ಚಕ್ಕಳ ಸುಲಿದಿವ್ನಿ ದಾರಾವ ಹೆಣೆದಿವ್ನಿ
ಜೋಡೊಂದ ನಿನಗೆ ಕಟ್ಟಿವ್ನಿ| ಮಹಾತ್ಮ
ಕಾಲೂರಿ ಜೋಡ ಮೆಟ್ಟಯ್ಯ
ಹೊಲೆಯುತ್ತ ಕುಂತವ್ನಿ ನಿನ ಪಾದದಳತೆಯ
ಬಡವ ನನ್ ಒಲವು ನಿನ ಮ್ಯಾಲೆ| ಮಹಾತ್ಮ
ಹೊಲಿದ ಜೋಡ ನೀ ಮೆಟ್ಟಯ್ಯ
ತನ್ನ ಹಾಡಿಗೆ ತಾನೇ ದನಿಯಾಗುತ್ತಾ ಹತ್ತಿಸಿದ ತುಂಡು ಬೀಡಿಯ ಹೊಗೆಯ ಪುಕ್ಕ ಪುಕ್ಕನೆ ಬಾನಿಗೆ ಏರಿಸುತ್ತಾ ‘ಲೇ ಸಿದ್ಧಿ ಆ ನನ್ ಪುಣಾತ್ಮ ನನ್ ಕೈಗ್ ಯಂದ್ ಸಿಕ್ಕಾನೋ ಯಾನೋ, ನಾ ಸಾಯೋಕ್ ಒಂದ್ ಕಿತ ಆ ಪುಣಾತ್ಮನ್ ಕಾಲ್ಗ್ ನನ್ ಜೀವನೇ ತೇದು ಹೆಣ್ದಿರೋ ಈ ಜೋಡ ಹಾಕ್ಬುಟ್ರೆ ಈ ಜಲ್ಮ ಇನ್ನೊಂದ್ಕಿತ ಈ ಭೂಮಿ ಮ್ಯಾಲ್ ಹುಟ್‌ದಿದ್ರು ನಾ ಚಿಂತಿ ಮಾಡಾಕಿಲ್ಲ ಕಣಮ್ಮಿ. ಅಪ್ಪ ಜೋಡುಂಡಿ ಮುನಿದೇವ ಈ ಉಸ್ರು ನಿಲ್ಲದ್ರಲ್ಲಿ ಆ ನನಪ್ಪನ್ನ ಯಂಗಾದ್ರು ಭೇಟಿ ಮಾಡೋ ಹಾಗ್ ಮಾಡೋ ನನ್ ತಂದೆ ನಿನ್ ಪಾದಕ್ ನನ್ ತಲರ‍್ಲಿ. ಲೇ ಬಿಳೀ ನನ್ ಮಕ್ಳ ನನ್ ಉಸಿರು ಹೋದ್ರು ನಾನ್ ಸಂಪಾದ್ಸೋ ನಾಕ್ಕಾಸು ನಿಮ್ ಕಪ್ಪಕ್ ಹೋದ್ರು ಆ ನನ್ ಮಾತ್ಮನ್‌ಗೆ ಈ ಜೋಡು ಮುಟ್ಸೋ ತನ್ಕ ಈ ಜೀವ ಭೂಮಿ ಬಿಟ್ ಕದ್ಲಾಕಿಲ್ಲ ಕಣ್ರುಲಾ’ ಎನ್ನುತ್ತಾ ತನ್ನ ಚರ್ಮ ಕುಟೀರದ ಬಾಗಿಲು ಎಳೆದು ಸಿದ್ಧಿಯ ಕೈಹಿಡಿದು ಸೋರುತ್ತಿರುವ ಮಳೆಯಲ್ಲಿಯೇ ತನ್ನ ಮನೆಯತ್ತ ಹೆಜ್ಜೆ ಹಾಕಲಾರಂಭಿಸಿದ ಮುನಿಯ.
ಬ್ರಿಟಿಷರ ವ್ಯಾಪಾರೀ ಯೋಜನೆಗಳಿಂದಾಗೆ ತರಹೇವಾರಿ ಜೋಡುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟರೂ ಮುನಿಯನ ಹಸಿ ಚಕ್ಕಳದ ಜೋಡುಗಳಿಗೆ ಬೇಡಿಕೆಯೇನು ಕಡಿಮೆಯಾಗಿರಲಿಲ್ಲ. ಈಸೂರಿನಲ್ಲಿ ಈಗಲೂ ಮುನಿಯನ ಜೋಡುಗಳಿಗೆ ಎಲ್ಲಿಲ್ಲದ ಬೇಡಿಕೆ. ಈಸೂರಿನಲ್ಲಿ ಬೀಡುಬಿಟ್ಟಿದ್ದ ಅಷ್ಟೂ ಬ್ರಿಟಿಷ್ ಅಧಿಕಾರಿಗಳು ಮುನಿಯನ ಚಕ್ಕಳದ ಬೂಟ್‌ಗಳಿಗೆ ದಾಸರಾಗಿದ್ದರು. ಬೇಕೆಂದಾಗಲೆಲ್ಲಾ ತಮ್ಮ ಕಪ್ಪದ ಜೊತೆಗೆ ಚಕ್ಕಳದ ಬೂಟ್‌ಗಳನ್ನು ವಂತಿಗೆಯಾಗಿ ಪೀಕುತ್ತಿದ್ದ ಅಧಿಕಾರಿಗಳನ್ನು ಕಂಡರೆ ಮುನಿಯ ಉರಿದು ಬೀಳುತ್ತಿದ್ದ. ದಾಸ್ಯದ ಬೆಂಕಿ ಅವನ ಹೊಟ್ಟೆಗೆ ಕಿಚ್ಚು ಹತ್ತಿಸಿ ಸುಡಲಾರಂಭಿಸುತ್ತಿತ್ತು. ಇದೇ ಚರ್ಮಕುಟೀರದ ಲೈಸನ್ಸ್ ಪಡೆಯಲು ಅಲ್ಲಿನ ಅಧಿಕಾರಿ ಮೋರಿಂಜ್‌ನ ಪಾದವನ್ನು ಅದೆಷ್ಟು ಬಾರಿ ಹಿಡಿದಿದ್ದನೋ, ಒಟ್ಟಿನಲ್ಲಿ ಒಂದು ಕುಟೀರದ ಬಾಗಿಲು ತೆರೆಯಲು ಜೀವನವನ್ನೇ ತೆತ್ತಿದ್ದ. ದುಡಿಯುತ್ತಿದ್ದ ಅಷ್ಟು ಇಷ್ಟು ಹಣ ಈ ಅಧಿಕಾರಿಗಳ ಬಾಯಿಗೇ ತುಂಬಲು ಸಾಲುತ್ತಿರಲಿಲ್ಲ. ವಾರಂಟಿಗಳಿಗೆ ಸೆಡ್ಡು ಹೊಡೆಯುತ್ತಿದ್ದ ಅವನ ಚಕ್ಕಳದ ಜೋಡುಗಳು ಬಿಕರಿಗೆ ಬ್ರಿಟಿಷ್ ಅಧಿಕಾರಿಗಳ ಪಾಲಾಗಿ ಹೋಗುತ್ತಿದ್ದುದು ಮುನಿಯನನ್ನು ಕೆರಳಿ ಕೆಂಡವಾಗಿಸುತ್ತಿತ್ತು. ಬೆವರು ಸುರಿಸಿ ಹಗಲು-ಇರುಳೆನ್ನದೆ ಹೆಣೆಯುತ್ತಿದ್ದ ಜೋಡುಗಳು ಬೆಳಗಾಗುವುದರಲ್ಲಿ ಬಿಳಿಯರ ಪಾಲಾಗುತ್ತಿದ್ದವು. ಸ್ವಾತಂತ್ರ‍್ಯದ ಕಿಚ್ಚು ದೇಶಾದ್ಯಂತ ಬುಗಿಲೇಳುವ ಘಳಿಗೆಯದು. ಸ್ವಾತಂತ್ರ‍್ಯ, ದಾಸ್ಯದ ನಡುವಿನ ಭಿನ್ನತೆಗಳು ಅವನ ಕನಸನ್ನು ಚಿವುಟಿ ಹೋಗುತ್ತಿದ್ದವು. ದಿನಾ ಬೀದಿಯಲ್ಲಿ ಅವನದೇ ಕೈಯ್ಯಾರ ಹೆಣೆದ ಬೂಟಿನ ಸದ್ದುಗಳು, ಇಂಡಿಯನ್ಸ್ ಆರ್ ನಾಟ್ ಫಿಟ್ ಟು ರೂಲ್ಸ್ ಎಂದು ಗಹಗಹಿಸುತ್ತಿದ್ದ ಕೇಕೆಗಳು ಮುನಿಯನ ರೋಮಗಳನ್ನು ಅಲ್ಲಾಡಿಸಿ ಹೋಗುತ್ತಿದ್ದವು. ಒಮ್ಮೊಮ್ಮೆ ರೊಚ್ಚಿಗೆದ್ದು ಬೀದಿಯಲ್ಲಿ ನಿಂತು ‘ಐ ವಾಂಟ್ ಫ್ರೀಡಂ’ ಎಂದು ಕೂಗಿಬಿಡಲೆ ಎಂದುಕೊಳ್ಳುತ್ತಿದ್ದ. ಆದರೆ ಅಲ್ಲೇ ಗಸ್ತು ಹೊಡೆಯುತ್ತಿದ್ದ ಪೋಲೀಸರ ಗುಂಡಿನ ನಳಿಕೆಗಳಿಗೆ ಬಿಚ್ಚಿ ನೂಲು ಹಿಡಿಯುತ್ತಿದ್ದ. 'ಫ್ರೀಡಂ ಇಟ್ ಶುಡ್ ನಾಟ್ ಬಿ ಗಿವನ್ ಇಟ್ ಶುಡ್ ಹ್ಯಾವ್ ಟೇಕನ್’ ಎಂದು ಕೊಳ್ಳುತ್ತಾ ಒಮ್ಮೊಮ್ಮೆ ನಿದ್ರೆಯಲ್ಲಿ ಗಕ್ಕನೆ ಎದ್ದು ಕೂರುತ್ತಿದ್ದ. ದಾಸ್ಯದ ಒಂದೊಂದು ಕಿರಣಗಳು ಅವನ ತಲೆಯಲ್ಲಿ ಈಗ ಬೆಂಕಿಯನ್ನೇ ಹೊತ್ತಿಸಿದ್ದವು.
ರಾಣಿ ಎಲಿಜೆಬೆತ್ ಭಾರತದ ಭೇಟಿ ಕುರಿತಾಗಿ ದೊಡ್ಡ ಸುದ್ದಿ ಹಬ್ಬಿತ್ತು. ಆಕೆ ಈಸೂರಿಗೂ ಭೇಟಿ ನೀಡುವ ಸುಳಿವು ಎನ್ನುವಂತೆ ಅಧಿಕಾರಿಗಳು ಈಸೂರನ್ನು ಸಿಂಗರಿಸುತ್ತಿದ್ದರು. ರಸ್ತೆಗಳಲ್ಲೆಲ್ಲಾ ಹೂವಿನ ರಾಶಿ ಹರಡಿ ಗಲ್ಲಿಗಲ್ಲಿಗಳಲ್ಲೂ ಬೂಟಿನ ಸದ್ದುಗಳು ಕೇಳಲಾರಂಭಿಸಿತ್ತು. ಈಸೂರಿನ ಎಲ್ಲಾ ಕಚೇರಿಗಳು ರಾಣಿಯ ಹೆಸರಿನ ಬೋರ್ಡು ಹೊದ್ದುಕೊಳ್ಳುವುದಲ್ಲದೆ ಎಲ್ಲಾ ಅಂಗಡಿ ಮುಂಗಟ್ಟುಗಳು ರಾಣಿಯ ಹೆಸರಿನಿಂದಲೇ ಪ್ರಾರಂಭವಾಗುವಂತೆ ಬದಲಾಯಿಸಲು ಮೋರಿಂಜ್ ಅಪ್ಪಣೆ ಹೊರಡಿಸಿದ್ದ. ಬೆಳಗಾಗುವುದರಲ್ಲಿ ಕಾಲಾಳುಗಳು ‘ಜೋಡುಂಡಿ ಮುನಿದೇವ ಚರ್ಮ ಕುಟೀರ’ ಎಂದು ಇದ್ದ ಮುನಿಯನ ಅಂಗಡಿಯ ಬೋರ್ಡನ್ನು ‘ಕ್ವೀನ್ ಎಲಿಜಬೆತ್ ಕಾಬ್ಲರ್ ಶಾಪ್’ ಎಂದು ಬದಲಾಯಿಸಿ ಹೋಗಿದ್ದರು. ತನ್ನ ನೆಲದಲ್ಲೇ ಬ್ರಿಟಿಷ್ ರಾಣಿಯ ಹೆಸರು ಕಂಡು ಮುನಿಯ ಕುಸಿದು ಹೋದ. ‘ಅಪ್ಪ ಜೋಡುಂಡಿ ಮುನಿದೇವ ನೀನು ಅನ್ನೋನ್ ಒಬ್ಬ ಇದ್ರೆ ಈ ಬಿಳೀ ನನ್ ಮಕ್ಳು ಇರುದ್ದ ಹೋರಾಡೋ ಒಬ್ ಗಂಡ್ಸುನ ಈ ದೇಶ್ದಾಗ್ ಹುಟ್ಸೋ ನನ್ ಶಿವನೆ’ ಎನ್ನುತ್ತಾ ಕಣ್ಣಲ್ಲಿ ನೀರು ಬಿಡಲಾರಂಭಿಸಿದ.
ಕೇವಲ ಚರ್ಮವನ್ನೇ ನಂಬಿ ಜೋಡು ಹೆಣೆಯುವುದು ಮತ್ತು ಮಾರುವುದರಲ್ಲೇ ಬದುಕು ಕಟ್ಟಿಕೊಂಡಿದ್ದ ಮುನಿಯನಿಗೆ ಅದರ ವ್ಯವಹಾರ ಅಷ್ಟು ಸುಲಭದ್ದೇನು ಆಗಿರಲಿಲ್ಲ. ಪ್ರಾಣಿಗಳ ಹಸಿ ಚಕ್ಕಳ ಸುಲಿದು ಅದನ್ನ ಒಂದು ಹದಕ್ಕೆ ತಂದು ಪಾದದ ಅಳತೆಗಳಿಗೆ ಕತ್ತರಿಸಿ ಹೆಣೆಯುವುದರಲ್ಲಿ ಮುನಿಯನ ಜೊತೆಗೆ ಸಿದ್ಧಿಯೂ ಹೈರಾಣಾಗಿ ಹೋಗುತ್ತಿದ್ದಳು. ‘ದೇಸಿ ಚಕ್ಳ್ಕದ್ ಜೋಡ್ ಮುಂದೆ ಕಂಪನಿದು ಏನಿಕ್ಕೂ ಬೇಡ ಕಣ್ರಲಾ’ ಎಂದು ಜನ ಮುನಿಯನ ಜೋಡಿಗೆ ಮುಗಿ ಬೀಳುತ್ತಿದ್ದರು. ಒಮ್ಮೊಮ್ಮೆ ತನ್ನ ಗ್ರಾಹಕರಿಗೆ ಜೋಡು ಸಿದ್ಧ ಮಾಡಲಾಗದಷ್ಟು ಆರ್ಡರ್‌ಗಳು ಏಕಕಾಲಕ್ಕೆ ಬಂದುಬಿಡುತ್ತಿದ್ದವು. ಮುನಿಯ ಒಂದು ತಿಂಗಳು, ಎರಡು ತಿಂಗಳು ಕಾಲಾವಕಾಶ ಪಡೆದು ಯಾರಿಗೂ ಬೇಸರವಾಗದಂತೆ ಜೋಡು ಸಿದ್ದಪಡಿಸೇ ತೀರುತ್ತಿದ್ದ. ಎಷ್ಟೋ ರಾತ್ರಿಗಳನ್ನು ಹಗಲುಗಳಂತೆಯೇ ಗಂಡ ಹೆಂಡತಿ ಕಳೆದುಬಿಡುತ್ತಿದ್ದರು. ಪಾದಗಳಿಗೆ ಹದವಾಗಿ, ಮೆಟ್ಟಲು ನಯವಾಗಿ ಸಿದ್ಧವಾಗುತ್ತಿದ್ದ ಮುನಿಯನ ಜೋಡುಗಳು ಕಂಪನಿ ಜೋಡುಗಳಿಗೆ ಮುಟ್ಟಿಕೊಳ್ಳುವಂತಹ ಪೈಪೋಟಿ ನೀಡುತ್ತಿದ್ದುದು ಮೋರೀಂಜನ ಕಣ್ಣು ಕೆಂಪಾಗಿಸಿತ್ತು. ಹೇಗಾದರು ಮಾಡಿ ಮುನಿಯನ ಚರ್ಮ ಕುಟೀರ ಮುಚ್ಚಲೇಬೇಕೆಂದು ನಿರ್ಧರಿಸಿ ಚಕ್ಕಳದ ಮೇಲೆ ವಿಧಿಸುತ್ತಿದ್ದ ತೆರಿಗೆಯನ್ನು ದುಪ್ಪಟ್ಟು ಮಾಡಿ ಕುಟೀರದ ಜಾಗಕ್ಕೂ ದುಪ್ಪಟ್ಟು ತೆರಿಗೆ ಪೀಕಲಾರಂಭಿಸಿದ. ಜೊತೆಗೆ ತನ್ನ ಅಧಿಕಾರಿಗಳಿಗೆ ಪುಕ್ಕಟೆ ಬೂಟುಗಳನ್ನು ಸರಬರಾಜು ಮಾಡಬೇಕೆಂದು ಆಜ್ಞೆಯನ್ನು ಹೊರಡಿಸಿದ. ಈಗ ಮುನಿಯನಿಗೆ ನಿಜವಾದ ದಾಸ್ಯದ ಅನುಭವ ಅನುಭವಕ್ಕೆ ಬರಲಾರಂಭಿಸಿತು. ಯಾವ ಸಾಮ್ರಾಜ್ಯ ಸೂರ್ಯಮುಳುಗದ ನಾಡು ಎಂದು ಹೆಸರುಗಳಿಸಿ ರಾಣಿಯ ಅಧೀನಕ್ಕೊಳಪಟ್ಟಿತ್ತೋ ಅದೇ ನಾಡನ್ನು ಬಡ್ಡೀ ಮಗನ್ ಸೂರ್ಯನೆ ಹುಟ್ದಂಗಾಗ್ಲಿ ಶಿವ ಎಂದು ಶಾಪ ಹಾಕಲಾರಂಭಿಸಿದ.
ನಿಧಾನಕ್ಕೆ ದೇಶದಲ್ಲಿ ಸ್ವಾತಂತ್ರ‍್ಯದ ಕಿಚ್ಚು ಹೊತ್ತಿಕೊಳ್ಳಲಾರಂಭಿಸಿತ್ತು. ‘ಗಾಂಧಿ ದಕ್ಷಿಣ ಆಫ್ರಿಕಾದಿಂದ ಬಂದ ಮೇಲೆ ಇಂಡಿಗೋ ಬೆಳೆಯ ವಿರುದ್ಧವಾಗಿ ಎದ್ದ ಚಂಪಾರಣ್ಯ ಸತ್ಯಾಗ್ರಹದ ಕೂಗು ಬಲು ಜೋರು ಸದ್ದು ಮಾಡಿತ್ತು. ಗಾಂಧಿ ಎಂಬ ಗಾಂಧಿಯ ಹೆಸರು ಮುನಿಯನ ಕಿವಿಗೆ ಮುಟ್ಟಿದ್ದೇ ತಡ ಸ್ವಾತಂತ್ರ‍್ಯದ ಪಟಾಕಿಗೆ ಕಿಡಿಯೊಂದು ತಾಕಿದಂತೆ ಅವನು ಕುಣಿಯಲಾರಂಭಿಸಿದ. ನಿದ್ದೆಯಲ್ಲೂ ಎದ್ದು ಗಾಂಧೀ ಗಾಂಧೀ ಎಂದು ಕನವರಿಸಲಾರಂಭಿಸಿದ. “ಲೋ ಬಡ್ಡೆತ್ತವೆ ಬನ್ರುಲಾ ಎದೆ ತಟ್ಕಂಡ್ ಬನ್ನಿ ಆ ಬಿಳಿ ನನ್ ಮಕ್ಳು ಊರ್ ಬುಡೋ ಕಾಲ ಕಿತ್ತಾಕಂಡ್ ಬತ್ತದೆ” ಎನ್ನುತ್ತಾ ಊರಿನ ಜನರನ್ನೆಲ್ಲಾ ಹುರಿದುಂಬಿಸುತ್ತಿದ್ದ. ಜಗಲಿಗಳಲ್ಲಿ, ಬೀದಿಗಳಲ್ಲಿ ಊರಿನ ಜನಗಳನ್ನು ಗುಂಪು ಸೇರಿಸಿ ದಾಸ್ಯದ ಕಥೆಗಳನ್ನು ಹೇಳಿ ಹುರಿದುಂಬಿಸಲಾರಂಭಿಸಿದ. ಗಾಂಧಿಯ ಸತ್ಯಾಗ್ರಹದ ಕೂಗನ್ನು ನಿಧಾನಕ್ಕೆ ಈಸೂರಿನಲ್ಲಿ ಮುನಿಯ ಪ್ರಾರಂಭಿಸಿಬಿಟ್ಟಿದ್ದ.
ನಿಧಾನಕ್ಕೆ ಜನ ಮೋರಿಂಜ್ ಮತ್ತು ಆತನ ಅಧಿಕಾರಿಗಳ ವಿರುದ್ಧವಾಗಿ ಮಾತನಾಡಲಾರಂಭಿಸಿದ್ದು ಮೋರೀಂಜನ ನಿದ್ದೆಗೆಡಿಸಿತ್ತು. ಇಷ್ಟಕ್ಕೆಲ್ಲಾ ಕಾರಣ ಮುನಿಯನೇ ಎಂದು ಅವನ ಮೇಲೆ ಸೇಡಿಗೆ ಸಿದ್ಧತೆ ಮಾಡಿಕೊಳ್ಳಲಾರಂಭಿಸಿದ್ದ. ತನ್ನ ಅಂಗಡಿಗೆ ನೇತು ಬಿಗಿದಿದ್ದ 'ಕ್ವೀನ್ ಎಲಿಜೆಬೆತ್ ಕಾಬ್ಲರ್ ಶಾಪ್’ ಎನ್ನುವ ಬೋರ್ಡನ್ನು ಕಿತ್ತೊಗೆದು ‘ಗಾಂಧಿ ಜೋಡಿನ ಮಳಿಗೆ’ ಎನ್ನುವ ಬೋರ್ಡನ್ನು ಮುನಿಯ ನೇತು ಹಾಕಿದ. ಕುಟೀರದೊಳಗಿದ್ದ ಜೋಡುಂಡಿ ಮುನಿಯನ ಫೋಟೋದ ಪಕ್ಕದಲ್ಲೇ ಪ್ರೇಮಿನಲಿ ಕೂತ ಗಾಂಧಿಯ ಫೋಟೋವನ್ನು ಜೋಡಿಸಿದ. ಗಾಂಧೀ ಮುನಿಯನಿಗೆ ದೇವರಂತಾದ.
ಗಾಂಧಿಯ ಚಳವಳಿಗಳು ಬ್ರಿಟಿಷರಿಗೆ ನಿದ್ದೆಗೆಡಿಸಿದ್ದ ಕಾಲ. ದೇಶದ ಮೂಲೆ ಮೂಲೆಯಲ್ಲಿ ಅಸಹಕಾರ ಚಳವಳಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಯಾವುದೇ ತೆರಿಗೆಯನ್ನು ಪಾವತಿಸುವುದಿಲ್ಲ ಎನ್ನುವ ಕೂಗು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಾರಂಭಿಸಿತ್ತು. ಬ್ರಿಟಿಷರ ಯಾವುದೇ ಆಜ್ಞೆಗಳನ್ನು ಪಾಲಿಸುವುದಿಲ್ಲ ಎಂಬ ಜೋರು ಕೂಗು ಮೊಳಗಲಾರಂಭಿಸಿತ್ತು. ಅದು ಈಸೂರನ್ನು ತಲುಪಲು ಹೆಚ್ಚು ಕಾಲ ತೆಗೆದುಕೊಳ್ಳಲಿಲ್ಲ. ತಾನು ಬಳಸುವ ಚಕ್ಕಳಗಳಿಗೆ ತನ್ನ ಅಂಗಡಿ ಜಾಗಕ್ಕೆ ಮೋರಿಂಜ್ ದುಪ್ಪಟ್ಟು ತೆರಿಗೆ ಪೀಕುತ್ತಿದ್ದುದನ್ನು ವಿರೋಧಿಸಿ ಮುನಿಯ ತೆರಿಗೆ ನೀಡುವುದಿಲ್ಲವೆಂದು ಧರಣಿ ಕೂರಲಾರಂಭಿಸಿದ. ಮುನಿಯನನ್ನೇ ಅನುಕರಿಸಿದ ಊರಿನ ಇತರರು ಧರಣಿ ಕೂರಲಾರಂಭಿಸಿದ್ದು ಅಧಿಕಾರಿಗಳ ಪಿತ್ತ ನೆತ್ತಿಗೇರಿಸಿತ್ತು. ಇದನ್ನೇ ದಾಳವಾಗಿಸಿ ರಾಣಿಯ ಆಜ್ಞೆಯಾಗಿದೆ ಎಂದು ಮೋರಿಂಜ್ ಬೀದಿ ಬೀದಿಗಳಲ್ಲಿ ಲಾಠಿ ಚಾರ್ಜ್ ಮಾಡಲಾರಂಭಿಸಿದ್ದ. ಸಿಕ್ಕ ಸಿಕ್ಕವರನ್ನು ಬಂದಿಖಾನೆಯಲ್ಲಿ ಬಂಧಿಸಿ ಚಿತ್ರಹಿಂಸೆ ನೀಡಲಾರಂಭಿಸಿದ್ದ. ಅಂಗಡಿ ಮುಂಗಟ್ಟುಗಳನ್ನು ಮನಬಂದಂತೆ ಚಚ್ಚಿ ಬಿಸಾಡುತ್ತಿದ್ದ. ಮುನಿಯನ ‘ಗಾಂಧಿ ಜೋಡಿನ ಮಳಿಗೆ’ ಎನ್ನುವ ಬೋರ್ಡನ್ನು ಕಿತ್ತು ಕಾಲಿನಲ್ಲಿ ಹೊಸಕಿ ಕುಟೀರದ ಒಳಗಿದ್ದ ಬೆಲೆಬಾಳುವ ಒಣ ಚಕ್ಕಳಗಳಿಗೆ ಬೆಂಕಿ ಹಾಕಿ ಬೇಯಿಸಲಾರಂಭಿಸಲಾಯಿತು. ರಾತ್ರೋರಾತ್ರಿ ಕುಟೀರವನ್ನು ಟ್ರಕ್ಕಿನಲಿ ತುಂಬಿ ಎತ್ತಲೋ ಹೊತ್ತು ಹೊಯ್ದಾಗಿತ್ತು. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎನ್ನುವಷ್ಟರ ಮಟ್ಟಿಗೆ ದೇಶದಲ್ಲಿ ದಂಗೆಗಳೇಳಲು ಆರಂಭವಾಗುವ ಹೊತ್ತಿಗೆ ಈಸೂರಿನಲ್ಲೂ ಅದರ ಸಣ್ಣದೊಂದು ಕಿಚ್ಚು ಜನ್ಮ ತಾಳುವಂತೆ ಮುನಿಯ ಕಿಡಿಹೊತ್ತಿಸಿದ್ದ. ಮುನಿಯನ ಕಣ್ಣಿನಲ್ಲಿ ಮೋರಿಂಜ್ ಅಪ್ಪಟ ದ್ವೇಷಿಯಾಗಿ ಹೋದ. ಒಂದು ತಡರಾತ್ರಿ ಈಸೂರಿನ ಜನ ಸೂಟೆಗಳನ್ನು ಹಿಡಿದು ಮೋರಿಂಜನ ಕಚೇರಿಗಳನ್ನು ಸುಟ್ಟು ಹಾಕಲು ನೆರೆದಿದ್ದಾಗ ಗಾಂಧಿಯ ಅಹಿಂಸಾ ತತ್ವದ ಸ್ವಾತಂತ್ರ‍್ಯದ ದಾರಿಯನ್ನು ಅನುಸರಿಸುವ ನಿರ್ಧಾರ ಕೈಗೊಂಡು ಅವರನ್ನು ಸಮಾಧಾನಿಸಿದ್ದ. ಮೋರಿಂಜನಿಗೆ ಸೆಡ್ಡು ಹೊಡೆದು ತನ್ನ ಕುಟೀರವಿದ್ದ ಜಾಗದಲ್ಲೇ ಗುಡಿಸಲೊಂದು ಹಾಕಿ ‘ಗಾಂಧೀ ಜೋಡಿನ ಮಳಿಗೆ’ ಎನ್ನುವ ಬೋರ್ಡನ್ನು ಮತ್ತೆ ನೇತು ಬಿಗಿದು, ಜೋಡು ಹೊಲೆಯುವ ತನ್ನ ಕಾಯಕಕ್ಕೆ ಮತ್ತೆ ಮರಳಿಕೊಂಡ.
ದೇಶೀಯ ಜನ ಉಪ್ಪನ್ನು ಉತ್ಪಾದಿಸಬಾರದೆಂಬ ಬ್ರಿಟಿಷ್ ನಿಯಮ ಜನರನ್ನು ದಂಗೆ ಎಬ್ಬಿಸಿತ್ತು. ಇದೇ ನಿಯಮದ ವಿರುದ್ಧವಾಗಿ ಗಾಂಧಿ ದಂಡಿಗೆ ಪಾದಯಾತ್ರೆ ಹೊರಟ ಸುದ್ದಿ ಮುನಿಯನ ಕಿವಿಗೂ ಮುಟ್ಟಿತ್ತು. ಮುನಿಯ ಈ ಕಾನೂನುಗಳಿಂದ ವಿಚಲಿತನಾದ. ''ನೋಡ್ರುಲಾ ಈ ಬಿಳಿ ಮೂತಿ ಮೂದೇವಿ ನನ್ ಮಕ್ಳು ತಿನ್ನೋ ಉಪ್ಗು ಕಲ್ಲಾಕ್ತಾರಲ್ರೋ, ನಮ್ಮೂರ‍್ನಾಗ್ ನಾವ್ ಬೆಳೆ ಬೆಳಿಬಾರ‍್ದು ಅಂದ್ರೆ ಹೆಂಗೆ ವಸಿ ನೀವೇ ಯೋಚ್ನೆ ಮಾಡರ‍್ಲ ''ಎಂದು ಬೀದಿಯಲ್ಲಿ ನಿಂತು ಕೂಗಲಾರಂಭಿಸಿದ್ದ. ಗಾಂಧಿಯ ದಂಡಿ ಸತ್ಯಾಗ್ರಹದ ಕುರಿತಾಗಿ ಪತ್ರಿಕೆಗಳು, ಆಕಾಶವಾಣಿಗಳಲ್ಲೆಲ್ಲಾ ಜೋರು ಸುದ್ಧಿ ಬಿತ್ತರವಾಗತೊಡಗಿತು. ಪತ್ರಿಕೆಗಳಲ್ಲಿ ಬಂದ ಗಾಂಧಿಯ ಚಿತ್ರಗಳು ಮುನಿಯನ ಮನಸ್ಸನ್ನು ಅಲ್ಲಾಡಿಸಿತ್ತು. ಬಡಕಲು ದೇಹ, ಬರಿಯ ಮೈಯಿ ಅವನ ಚಿತ್ತ ಚಂಚಲವಾಗಿಸಿತ್ತು. ಅಷ್ಟು ದೂರದ ದಂಡಿಗೆ ಬರಿಗಾಲಲಿ ಗಾಂಧಿ ಪಾದಯಾತ್ರೆ ಮಾಡುವ ಸುದ್ದಿಯೇ ಅವನನ್ನು ಅಲ್ಲಾಡಿಸಿಬಿಟ್ಟಿತ್ತು. ಆ ಬಡಕಲು ದೇಹದ ಪಾದಗಳು ಬರಿಗಾಲಲಿ ಅದು ಹೇಗೇ ಅಷ್ಟೂ ದೂರ ನಡೆದಾವು ಎನ್ನುವ ಚಿಂತೆ ಮುನಿಯನ ದುಃಖ ಇಮ್ಮಡಿಗೊಳಿಸಿತ್ತು. ''ಲೇ ಸಿದ್ದಿ ಈ ಗಟ ಯಾವಾಗ್ ಬಿದ್ದೋಯ್ತಾದೋ. ಅಷ್ಟ್ರಲ್ಲಿ ಆ ನನ್ ದೊರೆಗೆ, ಆ ಪುಣಾತ್ಮನ್ಗೆ ನನ್ ಕೈಯ್ಯಾರೆ ಚಕ್ಳದ್ ಜೋಡ ಹೆಣೆದು ಅವರ್ ಪಾದಕ್ ಹಾಕ್ಬುಟ್ರೆ ಈ ಜೀವ್ನ ಸಾಕು ಕಮ್ಮಿ” ಎನ್ನುತ್ತಾ ಗಾಂಧಿಗೊಂದು ಜೊತೆ ಜೋಡು ತಲುಪಿಸುವ ಕನಸೊಂದನ್ನು ತಾನೇ ಹೆಣೆದುಕೊಂಡ. ತನ್ನ ಜೀವನದ ಏಕೈಕ ಗುರಿಯೇ ಗಾಂಧಿಗೊಂದು ಜೋಡು ಹೆಣೆದು ತಲುಪಿಸುವುದೆಂದುಕೊಂಡು ಅದರ ತಯಾರಿಗೆ ಇಳಿದುಬಿಟ್ಟ. ಶುದ್ಧವಾದ ಹದಗೊಳಿಸಿದ ಚಕ್ಕಳವನ್ನು ಶೇಖರಿಸಿ, ಪತ್ರಿಕೆಯಲ್ಲಿ ಬಂದ ಭಾವಚಿತ್ರದ ಗುರುತನ್ನು ಹಿಡಿದು ತಾನೇ ಮನಸ್ಸಿನಲ್ಲಿ ಅಳತೆಯೊಂದನ್ನು ಅಂದಾಜಿಸಿ ನಿತ್ಯ ಅದಕ್ಕೊಂದು ರೂಪ ಕೊಡುವುದರಲ್ಲಿ ತಲ್ಲೀನನಾಗಿಬಿಟ್ಟ. ‘ಆ ನನ್ ದೊರೆ ಈ ದೇಶಿ ಚಕ್ಳದ್ ಜೋಡ್ನ ಬ್ಯಾಡ ಅನ್ನುದುಂಟೇನಮ್ಮಿ ಸಿದ್ದಿ. ನೋಡ್ತಿರು, ರವೋಸ್ಟು ಹೆಚ್ಚು ಕಮ್ಮಿ ಆಗ್ದಂಗೆ ಹೆಂಗ್ ಹೆಣಿತೀನಿ ಅಂತ’ ಎನ್ನುತ್ತಾ ಚಕ್ಕಳದ ಮೂಲೆಗಳಲ್ಲಿ ಸೂಜಿಯಿಂದ ನೂಲನ್ನು ಎಳೆಯಲಾರಂಭಿಸಿದ.
ದಿನಗಳೊಂದಷ್ಟು ಕಳೆಯುವುದರಲ್ಲಿ ಗಾಂಧಿಗೊಂದು ಸೊಗಸಾದ ಚಕ್ಕಳದ ಜೋಡು ಸಿದ್ಧವಾಗಿತ್ತು. ಆದರೆ ಅದನ್ನು ಗಾಂಧಿಗೆ ತಲುಪಿಸುವ ಯೋಜನೆ ಮಾತ್ರ ಬಹಳ ತ್ರಾಸವಾದುದ್ದೆಂದು ಮುನಿಯ ಒದ್ದಾಡತೊಡಗಿದ. ಹೇಗಾದರೂ ಮಾಡಿ ತನ್ನ ದೈವವನ್ನೊಮ್ಮೆ ಭೇಟಿ ಮಾಡಿ ತನ್ನ ಜೋಡನ್ನು ಉಡುಗೊರೆಯಾಗಿ ನೀಡಲೇಬೇಕೆಂಬ ಹಠಕ್ಕೆ ಬಿದ್ದ ಮುನಿಯ ಅದಕ್ಕಾಗಿ ಇರುವ ಸಣ್ಣ ಸಣ್ಣ ದಾರಿಗಳನ್ನು ಹುಡುಕಲಾರಂಭಿಸಿದ. ದೇಶಕ್ಕಾಗಿ ಸರ್ವವನ್ನು ತ್ಯಾಗ ಮಾಡಿದ, ಸ್ವದೇಶಿ ಚಳವಳಿಗೆ ಹಿಂಬು ನೀಡಿದ, ದೇಶಿಯ ಖಾದಿ ಬಟ್ಟೆಗೆ ಆದ್ಯತೆ ನೀಡಿದ ನನ್ನ ದೊರೆ ನನ್ನ ದೇಶೀಯ ಚಕ್ಕಳದ ಜೋಡಿಗೆ ಖಂಡಿತಾ ಖುಷಿ ಪಡುತ್ತಾರೆ ಎಂದು ತನ್ನೊಳಗೆ ತಾನೆ ಹಿಗ್ಗತೊಡಗಿದ.
ಸ್ವತಂತ್ರದ ಕೂಗು ಹೆಚ್ಚಾಗ ತೊಡಗಿದಂತೆ ಮೋರಿಂಜ್ ಮತ್ತು ಆತನ ಅಧಿಕಾರಿಗಳ ಉಪಟಳ ಅತಿಯಾಗತೊಡಗಿತ್ತು. ದೇಶದಲ್ಲಿ ನಡೆಯುತ್ತಿರುವ ಚಳವಳಿಗಳನ್ನು ಅನುಸರಿಸಿ ಈಸೂರಿನಲ್ಲೂ ಅಸಹಕಾರ ತೋರುತ್ತಿದ್ದ ಅಲ್ಲಿನ ಜನಗಳನ್ನು ಚಿತ್ರಹಿಂಸೆಗೆ ಗುರಿಪಡಿಸಲಾಗುತ್ತಿತ್ತು. ಜನಗಳ ಮನೆಗಳಿಗೆ ನುಗ್ಗಿ ಕೈಗೆ ಸಿಕ್ಕ ವಸ್ತುಗಳನ್ನು ತೆರಿಗೆಯ ವಸೂಲಿ ಎಂದು ಬಾಚಿಕೊಳ್ಳಲಾರಂಭಿಸಿದ್ದರು ಮೋರಿಂಜನ ಅಧಿಕಾರಿಗಳು. ಪೊಲೀಸರ ಪರೇಡ್‌ಗಳು ಊರಿನ ಬೀದಿಗಳಲ್ಲಿ ದಿನ ಪ್ರತಿ ಗಸ್ತು ಒಡೆಯಲಾರಂಭಿಸಿತ್ತು. ಇದು ಮುನಿಯನೊಟ್ಟಿಗೆ ಊರಿನ ಎಲ್ಲರ ಧನಿ ಅಡಗುವಂತೆ ಮಾಡಿತ್ತಾದರೂ ಆಗಾಗ್ಗೆ ಸಣ್ಣ ಪ್ರತಿರೋಧ ತೋರುವುದನ್ನು ಜನ ಮಾಡುತ್ತಲೇ ಬಂದರು. ತನ್ನ ದೊರೆಗಾಗಿ ಕಷ್ಟಪಟ್ಟು ಹೆಣೆದ ಜೋಡು ಎಲ್ಲಿ ಕೆಂಪಾಳುಗಳ ವಶವಾಗಿ ಬಿಡುವುದೋ ಎಂದು ಮುನಿಯ ಅದನ್ನು ಸಣ್ಣದೊಂದು ಪೆಟ್ಟಿಗೆಯಲ್ಲಿ ಕಾವಲು ಕಾಯಲಾರಂಭಿಸಿದ್ದ. ಕೇವಲ ಚರ್ಮ ಕುಟೀರಕ್ಕಿದ್ದ ಗಾಂಧಿ ಹೆಸರಿನ ಬೋರ್ಡನ್ನು ಸರ್ಕಲ್, ಬೀದಿಗಳು, ಅಂಗಡಿ ಮುಂಗಟ್ಟುಗಳಿಗೆಲ್ಲಾ ನೇತು ಹಾಕುವಂತೆ ಪ್ರೇರೇಪಿಸಿದ. ಕೆಂಪಾಳುಗಳ ತೀವ್ರ ವಿರೋಧದ ನಡುವೆಯೂ ಈಸೂರಿನ ತುಂಬೆಲ್ಲಾ ಗಾಂಧೀ ಬೋರ್ಡುಗಳು ನೇತಾಡಲಾರಂಭಿಸಿದ್ದವು.
ಗಾಂಧಿಯಂತ ಗಾಂಧಿಯೊಬ್ಬ ಇಡೀ ಊರನ್ನು ಆವರಿಸಿದ್ದು ಮೋರಿಂಜನ ಮತ್ತು ಆತನ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು.
ವಿಶ್ರಾಂತಿಗೆಂದು ಗಾಂಧಿ ನಂದಿ ಗಿರಿಧಾಮಕ್ಕೆ ಭೇಟಿ ನೀಡುವ ಸುದ್ದಿ ಹಬ್ಬಿತ್ತು. ಗಾಂಧಿಯನ್ನು ಭೇಟಿಯಾಗಲು ಇದಕ್ಕಿಂತ ಮತ್ತೊಂದು ಅವಕಾಶ ತನಗೆ ಸಿಗಲಾರದು. ಹೇಗಾದರೂ ಮಾಡಿ ಅಂಗಲಾಚಿ ಗಾಂಧಿಯನ್ನು ಭೇಟಿ ಮಾಡಿ ತನ್ನ ದೇಶಿ ಜೋಡುಗಳನ್ನು ನೀಡುವುದೇ ಖರೆ ಎಂದು ಅಲ್ಲಿಗೆ ತಲುಪಬಹುದಾದ ಮಾರ್ಗಗಳನ್ನೆಲ್ಲಾ ಮುನಿಯ ಹುಡುಕಲಾರಂಭಿಸಿದ. ಏನೇ ಬಲವಾದ ಪ್ರಯತ್ನ ಮಾಡಿದರು ಸರ್ಪಗಾವಲಿನಲ್ಲಿದ್ದ ಗಾಂಧಿಯನ್ನು ಭೇಟಿ ಮಾಡುವುದು ಸಾಧ್ಯವಾಗದಾಗ ಮುನಿಯ ಬೇಸರಿಸಿಕೊಂಡ. ಇದ್ದ ಒಂದು ಸುವರ್ಣ ಅವಕಾಶ ಕೈ ಚೆಲ್ಲಿದ್ದರ ಕುರಿತು ವ್ಯವಸ್ಥೆಯನ್ನು ಶಪಿಸತೊಡಗಿದ. ಭೂಮಿ ದುಂಡಗಿದೆ ಎಂದುಕೊಳ್ಳುತ್ತಾ ಮತ್ತೆ ಜೋಡನ್ನು ಪೆಟ್ಟಿಗೆಯಲ್ಲಿಟ್ಟು, ಜೋಪಾನ ಮಾಡತೊಡಗಿದ.
ಮೋರಿಂಜನ ಕಣ್ಣುಗಳೀಗ ನೇರವಾಗಿ ಮುನಿಯನತ್ತ ಗುರಿಯ ಮಾಡತೊಡಗಿದವು. ತನ್ನ ಗುಡಿಸಲಲಿ ಜೋಡು ಹೆಣೆಯುವುದರಲ್ಲೇ ತಲ್ಲೀನನಾಗಿರುತ್ತಿದ್ದ ಮುನಿಯನ ಮೇಲೆ ಮೋರಿಂಜ್ ವೈಯುಕ್ತಿಕ ದ್ವೇಷಕ್ಕಿಳಿದ. ಈಸೂರಿನ ಸುತ್ತಮುತ್ತಲ ಹಳ್ಳಿಗಳಿಗೆಲ್ಲಾ ಸ್ವಾತಂತ್ರ‍್ಯದ ಕಿಚ್ಚನ್ನು ನಿಧಾನಕ್ಕೆ ಹಚ್ಚುತ್ತಿರುವ ಮುನಿಯನನ್ನು ಹೇಗಾದರು ಹಣಿದುಬಿಡುವ ಕಾರ್ಯತಂತ್ರಗಳನ್ನು ಮೋರಿಂಜ್ ಹೆಣೆಯತೊಡಗಿದ.
ಬಡಕಲು ದೇಹದ ವಯಸ್ಸಾದ ಗಾಂಧಿಯ ಚಿತ್ರಣ ಆಗಾಗ ಮುನಿಯನ ಕಣ್ಣ ಮುಂದೆ ಹೋಗುತ್ತಿತ್ತು. ‘ಅಪ್ಪ ಮಾತ್ಮ ಈ ಬಿಳಿ ನನ್ ಮಕ್ಳುನ ಕೊಂದಾದ್ರು ಸರಿ, ಈ ದಾಸ್ಯದಿಂದ ನಮ್ಮನ್ ಬುಡ್ಸೋ, ನೀನ್ ಒಂದ್ ಕೂಗಾಕು ಈ ನನ್ ಮಕ್ಕಳ್ನ ಹೊಸಕಿ ಈ ದೇಶಕ್ಕೆ ಮುಕ್ತಿ ಕೊಡೋ ಕೆಲ್ಸ ನಾವ್ ಮಾಡ್ತೀವಿ’ ಎನ್ನುತ್ತಾ ಕೋಲು ಹಿಡಿದ ಗಾಂಧಿಯ ಫೋಟೋ ಮುಂದೆ ನಿಂತು ಅಂಗಲಾಚಲಾರಂಭಿಸಿದ. ಆಗಾಗ್ಗೆ ಪೆಟ್ಟಿಗೆಯಲ್ಲಿಟ್ಟ ಜೋಡನ್ನು ತೆಗೆದು ತನ್ನ ಹಣೆಗೊತ್ತಿ ‘ಅಪ್ಪ ದ್ಯಾವ್ರೆ ದುಂಡಗಿರೋ ಭೂಮಿ ನ್ಯಾರ ಮಾಡಿ ಆ ನನ್ ಮಾತ್ಮನ್ ಭೇಟಿ ಮಾಡ್ಸೋ ಶಿವನೆ, ಜೋಡುಂಡಿ ಮುನಿದೇವ’ ಎನ್ನುತ್ತಾ ನಮಸ್ಕರಿಸುತ್ತಿದ್ದ. ಗಾಂಧಿ ಎಂದರೆ ಈಗ ಮುನಿಯನಿಗೆ ದೇವರ ರೂಪ ಕಣ್ಣ ಮುಂದೆ ಬಂದು ಹೋಗುತ್ತಿತ್ತು. ಪ್ರತೀ ದಿನ ತನ್ನ ಕುಟೀರದ ‘ಗಾಂಧೀ ಜೋಡಿನ ಮಳಿಗೆ’ ಎನ್ನುವ ಬೋರ್ಡಿಗೆ ತನ್ನ ಹಣೆಯನ್ನೊತ್ತಿ ಮುಂದಿನ ಕೆಲಸಕ್ಕೆ ಸಿದ್ಧನಾಗುವುದರೊಟ್ಟಿಗೆ ಮುನಿಯ ಗಾಂಧಿಯ ಅನುಯಾಯಿಯಾಗಿ ಹೋಗಿದ್ದ.
ಸ್ವಾತಂತ್ರ‍್ಯದ ಕೂಗು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎನ್ನುವ ಕೂಗಿನೊಂದಿಗೆ ದೇಶಾದ್ಯಂತ ಸಂಚಲನವನ್ನುಂಟು ಮಾಡಿತ್ತು. ಗಾಂಧಿ ಕೊಟ್ಟ ಮೌನ ಪ್ರತಿಭಟನೆ ಕರೆಗೆ ದೇಶ ಸಜ್ಜಾಗಿ ಬ್ರಿಟಿಷರಿಗೆ ಪ್ರತಿರೋಧ ತೋರಲಾರಂಭಿಸಿತ್ತು. ಈಸೂರಿನಲ್ಲೂ ಮುನಿಯ ಭಾರತ ಬಿಟ್ಟು ತೊಲಗಿ ಚಳವಳಿಯ ಮುಂದಾಳತ್ವ ವಹಿಸಿಕೊಂಡು ಗ್ರಾಮದ ಬೀದಿ ಬೀದಿಗಳಲ್ಲಿ ತನ್ನ ಸ್ನೇಹಿತರನ್ನು ಕರೆದುಕೊಂಡು ಮೌನ ಪ್ರತಿಭಟನೆಗಿಳಿದ. ತೆರಿಗೆ ನಿರಾಕರಣೆ ಅಸಹಕಾರದ ಕೂಗು ಮೋರಿಂಜನನ್ನು ದಿಕ್ಕು ಕೆಡಿಸಿತ್ತು. ಸಿಕ್ಕ ಸಿಕ್ಕ ಮನೆಗಳು, ವೃತ್ತಗಳು ಅಷ್ಟೇ ಏಕೆ ಮೋರಿಂಜನ ಕಚೇರಿಯ ಮೇಲೆ ಮುನಿಯನ ತಂಡ ದೇಶಿಯ ಬಾವುಟಗಳನ್ನು ಹಾರಿಸಲಾರಂಭಿಸಿತು. ಮೋರಿಂಜನ ಗೂಟದ ಕಾರು ರಸ್ತೆಯಲ್ಲಿ ಹಾಯುವುದನ್ನೇ ಕಾದು ‘ಇನ್ಕ್ವಿಲಾಬ್ ಜಿಂದಾಬಾದ್, ಮೋರಿಂಜ್ ಮರ‍್ದಾಬಾದ್’ ಎಂದು ಕೂಗಲಾರಂಭಿಸುತ್ತಿದ್ದ. ರಸ್ತೆಯ ಬದಿಗಳಲ್ಲೆಲ್ಲಾ ಹೆಂಗಸರನ್ನು ನಿಲ್ಲಿಸಿ ‘ದೇಶಕ್ಕಾಗಿ ಪ್ರಾಣ, ತೊಲುಗ್ರೋ ಹೋಗೋ ಮುಂಚೆ ಮಾನ’ ಎಂದು ಘೋಷಣೆಗಳನ್ನು ಹೇಳಿಸಲಾರಂಭಿಸಿದ. ಸಾವಿರಾರು ಕಾಲಾಳುಗಳು, ಪೋಲಿಸ್ ಸಿಬ್ಬಂದಿಗಳು ಲಾಠಿ ಬುಲೆಟ್‌ಗಳು ಇದ್ದಾಗ್ಯೂ ಮೋರಿಂಜ್ ಮತ್ತವನ ಅಧಿಕಾರಿಗಳು ಈಸೂರಿನ ಈ ದಂಗೆಗೆ ಒಂದು ಕ್ಷಣ ಅವಕ್ಕಾಗಿ ಹೋಗಿದ್ದರು.
ಮುನಿಯನನ್ನು ಹೀಗೆ ಬಿಟ್ಟರೆ ತಮ್ಮ ಉಳಿಗಾಲ ಆದಷ್ಟು ಬೇಗ ಅಂತ್ಯವಾಗಿ ಹೋಗಬಹುದೆಂದು ಮೋರಿಂಜ್‌ನಿಗೆ ಬಹುಬೇಗ ಅರ್ಥವಾಗಿ ಹೋಗಿತ್ತು. ಈಸೂರಿನಲ್ಲಿ ನಡೆಯುತ್ತಿದ್ದ ಘಟನಾವಳಿಗಳು ರಾಣಿ ಎಲಿಜಬೆತ್‌ನ ಗಮನಕ್ಕೂ ತರಲಾಯಿತು. ರಾಣಿಯ ಆಜ್ಞೆಯಂತೆ ಮೋರಿಂಜ್ ಸಿಕ್ಕಸಿಕ್ಕವರನ್ನೆಲ್ಲಾ ಬಂಧಿಸಿ ಬಂದೀಖಾನೆಗೆ ತಳ್ಳಲಾರಂಭಿಸಿದ್ದ. ಮುನಿಯನನ್ನು ಕಂಡರೆ ಮೊದಲೇ ಕೆಂಡ ಕಾರುತ್ತಿದ್ದ ಮೋರಿಂಜ್, ಸಿಕ್ಕ ಅವಕಾಶವನ್ನು ದುರುಪಯೋಗ ಮಾಡದೆ ಮುನಿಯನನ್ನು ಬಂಧಿಸಿ ಬಂದಿಖಾನೆಗೆ ತಳ್ಳಿ ಜೀವಾವಧಿ ಶಿಕ್ಷೆಯನ್ನು ಘೋಷಿಸಿಬಿಟ್ಟ. ಬಂದೀಖಾನೆಗೆ ಹೊರಟಾಗಲೂ ಮುನಿಯ ತನ್ನ ಮಹಾತ್ಮನ ಜೋಡಿನ ಪೆಟ್ಟಿಗೆಯನ್ನು ಬಿಡದೆ ‘ದ್ಯಾವ್ರೆ ಈ ಜೋಡು ನನ್ ಮಾತ್ಮನ್ ತಲುಪುದ್ಮೇಲೆ ಈ ಜೀವ ಹೋಗ್ಸಪ್ಪ’ ಎಂದು ಬೇಡಿಕೊಳ್ಳಲಾರಂಭಿಸಿದ.
ವರುಷಗಳು ಕಳೆದಂತೆ ದೇಶಿಯ ಜನರ ಆಕ್ರೋಶಕ್ಕೆ ಮಣಿದು ಬಿಳಿಯರು ದೇಶ ಬಿಡುವ ನಿರ್ಧಾರಕ್ಕೆ ಬಂದರು. ಈಸೂರಿನ ಕಚೇರಿಯ ಮೇಲಿದ್ದ ಕೆಂಪು ಬಾವುಟ ಕಳಚುವುದರೊಂದಿಗೆ ಮೋರಿಂಜ್ ಗಂಟು ಮೂಟೆ ಸಮೇತ ತನ್ನ ಪರಿವಾರದೊಟ್ಟಿಗೆ ರೈಲು ಹತ್ತಿದ್ದ. ಬಂಧಿಸಲಾಗಿದ್ದ ಎಲ್ಲಾ ಜನಗಳನ್ನು ಸ್ವಾತಂತ್ರದ ಕೇಕೆಯೊಂದಿಗೆ ಬಿಡುಗಡೆಗೊಳಿಸಲಾಯಿತು.
ಮುನಿಯ ಖುಷಿಯಲಿ ಕುಣಿದಾಡತೊಡಗಿದ. ಊರಿನ ಬೀದಿ ಬೀದಿಗಳನ್ನು ತಳಿರು ತೋರಣಗಳಿಂದ ಅಲಂಕಾರಗೊಳಿಸಲಾರಂಭಿಸಲಾಯಿತು. ಕೇಸರಿ, ಬಿಳಿ, ಹಸಿರು ಬಾವುಟಗಳು ಪ್ರತೀ ಮನೆ, ಪ್ರತೀ ಬೀದಿಗಳಲಿ ಹಾರಾಡಲಾರಂಭಿಸಿದವು. ಮುನಿಯ ರಾತ್ರಿಯೆಲ್ಲಾ ತಂಡ ಕಟ್ಟಿಕೊಂಡು ಸ್ವತಂತ್ರದ ಗೀತೆಗಳನ್ನು ಹಾಡಲಾರಂಭಿಸಿದ. ದಾಸ್ಯದ ಕೊಂಡಿಯೊಂದು ಕಳಚಿ ಹೋಗುತ್ತಿರುವ ದೃಶ್ಯ ಮುನಿಯನ ಎದೆಯಲ್ಲಿ ದೃಶ್ಯವನ್ನು ಸೃಷ್ಟಿಸಿಬಿಟ್ಟಿತ್ತು.
ಮೋರಿಂಜ್ ಹೊತ್ತು ಹೋಗಿದ್ದ ತನ್ನ ಕುಟೀರವನ್ನು ಮತ್ತೆ ಮರಳಿ ಅದೇ ಜಾಗದಲ್ಲಿ ಪ್ರತಿಷ್ಠಾಪಿಸಿದ. ‘ಗಾಂಧಿ ಜೋಡು ಮಳಿಗೆ’ ಎನ್ನುವ ಬೋರ್ಡನ್ನು ಅಲಂಕಾರ ಮಾಡಿ ಮತ್ತೆ ನೇತುಬಿಗಿದ. ಜೋಡುಂಡಿ ಮುನಿದೇವನ ಫೋಟೋದೊಟ್ಟಿಗೆ ಮತ್ತೆ ಗಾಂಧಿಯ ಫೋಟೊ ಇಟ್ಟು ನಮಸ್ಕರಿಸಿದ. ದಿನ ಕಳೆದಂತೆ ಗಾಂಧಿ ಜೋಡು ಕುಟೀರದ ವ್ಯವಹಾರ ವೃದ್ಧಿಯಾಗತೊಡಗಿತು. ಆದರೂ ಸ್ವಾತಂತ್ರದ ಕಿಚ್ಚಿನಲ್ಲಿ ತನ್ನನ್ನು ತಾನು ಸುಟ್ಟುಕೊಂಡು ಫಕೀರನಾದ ತನ್ನ ಮಹಾತ್ಮನನ್ನು ಕಾಣದ, ಅವನಿಗೆಂದೇ ವಿಶೇಷ ಕಾಳಜಿ ಹೊತ್ತು ಹೆಣೆದ ದೇಶಿ ಚಕ್ಕಳದ ಜೋಡನ್ನು ಅವನಿಗೆ ನೀಡದ ಹೊರತು ತನಗೆ ನೆಮ್ಮದಿ ಇಲ್ಲವೆಂದು ಒದ್ದಾಡತೊಡಗಿದ.
ಗಾಂಧಿಯಂತ ಗಾಂಧಿ ಈಗ ದೇಶದ ಮುಂದೆ ಮಹಾತ್ಮನಾಗಿ ಹೋಗಿದ್ದ. ದೇಶಕ್ಕಾಗಿ ಅನ್ನ, ನೀರು, ಹಾಕುವ ಧಿರಿಸುಗಳನ್ನು ತ್ಯಾಗಗೈದ ಹಿರಿಜೀವವನ್ನು ದೇಶ ಪಿತಾಮಹ ಎನ್ನಲಾರಂಭಿಸಿತ್ತು. ಮುನಿಯ ಗಾಂಧಿಯನ್ನು ಮತ್ತೊಂದು ದೇವರೆಂದೇ ಭಾವಿಸತೊಡಗಿದ. ತನ್ನ ದೇಶೀಯ ಜೋಡನ್ನು ಗಾಂಧಿಗೆ ನೀಡಿದ ಮೇಲೆ ಈ ಜೀವ ಹೋಗಲಿ ಎಂದು ಮತ್ತೆ ಪುನರುಚ್ಚರಿಸಿ ಹೇಗಾದರು ಸರಿ ಗಾಂಧಿಯನ್ನು ಭೇಟಿ ಮಾಡಲೇಬೇಕೆಂದು ತನ್ನ ಚಕ್ಕಳ ವ್ಯಾಪಾರದಲ್ಲಿ ಪರಿಚಯವಿದ್ದ ಕರೀಂ ಸಾಬರ ಸಹಾಯದಿಂದ ದೆಲ್ಲಿಯತ್ತ ಮುಖ ಮಾಡಿ ಸಂಜೋತ ಎಕ್ಸ್ಪ್ರೆಸ್ ರೈಲಿನ ಸೀಟು ಹಿಡಿದ. ತನ್ನೊಟ್ಟಿಗೆ ಗಾಂಧಿಯ ಜೋಡಿನ ಪೆಟ್ಟಿಗೆಯನ್ನು ಭದ್ರವಾದ ಬ್ಯಾಗೊಂದರಲ್ಲಿ ಶೇಖರಿಸಿ ಜೋಪಾನ ಮಾಡಿಕೊಂಡ.
ದಟ್ಟವಾದ ಮಂಜಿನ ಹೊಗೆ ನಡುವೆ ರೈಲು ದೆಹಲಿಯನ್ನು ತಲುಪಿತ್ತು. ಗುಂಬಾಜಿನ ಕಳಸದ ಮೇಲಿನ ಹಕ್ಕಿಗಳು ಗರಿಬಿಚ್ಚುತ್ತಿದ್ದವು. ಸೀದಾ ಮಂದಿರದ ಗೇಟಿನ ಬಳಿಗೆ ಕರೆತಂದು ''ಗಾಂಧಿ ಅಂದರ್ ಮೇ ಬೈಯ್ಯಾ'' ಎಂದು ಹೇಳಿ ಕರೀಂ ಸಾಬ್ ಅಲ್ಲಿಂದ ಹೊರಟ. ಮುನಿಯನ ಕಣ್ಣುಗಳು ನಿಧಾನಕ್ಕೆ ಅರಳಲಾರಂಭಿಸಿ ಸದ್ದಿಲ್ಲದೆ ಆನಂದಭಾಷ್ಪವನ್ನು ಸುರಿಯಲಾರಂಭಿಸಿದವು. ದೇವರನ್ನು ಕಾಣಲು ಭಕ್ತನೊಬ್ಬ ಸ್ವರ್ಗದ ಬಾಗಿಲಲಿ ಕಾದು ನಿಂತಂತೆ ಮಂದಿರದ ಗೇಟಿನ ಬಳಿ ಗಾಂಧಿಗಾಗಿ ಕಾದು ನಿಂತ. ಪೆಟ್ಟಿಗೆ ತೆರೆದು ಜೋಡುಗಳನ್ನು ಎತ್ತಿ ‘ಆ ನನ್ ಮಾತ್ಮನ್ ಕಾಲಾಗ್ ಸೇರುಕೆ ಏನ್ ಪುಣ್ಯ ಮಾಡಿದ್ವೋ ಈ ಜೊತೆ ಜೋಡು ಶಿವನೆ’ ಎಂದು ಕಣ್ಣಿಗೆ ಒತ್ತಿಕೊಂಡ.
ಮಂದಿರದ ಒಳಗಿಂದ ‘ಹೇ ಮೇರೆ ವತನ್ ಮೇ’ ಎನ್ನುವ ಗೀತೆಯ ಆಲಾಪಗಳು ಗೇಟಿನಿಂದಾಚೆಗೆ ಅಪ್ಪಳಿಸುತ್ತಿತ್ತು. ಜನ ಮಂದಿರದ ಆಚೆ ಈಚೆ ನಿಶಬ್ಧವಾಗಿ ಓಡಾಡತೊಡಗಿದ್ದರು. ಗಾಂಧಿ ಹೊರ ಬಂದೊಡನೆ ಹೇಗಾದರು ಮಾಡಿ ಭೇಟಿ ಮಾಡಿ ತನ್ನ ಜೋಡನ್ನು ಅವರ ಪಾದಕ್ಕೆ ತಾನೆ ಕೈಯ್ಯಾರೆ ತೊಡಿಸಬೇಕೆಂದು ಮನಸ್ಸಿನಲ್ಲೇ ಆಲೋಚಿಸಿಕೊಂಡು ಗೇಟಿನ ಬಳಿಯೇ ಇದ್ದ ಮರದ ಕೆಳಗೆ ಕೂತ. ನಿಮಿಷ ಕಳೆಯುವುದರಲ್ಲಿ ಕಿವಿ ಸಿಡಿಯುವಂತೆ ಜೋರು ಸದ್ದಾಗತೊಡಗಿತು. ಮಂದಿರದ ಒಳಗಿಂದ ಜನ ಎದ್ದು ಬಿದ್ದು ಹೊರಗೆ ಓಡಲಾರಂಭಿಸಿದ್ದರು. ಮುನಿಯ ದಿಕ್ಕೇ ತೋಚದಂತೆ ಜೋಡುಗಳ ಹಿಡಿದು ಮಂದಿರದ ಒಳಗೆ ನುಗ್ಗಲಾರಂಭಿಸಿದ.
ಕಣ್ಣುಗಳು ಮಂಜಾದಂತಾದವು. ಹೃದಯ ಒಂದೇ ಸಮನೆ ಬಡಿಯಲಾರಂಭಿಸಿ, ಕಾಲುಗಳು ನಿತ್ರಾಣಗೊಂಡವು. ಗಾಂಧಿಯೆಂಬ ಗಾಂಧಿಯ ದೇಹ ಇದ್ದಕ್ಕಿದ್ದಂತೆ ರಕ್ತದ ಮಡುವಿನಲ್ಲಿ ಮುದ್ದೆಯಂತೆ ಒದ್ದಾಡಲಾರಂಭಿಸಿದ್ದ ದೃಶ್ಯ ಮುನಿಯನನ್ನು ಮಂಪರು ಹಿಡಿಸಿತ್ತು. ಬತ್ತಿದ ತುಟಿಗಳು ‘ಹೇ ರಾಮ್’ ಎಂದು ಗುನುಗುತ್ತಾ ಕೊನೆಯ ಉಸಿರು ನಿಧಾನಕ್ಕೆ ನಿಲ್ಲಲಾರಂಭಿಸಿತ್ತು. ನಿಂತಲ್ಲೇ ಕುಸಿದು ರಪ್ಪನೆ ಮಂಡಿ ಊರಿದ ಮುನಿಯ ನಡುಗುತ್ತಿದ್ದ ಕೈಗಳಲ್ಲಿ ಹಿಡಿದ ಜೋಡುಗಳನ್ನು ಹಣೆಗೆ ಒತ್ತಿ ‘ಅಯ್ಯೋ ನನ್ ದ್ಯಾವ್ರೆ’ ಎಂದು ಕೂಗಿದ ಸದ್ದು ಮಂದಿರದ ಗೋಡೆಗಳನ್ನು ಸೀಳಿ ಹೋಗುತ್ತಿತ್ತು.
***
ಚಾಮರಾಜನಗರ ಜಿಲ್ಲೆಯ ಪೊನ್ನಾಚಿಯ ಇವರು ವೃತ್ತಿಯಲ್ಲಿ ಶಿಕ್ಷಕ. ಅಚಾನಕ್ಕಾಗಿ ಕವಿತೆಗೆ ಒಲಿದ ಸೃಜನಶೀಲ ಮನಸ್ಸಿನ ಇವರು ‘ಮಣ್ಣಿಗೆ ಬಿದ್ದ ಮಳೆ’ ಎಂಬ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೆಜ್ಜೆಗಳ ಗುರುತುಗಳನ್ನು ಮೂಡಿಸಿದ್ದಾರೆ. ಈಗ ಕಾವ್ಯದಿಂದ ಕಥಾ ಪ್ರಕಾರಕ್ಕೆ ಹೊರಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.