ಮಕ್ಕಳಿಗೆ ಕಥೆ ಇಷ್ಟ. ಯಾವ ಕಥೆ ಇಷ್ಟ? ವಾಸ್ತವದ ಕಥೆಗಳೋ, ಪುರಾಣದ ಕಥೆಗಳೋ? ಇದಕ್ಕೆ ಸಂಬಂಧಿಸಿದಂತೆ ಮೂರು ಪ್ರಶ್ನೆಗಳನ್ನು ಹಿರಿಯ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಅವರ ಮುಂದೆ ‘ಭಾನುವಾರದ ಪುರವಣಿ’ ಇರಿಸಿತು. ಪ್ರಶ್ನೆಗಳಿಗೆ ಅವರು ನೀಡಿದ ಉತ್ತರ ಇಲ್ಲಿದೆ.
* ಮಕ್ಕಳಿಗೆ ಪುರಾಣದ ಕಥೆಗಳನ್ನು ಏಕೆ ಹೇಳಬೇಕು?
ಕಥೆಗೂ ನಮ್ಮ ಬಾಲ್ಯಕ್ಕೂ ಸಂಬಂಧ ಇದೆ. ಬಾಲ್ಯದ ಮನಸ್ಸಿಗೂ ಕಥೆಗೂ ಸಂಬಂಧ ಇದೆ. ಸೃಷ್ಟಿಶೀಲತೆಗೂ ಬಾಲ್ಯಕ್ಕೂ ಸಂಬಂಧ ಇದೆ. ಅಂದರೆ, ಕಲ್ಪನಾ ಶಕ್ತಿಯನ್ನು ಬೆಳೆಸುವಂಥವು ಅದ್ಭುತ ರಮ್ಯ ಕಥೆಗಳು. ಪುರಾಣದ ಕಥೆಗಳು ವಾಸ್ತವ ಮಾರ್ಗದ ಕಥೆಗಳಲ್ಲ. ಅವು ನಮ್ಮ ಕಲ್ಪನಾ ಶಕ್ತಿಯನ್ನು ಬೆಳೆಸುವಂಥವು. ಹನುಮಂತ ಸಮುದ್ರ ಹಾರಿದ ಅಂದರೆ, ಅದು ಅದ್ಭುತವಾದ ಕಲ್ಪನೆ. ಸಾಗರೋಲ್ಲಂಘನೆ ಮಾಡಿದ ಎನ್ನುವ ಕಲ್ಪನೆಯೇ ಒಂದು ದೊಡ್ಡ ಉಲ್ಲಂಘನೆ ಅಲ್ಲವೇ? ವಾಸ್ತವದಲ್ಲಿ, ಕಲ್ಪನೆ ಎಂಬುದೇ ಬಹುದೊಡ್ಡ ಉಲ್ಲಂಘನೆ ಅಲ್ಲವೇ? ವಾಸ್ತವ, ವರ್ತಮಾನ ಎಂಬುದನ್ನೆಲ್ಲ ಉಲ್ಲಂಘಿಸದೆ ಕಲ್ಪನೆ ಬೆಳೆಯುವುದಿಲ್ಲ. ಕಲ್ಪನೆ ಬೆಳೆಯದೆ ಮಕ್ಕಳ ಮನಸ್ಸು ಬೆಳೆಯುವುದಿಲ್ಲ.
ಆದರ್ಶ ಎಂದು ನಾವು ಹೇಳುತ್ತೇವಲ್ಲ? ಆ ಆದರ್ಶ ಅಂದರೆ ಏನು? ಉಲ್ಲಂಘನೆಯ ವಿಮರ್ಶಾತ್ಮಕ ರೂಪ ಅದು. ವಾಸ್ತವವನ್ನು ಉಲ್ಲಂಘಿಸುವುದು ಅದು. ಅದೇ ಆದರ್ಶವಾಗಿ ಬೆಳೆಯುತ್ತದೆ. ಹಾಗಾಗಿ, ಮಕ್ಕಳಿಗೆ ಪುರಾಣದ ರಮ್ಯ ಕಥೆಗಳನ್ನು ಹೇಳದಿದ್ದರೆ ಅವರಲ್ಲಿ ಬೆಳೆಯಬೇಕಾಗಿದ್ದು ಬೆಳೆಯುವುದಿಲ್ಲ. ಮಕ್ಕಳಿಗೆ ಕಲ್ಪನೆಯ ದೃಷ್ಟಿ ಬೇಕು. ಸೌಂದರ್ಯದ ಅಂಶಗಳು ಅವರಿಗೆ ಬೇಕು. ವಾಸ್ತವಿಕತೆಯನ್ನು ತಿಳಿಯಬೇಕು ಎಂದಾದರೆ ಕಲ್ಪನೆ, ಆದರ್ಶ, ಉಲ್ಲಂಘನೆಯ ಸಂಸ್ಕಾರ ನಮ್ಮಲ್ಲಿ ಇರಬೇಕು. ಆಗ ವಾಸ್ತವಿಕತೆಯನ್ನು ನೋಡಲು ಆಗುತ್ತದೆ. ಮಕ್ಕಳಿಗೆ ಹೇಳಬೇಕಿರುವುದು ವಾಸ್ತವಿಕತೆಯೊಂದನ್ನೇ ಅಲ್ಲ. ರಾಮಾಯಣವನ್ನು ವಾಲ್ಮೀಕಿ ಮೊದಲು ಹೇಳಿದ್ದು ಕುಶ–ಲವರಿಗೆ ಎಂಬುದನ್ನು ಇಲ್ಲಿ ಗಮನಿಸಬೇಕು. ಆಮೇಲೆ ಕುಶ–ಲವರು ಅದನ್ನು ಹಾಡಿ ಲೋಕಕ್ಕೆ ತಿಳಿಸಿದರು. ವಾಲ್ಮೀಕಿಯು ರಾಮಾಯಣವನ್ನು ಕುಶ–ಲವರಿಗೆ ಮೊದಲು ಹೇಳಿದರು ಎಂದಮಾತ್ರಕ್ಕೆ ಅದು ಬಾಲಸಾಹಿತ್ಯವೇನೂ ಆಗುವುದಿಲ್ಲ. ಆದರೆ ಅದು ಬಾಲಸಾಹಿತ್ಯವೂ ಹೌದು. ಆದರೆ ಅಷ್ಟು ಮಾತ್ರವೇ ಅಲ್ಲ.
ನಾವು ಹೇಳುವ ಬಾಲ್ಯ, ಪ್ರಬುದ್ಧತೆ ಇವೆಲ್ಲ ಬದಲಾಗುತ್ತ ಇರುತ್ತವೆ. ನಮ್ಮಲ್ಲಿ ಬಾಲ್ಯ ಸತ್ತಿಲ್ಲ. ಅದು ಸಾಯುವುದೂ ಇಲ್ಲ. ಬಾಲ್ಯ ನಮ್ಮ ಜೊತೆಯಲ್ಲೇ ಇರುತ್ತದೆ. ಮಕ್ಕಳಿಗೆ ಹೇಳುವ ಕಥೆಗಳಲ್ಲಿ ಫ್ಯಾಂಟಸಿ ಬೇಕು. ದೊಡ್ಡ ಒಂದು ಉಲ್ಲಂಘನೆ ಬೇಕು. ಎಂತಹ ದೊಡ್ಡ ಸಮುದ್ರವೇ ಆಗಿದ್ದರೂ ಅದನ್ನು ಹಾರಲು ಸಾಧ್ಯ ಎಂದು ಹೇಳಬೇಕು.
* ಈಗಿನ ಕಾಲದ ಫ್ಯಾಂಟಸಿ ಕಥೆಗಳನ್ನು ಓದಿದ ನಂತರವೂ, ಕೆಲವು ಮಕ್ಕಳು ಪುನಃ ಪುರಾಣದ ಕಥೆಗಳತ್ತ ಮರಳಿದರು. ಅಲ್ಲಿ ಇಲ್ಲದ್ದು ಇಲ್ಲಿ (ಪುರಾಣದ ಕಥೆಗಳಲ್ಲಿ) ಏನಿದೆ?
ನಮ್ಮ ಇಡೀ ಮಾನಸದಲ್ಲಿ– ನಾವು ಎಷ್ಟೇ ಮರೆಮಾಚಿದರೂ– ರಾಮಾಯಣ, ಮಹಾಭಾರತದ ಕಥೆಗಳು, ಜಾನಪದದ ಕಥೆಗಳು ಹರಡಿಕೊಂಡಿವೆ. ಸಣ್ಣ ಮಕ್ಕಳಿಗೆ ಯಾವುದಾದರೂ ಒಂದು ರೀತಿಯಲ್ಲಿ– ನಮ್ಮ ಕಡೆಯಲ್ಲಿ ಯಕ್ಷಗಾನ ಇದೆ, ಅದನ್ನು ನೋಡದೆ ಯಾರೂ ಬೆಳೆಯುವುದಿಲ್ಲ– ಮಹಾಭಾರತ, ಭಾಗವತದ ಕಥೆಗಳು ಕಿವಿಗೆ ಬಿದ್ದಿರುತ್ತವೆ. ಅವುಗಳ ಮುಂದೆ ಆಧುನಿಕ ಕಾಲದ ಯಾವ ಕಥೆಯೂ ನಿಲ್ಲುವುದಿಲ್ಲ. ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ನಾವು ವಾಸ್ತವದ ಹಿಂದೆ ಬಿದ್ದು ಬರಡಾಗಿದ್ದೇವೆ. ಮಕ್ಕಳಲ್ಲಿ ಯಾವಾಗ ಆಕಾಶದ ಕಡೆ ನಾವು ಹಾರಿಯೇವು ಎಂಬ ಆಲೋಚನೆಯೂ ನಡೆದಿರುತ್ತದೆ. ಮಕ್ಕಳ ಕಲ್ಪನಾ ಶಕ್ತಿಗೆ ಸಂಬಂಧಿಸಿದ ಕಥೆಗಳನ್ನು ಹೇಳದಿದ್ದರೆ ಬಾಲ್ಯಕ್ಕೆ ದ್ರೋಹ ಮಾಡಿದಂತೆ.
* ಮಕ್ಕಳು ಪುರಾಣದ ಕಥೆಗಳನ್ನು ಮತ್ತೆ ಮತ್ತೆ ಕೇಳಿಸಿಕೊಳ್ಳುವುದು ಏಕೆ? ಅವರಿಗೆ ಅದು ಬೇಸರ ತರಿಸುವುದಿಲ್ಲವಾ? ಅವರಿಗೆ ಖುಷಿ ಕೊಡುವಂಥದ್ದು ಏನಿದೆ?
ಇದಕ್ಕೆ ಏನು ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ. ಮತ್ತೆ ಮತ್ತೆ ಕೇಳಿದರೂ ಮತ್ತೊಮ್ಮೆ ಕೇಳಬೇಕು ಅನಿಸುವುದು ಅದರಲ್ಲಿ ಏನಿದೆ? ಅದರಲ್ಲಿ ಏನೋ ಒಂದು ಸಂತಸ ಇದೆ. ಒಂದು, ಎರಡು, ಮೂರು ಬಾರಿ ನೋಡಿ ಆಸ್ವಾದ ಸಿಕ್ಕಿದ ನಂತರ ಆ ಆಸ್ವಾದ ಮಕ್ಕಳಲ್ಲಿ ಯಾವಾಗಲೂ ಉಳಿದುಕೊಳ್ಳುತ್ತದೆ. ನಮ್ಮಲ್ಲಿ ಆಲೋಚನೆಗಳು ಎಷ್ಟೇ ಬೆಳೆದಿದ್ದರೂ ನಮಗೆ ಇಷ್ಟವಾಗುವುದು ಬಾಲ್ಯದಲ್ಲಿ ಕಂಡದ್ದೇ. ಏಕೆಂದರೆ, ಬಾಲ್ಯಕ್ಕೆ ಬೇಸರ ಇಲ್ಲ. ಒಂದು ಕಥೆಯನ್ನು ಒಮ್ಮೆ ಹೇಳಿದ ನಂತರವೂ, ಅದನ್ನೇ ಮತ್ತೆ ಮತ್ತೆ ಕೇಳುವ ಧಾರಣ ಸಾಮರ್ಥ್ಯ ಬಾಲ್ಯಕ್ಕೆ ಇರುತ್ತದೆ. ಅದೊಂದು ವಿಚಿತ್ರ.
ಹಾಗೆಯೇ, ಮಕ್ಕಳ ಬಳಿ ಹಿಂದೊಮ್ಮೆ ಹೇಳಿದ ಒಂದು ಕಥೆಯನ್ನು ಮತ್ತೊಮ್ಮೆ ಹೇಳುವಾಗ ಹಿಂದೆ ಹೇಳಿದ ಅಂಶ ಬಿಟ್ಟುಹೋಗುವಂತಿಲ್ಲ. ಯಾವುದಾದರೂ ಅಂಶ ಬಿಟ್ಟುಹೋದರೆ, ಮಕ್ಕಳೇ ಅದನ್ನು ನೆನಪಿಸುತ್ತವೆ. ನಮ್ಮ ಹಾಗೆ ಅವರಿಗೆ ಬೋರ್ ಆಗುವುದಿಲ್ಲ. ಮಕ್ಕಳು ಆಸ್ವಾದಿಸುವ ರೀತಿಯೇ ಬೇರೆ ಇರುತ್ತದೆ. ಭಾರತದ ಪುರಾಣದ ಕಥೆಗಳು, ಜಾನಪದ ಕಥೆಗಳಿಗೆ ಈ ಶಕ್ತಿ ಇದೆ.
(ನಿರೂಪಣೆ: ವಿಜಯ್ ಜೋಷಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.