ಅದೊಂದು ಕಾಡು. ಅಲ್ಲಿತ್ತೊಂದು ನರಿ. ಅದಕ್ಕೆ ತನ್ನ ಜಾಣತನದ ಬಗ್ಗೆ ಬಲು ಹೆಮ್ಮೆ . ತನ್ನಷ್ಟು ಜಾಣ ಇನ್ನೊಬ್ಬನಿಲ್ಲ ಎಂದು ಗರ್ವದಿಂದ ಬೀಗುತ್ತ ಮೆರೆಯುತ್ತಿತ್ತು. ಆದಕಾರಣ ಯಾರೊಂದಿಗೂ ಬೆರೆಯುತ್ತಿರಲಿಲ್ಲ.
ಆ ನರಿಯ ಅಮ್ಮನಿಗೆ ಮರಿ ನರಿಯ ಈ ಧೋರಣೆ ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ‘ಮಗೂ, ಎಲ್ಲರೊಡನೆ ನಾವು ಸೌಹಾರ್ದದಿಂದಿರಬೇಕು. ನೆರೆಹೊರೆಯವರನ್ನು ಸ್ನೇಹದಿಂದ ಕಾಣಬೇಕು, ನಾವೆಷ್ಟೇ ಜಾಣರಾದರೂ ಆಪತ್ಕಾಲದಲ್ಲಿ ಪರರ ಸಹಕಾರದ ಅವಶ್ಯಕತೆ ಬೇಕೇ ಬೇಕಾಗುತ್ತದೆ. ಹಾಗಾಗಿ ಎಲ್ಲರೊಡನೆಯೂ ಸ್ನೇಹದಿಂದಿರು...’ ಆಗಾಗ ತಾಯಿ ನರಿಯಿಂದ ಈ ಬುದ್ಧಿಮಾತಿನ ಬೋಧನೆ ಆಗುತ್ತಿದ್ದರೂ ನರಿಯ ಸ್ವಭಾವದಲ್ಲಿ ಸ್ವಲ್ಪವೂ ಬದಲಾವಣೆಯಾಗಿರಲಿಲ್ಲ. ಅದೊಂದು ದಿನ ನರಿಗೆ ದೂರದ ಊರಿಗೆ ಪಯಣಿಸುವ ಸಂದರ್ಭ ಒದಗಿಬಂತು. ತಾಯಿ ನರಿಯು ಮಗನಿಗಾಗಿ ಗೆಡ್ಡೆ ಗೆಣಸು, ಹಣ್ಣುಗಳನ್ನು ಬುತ್ತಿ ಕಟ್ಟಿ ಹಸಿವಾದಾಗ ತಿನ್ನಲು ಸೂಚಿಸಿತು. ಜೊತೆಗೆ ‘ಮಾರ್ಗ ಮಧ್ಯದಲ್ಲಿ ಯಾರಾದರೂ ಜೊತೆಗೆ ಸಿಕ್ಕರೆ ಅವರ ಸ್ನೇಹ ಬೆಳೆಸು, ಅವರಿಂದ ನಿನಗೂ ನೆರವಾದೀತು; ನಿನ್ನ ಒಂಟಿತನವೂ ಕಳೆದೀತು...’ ಎಂಬ ಸಲಹೆ ನೀಡಲು ಮರೆಯಲಿಲ್ಲ.
ನರಿಯ ಪಯಣ ಆರಂಭಗೊಂಡ ಸ್ವಲ್ಪ ಸಮಯದಲ್ಲೇ ಮುಂಗುಸಿಯೊಂದು ಎದುರಾಗಿತ್ತು. ‘ನರಿಯಣ್ಣ, ಎಲ್ಲಿಂದ ಬರುತ್ತಿರುವೆ? ಎಲ್ಲಿಗೆ ಪಯಣ?’ ಎಂದು ಸ್ನೇಹದಿಂದ ಪ್ರಶ್ನಿಸಿತು.‘ನಾನು ಈ ಕಾಡಿನ ಪಕ್ಕದೂರಿಗೆ ಹೊರಟಿದ್ದೇನೆ...’ ಎಂದು ಅಸಡ್ಡೆಯಿಂದಲೇ ಉತ್ತರಿಸಿದ ನರಿ, ಮಾತು ಬೆಳೆಸಲಿಷ್ಟವಿಲ್ಲವೆಂಬಂತೆ ಬಿರಬಿರನೆ ನಡೆಯತೊಡಗಿತು. ‘ನಾನೂ ಅದೇ ಊರಿಗೆ ಹೊರಟಿದ್ದೇನೆ ... ನರಿಯಣ್ಣ ನಿನ್ನ ಜೊತೆ ಬರಲೇ? ಇಬ್ಬರೂ ಸೇರಿ ಹರಟುತ್ತ ಪಯಣಿಸಿದರೆ ಬೇಸರವೂ ಇರದು, ದಾರಿ ಸವೆದದ್ದೂ ತಿಳಿಯದು... ಬಲು ಮೋಜಾಗಿರುತ್ತದೆ ಅಲ್ಲವೇ?’ ಉತ್ಸಾಹ ತೋರಿತು ಮುಂಗುಸಿ.
‘ನೀನೆಲ್ಲಿ, ನಾನೆಲ್ಲಿ? ನಿನ್ನಷ್ಟು ಚಿಕ್ಕ ಪ್ರಾಣಿ ನನಗೆ ಜೊತೆಯಾಗುವುದೇ?’ ಉಡಾಫೆ ತೋರುತ್ತ ಗರ್ವದಿಂದ ನುಡಿಯುತ್ತಿರುವಾಗಲೇ ನರಿಗೆ ತಾಯಿಯ ಕಿವಿಮಾತು ನೆನಪಿಗೆ ಬಂದು, ‘ಸರಿಬಿಡು, ಬಾ ಜೊತೆಯಾಗಿ ಹೋಗೋಣ...’ ಎಂದಿತು. ಇಬ್ಬರೂ ಕೂಡಿ ಪ್ರಯಾಣ ಬೆಳೆಸಿದವು . ಸ್ವಲ್ಪ ದೂರ ಕ್ರಮಿಸಿದಾಗ ನರಿಗೆ ಆಯಾಸವೆನ್ನಿಸಿ ಒಂದು ಮರದ ಕೆಳಗೆ ವಿಶ್ರಾಂತಿಗಾಗಿ ಕುಳಿತಿತು. ತಾಯಿ ನರಿ ಕಟ್ಟಿಕೊಟ್ಟ ಬುತ್ತಿಯನ್ನು ಮನಸ್ಸಿಲ್ಲದಿದ್ದರೂ ಮುಂಗುಸಿಗೂ ಕೊಟ್ಟು ತಾನೂ ತಿಂದು, ‘ನಾನು ಸ್ವಲ್ಪ ಮಲಗಿ ವಿಶ್ರಮಿಸುತ್ತೇನೆ... ನೀನೂ ಬೇಕಾದರೆ ಮಲಗಿಕೋ’ ಎಂದಾಗ, ‘ನೀನು ಹಾಯಾಗಿ ಮಲಗಿ ವಿಶ್ರಮಿಸು ನರಿಯಣ್ಣ, ನಾನಿಲ್ಲೇ ಕುಳಿತಿರುತ್ತೇನೆ’ ಎಂದು ವಿನಯದಿಂದ ಹೇಳಿತು ಮುಂಗುಸಿ.
ದಣಿದಿದ್ದರಿಂದ ನರಿಗೆ ಬೇಗನೆ ನಿದ್ರೆ ಆವರಿಸಿತ್ತು. ಅಷ್ಟರಲ್ಲಿ ದೊಡ್ಡದೊಂದು ಹಾವು ನರಿಯನ್ನು ಸಮೀಪಿಸುತ್ತಿರುವುದನ್ನು ಕಂಡ ಮುಂಗುಸಿಗೆ ಅಪಾಯದ ಅರಿವಾಯಿತು. ತನ್ನ ಜೊತೆಗಾರನ ಜೀವಕ್ಕೆ ಆಪತ್ತಿದೆ ಎಂದರಿತು ಜಾಗೃತಗೊಂಡ ಮುಂಗುಸಿಯು ಹಾವಿನೊಡನೆ ಸೆಣಸಾಡಿ ಹಾವನ್ನು ಕೊಂದುಹಾಕಿತು. ಸ್ವಲ್ಪ ಸಮಯದ ನಂತರ ನರಿಗೆ ಎಚ್ಚರವಾದಾಗ ಸಮೀಪದಲ್ಲಿ ಸತ್ತು ಬಿದ್ದ ಹಾವನ್ನು ಕಂಡು ಹೌಹಾರಿತು. ಬಾಯಿ ಕೆಂಪು ಮಾಡಿಕೊಂಡು ಕುಳಿತ ಮುಂಗುಸಿಯನ್ನು ಪ್ರಶ್ನಿಸಿದಾಗ ವಿಷಯದ ಅರಿವಾಗಿತ್ತು. ತನ್ನ ಪ್ರಾಣ ಉಳಿಸಿದ ಮುಂಗುಸಿಗೆ ಹೃತ್ಪೂರ್ವಕವಾಗಿ ಕೃತಜ್ಞತೆ ಅರ್ಪಿಸಿತು. ‘ನೆರೆಹೊರೆಯವರೊಡನೆ ಸ್ನೇಹ ಬೆಳೆಸು...’ ಎಂಬ ತಾಯಿಯ ಬುದ್ಧಿಮಾತಿನ ಮಹತ್ವದ ಅರಿವಾಗಿತ್ತು. ಅದನ್ನು ಕೇಳಿದ್ದಕ್ಕೇ ಅಲ್ಲವೇ ಇಂದು ತನ್ನ ಪ್ರಾಣ ಉಳಿದದ್ದು? ಚಿಕ್ಕವರು, ಅಶಕ್ತರು ಎಂದುಕೊಂಡು ಯಾರನ್ನೂ ನಿಕೃಷ್ಟವಾಗಿ ಕಾಣಬಾರದು; ಅವರೆಡೆಗೆ ಎಂದಿಗೂ ಅಸಡ್ಡೆ ತೋರಬಾರದು. ಉಪಕಾರ ಯಾರಿಂದಲೂ ಯಾವುದೇ ಸಮಯದಲ್ಲೂ ಒದಗಬಹುದು. ಎಲ್ಲರೊಡನೆಯೂ ಸ್ನೇಹ ಸೌಹಾರ್ದದಿಂದ ಇರಬೇಕು ಎಂಬ ಪಾಠ ಕಲಿತ ನರಿಯಣ್ಣ ಮುಂಗುಸಿಯೊಡನೆ ಸ್ನೇಹ ಬೆಳೆಸಿ ಸಂತಸದಿಂದ ಪಯಣ ಬೆಳೆಸಿತು. ಮುಂದೆ ಒಂಟಿತನ ಬಿಟ್ಟು ಎಲ್ಲರೊಡನೆಯೂ ಸ್ನೇಹದಿಂದ ಬಾಳಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.