಾದವು. ದಿವಾನರ ಮನೆ ಪೂರ್ಣ ಪ್ರಸಾದದಲ್ಲಿ ಅದ್ಭುತ ಸ್ವಾಗತ ನೀಡಲಾಯಿತು. ಶಿವನಸಮುದ್ರದ ವಿದ್ಯುತ್ ಉತ್ಪಾದನೆ ಕಾರ್ಯವನ್ನು ಕರ್ಜನ್ ವಿಶೇಷವಾಗಿ ಗಮನಿಸಿದರು. ನಂತರ ಮಾರನೇ ದಿನ ಮೈಸೂರಿಗೆ ವೈಸರಾಯ್ ಆಗಮಿಸಿದಾಗ ಶಿಷ್ಟಾಚಾರದಂತೆ ಕ್ರಮ ತಪ್ಪದೆ ಸ್ವಾಗತಿಸಲಾಯಿತು.
ಜಗನ್ಮೋಹನ ಅರಮನೆಯಲ್ಲಿ ವೈಭವಯುತ ವ್ಯವಸ್ಥೆಯಾಗಿತ್ತು. ಸಿವಿಲ್ ಮತ್ತು ಮಿಲಿಟರಿ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಆಮಂತ್ರಿತರು ಎಲ್ಲರೂ ಸನ್ನದ್ಧರಾಗಿದ್ದರು. ದಿವಾನರು ಮತ್ತು ಮೂವರು ಪ್ರಧಾನ ಅಧಿಕಾರಿಗಳು ರಾಜ್ಯದ ಪರವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ರಾಯಲ್ ಫೀಲ್ಡ್ ಆರ್ಟಿಲರಿ, ಬ್ರಿಟಿಷ್ ಕ್ಯಾವಲ್ರಿ ರೆಜಿಮೆಂಟುಗಳು ಹಾಜರಿದ್ದವು. ಬ್ರಿಟಿಷ್ ರೆಸಿಡೆಂಟ್ ಕರ್ನಲ್ ಡೊನಾಲ್ಡ್ ರಾಬರ್ಟ್‌ಸನ್, ನಾಲ್ವರು ಪ್ರಧಾನ ಗಣ್ಯರು, ಅಧಿಕಾರಿಗಳು ಇದೇ ಸಮಯದಲ್ಲಿ ಮಹಾರಾಜರನ್ನು ಬರಮಾಡಿಕೊಂಡರು.
ಗಾರ್ಡ್ ಆಫ್ ಆನರ್ ಅನ್ನು ವಾರ್‌ವಿಕ್‌ಶೈರ್ ರಿಜಿಮೆಂಟ್ ಬ್ಯಾಂಡ್ ವಾದನದೊಂದಿಗೆ ನೀಡಿತು. ಬ್ಯಾಂಡ್ ವಾದನ ನಿಧಾನಗತಿಯಲ್ಲಿದ್ದಂತೆ ಪಥಸಂಚಲನದ ಮೆರವಣಿಗೆ ದರ್ಬಾರ್ ಹಾಲ್‌ವರೆಗೂ ಸಾಗಿತು. ಮುಂದುವರಿದು ಎರಡನೇ ಗೌರವ ರಕ್ಷೆಯನ್ನು ಬ್ರಿಟಿಷ್ ಪಡೆಗಳು ನೀಡಿದವು. ರಾಯಲ್ ಸಲ್ಯೂಟ್ ಮಾಡಿ 31 ಕುಶಾಲತೋಪುಗಳು ಕೋಟೆಕೊತ್ತಲದಿಂದ ಮೊಳಗಿದವು. ಆಗ ಬ್ಯಾಂಡ್‌ನಿಂದ ಬ್ರಿಟಿಷ್ ರಾಷ್ಟ್ರಗೀತೆ ಮೊಳಗಿತು. ಮಹಾದ್ವಾರದಲ್ಲಿ ಎಲ್ಲರಿಗೂ ಗುಲಾಬಿ ಹೂವುಗಳನ್ನು ನೀಡಲಾಯಿತು.
ವೈಸರಾಯ್ ಆಸೀನರಾಗುವವರೆಗೂ ಎಲ್ಲರೂ ನಿಂತೇ ಇದ್ದರು. ಮಹಾರಾಜರು ಬಲಭಾಗದಲ್ಲಿ ಕುಳಿತರೆ, ಎಡಭಾಗದಲ್ಲಿ ವೈಸರಾಯ್ ಕುಳಿತುಕೊಂಡರು. ಅಂತೆಯೇ ರೆಸಿಡೆಂಟ್, ವಿದೇಶಾಂಗ ಕಾರ್ಯದರ್ಶಿ ಇತರ ಬ್ರಿಟಿಷ್ ಅಧಿಕಾರಿಗಳು ಆಸೀನರಾದರು. ಗುಂಪು–ಗುಂಪಾಗಿ ಯೂರೋಪಿಯನ್ ಅತಿಥಿಗಳು ಕುಳಿತು ಅಂತರ ಕಾಯ್ದುಕೊಳ್ಳಲಾಗಿತ್ತು. ಮಹಾರಾಜರ ಬಲಭಾಗದಲ್ಲಿ ದಿವಾನರು, ಗಣ್ಯರು, ಅತಿಥಿಗಳು ಅವರವರ ಅಧಿಕಾರ ಶ್ರೇಣಿಗೆ ತಕ್ಕಂತೆ ವಿವಿಧ ಸಾಲುಗಳಲ್ಲಿ ಕುಳಿತುಕೊಂಡರು. ನಂತರ ವಿದೇಶಾಂಗ ಕಾರ್ಯದರ್ಶಿ ಅವರು ‘ಈಗ ದರ್ಬಾರ್ ಪ್ರಾರಂಭ’ ಎಂದು ಉದ್ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.