ADVERTISEMENT

ಬೆಕ್ಕಣ್ಣ ಹುಲಿಯಣ್ಣನ ಕಥೆ

ಹೊ.ರಾ.ಪರಮೇಶ್ ಹೊಡೇನೂರು
Published 25 ಮೇ 2019, 19:30 IST
Last Updated 25 ಮೇ 2019, 19:30 IST
ಚಿತ್ರ: ವಿಜಯಕುಮಾರಿ ಆರ್.
ಚಿತ್ರ: ವಿಜಯಕುಮಾರಿ ಆರ್.   

ಬಹಳ ವರ್ಷಗಳ ಹಿಂದೆ ಒಂದು ಕಾಡಿನಲ್ಲಿ ಹುಲಿಯಣ್ಣ ಮತ್ತು ಬೆಕ್ಕಣ್ಣ ಎನ್ನುವವರು ಸಹೋದರರಂತೆ ಒಟ್ಟಾಗಿ ಜೀವಿಸುತ್ತಿದ್ದರು. ಹುಲಿಯಣ್ಣನ ಶರೀರವು ಬಣ್ಣ ಬಣ್ಣದ ಪಟ್ಟೆಗಳನ್ನು ಹೊಂದಿ ಸುಂದರವಾಗಿ ಕಾಣುತ್ತಿದ್ದರೂ ಕಪ್ಪು ಬಿಳುಪು ಬಣ್ಣಗಳ ಬೆಕ್ಕಣ್ಣನಿಗೆ ಹುಲಿಯಣ್ಣನ ಬಗ್ಗೆ ಅಸೂಯೆ ಇರಲಿಲ್ಲ. ಹಾಗೆಯೇ ಹುಲಿಯಣ್ಣನು ತಾನು ದೊಡ್ಡ ಗಾತ್ರದ ದೇಹವನ್ನು ಹೊಂದಿದ್ದರೂ ಶರೀರ ಚಿಕ್ಕದಾಗಿರುವ ಬೆಕ್ಕಣ್ಣನನ್ನು ಎಂದಿಗೂ ಕಡೆಗಣಿಸಿರಲಿಲ್ಲ. ಅಷ್ಟೊಂದು ಅನ್ಯೋನ್ಯತೆಯಿಂದ ಬಾಳುತ್ತಿದ್ದ ಇವರ ಸಹಜೀವನ ಸಹಿಸದ ಕಾಡಿನ ಕೆಲವು ಇತರ ಪ್ರಾಣಿಗಳು ‘ಹೇಗಾದರೂ ಮಾಡಿ ಇವರ ಪ್ರೀತಿಯ ಹಾಲಿಗೆ ದ್ವೇಷದ ಹುಳಿ ಹಿಂಡಿ ಮನಸ್ತಾಪ ಉಂಟು ಮಾಡಬೇಕು. ಆ ಮೂಲಕ ಅವರ ಒಗ್ಗಟ್ಟು ಒಡೆಯಬೇಕು’ ಎಂದು ತೀರ್ಮಾನಿಸಿದವು.

ಒಂದು ದಿನ ಆ ಪ್ರಾಣಿಗಳೆಲ್ಲ ಸೇರಿ ಸಭೆ ನಡೆಸಿ ಹುಲಿಯಣ್ಣ-ಬೆಕ್ಕಣ್ಣನ ಒಗ್ಗಟ್ಟು ಮುರಿಯಲು ತಂತ್ರಗಳನ್ನು ಆಲೋಚಿಸತೊಡಗಿದವು. ಕೊನೆಗೆ, ಕುಟಿಲೋಪಾಯಗಳಿಗೆ ಹೆಸರಾಗಿದ್ದ ನರಿಯಣ್ಣನಿಗೆ ‘ನೀನು ಮಹಾ ಚತುರ, ಹಿಂದಿನ ಕಾಲದಿಂದಲೂ ಒಳ್ಳೆಯ ಉಪಾಯಗಳನ್ನು ಮಾಡುತ್ತಾ ನಿನ್ನ ಬೇಳೆ ಬೇಯಿಸಿಕೊಂಡು ಜಾಣ ನರಿ ಎಂದು ಹೆಸರಾಗಿರುವೆ. ನೀನೇ ಹೇಗಾದರೂ ಮಾಡಿ ಅವರಿಬ್ಬರ ನಡುವೆ ದ್ವೇಷದ ಬೀಜ ಬಿತ್ತಬೇಕು’ ಎಂದು ಹೊಗಳಿ ನರಿಯನ್ನು ಉಬ್ಬಿಸಿದರು. ದ್ವೇಷದ ಬೀಜ ಬಿತ್ತುವ ಹೊಣೆಯನ್ನು ನರಿಯಣ್ಣನಿಗೆ ವಹಿಸಿದವು.

ಕಾಡು ಪ್ರಾಣಿಗಳ ಒತ್ತಾಯ ಮತ್ತು ಹೊಗಳಿಕೆಗೆ ಮರುಳಾದ ನರಿಯು ಹೊಂಚುಹಾಕುತ್ತ ಸರಿಯಾದ ಉಪಾಯ ಆಲೋಚಿಸುತ್ತಾ ಸರಿಯಾದ ಸಮಯಕ್ಕಾಗಿ ಕಾಯುತ್ತಿತ್ತು.

ADVERTISEMENT

ಒಮ್ಮೆ ಹುಲಿಯಣ್ಣನಿಗೆ ವಿಪರೀತ ಜ್ವರದ ಬಾಧೆ ಉಂಟಾಗಿ ನಿತ್ರಾಣಗೊಂಡಿತು. ಬಳಲಿಕೆಬಹಳವಾಗಿದ್ದ ಕಾರಣ ಅದಕ್ಕೆ ಆಹಾರ ಹೊಂದಿಸುವುದೂ ಕಷ್ಟವಾಯಿತು. ಗೆಳೆಯ ಬೆಕ್ಕಣ್ಣನು ತುಂಬಾ ಚಿಕ್ಕವನಾಗಿದ್ದುದರಿಂದ ಹುಲಿಯಣ್ಣನಿಗೆ ಬೇಕಾಗುವ ಜಿಂಕೆ, ಕಾಡೆಮ್ಮೆಗಳಂತಹ ದೊಡ್ಡ ಪ್ರಾಣಿಗಳನ್ನು ಬೇಟೆಯಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಪ್ರೀತಿಯ ಹುಲಿಯಣ್ಣನು ಅನಾರೋಗ್ಯದಿಂದ ನರಳುವುದನ್ನು ಸಹಿಸಲಾಗದೆ ಯಾರಾದರೂ ವೈದ್ಯರನ್ನು ಕಂಡು, ಅವರನ್ನು ಕರೆದುಕೊಂಡು ಬರಬೇಕೆಂದು ಆಲೋಚಿಸಿತು.

ಚಿಂತೆಯಿಂದ ಪರದಾಡುತ್ತಿದ್ದ ಬೆಕ್ಕಣ್ಣನ ಈ ಸ್ಥಿತಿ ಗಮನಿಸಿದ ನರಿಯಣ್ಣ, ಇದೇ ಸರಿಯಾದ ಸಮಯವೆಂದು ಭಾವಿಸಿ ಬೆಕ್ಕಣ್ಣನ ಕಷ್ಟ ವಿಚಾರಿಸಿತು. ಕನಿಕರ ತೋರಿಸುವಂತೆ ನಾಟಕ ಮಾಡಿತು. ‘ನೋಡು ಬೆಕ್ಕಣ್ಣ, ಇಲ್ಲೇ ಸ್ವಲ್ಪ ದೂರದಲ್ಲಿ ಒಂದು ಹಳ್ಳಿ ಇದೆ. ಅಲ್ಲಿ ಒಬ್ಬರು ನಾಟಿ ವೈದ್ಯರು ಇದ್ದಾರೆ. ಅವರನ್ನು ಕರೆದುಕೊಂಡು ಬಂದು ಹುಲಿಯಣ್ಣನ ಆರೋಗ್ಯ ಸರಿಪಡಿಸಬಹುದು’ ಎಂದು ಹೇಳಿತು. ಇದರಿಂದ ಸಂತಸಗೊಂಡ ಬೆಕ್ಕಣ್ಣ ‘ಹಾಗೇ ಆಗಲಿ. ನಡೆ ಹೋಗೋಣ, ಈಗಲೇ ಕರೆತರೋಣ’ ಎಂದಿತು. ಆಗ ನರಿಯಣ್ಣ, ‘ಅವರನ್ನು ಕರೆದರೆ ಬರೋಲ್ಲ, ಹುಲಿ ದುಷ್ಟ ಪ್ರಾಣಿ ಅಂದುಕೊಂಡು ಔಷಧಿ ಕೊಡೋಕೆ ಮನಸ್ಸು ಮಾಡೋಲ್ಲ. ಬೇರೆ ಉಪಾಯ ಮಾಡಿ ಔಷಧಿ ತರಬೇಕು’ ಎಂದು ಹೇಳಿತು. ‘ಅದೇನು ಉಪಾಯ? ಬೇಗ ಹೇಳು, ಹೇಗಾದರೂ ಮಾಡಿ ನಾನು ತರುತ್ತೇನೆ’ ಎಂದ ಬೆಕ್ಕಿಗೆ ನರಿ ತನ್ನ ಉಪಾಯವನ್ನು ಬಿಚ್ಚಿ ಹೇಳಿತು.

ಹಳ್ಳಿಯ ನಾಟಿ ವೈದ್ಯರ ಮನೆಗೆ ಗೊತ್ತಿಲ್ಲದಂತೆ ಹೋಗುವುದು, ಅವರು ಜ್ವರ ಬಂದವರಿಗೆ ಕೊಡುವ ಗಿಡಮೂಲಿಕೆ ಔಷಧಿಯ ತಯಾರಿಕೆ ಬಗ್ಗೆ ತಿಳಿದುಕೊಳ್ಳುವುದು. ನಂತರ ತಾವೇ ಆ ಔಷಧಿ ತಯಾರು ಮಾಡಿ ಹುಲಿಯಣ್ಣನಿಗೆ ಕೊಡುವುದು. ಇದು ನರಿಯಣ್ಣನ ಉಪಾಯ.

ಈ ಉಪಾಯದಂತೆ ಬೆಕ್ಕಣ್ಣ ಹಳ್ಳಿಗೆ ಹೋಗಿ ನಾಟಿ ವೈದ್ಯನ ಮನೆಯ ಮಾಳಿಗೆಯಲ್ಲಿ ಬಚ್ಚಿಟ್ಟುಕೊಂಡು ಎಲ್ಲವನ್ನೂ ಗಮನಿಸತೊಡಗಿತು. ಆ ಮನೆಯಲ್ಲಿ ಔಷಧಿ ತಯಾರು ಮಾಡಲು ಬೇಕಾದ ಹಾಲಿಗಾಗಿ ಅನೇಕ ಹಸುಗಳನ್ನು ಸಾಕಿದ್ದರು. ಪ್ರತಿದಿನವೂ ಬೆಳಿಗ್ಗೆ ಮತ್ತು ಸಂಜೆ ಹಾಲು ಕರೆಯುವಾಗ ಮನೆಯ ಪುಟ್ಟ ಮಕ್ಕಳು ಹಾಲು ಕುಡಿದು ಚೆಲ್ಲುತ್ತಿದ್ದರು. ಚೆಲ್ಲಿದ ಹಾಲನ್ನು ನೆಕ್ಕಲು ಮೊದಮೊದಲು ಹಿಂದೇಟು ಹಾಕುತ್ತಿದ್ದ ಬೆಕ್ಕಿಗೆ ಮನೆಯ ಯಜಮಾನತಿ ಪ್ರೀತಿಯಿಂದ ಮೈನೇವರಿಸಿ ತಟ್ಟೆಗೆ ಹಾಲು ಹಾಕಿ ಕುಡಿಸತೊಡಗಿದಳು. ಹೊಟ್ಟೆ ತುಂಬಾ ಹಾಲು ಕುಡಿಯುತ್ತಾ, ಒಲೆಯ ಪಕ್ಕದಲ್ಲಿ ಬೆಚ್ಚಗೆ ಕುಳಿತು ಗಡದ್ದಾಗಿ ನಿದ್ದೆ ಹೊಡೆಯುತ್ತ ದಿನಗಳನ್ನು ಕಳೆಯತೊಡಗಿದ ಬೆಕ್ಕಣ್ಣನಿಗೆ ಸೊಕ್ಕು ಬಂದಂತಾಗಿ ತಾನು ಆ ಮನೆಗೆ ಬಂದ ಮೂಲ ಉದ್ದೇಶವನ್ನೇ ಮರೆತುಬಿಟ್ಟಿತು.

ಕೆಲವು ದಿನಗಳಾದರೂ ವಾಪಸ್ ಬರದ ಬೆಕ್ಕಣ್ಣನ ಕುರಿತು ಚಿಂತಿಸುತ್ತಿದ್ದ ಹುಲಿಯಣ್ಣನು ಹೇಗೋ ಆರೋಗ್ಯದಲ್ಲಿ ಚೇತರಿಸಿಕೊಂಡಿತು. ತನ್ನ ಪ್ರೀತಿಯ ಬೆಕ್ಕಣ್ಣ ಎಲ್ಲಿ ಹೋಗಿರಬಹುದೆಂದು ಕಂಡ ಕಂಡವರಲ್ಲಿ ವಿಚಾರಿಸುತ್ತಿದ್ದಾಗ ಎದುರಾದ ನರಿಯಣ್ಣನು ‘ಸುಮ್ಮನೆ ಏಕೆ ಅವನನ್ನು ಹುಡುಕುವೆ ಹುಲಿಯಣ್ಣ? ನೀನು ರೋಗದಿಂದ ನರಳುವಾಗ ನಿನಗೆ ಆಹಾರ ತರಲು ಆಗದೆ, ತಾನೊಬ್ಬನೇ ಬದುಕಿದರೆ ಸಾಕೆಂದು ತೀರ್ಮಾನಿಸಿ, ಕಾಡು ಬಿಟ್ಟು ನಾಡಿಗೆ ಹೋಗಿ ಸುಖವಾಗಿದ್ದಾನೆ’ ಎಂದು ಚಾಡಿ ಹೇಳಿತು. ಈ ಮಾತಿನಿಂದ ಕ್ರೋಧಗೊಂಡ ಹುಲಿಯಣ್ಣನು ‘ನನಗೆ ಮೋಸ ಮಾಡಿದ ಮಿತ್ರ ದ್ರೋಹಿಯನ್ನು ಈ ಭೂಮಿಯ ಮೇಲೆ ಉಳಿಸುವುದಿಲ್ಲ. ಕಣ್ಣಿಗೆ ಕಂಡರೆ, ಸುಳಿವು ಸಿಕ್ಕರೆ ಸಾಯಿಸಿಯೇ ತೀರುತ್ತೇನೆ’ ಎಂದು ಶಪಥ ಮಾಡಿತು.

ಹುಲಿಯಣ್ಣನ ಶಪಥದ ಬಗ್ಗೆ ನಾಡಿನಲ್ಲಿದ್ದ ಬೆಕ್ಕಣ್ಣನಿಗೆ ಹೇಳಿದ ನರಿಯಣ್ಣನು ‘ಬೆಕ್ಕಣ್ಣ, ನೀನು ಅವನಿಗೆ ದ್ರೋಹ ಮಾಡಿರುವುದಾಗಿ ಭಾವಿಸಿ ಕೊಲ್ಲಲು ಮುಂದಾಗಿದ್ದಾನೆ. ಅವನ ಕಣ್ಣಿಗೆ ಬೀಳದಂತೆ, ಸ್ವಲ್ಪವೂ ಸುಳಿವು ಸಿಗದಂತೆ ಬದುಕಿಕೋ...’ ಎಂದು ಎಚ್ಚರಿಕೆ ನೀಡಿತು. ಭಯಗೊಂಡ ಬೆಕ್ಕಣ್ಣನು ನಾಟಿ ವೈದ್ಯರ ಮನೆಯ ಅಟ್ಟದ ಮೇಲೆ ಬಚ್ಚಿಟ್ಟುಕೊಂಡು ದಿನ ಕಳೆಯತೊಡಗಿತು. ಮಲ ಮೂತ್ರ ವಿಸರ್ಜನೆಗೆ ಮಾತ್ರ ಹೊರಗಡೆ ಬಂದು, ಗುರುತು ಸಿಗದಂತೆ ಮಣ್ಣನ್ನು ಮುಚ್ಚುವ ಅಭ್ಯಾಸ ಮಾಡಿಕೊಂಡಿತು. ಅಂದಿನಿಂದ ಇಂದಿನವರೆಗೂ ಬೆಕ್ಕು ತನ್ನ ಸುಳಿವನ್ನು ಬಿಟ್ಟು ಕೊಡದಿರಲು ಮಲ ಮೂತ್ರ ವಿಸರ್ಜನೆ ಮಾಡಿ ಮಣ್ಣಿನಲ್ಲಿ ಮುಚ್ಚಿ ಬಿಡುವ ಪ್ರವೃತ್ತಿಯನ್ನು ಬಿಟ್ಟಿಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.