ADVERTISEMENT

ದೀಪಾವಳಿ ವಿಶೇಷಾಂಕ–2022: ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ | ಭವದ ಕೇಡು

ಜಯರಾಮಚಾರಿ
Published 29 ಅಕ್ಟೋಬರ್ 2022, 19:30 IST
Last Updated 29 ಅಕ್ಟೋಬರ್ 2022, 19:30 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

ನಿದ್ದೆ ಬರದೇ ಒದ್ದಾಡುತ್ತಿದ್ದ ಮುಂಜಾನೆ ಎರಡು ಹತ್ತಕ್ಕೆ ‘ಸರ್ ಅಪ್ಪ ಹೋಗ್ಬಿಟ್ರು’ ಎಂದು ಮೆಸೇಜ್ ಬಂತು. ತೆರೆಯದೆ ನೋಡಿದ ಆ ವಾಟ್ಸಾಪ್ ಮೆಸೇಜಿಗೆ ರಿಪ್ಲೈ ಮಾಡೋದ? ಬೇಡ್ವಾ? ಅಂತ ಯೋಚಿಸುತ್ತ ಎದ್ದು ಕುಳಿತೆ.

**

ಅವರನ್ನು ಮೊದಲು ನೋಡಿದ್ದು ಶ್ರೀರಂಗಪಟ್ಟಣದಲ್ಲಿ. ನನ್ನ ಹೆಂಡತಿಯ ಅಸ್ಥಿಯನ್ನು ಬಿಟ್ಟು, ಅದರ ಜೊತೆ ಬಿಟ್ಟ ಹೂವು, ಎಲೆ, ಗಂಧದ ಕಡ್ಡಿಗಳು ತೇಲಿ ಹೋಗುವುದನ್ನೇ ನೋಡ್ತಿದ್ದೆ. ಅವನ್ನೆಲ್ಲ ಅಸ್ಥಿ ಜೊತೆ ಬಿಡಬಹುದಾ? ಎನ್ನುವುದು ಕೂಡ ನನಗೆ ಗೊತ್ತಿರಲಿಲ್ಲ. ಯಾವ ಪೂಜಾರಿಯ ನೆರವಿಲ್ಲದೆ ನನಗನಿಸಿದ್ದನ್ನ ನನಗೆ ಮಾಡಬೇಕು ಅನಿಸಿತ್ತು. ಹಾಗಾಗಿ ಅಸ್ಥಿ ಕಾರಲ್ಲಿಟ್ಟುಕೊಂಡು ಚಿತಾಗಾರದಿಂದ ಒಂದೇ ವೇಗದಲ್ಲಿ ಪಶ್ಚಿಮವಾಹಿನಿಗೆ ಬಂದು ಯಾವ ದಿಕ್ಕಿಗೆ ನಿಲ್ಲಬೇಕು ಎಂದು ಕೂಡ ಯೋಚಿಸದೆ ಸುಮ್ಮನೆ ಬಿಟ್ಟೆ, ಜೊತೆಯಲ್ಲಿ ತಂಡ ಎಲೆ-ಹೂ-ಗಂಧದ ಕಡ್ಡಿ ಸಮೇತ ಎಸೆದೆ. ‘ನಾನು ಸತ್ರೆ ನೀನು ನನ್ನ ಅಸ್ಥಿ ಕೂಡ ತಗೊಳ್ಳೋದು ಡೌಟು ಕಣೋ’ ಎಂದು ಮೂತಿ ತಿವಿದಿದ್ದಳು. ಅವತ್ತು ನಾವು ಟೆರೇಸಿನಲ್ಲಿ ಬೆತ್ತಲಾಗಿದ್ದೆವು. ಆಕಾಶದ ಕೆಳಗೆ ಚುಕ್ಕಿಗಳಾಗಿ ನಾವು ಕೂಡೋಣ ಎಂದು ಮೆಸೇಜು ಮಾಡಿದ್ದಳು. ಮೆಸೇಜು ನೋಡಿಯೇ ಆಫೀಸಿನಿಂದ ಓಡಿ ಬಂದಿದ್ದೆ, ಬಾಗಿಲು ತೆಗೆಯೋಣ ಎಂದುಕೊಂಡರೆ ಬಾಗಿಲಲ್ಲೇ ‘ಕಮ್ ಟೂ ಟೆರೇಸ್ ಯೂ ಫೂಲ್’ ಎಂಬ ಸ್ಟಿಕ್ ನೋಟು. ಅದೇನೋ ಉಮೇದು. ಅದೇನೋ ರಭಸ ಮೇಲೆ ಹೋಗಿದ್ದು. ಅವಳಾಗಲೇ ಹಾಸಿಗೆಯ ಮೇಲೆ ಬೆತ್ತಲಾಗಿದ್ದಳು. ಹೋಗಿ ಅಪ್ಪಿಕೊಂಡೆ. ಅದು ರಭಸದ ಆವೇಗದ ವಿಚಿತ್ರ ಸಂಭೋಗ. ಮಿಲನದ ನಂತರ ಇದೇನು ಹೊಸ ವರಸೆ ಎಂದು ಕೇಳಿದ್ದಕ್ಕ ‘ಸೆಕ್ಸು ತೀರ ರೂಟೀನ್ ಆಗ್ತಾ ಇದೆ ಅನ್ಸ್ತು. ನಿನಗಾಗಲಿ ನನಗಾಗಲಿ ಅಷ್ಟೊಂದು ಥ್ರಿಲ್ ಇಲ್ಲ. ಇತ್ತೀಚೆಗೆ, ವಾರಕ್ಕೆರಡು ಸಲ ಮನೆ ಸಾರಿಸುವಂತೆ ಅಪರೂಪಕ್ಕೆ ನಾವು ಕೂಡೋದರಲ್ಲಿ ಮಜಾ ಇಲ್ಲ ಕಣೋ. ಮದ್ವೆ ಮುಂಚೆ ನಾನು ಇಲ್ಲಿಗೆ ಬರೋ ಅಷ್ಟ್ರಲ್ಲಿ ನೀನು ಎಷ್ಟು ಎಕ್ಸೈಟ್ ಆಗ್ತಾ ಇದ್ದೆ. ಮದ್ವೆ ಆಗಿ ಎಷ್ಟೋ ದಿನ ಆದ್ಮೇಲೆ ನೋಡು ನೀನು ಇಷ್ಟೊಂದು ಎಕ್ಸೈಟ್ ಆಗಿದ್ದು’ ಎಂದು ಮೂತಿ ತಿವಿದಿದ್ದಳು. ಅವತ್ತೇ ನನ್ನ ಬೆತ್ತಲೆ ಎದೆ ಮೇಲೆ ಒರಗಿ ಆ ಮಾತು ಹೇಳಿದ್ದಳು, ‘ನಾನು ಸತ್ರೆ ನೀನು ನನ್ನ ಅಸ್ಥಿ ಕೂಡ ತಗೊಳ್ಳೋದು ಡೌಟು ಕಣೋ’.

ADVERTISEMENT

ಅವಳ ಅಸ್ಥಿ ತೇಲಿ ಹೋದ ಮೇಲೆ ಎದ್ದೇಳಲು ನಿಂತಾಗ ಅವರು ಅಲ್ಲಿದ್ದರು, ಕೂತಿದ್ದರು. ಬಿಳಿ ಪಂಚೆ, ಶರ್ಟ್ ಇಲ್ಲದ ಮೇಲರ್ಧ ಕಪ್ಪು ಬೆತ್ತಲು, ಭುಜದಲ್ಲೂ ಎದ್ದು ನಿಂತ ಕೂದಲುಗಳು, ಹೆಗಲ ಮೇಲೆ ಒಂದು ಶಲ್ಯ, ಮುಂದೆ ಸ್ವಲ್ಪ ಬೋಳು ಅನಿಸಿದರೂ ದಟ್ಟ ಕೂದಲು, ಹಾಗೆ ಕೂತು ಅವರು ನದಿಯನ್ನು ನೋಡುತ್ತಾ ಕೂತಿದ್ದರು. ನಾನು ಎದ್ದೇಳಲು ಅವರು ಕ್ಷಣ ಬಿಟ್ಟು ಎದ್ದೇಳಲು ಒಂದೇ ಆಗಿ, ಅವರಿಗೆ ಏಳಲು ಆಗದೆ ಕುಸಿದು ಬಿದ್ದರು, ನಾನು ಗಾಬರಿಯಲ್ಲಿ ಓಡಿ ಅವರ ಕೈ ಹಿಡಿದೆ. ‘ಥ್ಯಾಂಕ್ ಯೂ’ ಎಂದರು. ಅವರ ಕಣ್ಣಲ್ಲಿ ಯಾವ ಭಾವವಿತ್ತು?

ಅದಾದ ಮೇಲೆ ಅವರು ಮತ್ತೆ ಸಿಕ್ಕಿದ್ದು ಮೆಟ್ರೋ ಟ್ರೈನಿನಲ್ಲಿ. ಅದು ರಾತ್ರಿ ಹನ್ನೊಂದರ ಸಮಯ. ಕೊನೆಯ ಮೆಟ್ರೋ ಟ್ರೇನು. ಕಾರು ಸರ್ವಿಸ್‌ಗೆ ಕೊಟ್ಟ ಕಾರಣ ಆತುರವಾಗಿ ಓಡಿ ಬಂದು ಕೆಂಗೇರಿಯಲ್ಲಿ ಕೊನೆಯ ಟ್ರೇನು ಇನ್ನೇನೋ ಹತ್ತುವಷ್ಟರಲ್ಲಿ ಬಾಗಿಲ ಮಧ್ಯೆ ಬ್ಯಾಗು ಸಿಕ್ಕುಹಾಕಿಕೊಂಡಿತು. ಮೆಟ್ರೋದಲ್ಲಿ ಅಷ್ಟಾಗಿ ಓಡಾಡದ ನನಗೆ ಏನು ಮಾಡೋದು ತೋಚದೆ ನಿಂತಾಗ, ಅಲ್ಲೇ ಕೂತಿದ್ದ ಅವರು ಎದ್ದು ಬಂದು, ನರಸಿಂಹ ಹಿರಣ್ಯಕಶುಪುವಿನ ಎದೆ ಬಗೆಯುವಂತೆ ಮೆಟ್ರೋದ ಆ ಬಾಗಿಲನ್ನು ತನ್ನ ಎರಡು ಕೈಗಳಿಂದ ನಿಧಾನವಾಗಿ ಅಗಲಿಸಿದರು. ನಾನು ಬ್ಯಾಗ್ ಎಳೆದುಕೊಂಡೆ. ಅಲ್ಲಿವರೆಗೂ ವಿಚಿತ್ರ ಸದ್ದು ಮಾಡುತ್ತಿದ್ದ ಮೆಟ್ರೋ ಬಾಗಿಲು ಒಮ್ಮೆಗೆ ಕ್ಲೋಸ್ ಆಗಿ ಟ್ರೇನು ಹೊರಟಿತು. ನಾನು ಅವರಿಗೆ ‘ಥ್ಯಾಂಕ್ ಯೂ’ ಎಂದೆ. ಆಗ ಈ ವ್ಯಕ್ತಿಯನ್ನು ಎಲ್ಲೋ ನೋಡಿದೆನೆಲ್ಲ ಎನಿಸಿ ‘ನೀವು ಅವತ್ತು...ಶ್ರೀ ರಂಗಪಟ್ಟಣ …’ಅಂದೆ. ಅವರಿಗೂ ನೆನಪಾಗಿ ‘ಒಹೋ ಬನ್ನಿ, ಬನ್ನಿ ಕೂತ್ಕೊಳ್ಳಿ’ ಎಂದು ಸೀಟಿನಲ್ಲಿ ಕೂರಿಸಿ ಮಾತಾಡಲು ಶುರುಮಾಡಿದರು.

ಅವರು ಇಂದಿರಾನಗರದಲ್ಲಿ ಇಳಿದರು. ನಾನು ಬೈಯಪ್ಪನಹಳ್ಳಿಲಿ ಇಳಿದೆ. ಅವತ್ತು ಅವರು ಶ್ರೀರಂಗಪಟ್ಟಣಕ್ಕೆ ಬಂದದ್ದು ತನ್ನ ತಾಯಿಯ ಅಸ್ಥಿ ವಿಸರ್ಜನೆಗೆ, ‘ಅಪ್ಪನಿಗೆ ಅಲ್ಜ್ಹಿಮರ್ ಖಾಯಿಲೆ. ಹಾಗಾಗಿ ಅವ್ರು ಜೊತೆ ಇರಲಿಲ್ಲ, ನಾನೇ ಎಲ್ಲ ನಿಂತು ಮಾಡಿದೆ. ತುಂಬಾ ಸುಸ್ತಾಗಿತ್ತು ಕೂತಿದ್ದೆ. ಎಷ್ಟು ಹೊತ್ತು ಗೊತ್ತಿಲ್ಲ. ನನಗೆ ಅಮ್ಮ ಅಂದ್ರೆ ತುಂಬಾ ಇಷ್ಟ. ಸಡನ್ನಾಗಿ ಕ್ಯಾನ್ಸರ್ ಬಂದು, ಅದು ಯಾಕೆ ಬಂತು ಎಂದು ನಾವು ತಲೆಕೆಡಿಸಿಕೊಂಡು ಅಲ್ಲಿ ಇಲ್ಲಿ ತೋರಿಸುವಷ್ಟರಲ್ಲಿ ಡಾಕ್ಟರ್ ‘ಹೆಚ್ಚೆಂದರೆ ಇನ್ನೊಂದು ತಿಂಗಳು’ ಅಂದ್ರು. ಅವರು ಹೇಳಿದಂತೆ ತಿಂಗಳಲ್ಲೇ ತೀರಿ ಹೋದರು. ಸಾಯುವ ವಯಸ್ಸು ಅಲ್ಲ. ಯಾಕೋ ಅವತ್ತು ಅಲ್ಲಿ ಕೂತಾಗ ಏನು ಹೀಗೆ ಆಗಿ ಹೋಯ್ತಲ್ಲ ಎಂದು ಯೋಚಿಸುತ್ತ ಕೂತುಬಿಟ್ಟೆ. ಒಂದೆರಡು ದಿನ ಏನು ತಿಂದಿರಲಿಲ್ಲ ನೋಡಿ ಅದಕ್ಕೆ ಸುಸ್ತಾಗಿದ್ದೆ ಅನ್ಸುತ್ತೆ. ನೀವು ಸಿಕ್ಕಿದ್ದು ಒಳ್ಳೇದೇ ಆಯಿತು ಮನೇಲಿರೋ ನನ್ನ ತಂದೆ ಅವರ ನೆನಪೇ ಇರಲಿಲ್ಲ. ಅರ್ಜೆಂಟಲ್ಲಿ ಹೋಗಿಬಿಟ್ಟೆ. ನಿಮ್ಮ ಹೆಸರು ಕೂಡ ಕೇಳಿಲ್ಲ. ಬೈ ದ ವೇ ನಾನು ಉಮೇಶ್, ಇಲ್ಲೇ ಮೆಟ್ರೋಲಿ ಕೆಲಸ’ ಎಂದು ಕೈ ನೀಡಿದರು. ನಾನು ನನ್ನ ಪರಿಚಯ ಮಾಡಿಕೊಂಡೆ, ಅವರು ನಂಬರ್ ಕೇಳಿದರು ನಾನು ಕೊಟ್ಟೆ. ಅವರು ಇಂದಿರಾನಗರದಲ್ಲಿ ಇಳಿದು ಹೋದರು.

**

ಅದಾದ ಮೇಲೆ ಮತ್ತೆ ಉಮೇಶ್ ಸಿಗಲಿಲ್ಲ. ಅಂತಹ ಸಂಧರ್ಭಗಳು ಬರಲಿಲ್ಲ. ಆದರೆ ಅವರ ವಾಟ್ಸಾಪ್ ಸ್ಟೇಟಸ್ ಮಾತ್ರ ದಿನಕ್ಕೆರಡು ಬಾರಿ ಕಾಣಿಸ್ತಾ ಇತ್ತು. ಸಿನಿಮಾ-ಸಾಹಿತ್ಯ-ಫಿಲಾಸಫಿ-ಸೈನ್ಸು-ಎಕನಾಮಿಕ್ಸ್ ಹೀಗೆ ಏನೇನೋ ಬಗೆಯ ಸ್ಟೇಟಸ್. ಎಲ್ಲವೂ ಇಂಟರೆಸ್ಟಿಂಗ್ ಸ್ಟೇಟಸ್‌ಗಳು. ಪುನರ್ಜನ್ಮದ ಬಗ್ಗೆ ಒಲವಿತ್ತು ಅನಿಸುತ್ತೆ. ಒಂದೆರಡು ಸಲ ಕಾಲ್ ಕೂಡ ಮಾಡಿ ಮಾತಾಡಿದ್ವಿ. ಅವಾಗ ಅವರು ಮಲ್ಟಿವರ್ಸ್, ಕ್ವಾಂಟಮ್ ಫಿಸಿಕ್ಸ್ ಬಗ್ಗೆ ತುಂಬ ಹೊತ್ತು ಮಾತಾಡಿದ್ರು. ಕೇವಲ ನಿಯಮಿತ ಉಪವಾಸದಿಂದ ತಮಗೆ ಬಂದ ಬೊಜ್ಜು, ಡಯಾಬಿಟೀಸ್ ಹೇಗೆ ಹೋಯ್ತು ಎಂದು ಹೇಳಿದರು. ಅವರು ಮಾತಾಡ್ತಾ ಇದ್ರೆ ಕೇಳೋಕ್ಕೆ ಮಜಾ ಇರುತ್ತೆ. ಭಯಂಕರ ಜ್ಞಾನದ ಮನುಷ್ಯ. ಜ್ಞಾನದ ಜೊತೆ ಯಾವ ಅಹಂ ಇಲ್ಲದೆ ಎಲ್ಲವನ್ನೂ ಹಂಚಿಕೊಳ್ಳೋ ಮನುಷ್ಯ. ನನ್ನ ಅಡ್ರೆಸ್ ತಗೊಂಡು ಬ್ಲೇಕ್ ಕ್ರೌಚ್‌ನ ಡಾರ್ಕ್ ಮ್ಯಾಟರ್ ಮತ್ತೆ ರಿಕರ್ಸನ್ ಕಾದಂಬರಿಗಳನ್ನ ಕಳಿಸಿ ಜೊತೆಗೆ ಒಂದು ಪತ್ರ ಕೂಡ ಇಟ್ಟಿದ್ರು. ‘ಯಾವನೋ ತಲೆ ಇಲ್ದೋನು ಈ ಕಾದಂಬರಿನ ಕನ್ನಡದಲ್ಲಿ ಅನುವಾದ ಮಾಡಿದ್ದಾನೆ ಅಂತೇ ಇವನ್ನ ಓದಿ ಅವನ್ನ ಹುಡುಕಿ ಮುಖಕ್ ಉಗೀರಿ’ ಅಂತ ಇತ್ತು, ನಾನು ನಕ್ಕು ಸುಮ್ಮನಾದೆ.

ಹೆಂಡತಿ ಸತ್ತ ಮೇಲೆ ನನಗೆ ನಿದ್ದೆ ಮಾಡೋದೇ ಕಷ್ಟ ಆಗಿ ಹೋಯ್ತು. ನಿದ್ದೆ ಮಾಡಿ ಎರಡು ನಿಮಿಷ ಆಗಿರೋಲ್ಲ ಕನಸು. ಅದೇ ಕೆಟ್ಟ ಕನಸು, ಟೆರೇಸಿನಲ್ಲಿ ನಾನು ಬೆತ್ತಲು ಮಲಗಿದ ಹಾಗೆ, ಧಡಾರ್ ಸದ್ದು, ಹಾಗೆ ಇಳಿದು ಕೆಳಗೆ ‘ಕಮ್ ಟೂ ರೂಮ್ ಈ ಈಡಿಯಟ್’ ಎಂಬ ಸ್ಟಿಕ್ ನೋಟು, ಬಾಗಿಲು ತಳ್ಳಿ ರೂಮಿಗೆ ಬಂದರೆ ಆಕಾಶದಿಂದ ತೇಲಾಡುತ್ತಿರುವ ಅವಳ ಕಾಲುಗಳು, ಬಾಯಿಂದ ಹೊರಚಾಚಿದ ಅವಳ ನಾಲಿಗೆ, ಫ್ಯಾನ್ ಕೆಳಗೆ ತೂಗಾಡುತ್ತಿರುವ ಅವಳ ಬೆತ್ತಲು ದೇಹ. ಪ್ರತಿ ದಿನ ಇದೇ ಕನಸು, ಮಲಗೋದೇ ಕಷ್ಟ ಆಯ್ತು, ಸೈಕಿಯಾಟ್ರಿಸ್ಟ್ ಹತ್ರ ತೋರಿಸಿ ಅವರು ಬರೆದು ಕೊಟ್ಟ ಮಾತ್ರೆ, ಯೋಗ, ವ್ಯಾಯಾಮ, ಒಂಟಿಯಾಗದೆ ಜನರ ಹತ್ರನೇ ಇರೋದು ಎಲ್ಲ ಮಾಡಿದರೂ ನಿದ್ದೆ ಮಾಡಲೇಬೇಕು ಅಲ್ವ? ಬದುಕು ಜನರ ಜೊತೆ ನಡೆದರೂ, ನಿದ್ರೆ, ಮಿಥುನ ಇವೆಲ್ಲ ಖಾಸಗಿಯಾಗಿ ನಡೆಯಬೇಕು ಅಲ್ವ? ನಿದ್ದೆ ಮಾಡದೇ ಒದ್ದಾಡಿದೆ. ಆ ದಿವಸಗಳಲ್ಲಿ ಉಮೇಶ್ ಹತ್ರವಾಗಿದ್ದರು. ಅವರಿಗೆ ಈ ವಿಷಯ ಹೇಳೋದೋ ಬೇಡವೋ ಎಂದು ಕೊನೆಗೂ ಒಂದು ರಾತ್ರಿ ‘ನಿಮ್ ಜೊತೆ ತುಂಬಾ ಪರ್ಸನಲ್ ವಿಷ್ಯ ಮಾತಾಡೋದು ಇದೆ’ ಎಂದು ಮೆಸೇಜ್ ಹಾಕಿಬಿಟ್ಟೆ, ಅವರು ಒಂದರ್ಧ ಗಂಟೆಯಲ್ಲೇ ಕಾಲ್ ಮಾಡಿದರು.

ಮೊದಲ ಸಲ ಒಬ್ಬ ಸೈಕಿಯಾಟ್ರಿಸ್ಟ್, ಪೊಲೀಸ್ ಅಲ್ಲದೆ ಬೇರೆಯವರಿಗೆ ನನ್ನ ಹೆಂಡತಿ ಸತ್ತದ್ದು ಹೇಳಿದೆ. ಹೇಳುವಾಗ ಯಾಕೋ ಅಳುತ್ತಿದ್ದೆ, ಅವರು ‘ಶ್! ಶ್! ಸಾರ್ ಅಳಬೇಡಿ, ಅರಾಮಾಗಿ ಹೇಳಿ’ ಅಂತ ಇದ್ರು. ನನ್ನ ಹೆಂಡತಿ ಸತ್ತದ್ದು ಸೂಸೈಡ್ ಇಂದ. ಆತ್ಮಹತ್ಯೆ ಮಾಡಿಕೊಳ್ಳುವಂತ ವೀಕ್ ಮನಸು ಅವಳದಲ್ಲ. ಬದುಕನ್ನು ದಿಟ್ಟವಾಗಿ ಎದುರಿಸಿ ಬದುಕಿದವಳು. ನನ್ನ ಪರಿಚಯ ಆಗುವಷ್ಟರಲ್ಲಿ ಅವಳ ಅಮ್ಮ ಯಾರ ಜೊತೆಯೋ ಓಡಿ ಹೋಗಿದ್ದರು. ಅವಳು ಮನೆಯಿಂದ ದೂರವಾಗಿದ್ದಳು. ಅವಳ ಅಪ್ಪನ ಮಾತಡಿಸುವಾಗಲೆಲ್ಲ ಅವನು ಇವಳನ್ನು ಬೈಯ್ದು, ಅವರ ಅಮ್ಮನ ಬಗ್ಗೆ ಕೆಟ್ಟದಾಗಿ ಮಾತಾಡುತ್ತ ಉಗಿಯುತ್ತಿದ್ದ ಅಂತೇ. ನನ್ನ ಜೊತೆಗಿದ್ದ ಮೇಲೆ ಅವಳನ್ನು ಅಲ್ಲಿಗೆ ಕಳಿಸೋದು ಬಿಟ್ಟೆ. ಒಂದು ವರ್ಷ ಜೊತೆ ಇದ್ದು, ಎರಡನೇ ವರ್ಷಕ್ಕೆ ಮದ್ವೆ ಆಗಿ, ಮೂರನೇ ವರ್ಷಕ್ಕೆಲ್ಲ ಗರ್ಭವತಿ ಕೂಡ ಆದ್ಳು. ‘ಇಷ್ಟು ಬೇಗ ಬೇಡ ಕಣೋ ಪುಟ್ಟ’ ಅಂದ್ರೆ, ‘ಇರಲಿ ಪುಟ್ಟು ನನಗೆ ಅಮ್ಮ ಬೇಕು, ಅಮ್ಮ ಬದುಕಿರೋದು ನನಗ್ಯಾಕೋ ಅನುಮಾನ’ ಅಂತ ಇದ್ಳು. ಜಾಸ್ತಿ ಕೆದಕಿದರೆ ಅವಳ ಮನಸಿಗೆ ಕಷ್ಟ ಎಂದು ಸುಮ್ಮನಾದೆ. ಆರೇಳು ತಿಂಗಳು ಆದಾಗ ಒಂದೇ ಸಮನೆ ಹಠ, ಅಪ್ಪನ ಹೋಗಿ ನೋಡಬೇಕು, ಈ ನನ್ನ ಹೊಟ್ಟೆ ತೋರಿಸ್ಬೇಕು, ಖುಷಿ ಪಡ್ತಾರೆ ಅವರು ನಮ್ ಜೊತೆ ಬರಲಿ ಅಂತ, ಎಷ್ಟು ಹೇಳಿದರು ಕೇಳಲಿಲ್ಲ ಹೋಗೆ ಬಿಟ್ಟಳು.

ಅವತ್ತು ಇನ್ನೂ ನೆನಪಿದೆ, ಮಧ್ಯಾಹ್ನ ಮೀಟಿಂಗ್ ವೇಳೆ ಕಾಲ್ ಮೇಲೆ ಕಾಲ್ ಅವಳದು. ಈಚೆ ಬಂದು ಹಲೋ ಎಂದ ಕೂಡಲೇ ‘ಪುಟ್ಟು ಐ ಆಮ್ ಸಾರಿ ಕಣೋ ನಾನ್ ಇರೋಲ್ಲ ಅಮ್ಮ ಹತ್ರ ಹೋಗ್ತೀನಿ ನಾನು ಸಾಯ್ತಿನಿ, ಅಪ್ಪ ಇದು ನಿನ್ ಗಂಡನದೊ ಇಲ್ಲ ಯಾವನ್ ಜೊತೆ ಆದ್ರೂ ಓಡಿ ಹೋಗಿ ಮಾಡ್ಕೊಂಡಿದ್ದ, ನಿಮ್ಮ ಅಮ್ಮ ಸತ್ತಿದ್ದಾಳಾ? ಬದುಕಿದ್ದಾಳಾ? ಅಂತ ಬೈದ’ ಎಂದಳು. ನನಗೆ ಗಾಬರಿ ಆಗಿ ಕೂಡಲೇ ಆಫೀಸಿಂದ ಹೊರಬಿದ್ದೆ, ಹಾಗೆ ಮಾತಾಡಿಕೊಂಡೇ ಸಮಾಧಾನ ಮಾಡುತ್ತಲೇ ಮನೆ ತಲುಪಿ ರೂಮು ಬಾಗಿಲು ತಟ್ಟೋ ಅಷ್ಟರಲ್ಲಿ ಅವಳ ದೇಹ ಫ್ಯಾನ್ ಇಂದ ತೂಗುತ್ತಿತ್ತು, ಅವಳ ನಾಲಿಗೆ ಹೊರಚಾಚಿತ್ತು, ಫೋನಲ್ಲಿ ಸಮಾಧಾನ ಹೇಳಿ ಒಬ್ಬರನ್ನು ಬದುಕಿಸಿಕೊಳ್ಳೋದು ಅಷ್ಟು ಸುಲಭವಲ್ಲ.

ಇದಿಷ್ಟು ಹೇಳಿ ಅಳುತಿದ್ದೆ, ನಡುಗುತ್ತಿದ್ದೆ. ಅವತ್ತು ಉಮೇಶ್ ಏನು ಹೇಳಲಿಲ್ಲ. ಆರಾಮಾಗಿ ಮಲಗಿ ಕಷ್ಟ ಆದ್ರೆ ಇಲ್ಲೇ ನಮ್ ಮನೆಗೆ ಬನ್ನಿ ಮಲ್ಕೊಳ್ಳಿ ಅಂದ್ರು. ನಾನು ಇಲ್ಲ ಎಂದು ಮನೆಯಲ್ಲೇ ಮಲ್ಕೊಂಡೆ. ಅವತ್ತು ಕೂಡ ಅದೇ ಕನಸು. ನಿದ್ರೆ ಬಾರದೆ ಎದ್ದು ಉಮೇಶ್ ಕೊಟ್ಟ ಕಾದಂಬರಿ ಓದುತ್ತ ಕೂತೆ.

ಮೂರು ದಿನ ಬಿಟ್ಟು ಕಾಲ್ ಮಾಡುದ್ರು. ‘ಸರ್ ತಪ್ಪು ತಿಳ್ಕೊಬೇಡಿ ಈ ತರ ಹೇಳ್ತಿನಿ ಅಂತ. ಅವತ್ತೇ ಹೇಳೋಣ ಅನ್ಕೊಂಡೆ. ನೋಡಿ ಮೇಡಂ ಸಾವಲ್ಲಿ ನಿಮ್ ಪಾತ್ರ ಏನಿಲ್ಲ. ಸೋ ನಿಮ್ಮ ಕಂಟ್ರೋಲ್‌ಗೆ ಸಿಗದ ಬಗ್ಗೆ ನೀವು ಜಾಸ್ತಿ ತಲೆ ಕೆಡಿಸ್ಕೊಬೇಡಿ. ನೋಡಿ ನಮ್ ತಾಯಿ ಸಾವಿಗೆ ಕ್ಯಾನ್ಸರ್ ಕಾರಣ. ಅದು ಇರೋದು ಹಾಗೆ ಜೀವ ತಗೋಳ್ಳೋದೇ ಅದರ ಲಕ್ಷಣ. ನಿಮ್ ಮಾವನಿಗೂ ಆ ಕ್ಯಾನ್ಸರ್‌ಗೂ ಅಂತ ವ್ಯತ್ಯಾಸ ಇಲ್ಲ. ಇವಾಗ ಸುಮ್ನೆ ಒಂದ್ ಕೆಲಸ ಮಾಡಿ ಒಂದೊಳ್ಳೆ ಕಾಲ್‌ಗರ್ಲ್ ಅಥವಾ ಯಾವುದಾದ್ರೂ ಸೈಡ್ ಟ್ರ್ಯಾಕ್ ಇದ್ರೆ ಇವತ್ತೇ ಒಂದು ಸಲ ಮುಗಿಸ್ಕೊಳ್ಳಿ. ಏನ್ ಹಿಂಗ್ ಹೇಳ್ತ ಇದ್ದಾನೆ ಅನ್ಕೋಬೇಡಿ. ಯಾರು ಇಲ್ಲ ಅಂದ್ರೂ ಪಾರ್ಕಲ್ಲಿ ಒಂದ್ ರೌಂಡ್ ಹೋಗಿ ಬನ್ನಿ ಅಲ್ಲಿ ಈ ಮಕ್ಳು ಆಡೋ ಜಾಗದಲ್ಲಿ ಹಸಿದ ಎಳೆ ಆಂಟಿಗಳು ಸಿಗ್ತಾರೆ. ಎಲ್ಲ ಮುಗಿಸ್ಕೊಂಡು ಒಂದ್ ಕಾಲ್ ಮಾಡಿ’ ಎಂದು ಕಾಲ್ ಕಟ್ ಮಾಡಿದ್ರು. ಅವಳು ಸತ್ತ ಮೇಲೆ ನಾನು ಅದರ ಕಡೆ ಗಮನ ಕೊಟ್ಟಿರಲಿಲ್ಲ. ಒಳ್ಳೆ ಹುದ್ದೆಯಲ್ಲಿದ್ದರಿಂದ ಒಂದಿಬ್ರು ಹೊಸದಾಗಿ ಕೆಲಸಕ್ಕೆ ಸೇರಿದ ಹುಡುಗಿಯರು ಹತ್ರ ಆಗಲು ಬಯಸಿದ್ರು. ಯಾಕೋ ನಾನು ದೂರವೇ ಇದ್ದೆ. ಇನ್ನೂ ಹಣ ಕೊಟ್ಟು ತೆವಲು ತೀರಿಸ್ಕೊಳ್ಳೋ ಆಸೆ ಅಂತೂ ಇಲ್ಲ. ಆದರೆ ಉಮೇಶ್ ಮಾತಲ್ಲಿ ಏನೋ ನಂಬಿಕೆ. ಕೊನೆಗೂ ಅವರು ಹೇಳಿದ ಹಾಗೆ ಎರಡೇ ದಿನಕ್ಕೆ ಎಲ್ಲ ಸರಾಗವಾಗಿ ಆಗಿ ಹೋಯ್ತು, ಹೊಸದಾಗಿ ಕೆಲಸ ಸೇರಿದವಳ ಜೊತೆ ಮಲಗಿದೆ. ಅವಳು ಮಿಲನದ ನಂತರ ನನ್ನನು ತನ್ನ ಎದೆ ಮೇಲೆ ಮಲಗಿಸಿಕೊಂಡು ತಲೆ ಸವರುತ್ತಿದ್ದಳು, ನಾನು ನಿದ್ರೆ ಹೋದೆ. ಅವಳು ಒಂದು ಸಮಯದಲ್ಲಿ ಎದ್ದು ಹೋಗಿದ್ದಳು. ಆ ರಾತ್ರಿ ಆ ಕನಸು ಬರಲಿಲ್ಲ, ಕನಸಲ್ಲಿ ಬಂದ ಹೆಂಡತಿ ಹಾಸಿಗೆ ಮೇಲೆ ಕೂತು ನಕ್ಕು ಹೋದಳು.

ಇದಾದ ಮಾರನೇ ದಿನದಿಂದ ಮೂರು ದಿನ ಉಮೇಶ್‌ಗೆ ಕಾಲ್ ಮಾಡುತ್ತಿದ್ದರೂ ಆಸಾಮಿ ರಿಸೀವ್ ಮಾಡ್ಲೆ ಇಲ್ಲ. ಏನೋ ಕೆಲಸವಿರಬೇಕು ಅಂದುಕೊಂಡು ಒಂದು ಮೆಸೇಜು ಹಾಕಿ ನನ್ನ ಪಾಡಿಗೆ ನಾನಿದ್ದೆ. ನಾಲ್ಕನೇ ದಿನಕ್ಕೆ ಆಫೀಸಿನ ಕಲೀಗ್ ಒಬ್ಬರು ಹೃದಯಾಘಾತದಿಂದ ತೀರಿಕೊಂಡು ಬಿಟ್ಟರು. ಅವರ ದಹನ ಕ್ರಿಯೆ ಸುಮ್ಮನಹಳ್ಳಿಯ ಚಿತಾಗಾರದಲ್ಲಿ ನಡೆಯಬೇಕಿತ್ತು. ಕೂಡಲೇ ಅಲ್ಲಿಗೆ ಹೊರಟೆ. ಅವರ ದಹನ ಕ್ರಿಯೆ ಮುಗಿದು ಕಾರು ತೆಗೆಯುವಾಗ ಅಲ್ಲಿ ಉಮೇಶ್ ಇದ್ದರು. ಅರೆ! ಇದೇನಿಲ್ಲಿ ಅಂತ ಇಳಿದು ಮಾತನಾಡಿಸಿದಾಗ ‘ಸರ್ ನನ್ನ ಅಣ್ಣ ಹೋಗಿಬಿಟ್ಟ. ತುಂಬಾ ಒಳ್ಳೆ ಮನುಷ್ಯ, ಬಟ್ ಕುಡಿತ ಜಾಸ್ತಿ. ಲಿವರ್ ಡ್ಯಾಮೇಜ್. ಪಾಪ ನೆನ್ನೆ ಆಸ್ಪತ್ರೇಲಿ ಮಾತಾಡಿಸಬೇಕಾದರೆ ಯಾಕೋ ಕೈ ಸ್ವಲ್ಪ ಜೋರಾಗಿ ಹಿಡ್ಕೊಂಡ್ ಇದ್ದ, ಉಸಿರು ಕೂಡ ತುಂಬಾ ಕಷ್ಟ ಪಟ್ಟು ಆಡ್ತಿದ್ದ, ಬದುಕಲು ಅದೆಷ್ಟು ಕಷ್ಟಪಟ್ಟಿದ್ನೋ, ವೆಂಟಿಲೇಟರ್‌ಗೆ ಹಾಕಿದ್ ಎರಡು ಗಂಟೆಗೆ ಹಾರ್ಟ್ ಅಟ್ಯಾಕ್ ಆಗಿದೆ’ ಎಂದು ಮಾತು ನಿಲ್ಲಿಸಿದರು. ಅವರ ಕಣ್ಣಂಚಲ್ಲಿ ನೀರು, ಏನು ಹೇಳಬೇಕು ತಿಳಿಯದೆ ಅವರ ಕೈ ಸ್ವಲ್ಪ ಅದುಮಿ, ಏನಾದ್ರೂ ಹೆಲ್ಪ್ ಬೇಕಾದ್ರೆ ಕೇಳಿ ದಯವಿಟ್ಟು ಎಂದು ಹೇಳಿ ಹೊರಟೆ. ಅವ್ರಿಗೆ ನನ್ನ ಕೆಟ್ಟ ಕನಸು ನಿಂತದ್ದು ಹೇಳಬೇಕು ಅನಿಸಿದರೂ ಆ ಸಂಧರ್ಭದಲ್ಲಿ ಬೇಡ ಅಂತ ಸುಮ್ಮನಾದೆ. ಕಾರು ಗೇಟು ಹತ್ತಿರ ತಿರುವು ತೆಗೆದುಕೊಳ್ಳುವಾಗ ಅವರು ವೃತ್ತದ ಕೇಂದ್ರ ಬಿಂದುವಿನಂತೆ ನೇರ ನಿಂತಿದ್ದರು, ನಾನು ವಕ್ರವಾಗಿ ಕಾರು ತಿರುಗಿಸಿ ಆಫೀಸಿನತ್ತ ಹೊರಟೆ.

**

ಸ್ವಲ್ಪ ದಿನಗಳ ನಂತರ ಮತ್ತೆ ಎಂದಿನಂತೆ ಗೆಲುವಾದರು. ನನಗೂ ಕೆಟ್ಟ ಕನಸುಗಳು ಬೀಳುವುದು ನಿಂತಿತ್ತು. ಆಗಾಗ್ಗೆ ಕನಸಲ್ಲಿ ಹೆಂಡತಿ ಬಂದರೂ ಎಂದಿನಂತೆ ಹಾಸಿಗೆ ತುದಿಯಲ್ಲಿ ಕುಳಿತು ನಕ್ಕು ಹೊರಡುತ್ತಿದಳು. ಆಶ್ಚರ್ಯದ ಸಂಗತಿ ಎಂದರೆ ನಾನು ಯಾವಾಗ ಯಾರನ್ನಾದರೂ ಕರೆದುಕೊಂಡು ಬಂದು ಹಾಸಿಗೆ ಹಂಚಿಕೊಳ್ಳುತ್ತಿದ್ದೆನೋ ಆಗ ಮಾತ್ರ ಕನಸಿಗೆ ಬರುತ್ತಿದ್ದಳು, ನಗುತ್ತಿದ್ದಳು. ಬದುಕಿನ ಒಂದು ಹಂತದಲ್ಲಿ ಈ ಕೂಡುವುದರಲ್ಲಿ ಪಾವಿತ್ರ್ಯತೆಯ ತೆವಲು ಬಿಟ್ಟು ಹೋಗುತ್ತೆ ಅನಿಸುತ್ತೆ. ಅದೊಂದು ಅವಶ್ಯವಾದ ದೈಹಿಕ ಕ್ರಿಯೆ ಅಷ್ಟೇ. ಇದನ್ನ ಉಮೇಶ್‌ಗೆ ಹೇಳಿದಾಗ ‘ನೋಡಿ ಮೇಡಂ ಸ್ವರ್ಗಕ್ಕೆ ಹೋದ್ರು ಕೂಡ ನಿಮ್ ಮೇಲೆ ಕಣ್ಣಿಟ್ಟಿರೋದ್ ಬಿಟ್ಟಿಲ್ಲ, ಪಾಪ, ಅದೇ ನೋಡಿ ಹೆಂಗರುಳು ಅನ್ನೋದು, ಅದೇ ನೀವು ಸತ್ತು ಅವರು ಬದುಕಿ ಈ ತರ ಮಾಡ್ತಾ ಇದ್ರೆ ನಿಮ್ ಗಂಡಸು ಬುದ್ದಿ ಸುಮ್ನೆ ಇರ್ತಿತ್ತ? ಅದು ಬಿಡಿ, ನೋಡಿ ಹೊಸದಾಗಿ ಗೊತ್ತಾಗಿದ್ದು ಏನು ಅಂದ್ರೆ ಒಸಿ ವೈಟ್ ಲಿಫ್ಟ್ ಮಾಡಿ ದಿನ, ಸ್ವಲ್ಪ ಸ್ಕ್ವಾಟ್ಸ್ ಕೂಡ ಮಾಡಿ, ಅದು ನಿಮ್ಮ ಟೆಸ್ಟೋಸ್ಟೆರಿನ್ ಹಾರ್ಮೋನ್ ಹೆಚ್ಚಿಸುತ್ತೆ, ಬೆಡ್ ಲಿ ಇನ್ನು ಗುಮ್ಮಬಹುದು’ ಎಂದು ನಕ್ಕರು. ಮತ್ತೊಂದು ಸಲ ‘ನೋಡಿ ಆ ಶಿವ ಎಷ್ಟು ಕಿಲಾಡಿ, ಯಾವ ಕ್ಷಣ ಆದ್ರೂ ಎಲ್ಲೋ ನನ್ನ ನಿಮ್ಮನ್ನ ಎತ್ತಿ ಎಸೆದು ಅನಾಥರಾಗಿ ಮಾಡಿ ಬಿಡಬಹುದಿತ್ತು, ಮೇಲೆ ಕರ್ಕೊ ಬೌದಿತ್ತು ಆದರೂ ಒಂದಷ್ಟು ಜೀವಗಳನ್ನ ಸೇರಿಸಿ ಬದ್ಕೋ ಹೋಗು ಅಂದ್ಬಿಟ್ಟ. ನೋಡಿ ಅಮ್ಮ ಸತ್ತಿದ್ರು ದಿನ ಚೆನ್ನಾಗಿ ಊಟ ಮಾಡಿ ಹಾಕೋ ಕುಕ್ ಇದ್ದಾರೆ ಹಿಂಗೇ ಹೆಂಗೋ ನಡ್ಕೊಂಡ್ ಹೋಗುತ್ತೆ ನೋಡಿ ಲೈಫ್. ಬಡ್ಡಿಮಗಂದು ಡಾರ್ಕ್ ಮಾಟರ್ ನಾವೆಲ್ ಸಕತ್ ನೋಡಿ. ಏನಾದ್ರು ಹೆವಿ ದುಡ್ಡು ಮಾಡುದ್ರೆ ಈ ಟೈಮ್ ಟ್ರಾವೆಲ್ ಮೇಲೆ ಇನ್ವೆಸ್ಟ್ ಮಾಡೋಣ ಅಂತಿದ್ದೀನಿ’ ಎಂದಿದ್ದರು. ಹೀಗೆ ಪ್ರತಿ ಸಲ ಕರೆ ಮಾಡಿದಾಗಲೂ ಹೊಸ ಹೊಸ ವಿಷಯ ಹೇಳ್ತ ಇದ್ರು. ಅವರಿಲ್ಲ ಅಂದಿದ್ರೆ ಬಹುಶ ನಾನು ನನ್ನ ಕೆಟ್ಟ ಕನಸಿನ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದೇನೆನೋ. ಅವತ್ತು ಶ್ರೀರಂಗಪಟ್ಟಣದಲ್ಲಿ ಬೀಳುತ್ತಿದ್ದ ಅವರನ್ನು ನಾನು ಹಿಡಿದುಕೊಂಡೆನೋ? ಅಥವಾ ನನ್ನನ್ನು ಅವರೇ ಹಿಡಿದುಕೊಂಡರ?

**

‘ಸರ್ ಅಪ್ಪ ಹೋಗ್ಬಿಟ್ರು’ ಅಂತ ಅವರ ಮೆಸೇಜು ನೋಡಿದ್ದು ಬೆಳಗ್ಗೆ. ಇಮ್ಮಿಡಿಯೇಟಿಲಿ ಬ್ರಶ್ ಮಾಡಿ ಅವರ ಮನೆಗೆ ಹೊರಟೆ. ಆಗಲೇ ಹೊರಗೆ ಕಡ್ಡಿಗಳನ್ನು ಸೇರಿಸಿ ಸಣ್ಣಗೆ ಹೊಗೆ ಹಾಕಿದ್ದರು. ಹೊರಗೆ ನಾಲ್ಕೈದು ಪ್ಲಾಸ್ಟಿಕ್ ಚೇರುಗಳಿತ್ತು, ಮೆಟ್ಟಿಲು ಹತ್ತಿ ಅವರ ಮನೆಗೆ ಹೋದಾಗ ಹಾಲಿನಲ್ಲಿ ಒಂದು ಗಾಜಿನ ಬಾಕ್ಸಿನಲ್ಲಿ ಅವರ ತಂದೆಯನ್ನು ಮಲಗಿಸಿದ್ದರು.ಅಕ್ಕ ಪಕ್ಕ ಒಂದಷ್ಟು ಮಂದಿ. ಒಂದು ಕಡೆ ಉಮೇಶ್ ನಿಂತಿದ್ದರು. ಗಾಜಿನ ಬಾಕ್ಸನ್ನು ಒಮ್ಮೆ ಮುಟ್ಟಿ ನಮಸ್ಕರಿಸಿ ಅವರತ್ತಿರ ಹೋಗಿ ನಿಂತೆ ಮಾತಾಡಲಿಲ್ಲ. ಅವರು ಮೌನವಾಗಿದ್ದರು. ಒಂದು ಗಂಟೆ ನಂತರ ಗಾಡಿ ಬಂತು. ಹೆಣ ಹೊತ್ತು ಹೊರಟೆವು. ನಾನು ಕೂಡ ಹೆಗಲು ಕೊಟ್ಟೆ. ಯಾವುದೋ ಪುರೋಹಿತ ಬಂದು ಶಾಸ್ತ್ರಗಳನ್ನು ಶುರು ಹಚ್ಚಿಕೊಂಡ ಚಿತಾಗಾರದ ಬಳಿಯೇ. ಶಾಸ್ತ್ರ ಮುಗಿದು ಚಿತಾಗಾರಕ್ಕೆ ದೇಹ ನೂಕಿದಾಗ ಒಂದು ಸಲವೂ ಭೇಟಿಯಾಗದ ಅವರಪ್ಪನ ಸಾವು ಕೂಡ ಯಾಕೋ ಭಯಂಕರ ನೋವು ನೂಕಿತು. ಬಿಕ್ಕಿ ಬಿಕ್ಕಿ ಅತ್ತೆ. ಆ ಕಡೆ ಉಮೇಶ್ ಕೂಡ ಕೆಳಗೆ ಕೂತು ಅಳುತ್ತಿದ್ದರು. ಎಷ್ಟೇ ಗಟ್ಟಿ ಇದ್ರೂ ಈ ಚಿತಾಗಾರಕ್ಕೆ ನೂಕುವಾಗ ಉಕ್ಕಿ ಬರುತ್ತಲ್ಲ ಆ ನೋವು ಮತ್ತು ಕಣ್ಣೀರು ಅದು ತಡೆಯಲಾಗದು. ಹೆಂಡತಿ ಸತ್ತಾಗ ಒಂದು ತೊಟ್ಟು ಕಣ್ಣೀರು ಸುರಿಸದವನು ಆ ಚಿತಾಗಾರಕ್ಕೆ ನೂಕುವ ಕೊನೆ ಕ್ಷಣದಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದೆ.

ಇದಾಗಿ ಎಷ್ಟೋ ದಿನಗಳಾದ ಮೇಲೆ ಉಮೇಶ್ ಮಾತಿಗೆ ಸಿಕ್ಕರು. ತುಂಬಾ ಹೊತ್ತು ಮಾತಡಿದ್ವಿ. ಮಾತಿನ ಸುತ್ತ ಸಾವೇ ತುಂಬಿಕೊಂಡಿತ್ತು. ಅವರು ತಮ್ಮ ಕಣ್ಣ ಮುಂದೆಯೇ ತಾಯಿ, ಅಣ್ಣ, ಅಪ್ಪನನ್ನು ಕಳೆದುಕೊಂಡದ್ದನ್ನು ಅದು ನೀಡಿದ ಹಿಂಸೆಯನ್ನು, ಆ ಹಿಂಸೆ ದಾಟಿ ಬಂದ ಬಗೆಯನ್ನು ಹೇಳುತ್ತಿದ್ದರು. ನಾವಿಬ್ಬರು ಅದೇನೋ ಸಾವುಗಳೊಂದಿಗೆ ತಳುಕು ಹಾಕಿಕೊಂಡಿದ್ದೆವು. ಅವರ ಮನೆಯಲ್ಲಿ ಆದ ಮೊದಲ ಸಾವಿನ ಅಸ್ಥಿ ಬಿಡುವ ದಿನ ನಾನು ಅವರನ್ನು ಭೇಟಿಯಾಗಿದ್ದು. ಅದೇ ಅವ್ರ ಮನೆಯ ಕೊನೆಯ ಸಾವಿನ ದಿನ ನಾನು ಹೆಗಲು ಕೊಟ್ಟಿದ್ದೆ. ಇದಕ್ಕೇನು ಅನ್ನುವುದು ಗೊತ್ತಿಲ್ಲ. ನಾಸ್ತಿಕರಾಗಿದ್ದ , ಶಾಸ್ತ್ರ ಸಂಪ್ರದಾಯ ವಿರೋಧಿ ಆಗಿದ್ದ ಉಮೇಶ್‌ರನ್ನ ‘ಶಾಸ್ತ್ರಕ್ಕೆ ಹೇಗೆ ಕುಳಿತುಕೊಂಡ್ರಿ ಸರ್ ನನಗೆ ಅದು ಕಂಡರೆ ರೋಸಿ ಹೋಗುತ್ತೆ’ ಅಂದೆ. ಅದಕ್ಕವರು ‘ನೋಡಿ ಮನೆಯಲ್ಲಿ ಸಾವು ಭಯಂಕರವಾಗಿ ತಟ್ಟೋದು ಕಾಡೋದು ಮನೆಯ ಹೆಂಗಸರಿಗೆ ಅಮ್ಮ-ತಂಗಿ-ಹೆಂಡತಿಗೆ. ಆದರೆ ಈ ಸಾವಿನ ನಂತರದ ಶಾಸ್ತ್ರಗಳಲ್ಲಿ ಮಗ-ಗಂಡ-ಅಪ್ಪ ಸಂಪೂರ್ಣ ಮುಳುಗಿ ಹೋಗಿ ಸಾವಿನ ದುಃಖದ ಕಡೆ ಗಮನವೇ ಹೋಗದಷ್ಟು ತೊಡಗಿಕೊಳ್ಳುತ್ತಾನೆ. ಹನ್ನೊಂದು ದಿನ ಅದು ಇದು ಅಂತ ಬ್ಯುಸಿ ಆಗಿಬಿಡುತ್ತಾನೆ. ಅದು ಅವನನ್ನು ಕಲ್ಲು ಮಾಡುತ್ತಾ ಹೋಗುತ್ತೆ. ಸಾವಿನ ನೋವನ್ನು ದಾಟಲು ಕೂಡ ಉಪಯೋಗವಾಗುತ್ತೆ. ಆದರೆ ಹೆಣ್ಣು ಮಕ್ಕಳಿಗೆ ಸಾಧ್ಯವಲ್ಲ. ಮಾನಸಿಕವಾಗಿ ತೀರಾ ಜರ್ಜರಿತ ಮಾಡಿಬಿಡುತ್ತೆ ಬಡ್ಡಿ ಮಗಂದ್ ಸಾವು’ ಎಂದು ಹೇಳಿ ನನ್ನ ನೋಡಿದರು. ನಾನು ಹೌದಲ್ವಾ ಅಂದುಕೊಂಡೆ. ಆ ರಾತ್ರಿ ಟೆರೇಸು ಮೇಲೆ ಬೆತ್ತಲಾಗಿದ್ದ ನನಗೆ ಹೆಂಡತಿ ಹೇಳಿದ್ದು ಅದೇ ‘ಯಾವುದೇ ಕಾರಣಕ್ಕೂ ನಾನು ಸತ್ತ ಮೇಲೆ ನಿನ್ನ ಕಿತ್ತೋದ್ ನಾಸ್ತಿಕತನನ ಷೋ ಆಫ್ ಮಾಡ್ಬೇಡ ಎಲ್ಲ ಕರೆಕ್ಟಾಗಿ ಮಾಡಿ ನನಗೆ ಮುಕ್ತಿ ಕೊಡೊ ಕೋತಿ’ ಎಂದು ಮೂತಿ ತಿವಿದಿದ್ದಳು.

ಕೊನೆಗೆ ಫೋನ್ ಇಡುವಾಗ ತುಂಬಾ ಸಂಕೋಚದಿಂದಲೇ ‘ಸರ್ ಕ್ಷಮಿಸಿ ಅವತ್ತು ರಾತ್ರಿ ಮೆಸೇಜ್ ಮಾಡಿದಾಗ ನಿಮಗೆ ಹೇಗೆ ಸಮಾಧಾನ ಮಾಡೋದು ಅಂತ ಗೊತ್ತಾಗಲಿಲ್ಲ. ರಿಪ್ಲೈ ಕೂಡ ಮಾಡಲಿಲ್ಲ. ನಿಮ್ಮನ್ನು ಸಮಾಧಾನ ಮಾಡೋ ಶಕ್ತಿ ನನಗಿಲ್ಲ ಅನ್ಸ್ತು ಅವತ್ತು’ ಎಂದೆ. ಅವರು ‘ಹೆಹೆ ಇರಲಿ ಬಿಡಿ ಸರ್, ಅಪ್ಪ ಹೋದಾಗ ಯಾಕೋ ನಿಮಗೆ ಮೊದಲು ಮೆಸೇಜ್ ಮಾಡಬೇಕು ಅನಿಸಿದ್ದು’ ಅಂದ್ರು. ಮೇಜಿನ ಮೇಲೆ ಅರ್ಧ ತೆರೆದ ರಿಕರ್ಷನ್ ಕಾದಂಬರಿಯ ಪುಟಗಳು ಗಾಳಿಗೆ ಅಲ್ಲಾಡುತ್ತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.