ಒಬ್ಬ ಮನುಷ್ಯ; ಬೊಕ್ಕು ತಲೆಯವನು.
ಒಮ್ಮೆ ಅವನ ತಲೆಯ ಮೇಲೆ ನೊಣವೊಂದು ಕುಳಿತುಕೊಂಡಿತು. ಅವನಿಗೆ ಅದರಿಂದ ಕಿರಿಕಿರಿ ಶುರುವಾಯಿತು. ಮೆಲ್ಲಗೆ ಅವನ ತೋಳನ್ನು ಎತ್ತಿ, ಫಟಾರನೆ ಆ ನೊಣದ ಮೇಲೆ ಪ್ರಹಾರ ಮಾಡಿದ. ಆದರೆ ನೊಣ ಹಾರಿಹೋಯಿತು; ಏಟು ಅವನ ಹಣೆಗೇ ಬಿತ್ತು!
ನೊಣ ಕೂರುವುದು; ಅವನು ಕೈ ಬೀಸುವುದು; ಅದು ಹಾರಿಹೋಗುವುದು. ಈ ಸರಣಿ ಹಲವು ಸಲ ಮುಂದುವರಿಯಿತು. ಆದರೆ ಪ್ರತಿ ಸಲವೂ ನೊಣ ತಪ್ಪಿಸಿಕೊಳ್ಳುತ್ತಿತ್ತು; ಏಟನ್ನು ಮಾತ್ರ ಅವನೇ ತಿನ್ನುತ್ತಿದ್ದ. ಅವನ ಕೈ ಏಟು ಅವನಿಗೇ ಬಿಳುತ್ತಿತ್ತು!
ಕೊನೆಗೆ ಅವನೊಂದು ನಿರ್ಧಾರಕ್ಕೆ ಬಂದ. ‘ಈ ನೊಣದ ಕಾಟ ಇಲ್ಲದ ಜಾಗಕ್ಕೆ ಹೋಗುವುದೇ ಸೂಕ್ತ; ಅದರ ಜೊತೆ ಹೋರಾಟ ಮಾಡುವುದರಲ್ಲಿ ಅರ್ಥವಿಲ್ಲ’ ಎಂದುಕೊಂಡು ಅಲ್ಲಿಂದ ಬೇರೆ ಸ್ಥಳಕ್ಕೆ ಹೋದ.
* * *
ನಾವೂ ಅಷ್ಟೆ, ಯಾರ ಜೊತೆ ನಾವು ಹೋರಾಟ ಮಾಡಬಾರದೋ ಅಂಥವರೊಂದಿಗೆ ವ್ಯರ್ಥವಾಗಿ ಸೆಣಸುತ್ತಿರುತ್ತೇವೆ. ನಮ್ಮ ಜೀವನದಲ್ಲಿ ಎದುರಾಗುವ ಎಲ್ಲರ ನಡೆ–ನಡಿಗಳಿಗೂ ನಾವು ಗಮನ ಕೊಡಬೇಕಾಗಿರುವುದಿಲ್ಲ. ಉದಾಹರಣೆಗೆ, ನಾವು ಪ್ರಯಾಣ ಮಾಡುತ್ತಿರುವಾಗ ಸಹಪ್ರಯಾಣಿಕನೊಬ್ಬ ಯಾವುದೋ ಕಾರಣಕ್ಕೆ ಏನೋ ಒಂದು ಮಾತನ್ನು ಆಡುತ್ತಾನೆಂದು ಇಟ್ಟುಕೊಳ್ಳೋಣ. ನಾವು ನಮ್ಮ ಮನೆಗೂ ಅವನ ಆ ಮಾತನ್ನು ನಮ್ಮ ಮನಸ್ಸಿನಲ್ಲಿ ಹೊತ್ತುತರಬೇಕಾಗಿಲ್ಲ. ಅದನ್ನೇ ಕುರಿತು ರಾತ್ರಿಹಗಲು ಚಿಂತಿಸಬೇಕಿಲ್ಲ.
ಸ್ನೇಹಕ್ಕಾಗಲೀ ವೈರಕ್ಕಾಗಲೀ ಸಮಾನಶಕ್ತರನ್ನೇ ಆರಿಸಿಕೊಳ್ಳುವುದು ಜಾಣತನ. ‘ಅಲ್ಪರೊಂದಿಗಿನ ಸರಸಕ್ಕಿಂತಲೂ ದೊಡ್ಡವರೊಂದಿಗಿನ ವಿರಸವೇ ಲೇಸು’ ಎಂಬ ಮಾತು ಇದೆಯಷ್ಟೆ! ಹೀಗಾಗಿ ನಾವು ಯಾರ ನಡೆ–ನಡಿಗಳಿಗೆ ಎಷ್ಟು ಪ್ರಾಮುಖ್ಯವನ್ನು ಕೊಡಬೇಕು ಎಂದು ನಿರ್ಧರಿಸಿಕೊಳ್ಳುವುದರಲ್ಲಿಯೇ ನಮ್ಮ ಪ್ರಬುದ್ಧತೆಯ ಪರೀಕ್ಷೆ ನಡೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.