ಬಾಲ್ಯದಲ್ಲಿ ಕಳೆದ ಪ್ರತಿ ಗಳಿಗೆಯೂ ಮರೆಯಲಾಗದ ಮಧುರ ನೆನಪನ್ನು ಉಕ್ಕಿಸಿಬಿಡುತ್ತದೆ. ನನ್ನ ಬಾಲ್ಯ ಹಣಕಾಸಿನ ಶ್ರೀಮಂತಿಕೆಗೆ, ಐಶಾರಾಮಿ ಬದುಕಿಗೆ ಸಾಕ್ಷಿಯಾಗಿರಲಿಲ್ಲವಾದರೂ, ಉಳಿದೆಲ್ಲರಂತೆ ಬಿದ್ದು, ಎದ್ದು, ಗೆದ್ದು, ಕುಣಿದು, ನೆಗೆದಾಡಿದ, ಜಿಗಿದಾಡಿದ, ಹೊಡೆದಾಡಿದ ಅನುಭವಗಳನ್ನು ನೀಡಿ, ಅದರದೇ ಆದ ಶ್ರೀಮಂತಿಕೆಯಲ್ಲಿ ನನ್ನನ್ನು ಮೆರೆಸಿದ್ದಂತೂ ಸತ್ಯ. ನಮ್ಮ ಬಾಲ್ಯದ ಹುಮ್ಮಸ್ಸಿಗೆ ಮಳೆ, ಚಳಿ, ಬೇಸಿಗೆ ಎಂಬ ಕಾಲಗಳ ಪರಿಮಿತಿಯಿರಲಿಲ್ಲ. ಎಲ್ಲ ಕಾಲಗಳೂ ನಮಗೆ, ನಮ್ಮ ಬಾಲ್ಯದ ವಿಭಿನ್ನ ಅನುಭವಕ್ಕೆ, ಪುಟಿಯುವಿಕೆಗೆ ಹೆಗಲಾಗಿ ನಿಂತಿದ್ದವು.
ಗೋಲಿ, ಬುಗುರಿ, ಲಗೋರಿ, ಚಿನ್ನಿ-ದಾಂಡು, ಮರಕೋತಿ, ಮಣೆಚೆಂಡು, ಕಣ್ಣಾಮುಚ್ಚಾಲೆ, ಹಾಡು, ಕುಣಿತ, ಮದುವೆ ಸಮಾರಂಭಗಳೆಂದು ಬೇಸಿಗೆ ಕಾಲ ಹಾಗೂ ಚಳಿಗಾಲಗಳಲ್ಲಿ ಜಿಗಿದಾಡಿದರೆ, ಮಳೆಗಾಲ ನಮಗಂತೂ ಬೇರೊಂದು ಲೋಕವನ್ನೇ ತೆರೆಸುತ್ತಿತ್ತು. ಮುಂಗಾರು ಪ್ರಾರಂಭವಾಗಿ, ಗುಡುಗು ಕೇಳಿ, ಒಂದೆರಡು ಮಳೆಯಾಗಿ, ನೆಲ ಒಂದಿಷ್ಟು ಒದ್ದೆಯಾದರೆ ನಮಗದೇನೋ ಪುಳಕ. ಯಾಕೆಂದರೆ ನಮಗಿಷ್ಟವಾದ ಏನೋ ಸಿಗುವ ಕಾಲ ಆರಂಭವಾಯಿತೆಂಬ ಹರುಷ. ಮಳೆಗಾಲ ಆರಂಭವಾಗಿ ಸ್ವಲ್ಪ ಮಳೆಯಾದ ಕೂಡಲೇ ನಾಯಿಕೊಡೆ ಅಥವಾ ಅಣಬೆಗಳು ಎಲ್ಲೆಂದರಲ್ಲಿ ತಲೆ ಎತ್ತುತ್ತವೆ. ಮುಂಗಾರಿನ ಸಂದರ್ಭದಲ್ಲಿ ಶುರುವಾಗುವ ‘ಹೆಗ್ಗಾಲಣಬೆ’ಗಳು ನಮಗೆ ಅಚ್ಚುಮೆಚ್ಚು.
ರುಚಿರುಚಿಯಾಗಿರುವ ಈ ಅಣಬೆಗಳು ಒಂದೇ ಜಾಗದಲ್ಲಿ ರಾಶಿಗಟ್ಟಲೆ ಎದ್ದುಬಿಡುತ್ತವೆ. ಒಮ್ಮೆ ಈ ರಾಶಿ ಕಣ್ಣಿಗೆ ಬಿದ್ದರೆ, ನಮಗಂತೂ ಹಬ್ಬವೋ ಹಬ್ಬ. ಒಂದು ಹೊತ್ತಿನ ಊಟವೂ ತೀರಾ ಕಷ್ಟವಾಗಿದ್ದ ಪರಿಸ್ಥಿತಿಯಲ್ಲಿ ಈ ಹೆಗ್ಗಾಲಣಬೆಗಳು ಸಿಕ್ಕಿದರೆ ಎರಡು-ಮೂರು ಹೊತ್ತಿನ ಊಟಕ್ಕೆ ಅನುವಾಗುತ್ತಿತ್ತು. ಹಾಗಾಗಿ ನರಿಯಂತೆ ಹೊಂಚು ಹಾಕಿ, ಬೆಳ್ಳಂಬೆಳಿಗ್ಗೆಯೇ ಸುತ್ತಾಡಿ ಹೆಗ್ಗಾಲಣಬೆ ಏಳುವ ಜಾಗವನ್ನು ಕಾದು, ಎದ್ದರೆ ಆ ಜಾಗ ಯಾರಿಗೂ ಗೊತ್ತಾಗದಂತೆ ಹುಷಾರಾಗಿ ಎಲ್ಲಾ ಅಣಬೆಗಳನ್ನು ಕಿತ್ತುಕೊಂಡು ಬಂದುಬಿಡುತ್ತಿದ್ದೆವು. ಅದರಲ್ಲೂ, ಆ ಜಾಗ ಬೇರೆಯವರಿಗೆ ಗೊತ್ತಾಗದಂತೆ ಕೀಳುವ ಉದ್ದೇಶವೆಂದರೆ ಒಮ್ಮೆ ಒಂದು ಜಾಗದಲ್ಲಿ ಎದ್ದ ಹೆಗ್ಗಾಲಣಬೆ ಮತ್ತೆ ಅದೇ ಜಾಗದಲ್ಲಿ ಇನ್ನೂ ಮೂರ್ನಾಲ್ಕು ದಿನ ಏಳುತ್ತಿದ್ದುದು.
ಮಲೆನಾಡಿನ ಭಾಗವಾದ ನಮ್ಮಲ್ಲಿ ಮಳೆಗಾಲ ಪ್ರಾರಂಭವಾಯಿತೆಂದರೆ ಆಕಾಶವೇ ಕಳಚಿ ಬೀಳುವಂತೆ ಭೋರೆಂದು ತಿಂಗಳುಗಟ್ಟಲೆ ಸುರಿಯುವ ಮಳೆ ಹೊರಗಿನವರಿಗೆ ರೇಜಿಗೆ ಹುಟ್ಟಿಸಿದರೆ, ಅಲ್ಲಿಯೇ ಹುಟ್ಟಿ, ಬೆಳೆದವರಿಗೆ ಅದು ಸಂಪೂರ್ಣ ಅಭ್ಯಾಸವಾಗಿ, ತೀರಾ ಸಾಮಾನ್ಯವೆನಿಸುತ್ತಿರುತ್ತದೆ. ನನಗಂತೂ ಮಲೆನಾಡಿನ ಮಳೆಗಾಲ ಅನೇಕ ಹಸಿಹಸಿ ನೆನಪುಗಳನ್ನು ಹಾಗೆಯೇ ಉಳಿಸಿ ಹೋದ ಆತ್ಮೀಯ ಸ್ನೇಹಿತ.
ಮಳೆಗಾಲಕ್ಕೆಂದು ಮನೆಯಲ್ಲಿರುತ್ತಿದ್ದುದು ಒಂದೋ, ಎರಡೋ ಛತ್ರಿಗಳು. ಅವು ಮನೆಯ ಯಜಮಾನರು ಪೇಟೆಗೆ ಅಥವಾ ಅಪರೂಪಕ್ಕೆ ನೆಂಟರಿಷ್ಟರ ಮನೆಗೆ, ಕೆಲವೊಮ್ಮೆ ನಮಗೆ ಶಾಲೆಗೆ ಹೋಗಿಬರಲು. ಛತ್ರಿಗೆ ಪರ್ಯಾಯವಾಗಿ ಮನೆಯಿಂದ ಹೊರಗಡೆ ಓಡಾಡಲು ಅಥವಾ ಮಳೆಯಲ್ಲಿಯೇ ಹೊಲ-ಗದ್ದೆಗಳಲ್ಲಿ ಕೆಲಸ ಮಾಡಲು ಕಂಬಳಿಗಳಿರುತ್ತಿದ್ದವು. ಇವೂ ನಮ್ಮನೆಯಲ್ಲಿ ಇರುತ್ತಿದ್ದುದು ಕೇವಲ ಒಂದೆರಡು. ಅವು ಅಪ್ಪಾಜಿಗೆ ಸೀಮಿತ. ಅಮ್ಮ ಪ್ಲಾಸ್ಟಿಕ್ಕಿನ ‘ಟಾರ್ಪಲ್’ ಅಥವಾ ಬಿದಿರಿನಿಂದ ಹೆಣೆದು ಮಾಡಿರುವ ‘ಗೊರಬು’ ಹಾಕಿಕೊಂಡರೆ, ನಮ್ಮಂಥ ಚಿಕ್ಕ ಹುಡುಗರಿಗೆ ‘ಗೋಣಿ ಚೀಲದ ಕೊಪ್ಪೆ’ಯೇ ಗತಿ. ಈ ಗೋಣಿಚೀಲದ ಕೊಪ್ಪೆಯನ್ನು ತಲೆಯ ಮೇಲೆ ಹಾಕಿಕೊಂಡರೆ ಮಳೆಗಾಲದ ಅದೆಂತಹ ಹುಚ್ಚು ಮಳೆಯೂ ನಮ್ಮನ್ನು ತಡೆಯಲು ಸಾಧ್ಯವಿಲ್ಲದಂತೆ, ಹೊರಗಡೆಯ ಚಳಿಗೇ ಚಳಿಯಾಗುವಂತೆ ಮನೆಯಿಂದ ಆಚೆ ಕಾಲ್ಕೀಳುತ್ತಿದ್ದೆವು.
ಆಗಷ್ಟೇ ಚಿಗುರುತ್ತಿದ್ದ ಹತ್ತಿ ಹೊಲಗಳಲ್ಲಿ, ಕಾಡಿನಲ್ಲಿ ಅಲೆಮಾರಿಗಳಂತೆ ಅಲೆಯುತ್ತಾ, ಕಣ್ಣನ್ನು ನೆಲದ ಮೇಲೆ ಎಲ್ಲಾ ದಿಕ್ಕುಗಳಲ್ಲೂ ಹೊರಳಿಸುತ್ತಾ, ಬಿಳಿಯ ವಸ್ತುವೇನಾದರೂ ಕಂಡರೆ, ಕಣ್ಣು ಚುರುಕಾಗಿಸುತ್ತಾ, ಎರಡು-ಮೂರು ಗಂಟೆಗಳ ತಿರುಗಾಟ ಮುಗಿಸಿ, ನೆನೆಯಬಾರದೆಂದು ಹಾಕಿಕೊಂಡ ಗೋಣಿಚೀಲದ ಕೊಪ್ಪೆಯೊಳಗೆಲ್ಲ ನೀರು ಜಿನುಗಿ, ಮೈಪೂರ್ತಿ ಒದ್ದೆಯಾಗಿ ನಡುಗುತ್ತಾ, ಅಪ್ಪಾಜಿ ಎಲ್ಲಿ ಹೊಡೆಯುತ್ತಾರೋ ಎಂದು ಅಂಜುತ್ತಾ, ಅಮ್ಮನನ್ನು ಪುಸಲಾಯಿಸುತ್ತಾ, ವೀರಾಗ್ರಣಿಗಳಂತೆ ಮಳೆಯಲ್ಲಿ ನೆನೆದು, ಕಾಡು-ಹೊಲಗಳನ್ನೆಲ್ಲಾ ಅಲೆದು, ಕಿತ್ತು ತಂದ ‘ಎಣ್ಣೆಣಬೆ’ಗಳನ್ನು (ಒಂದು ವಿಧದ ತೀರಾ ರುಚಿಯಾದ ಅಣಬೆ) ಹುರಿದುಕೊಡುವಂತೆ ದುಂಬಾಲು ಬೀಳುತ್ತಿದ್ದೆ. ಮಳೆಯಲ್ಲಿ ನೆನೆದು ಜ್ವರ ಬಂದರೆ ಕಷ್ಟವೆಂದು ಅಮ್ಮ ಅದೆಷ್ಟು ಬೈದರೂ, ಅಪ್ಪಾಜಿ ಎಷ್ಟೆಲ್ಲ ಹೊಡೆದರೂ ಮಳೆಗಾಲದಲ್ಲಿ ಹೀಗೆ ಅಲೆದಾಡಿ ಎಣ್ಣೆಣಬೆ ಹುಡುಕಿ ತಂದು, ಪಲ್ಯ ಮಾಡಿಸಿಕೊಂಡು ತಿಂದ ನೆನಪು ಎಂದಿಗೂ ಹಸಹಸಿ.
ಪುಟ್ಟ ಪುಟ್ಟದಾಗಿರುವ ‘ನುಚ್ಚಾಲಣಬೆ’ ಕೂಡಾ ನಮಗೆ ಮಳೆಗಾಲದ ಅಚ್ಚುಮೆಚ್ಚು. ಹೆಗ್ಗಾಲಣಬೆ ರೀತಿಯೇ ಒಂದೇ ಜಾಗದಲ್ಲಿ ತುಂಬಾ ಬೆಳೆದರೂ ಗಾತ್ರದಲ್ಲಿ ತುಂಬಾ ಚಿಕ್ಕವಾಗಿರುವುದರಿಂದ ಅವನ್ನು ಕೀಳುವುದರೊಳಗೆ ಸುಸ್ತಾಗುತ್ತಿತ್ತು. ಹೆಗ್ಗಾಲಣಬೆಗಳು ಎಲ್ಲಿ ಬೇಕಾದರೂ ಬೆಳೆಯುತ್ತಿದ್ದವು. ನುಚ್ಚಾಲಣಬೆಗಳು ಹೆಚ್ಚಾಗಿ ಹುತ್ತಗಳ ಮೇಲೆ ಬೆಳೆಯುತ್ತಿದ್ದರಿಂದ ಹಾಗೂ ನಾಗರ ಹಾವುಗಳು ಮಲೆನಾಡಿನ ಕಾಯಂ ಅತಿಥಿಗಳಾಗಿದ್ದರಿಂದ ಹುತ್ತದ ಬಳಿ ಕೀಳಲು ನಾವು ಸ್ವಲ್ಪ ಭಯಪಡುತ್ತಿದ್ದೆವು. ಇವೆಲ್ಲದರ ಜೊತೆಗೆ ಅಣಬೆಯ ಆಸೆಗೆ ಬಿದ್ದು ಕೆಲವೊಮ್ಮೊಮ್ಮೆ ತಿನ್ನಬಾರದ ಯಾವ್ಯಾವೋ ಕಾಡು ಅಣಬೆಗಳನ್ನು ತಿನ್ನುವ ಅಣಬೆಯೆಂದು ತಂದು, ತಿಂದು ದಿನವಿಡೀ ವಾಂತಿ-ಬೇಧಿ ಶುರುವಾದದ್ದೂ ನೆನಪಿನಲ್ಲಿ ಇದೆ. ಅದೆಷ್ಟೋ ಅಣಬೆಗಳು ವಿಷಪೂರಿತವಾಗಿದ್ದು, ಎಷ್ಟೋ ಜನರ ಜೀವ ತೆಗೆದದ್ದನ್ನೂ ಕೇಳಿದ್ದೇವೆ. ಆದರೆ ನಾವು ತುಂಬಾ ಹುಷಾರಾಗಿದ್ದಿದ್ದರಿಂದ ಹಾಗೆಯೇ ಹಿರಿಯರು ಪದೇಪದೆ ಕಿವಿಮಾತು ಹೇಳುತ್ತಿದ್ದರಿಂದ, ಅವಘಡವಾಗದೆ ಕೇವಲ ವಾಂತಿ-ಬೇಧಿಗೆ ನಿಂತದ್ದು ಅದೆಷ್ಟೋ ಜನ್ಮಗಳ ಪುಣ್ಯ. ಒಟ್ಟಿನಲ್ಲಿ ಮಳೆಗಾಲ ನಮಗೆ ಅಣಬೆಗಳ ಕಾಲವಾಗಿತ್ತು. ಶಾಲೆಗೆ ರಜೆ ಸಿಕ್ಕರೆ, ಮನೆಯವರ ಕಣ್ತಪ್ಪಿಸಿ, ಕಾಡಿನಲ್ಲಿ, ಕಂಡಕಂಡವರ ಹತ್ತಿ ಹೊಲಗಳಲ್ಲಿ ಅಲೆದಾಡುವ ಕಾಲವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.