ಕರಿಯ ಬೀದಿಯ ಕಸ ಆರಿಸುವ ಒಬ್ಬ ಹುಡುಗ. ಹೆಸರಿಗೆ ತಕ್ಕ ಹಾಗೆ ಕಪ್ಪಾಗಿದ್ದ. ಬೆಳಿಗ್ಗೆ ಎದ್ದು ದೊಡ್ಡ ಪ್ಲಾಸ್ಟಿಕ್ ಚೀಲ ಹಿಡಿದು ಹೊರಡುತ್ತಿದ್ದ. ಹತ್ತಾರು ಬೀದಿಗಳನ್ನು, ಬಡಾವಣೆಗಳನ್ನು ಹೊಕ್ಕು ಕಸದ ಗುಂಡಿಗಳನ್ನು ಶೋಧಿಸಿ ಬೇಕಾದುದನ್ನು ತನ್ನ ಚೀಲಕ್ಕೆ ತುಂಬಿಕೊಳ್ಳುತ್ತಿದ್ದ. ಅದೃಷ್ಟವಿದ್ದರೆ ಕಸದ ಜೊತೆ ಕೆಲವೊಮ್ಮೆ ಉಪಯುಕ್ತ ಸಣ್ಣ ಪುಟ್ಟ ವಸ್ತುಗಳೂ ಸಿಗುತ್ತಿದ್ದವು. ಮಧ್ಯಾಹ್ನ ಮೂರರವರೆಗೂ ಕಸ ಸಂಗ್ರಹಿಸಿ ‘ದಾದಾ’ನ ಸಂಗ್ರಹ ಕೇಂದ್ರಕ್ಕೆ ಕೊಡಬೇಕಿತ್ತು. ದಾದಾ ಕಸವನ್ನೆಲ್ಲ ಪರಿಶೀಲಿಸಿ ಐದೋ ಹತ್ತೋ ರೂಪಾಯಿ ಕರಿಯನ ಕೈಯಲ್ಲಿಡುತ್ತಿದ್ದ.
ದಾದಾನ ಹತ್ತಿರ ಹೆಚ್ಚಿಗೆ ಮಾತಾಡುವಂತಿರಲಿಲ್ಲ. ಹೆಚ್ಚು ಮಾತನಾಡಿದರೆ ತನ್ನ ಹುಡುಗರಿಂದ ಹೊಡೆಸುತ್ತಿದ್ದ. ಕರಿಯನ ಹಾಗೆ ದಾದಾನ ಅಡಿ ಇನ್ನೂ ನಾಲ್ಕಾರು ಹುಡುಗರಿದ್ದರು. ಎಲ್ಲರದ್ದೂ ಒಂದೇ ಕೆಲಸ - ಕಸ ಆರಿಸಿ ದಾದಾನಿಗೆ ಒಪ್ಪಿಸುವುದು.
ಅಂದು ಕರಿಯ ದಾದಾನ ಹತ್ತಿರ ತನ್ನ ಚೀಲದ ಕಸವನ್ನೆಲ್ಲ ಸುರಿದು ವಿಂಗಡಿಸುತ್ತಿದ್ದ. ಅದೇ ವೇಳೆಗೆ ಕಸ ಆರಿಸಲು ಹೋಗಿದ್ದ ಜಾನಿಯ ಗುಂಪು ಅಲ್ಲಿಗೆ ಬಂತು. ಕರಿಯನನ್ನು ಕೆಟ್ಟದಾಗಿ ನೋಡುತ್ತ ಜಾನಿಯ ಹುಡುಗರು ಅವನ ಮೇಲೆರಗಿದರು. ಕರಿಯನೂ ಪ್ರತಿಭಟಿಸಿದ. ಜಾನಿಯ ಹುಡುಗರು ಕರಿಯನನ್ನು ಹಿಂದಿನಿಂದ ಗಟ್ಟಿಯಾಗಿ ಹಿಡಿದರು. ಕರಿಯ ಮೈ ಕೊಸರಿದ. ದಾದಾ ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ನೋಡಿದ. ಜಾನಿ ಹೇಳಿದ 'ದಾದಾ, ಈ ಕರಿಯನಿಗೆ ಹೇಳು ನಾವು ಹೋಗೋ ಬಡಾವಣೆಗೆ ಅವನು ಬರಬಾರದು. ಇವತ್ತು ನಮಗೆ ಸೇರಿದ್ದ ಬಡಾವಣೆಯಿಂದ ಕಸವನ್ನೆಲ್ಲ ಆರಿಸಿಕೊಂಡು ಬಂದಿದ್ದಾನೆ. ನಮ್ಮದುದನ್ನೆಲ್ಲ ದೋಚಿದ್ದಾನೆ. ನಮ್ಮ ಹೊಟ್ಟೆ ಮೇಲೆ ಹೊಡೆದಿದ್ದಾನೆ. ಇವನನ್ನು ಸುಮ್ಮನೆ ಬಿಡೋದಿಲ್ಲ.’
ಇಷ್ಟು ಹೇಳಿ ಕರಿಯನ ಮುಖದ ಮೇಲೆ ಜಾನಿ ಗುದ್ದಿದ. ಕರಿಯ ನರಳಿದ. ವಾಪಸು ಪೆಟ್ಟು ಕೊಡುವವನಿದ್ದ ಆದರೆ ಜಾನಿಯ ಹುಡುಗರು ಹಿಂದಿನಿಂದ ಕೈಹಿಡಿದಿದ್ದರು. ಕರಿಯ ಅಸಹಾಯಕನಾಗಿದ್ದ. ದಾದಾ ಮತ್ತೆ ಮಧ್ಯ ಪ್ರವೇಶಿಸಿದ್ದರಿಂದ ಜಗಳ ಮುಂದುವರಿಯಲಿಲ್ಲ. ಕರಿಯನೂ ಎಲ್ಲ ಬಯ್ಗಳಗಳನ್ನೂ ಉಪಯೋಗಿಸಿದ.
‘ಜಾನಿ, ಸಾಕು ಎಂದೆನಲ್ಲ. ಏಯ್ ಕರಿಯ, ಅವರ ಏರಿಯಾಕ್ಕೆ ನೀನ್ಯಾಕೆ ಹೋಗಿದ್ದೆ? ಹೋಗಬೇಡ ತಿಳೀತಾ?’ ಎಂದರು ದಾದಾ.
‘ದಾದಾ, ಆ ಏರಿಯಾ ಅವನ ಆಸ್ತೀನಾ?’ ಎಂದ ಕರಿಯ. ‘ನೋಡಿದಿರಾ ದಾದಾ, ಕರಿಯನ ಧಿಮಾಕು?’ ಎಂದ ಜಾನಿ. ಮತ್ತೆ ಜಗಳ ಹೊತ್ತಿಕೊಳ್ಳವುದರಲ್ಲಿತ್ತು. ದಾದಾ ಕರಿಯನಿಗೂ ಜಾನಿಗೂ ಪೆಟ್ಟು ಕೊಟ್ಟು ಜಗಳಕ್ಕೆ ಅಂತ್ಯ ಹೇಳಿದ.
ಕರಿಯ, ದಾದಾ ಕೊಟ್ಟಿದ್ದ ಇಪ್ಪತ್ತು ರೂಪಾಯಿ ಹಿಡಿದು ಕಾಕಾನ ಬೀಡಿ ಅಂಗಡಿಗೆ ತೆರಳಿದ. ಕಾಫಿ ಕುಡಿದ. ಎರಡು ಬನ್ ತಗೊಂಡ. ಹಿಂದಿನ ಬಾಕಿ ಎಷ್ಟಿದೆ ಎಂದು ಕಾಕಾನಲ್ಲಿ ಕೇಳಿದ. ಹತ್ತು ರೂಪಾಯಿ ಇತ್ತು. ಕರಿಯ ತುಂಬಿದ ಕಣ್ಣುಗಳಿಂದ ಕಾಕನನ್ನು ನೋಡಿದ. ಅವನು ಅಂಗಡಿಯ ಮುಂದೆ ಕುಳಿತು ಬನ್ನನ್ನು ಕಾಫಿಯಲ್ಲಿ ಅದ್ದಿ ತಿನ್ನುತ್ತಿದ್ದಾಗ ಡಾಗಿ ಬಂದು ಬಾಲ ಆಡಿಸಿತು. ಪ್ರೀತಿಯಿಂದ ಮೂಸಿತು. ಉಳಿದ ಹಣದಲ್ಲಿ ಇನ್ನೂ ಒಂದು ಬನ್ನು ತಂದ ಕರಿಯ. ಡಾಗಿಗೆ ತುಂಡು ತುಂಡು ಮಾಡಿ ಹಾಕಿದ. ಅವನ್ನು ಗಬಗಬ ತಿಂದಿತು ಡಾಗಿ. ಕರಿಯ ಡಾಗಿಯ ಮೈಯನ್ನೆಲ್ಲ ಪ್ರೀತಿಯಿಂದ ತಡವಿದ. ಡಾಗಿ ಕೂಡ ಕರಿಯನನ್ನು ಅಲ್ಲಲ್ಲಿ ನೆಕ್ಕಿತು.
ಕರಿಯನೆಂದರೆ ಡಾಗಿಗೆ ವಿಶೇಷ ಮಮತೆ. ಎಲ್ಲಿದ್ದರೂ ಕರಿಯನನ್ನು ಹುಡುಕಿಕೊಂಡು ಬರುತ್ತಿತ್ತು. ತಾನು ತಿನ್ನುತ್ತಿದ್ದುದನ್ನೇ ಕರಿಯ ಡಾಗಿ ನಾಯಿಯೊಡನೆ ಹಂಚಿಕೊಳ್ಳುತ್ತಿದ್ದ. ಕೆಲವೊಮ್ಮೆ ಕಸದ ಗುಂಡಿಯಲ್ಲಿ ಸಿಗುತ್ತಿದ್ದ ತಿಂಡಿಯ ರುಚಿಯೂ ಡಾಗಿಗೆ ಸಿಗುತ್ತಿತ್ತು. ಬೇಸಿಗೆಯ ರಾತ್ರಿಗಳಲ್ಲಿ ಕರಿಯ ತನ್ನ ಮನೆಯ ಮುಂದಿನ ರಸ್ತೆಯಲ್ಲೇ ಮಲಗುತ್ತಿದ್ದ. ಡಾಗಿ ರಾತ್ರಿ ಯಾವಾಗಲೋ ಬಂದು ಕರಿಯನ ಹೊದಿಕೆಯನ್ನು ಹಂಚಿಕೊಂಡು ಮಲಗುತ್ತಿತ್ತು.
ಅಂದು ಕಾಕಾನ ಅಂಗಡಿಯಲ್ಲಿ ಕರಿಯ ಇದ್ದಾಗ ಜಾನಿ ಹುಡುಗರೊಂದಿಗೆ ಗಲಾಟೆ ಮಾಡುತ್ತ ಅಲ್ಲಿಯೇ ಕಾಣಿಸಿಕೊಂಡ. ಕರಿಯನನ್ನು ಕಂಡು ಎಲ್ಲರೂ ಅವನ ಮೇಲೆರೆಗಿದರು. ಜಾನಿ ಅದೇ ದನಿಯಲ್ಲಿ ಕಿರುಚಿದ, 'ಏಯ್ ಕರಿಯ, ಇವತ್ತು ದಾದಾ ಬರಲಿಲ್ಲ ಅಂದಿದ್ರೆ, ನಿನಗೊಂದು ಪಾಠ ಕಲಿಸುತ್ತಿದ್ದೆವು. ಈಗಲೂ ಹೇಳ್ತಾ ಇದೀನಿ, ನಮ್ಮ ಏರಿಯಾದಲ್ಲಿ ನಿನ್ನ ಕಂಡ್ರೆ ಬಿಡಲ್ಲ.’
ಕರಿಯ ಕೂಡ ಸುಮ್ಮನಿರಲಿಲ್ಲ. ಅವನೂ ಎತ್ತರದ ದನಿಯಲ್ಲಿ ವಾದಿಸಿದ. ಮತ್ತೆ ಜಗಳ ಹೊತ್ತಿಕೊಂಡಿತು. ಜಾನಿ ಮತ್ತು ಸಂಗಡಿಗರು ಕರಿಯನಿಗೆ ಹೊಡೆಯಲು ಮುಂದಾದರು. ಡಾಗಿ ಬೌ ಬೌ ಎಂದಿತು.
ಕರಿಯನನ್ನು ಮುತ್ತಿದ್ದ ಹುಡುಗರ ಮೇಲೆ ಹಾರಿತು. ಅವರ ಪ್ಯಾಂಟನ್ನು ಬಾಯಲ್ಲಿ ಹಿಡಿದು ಎಳೆಯಿತು. ಒಬ್ಬ ಹುಡುಗ ಡಾಗಿಯ ಮೇಲೆರಗಿದ. ಡಾಗಿ ಅವನನ್ನು ಅಟ್ಟಿಸಿಕೊಂಡು ಹೋಯಿತು. ಇನ್ನೊಬ್ಬನ ಕೈಯಲ್ಲಿ ಕೋಲು ಇತ್ತು. ಡಾಗಿಯ ಮೇಲೆ ಅದನ್ನು ಬೀಸಿದ. ಅದು ಡಾಗಿಯ ಕಾಲಿಗೇ ಬಿತ್ತು. ಕೊಂಯ್ ಕೊಂಯ್ ಎನ್ನುತ್ತ ಡಾಗಿ ಒದ್ದಾಡಿತು. ನಂತರ ಜಾನಿಯ ಪಡೆ ಅಲ್ಲಿಂದ ಕಾಲ್ತೆಗೆಯಿತು.
ಕರಿಯ ಡಾಗಿಯನ್ನು ಎತ್ತಿಕೊಂಡು ತನ್ನ ಗುಡಿಸಲಿನ ಕಡೆ ನಡೆದ. ಮನೆಯ ಮುಂದೆ ಡಾಗಿಯನ್ನು ಮಲಗಿಸಿದ. ಒಂದು ಬಟ್ಟೆ ಹರಿದು ಡಾಗಿಯ ಗಾಯಕ್ಕೆ ಬಿಗಿಯಾಗಿ ಕಟ್ಟದ. ‘ಡಾಗಿ, ಎಲ್ಲ ಸರಿಯಾಗತ್ತೆ. ಸ್ವಲ್ಪ ಸಮಯದಲ್ಲೇ ನೀನು ನಡೆಯಬಹುದು. ನೀನ್ಯಾಕೆ ಅವರ ಮೇಲೆ ಎರಗೋಕೆ ಹೋದೆ? ಅವರು ಕೆಟ್ಟವರು ಅಂತ ಗೊತ್ತಿಲ್ಲವೆ? ಜಾನಿ ಸಿಗಲಿ, ನಾನೂ ಒಂದು ಕೈ ನೋಡ್ಕೋತೇನೆ’ ಎಂದು ಮಾತನಾಡುತ್ತ ಡಾಗಿಯ ಮೈದಡವುತ್ತಿದ್ದ. ಡಾಗಿ ಕೂಡ ನೋವಿನ ದನಿ ಮಾಡುತ್ತ ಕರಿಯನನ್ನು ನೆಕ್ಕುತ್ತಿತ್ತು.
ಎರಡು ಮೂರು ದಿನ ಕಳೆದಿರಬಹುದು. ಕರಿಯನ ಡಾಗಿ ಮನೆಯಲ್ಲಿ ಉಳಿಯಿತು. ಕರಿಯ ತನ್ನ ಕೆಲಸ ಮುಗಿಸಿ ಡಾಗಿಗೂ ಬ್ರೆಡ್ಡು ತರತ್ತಿದ್ದ. ಡಾಗಿ ಮೆಲ್ಲಗೆ ಕುಂಟುತ್ತ ಓಡಾಡಲಾರಂಭಿಸಿತು. ಕರಿಯ ರಾತ್ರಿ ಹೊತ್ತು ತನ್ನ ಗುಡಿಸಲಿನ ಮುಂದೆ ಮಲಗಿ, ಡಾಗಿಗೂ ಒಂದು ಹರಕಲು ಚೀಲ ಹಾಕುತ್ತಿದ್ದ.
ಒಂದು ರಾತ್ರಿ ಡಾಗಿ ಬೊಗಳಿದಂತಾಯಿತು. ಗಾಢ ನಿದ್ರೆಯಲ್ಲಿ ಇದ್ದ ಕರಿಯನಿಗೆ ಎಚ್ಚರವಾದರೂ ಮಗ್ಗಲು ಮಾಡಿ ಮಲಗಿದ. ಡಾಗಿಯ ಬೊಗಳುವಿಕೆ ತೀವ್ರವಾದಾಗ ಮಲಗಿದ್ದಲ್ಲೇ ಕಣ್ಣುಬಿಟ್ಟ ಕರಿಯ. ಪರಿಚಿತ ದನಿ ಅನಿಸಿತು. ಕಿವಿಗೊಟ್ಟು ಕೇಳಿದ: ‘ಜಾನಿ, ಇಲ್ಲಿ ಮಲಗಿರೋವನೇ ಕರಿಯ. ಇವತ್ತು ಅವನಿಗೆ ಬಾರಿಸಬೇಕು. ನೀವಿಬ್ಬರೂ ಹೋಗಿ ಕರಿಯನ ಕಾಲು ಹಿಡಿಯಿರಿ. ನಾನು ಅವನ ಮುಖಕ್ಕೆ ಬಾರಿಸುತ್ತೇನೆ. ಅವನಿಗೆ ಬುದ್ಧಿ ಕಲಿಸೋಣ. ಇನ್ನು ಅಂವ ನಮ್ಮ ಸಹವಾಸಕ್ಕೆ ಬರಬಾರದು ಅಷ್ಟೆ.’
ಕರಿಯ ಕಣ್ಣುಜ್ಜಿಗೊಳ್ಳುವ ಹೊತ್ತಿಗೆ ಡಾಗಿ ಜೋರಾಗಿ ಬೊಗಳುತ್ತ ನೆಗೆಯಿತು. ಕತ್ತಲಲ್ಲಿ ಜಾನಿ ಮತ್ತು ಹುಡುಗರು ಕರಿಯನ ಹತ್ತಿರ ಬರುತ್ತಿದ್ದರು. ಏನಾಗುತ್ತಿದೆ ಎಂದು ಅರಿಯುವ ಮೊದಲೇ ಡಾಗಿ ಬೊಗಳುತ್ತ, ಕರಿಯನಿಗೆ ಹೊಡೆಯಲು ಬರುತ್ತಿದ್ದ ಹುಡುಗನ ಮೇಲೆ ಹಾರಿತು. ಡಾಗಿ ಹಾರಿದ ರಭಸಕ್ಕೆ ಹುಡುಗ ಬಿದ್ದ. ಕರಿಯನಿಗೆ ಪರಿಸ್ಥಿತಿ ಅರಿವಾಯಿತು. ಜಗ್ಗನೆದ್ದು ಮನೆಯ ಪಕ್ಕದ ಓಣಿಯಲ್ಲಿ ಓಡಿದ.
ಕತ್ತಲಲ್ಲಿ ಎಲ್ಲರೂ ಅಸ್ಪಷ್ಟವಾಗಿತ್ತು. ಅಷ್ಟು ಹೊತ್ತಿಗೆ ಜಾನಿ ಕೂಗಿ ಹೇಳಿದ ‘ಕರಿಯ ತಪ್ಪಿಸಿಕೊಂಡ’ ಎಂದು. ದೂರದ ಸಂದಿಯಲ್ಲಿ ಅಡಗಿಕೊಂಡು ಕರಿಯ ಅವರನ್ನು ನೋಡುತ್ತಿದ್ದ. ದೂರದಲ್ಲಿ ಬೀಟ್ ಪೊಲೀಸರ ಶಿಳ್ಳೆ ಸದ್ದು ಕೇಳಿಸಿತು. ಜಾನಿಯ ಹುಡುಗರೆಲ್ಲ ದಿಕ್ಕು ಪಾಲಾಗಿ ಓಡಿ ಹೋಗಿದ್ದರು. ಪ್ರೀತಿಯ ಡಾಗಿ ನಾಯಿ ಕರಿಯನನ್ನು ಕಾಪಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.